ಕಾಂತಾರ ಸಿನಿಮಾ ಪ್ರಪಂಚದಾದ್ಯಂತ ಸಕತ್ ಸೌಂಡ್ ಮಾಡುತ್ತಿದೆ. ಈ ವೇಳೆ ಕಾಂತಾರ ಸಿನಿಮಾದ ವರಾಹರೂಪಂ ಹಾಡಿನ ಕುರಿತು ಕೇರಳದ ಜನಪ್ರಿಯ ಸಂಗೀತ ಬ್ಯಾಂಡ್ ‘ಥೈಕ್ಕುಡಂ ಬ್ರಿಡ್ಜ್ ಕೃತಿಚೌರ್ಯದ ಆರೋಪ ಮಾಡಿ ಕೇಸ್ ದಾಖಲಿಸಿತು. ಈ ವೇಳೆ ಹೊಂಬಾಳೆ ಫಿಲಂ ಸಂಸ್ಥೆ ವರಾಹರೂಪಂʼ ಹಾಡಿನ ಬಳಕೆಗೆ ನೀಡಲಾಗಿದ್ದ ಮಧ್ಯಂತರ ತಡೆಯನ್ನು ತೆರವುಗೊಳಿಸಬೇಕೆಂದು ಅರ್ಜಿ ಸಲ್ಲಿಸಿತ್ತು. ಆದರೆ ಇದೀಗ ಕೇರಳ ಹೈಕೋರ್ಟ್ ಇದೀಗ ಈ ಅರ್ಜಿಯನ್ನು ವಜಾಗೊಳಿಸಿದೆ.
ನ್ಯಾಯಮೂರ್ತಿ ಸಿಎಸ್ ಡಯಾಸ್ ಅವರ ಏಕಸದಸ್ಯ ಪೀಠವು, ಅರ್ಜಿದಾರರು ಭಾರತದ ಸಂವಿಧಾನದ 227ನೇ ವಿಧಿಯ ಅಡಿಯಲ್ಲಿ ನ್ಯಾಯಾಲಯವನ್ನು ಸಂಪರ್ಕಿಸಿದ್ದಾರೆ. ಸಿವಿಲ್ ಪ್ರಕ್ರಿಯಾ ಸಂಹಿತೆಯಲ್ಲಿ ಸೂಚಿಸಲಾದ ಕಾರ್ಯವಿಧಾನವನ್ನು ಸಂಪೂರ್ಣವಾಗಿ ಬೈಪಾಸ್ ಮಾಡಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ.
ಕೆಳ ನ್ಯಾಯಾಲಯಗಳು ಹೊರಡಿಸಿದ ಪ್ರತಿಯೊಂದು ಮಧ್ಯಂತರ ಆದೇಶಗಳಿಗೆ ನಾವು ಆದೇಶವನ್ನು ನೀಡಲು ಸಾಧ್ಯವಿಲ್ಲ. ಒಂದು ವೇಳೆ ಆದೇಶ ನೀಡಿದರೆ ಮೂಲ ನ್ಯಾಯವ್ಯಾಪ್ತಿಯ ನ್ಯಾಯಾಲಯಗಳು ಮತ್ತು ಮೇಲ್ಮನವಿ ನ್ಯಾಯಾಲಯಗಳು ನಿಷ್ಕ್ರಿಯವಾಗುತ್ತವೆ. ಈ ನ್ಯಾಯಾಲಯವು ಇಂತಹ ಕೇಸ್‌ಗಳಿಂದ ತುಂಬಿ ತುಳುಕುತ್ತದೆ ಎಂದು ಅಭಿಪ್ರಾಯಪಟ್ಟು ಅರ್ಜಿಯನ್ನು ವಜಾಗೊಳಿಸಿದೆ.
ಇಷ್ಟೇಅಲ್ಲದೆ ಈ ಅರ್ಜಿಯನ್ನು ವಿಚಾರಣೆಗೆ ಪರಿಗಣಿಸಲಾಗದು ಎಂದ ಕೋರ್ಟ್ ಕಾನೂನಿನಲ್ಲಿ ಲಭ್ಯವಿರುವ ಪರ್ಯಾಯ ಮಾರ್ಗಗಳನ್ನು ಅನುಸರಿಸುವಂತೆ ಹೊಂಬಾಳೆ ಫಿಲ್ಮ್ಸ್‌ನವರಿಗೆ ಸಲಹೆಯನ್ನು ನೀಡಿದೆ. ಹೀಗಾಗಿ ಇನ್ನುಮುಂದೆ ಕಾಂತಾರ ಸಿನಿಮಾದಲ್ಲಿ ವರಾಹರೂಪಂ ಹಾಡು ಇರುವುದಿಲ್ಲ ಎಂದು ಹೇಳಲಾಗುತ್ತಿದೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
