fbpx
ಸಮಾಚಾರ

ಸ್ವತಂತ್ರ ಭಾರತದ ಮೊದಲ ಮತದಾರ ನಿಧನ

ಸ್ವತಂತ್ರ ಭಾರತದ ಮೊದಲ ಮತದಾರ – ಶ್ಯಾಮ್ ಸರಣ್ ನೇಗಿ – 106 ನೇ ವಯಸ್ಸಿನಲ್ಲಿ ಹಿಮಾಚಲ ಪ್ರದೇಶದ ಕಿನ್ನೌರ್ ಜಿಲ್ಲೆಯ ಕಲ್ಪಾದಲ್ಲಿ ಶನಿವಾರ ಬೆಳ್ಳಂಬೆಳಗ್ಗೆ ತಮ್ಮ ನಿವಾಸದಲ್ಲಿ ನಿಧನರಾದರು.

ದೇಶದಲ್ಲಿ ಮೊದಲ ಸಾರ್ವತ್ರಿಕ ಚುನಾವಣೆಗಳನ್ನು ಘೋಷಿಸಿದಾಗ, ಕಠಿಣ ಚಳಿಗಾಲ ಮತ್ತು ಆರಂಭಿಕ ಹಿಮಪಾತವನ್ನು ಪರಿಗಣಿಸಿ ಅಕ್ಟೋಬರ್ 25, 1951 ರಂದು ಕಿನ್ನೌರ್‌ನಲ್ಲಿ ಮತದಾನವನ್ನು ನಡೆಸಲು ನಿರ್ಧರಿಸಲಾಯಿತು ಮತ್ತು ದೇಶದ ಇತರ ಭಾಗಗಳಲ್ಲಿ ಜನವರಿ-ಫೆಬ್ರವರಿ, 1952 ರಲ್ಲಿ ಚುನಾವಣೆಗಳು ನಡೆದವು. ಈ ವೇಳೆ ನೇಗಿ 1951ರ ಅ. 25ರಂದು ತಮ್ಮ ಮತ ಚಲಾಯಿಸುವ ಮೂಲಕ ಮೊದಲ ಮತದಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.

ನೇಗಿ ಅವರ ನಿಧನಕ್ಕೆ ಸಂತಾಪ ಸೂಚಿಸಿರುವ ಚುನಾವಣೆ ಆಯೋಗವು, ಇವರು ಕೇವಲ ಸ್ವತಂತ್ರ ಭಾರತದ ಮೊದಲ ಮತದಾರ ಮಾತ್ರವಲ್ಲ, ಪ್ರಜಾಪ್ರಭುತ್ವದಲ್ಲಿ ಅಸಾಧಾರಣ ನಂಬಿಕೆ ಇರಿಸಿಕೊಂಡಿದ್ದ ವ್ಯಕ್ತಿ. ರಾಷ್ಟ್ರಕ್ಕೆ ಅವರ ಸೇವೆ ಪ್ರಶಂಸನೀಯ ಎಂದು ಸ್ಮರಿಸಿದ್ದಾರೆ.

ಶ್ಯಾಮ್ ಸರಣ್ ನೇಗಿ ಅವರಿಗೆ 106 ವರ್ಷ ವಯಸ್ಸಾಗಿತ್ತು. ಈ ಹಿನ್ನೆಲೆಯಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದರು. ಆದರೂ ನೇಗಿ ಅವರು ಹಿಮಾಚಲ ಪ್ರದೇಶದಲ್ಲಿ ನಡೆಯುತ್ತಿರುವ ವಿಧಾನಸಭಾ ಚುನಾವಣೆಗೂ ಈ ತಿಂಗಳ 2ರಂದು ಅಂಚೆ ಮೂಲಕ ಮತ ಚಲಾಯಿಸಿ ಯುವ ಜನರಿಗೆ ಮಾದರಿಯಾಗಿದ್ದರು. ಕಳೆದ 35 ಬಾರಿ ಮತಗಟ್ಟೆಗೆ ತೆರಳಿ ಮತದಾನ ಮಾಡಿದ್ದ ಅವರು ಈ ಬಾರಿ ಅನಾರೋಗ್ಯದಿಂದ ಅಂಚೆ ಮತಪತ್ರದ ಮೂಲಕ ಮತ ಚಲಾಯಿಸಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top