fbpx
ಸಮಾಚಾರ

ರಾಜೀವ್ ಗಾಂಧಿ ಹಂತಕರನ್ನು ಬಿಡುಗಡೆಮಾಡಿದಂತೆ ನನ್ನನ್ನು ಬಿಡುಗಡೆ ಮಾಡಿ! ಸುಪ್ರೀಂ ಕೋರ್ಟ್ ಗೆ ಸ್ವಾಮಿ ಶ್ರದ್ಧಾನಂದ ಅರ್ಜಿ

ಹಣದ ಆಸೆಗಾಗಿ ತನ್ನ ಪತ್ನಿಯನ್ನು ಕೊಂದು ಸುಮಾರು 29 ವರ್ಷಗಳ ಕಾಲ ಜೈಲಿನಲ್ಲಿ ವಾಸವಾಗಿದ್ದ 80 ವರ್ಷದ ಸ್ವಾಮಿ ಶ್ರದ್ಧಾನಂದ ತನ್ನನ್ನು ಬಿಡುಗಡೆ ಮಾಡುವಂತೆ ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದಾರೆ. ಇದಕ್ಕೆ ಇವರು ನೀಡಿರುವ ಕಾರಣವೇನೆಂದರೆ ಪ್ರಧಾನಿ ರಾಜೀವ್‌ ಗಾಂಧಿಯವರನ್ನು ಹತ್ಯೆ ಮಾಡಿದ್ದ ವ್ಯಕ್ತಿಗಳೇ ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಹಾಗಾಗಿ ತಮ್ಮನ್ನು ಜೈಲಿನಿಂದ ಬಿಡುಗಡೆ ಮಾಡುವಂತೆ ಅರ್ಜಿ ಸಲ್ಲಿಸಿದ್ದಾರೆ.

ತಮ್ಮ ಪತ್ನಿ ಶಕಿರಾ ಅವರ ಕೊಲೆ ಪ್ರಕರಣದಲ್ಲಿ 1994ರ ಮಾರ್ಚ್‌ನಿಂದಲೂ ಸ್ವಾಮಿ ಶ್ರದ್ಧಾನಂದ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾರೆ. ಶ್ರದ್ಧಾನಂದ್ ಪರ ವಾದ ಮಾಡಿದ ವಕೀಲ ವರುಣ್ ಠಾಕೂರ್ ಅವರು ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಹಿಮಾ ಕೊಹ್ಲಿ ಮತ್ತು ಜೆಬಿ ಪರ್ದಿವಾಲಾ ಅವರ ಪೀಠದ ಮುಂದೆ ಅಪರಾಧಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಅವರು ಮಾಡಿರುವ ಕೊಲೆಗೆ ಪರೋಲ್‌ ಕೂಡ ಇಲ್ಲ. ಈಗಾಗಲೇ ಅವರು 29 ವರ್ಷ ಜೈಲಿನಲ್ಲಿ ಯಾರನ್ನೂ ಭೇಟಿಯಾಗದೇ ಶಿಕ್ಷೆ ಕಳೆದಿದ್ದಾರೆ ಎಂದು ವಾದ ಮಂಡಿಸಿದ್ದರು.

ಶಕಿರಾ ಅವರ ಹೆಸರಿನಲ್ಲಿದ್ದ ಅಂದಾಜು 600 ಕೋಟಿ ರೂಪಾಯಿ ಆಸ್ತಿಯನ್ನು ದೋಚುವ ಸಲುವಾಗಿ, 1991ರಲ್ಲಿ ಬೆಂಗಳೂರಿನ ರಿಚ್ಮಂಡ್‌ ರಸ್ತೆಯಲ್ಲಿರುವ ಬಂಗಲೆಯಲ್ಲಿ ಸ್ವಾಮಿ ಶ್ರದ್ಧಾನಂದ ಆಕೆಗೆ ಮಾದಕ ದ್ರವ್ಯ ನೀಡಿ ಆಕೆ ಅಮಲಿನಲ್ಲಿದ್ದಾಗಲೇ ಜೀವಂತವಾಗಿ ಆಕೆಯನ್ನು ಹೂತುಹಾಕಿದ್ದ. ಆ ಬಳಿಕ ಕೋರ್ಟ್‌ ಆದೇಶದ ಮೇರೆಗೆ ಪೊಲೀಸರು ನೆಲವನ್ನು ಅಗೆದು ಶಕೀರಾ ಅವರ ದೇಹವನ್ನು ಹೊರತೆಗೆದಿದ್ದರು.

1994ರ ಏಪ್ರಿಲ್‌ 30 ರಂದು ಪ್ರಕರಣದಲ್ಲಿ ಶ್ರದ್ಧಾನಂದನನ್ನು ಬಂಧಿಸಲಾಗಿತ್ತು. 2000ರಲ್ಲಿ ಬೆಂಗಳೂರಿನ ವಿಚಾರಣಾ ನ್ಯಾಯಾಲಯ ಮರಣದಂಡನೆ ಶಿಕ್ಷೆ ವಿಧಿಸಿತ್ತು.2005ರಲ್ಲಿ ಕರ್ನಾಟಕ ಹೈಕೋರ್ಟ್ ಕೂಡ ಶಿಕ್ಷೆಯನ್ನು ಎತ್ತಿ ಹಿಡಿದಿತ್ತು.ಆದರೆ, 2008 ರಲ್ಲಿ ಶ್ರದ್ಧಾನಂದರ ಮೇಲ್ಮನವಿಯ ಮೇರೆಗೆ ಸುಪ್ರೀಂ ಕೋರ್ಟ್ ಯಾವುದೇ ಪರಿಹಾರಗಳು ಇಲ್ಲದೆ ಅವರ ಗಲ್ಲು ಶಿಕ್ಷೆಯನ್ನು ಜೀವಾವಧಿ ಶಿಕ್ಷೆಗೆ ಇಳಿಸಿತ್ತು. ಜೈಲಿನಲ್ಲಿ ಯಾವುದೇ ವ್ಯಕ್ತಿಯನ್ನು ಭೇಟಿಯಾಗುವಂತಿಲ್ಲ ಹಾಗೂ ಪೆರೋಲ್‌ ಅರ್ಜಿ ಸಲ್ಲಿಸುವಂತಿಲ್ಲ ಎಂದು ಕೋರ್ಟ್‌ ಹೇಳಿತ್ತು.

ಇಷ್ಟೆಲ್ಲಾ ಬೆಳವಣಿಗೆಗಳು ಮುಗಿದ ನಂತರ ಶ್ರದ್ಧಾನಂದ ಪರವಾಗಿ ವಾದ ಮಾಡಿರುವ ವಕೀಲ ವರುಣ್‌ ಠಾಕೂರ್‌, ಅವರು ಮಾಡಿದ ಕೊಲೆಗಾಗಿ ಈಗಾಗಲೇ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಈಗಾಗಲೇ 29 ವರ್ಷಗಳ ಕಾಲ ಜೈಲುವಾಸ ಅನುಭವಿಸಿದ್ದಾರೆ. ಈ ಅವಧಿಯಲ್ಲಿ ಅವರಿಗೆ ಪೆರೋಲ್ ಕೂಡ ಸಿಕ್ಕಿಲ್ಲ ಮತ್ತು ಅವರು ಒಬ್ಬರನ್ನು ಸಹ ಭೇಟಿಮಾಡಿಲ್ಲ. ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆಯ ಅಪರಾಧಿಗಳನ್ನು 30 ವರ್ಷಗಳ ಜೈಲುವಾಸದ ನಂತರ ಬಿಡುಗಡೆ ಮಾಡಲಾಗಿದೆ. ಇದು ಸಮಾನತೆಯ ಹಕ್ಕಿನ ಉಲ್ಲಂಘನೆಯಾಗಿದೆ. ವಕೀಲರ ಈ ವಾದವನ್ನು ಕೇಳಿದ ಬಳಿಕ ಕೋರ್ಟ್‌ ಶ್ರದ್ಧಾನಂದನ ಅರ್ಜಿಯನ್ನು ವಿಚಾರಣೆ ಮಾಡುವುದಾಗಿ ಹೇಳಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top