ಆಸ್ಕರ್ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ಶುರುವಾಗಲು ಕ್ಷಣಗಣನೆ ಪ್ರಾರಂಭವಾಗಿದೆ. ಈ ಬಾರಿ ನಮ್ಮ ಭಾರತದ ‘RRR’ ಸಿನಿಮಾದ ‘ನಾಟು ನಾಟು’ ಹಾಡಿಗೆ ನಟರಾದ ರಾಮ್ ಚರಣ್ ಮತ್ತು ಜ್ಯೂನಿಯರ್ ಎನ್.ಟಿ.ಆರ್ ವೇದಿಕೆಯ ಮೇಲೆ ಹೆಜ್ಜೆ ಹಾಕುತ್ತಿದ್ದಾರೆ. ಇವೆಲ್ಲದರ ನಡುವೆ ಇದೀಗ ಇರುವ ಮತ್ತೊಂದು ವಿಚಾರ ಎಂದರೆ ಈ ಬಾರಿಯ ಆಸ್ಕರ್ ಕಾರ್ಯಕ್ರಮದ ನಿರೂಪಣೆಯ ಹೊಣೆಯನ್ನು ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಹೊರಲಿದ್ದಾರೆ.
ಈ ಕುರಿತು ಸ್ವತಃ ದೀಪಿಕಾ ಪಡುಕೋಣೆ ಅವರು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಈ ಬಾರಿಯ ಆಸ್ಕರ್ ನಲ್ಲಿ ನಾನು ನಿರೂಪಕಿಯಾಗಿ ಮಿಂಚಲಿದ್ದೇನೆ. ಈ ದಿನಕ್ಕಾಗಿ ಕಾಯುತ್ತಿದ್ದೇನೆ ಎಂದು ಅವರು ಬರೆದುಕೊಂಡಿದ್ದಾರೆ.
ಇದೇ ಮಾರ್ಚ್ 12ರಂದು ಲಾಸ್ ಏಂಜಲೀಸ್ ನಲ್ಲಿ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಈ ಸಮಾರಂಭದಲ್ಲಿ ದೀಪಿಕಾ ಪಡುಕೋಣೆ ಜೊತೆ ಹತ್ತು ಜನ ನಿರೂಪಕರು ಕೆಲಸ ಮಾಡಲಿದ್ದಾರೆ. ದೀಪಿಕಾ ಜೊತೆ ಮೆಲಿಸ್ಸಾ ಮೆಕಾರ್ಥಿ, ಜಾನೆಲ್ಲೆ ಮೋನೆ, ಜೆನ್ನಿಫರ್ ಕೊನ್ನೆಲ್ಲಿ, ಸ್ಯಾಮ್ಯುಯೆಲ್ ಎಲ್ ಜಾಕ್ಸನ್, ಜೋ ಸಲ್ಡಾನಾ ಸೇರಿದಂತೆ ಇತರರು ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ.
ಈ ಬಾರಿಯ ಆಸ್ಕರ್ ವೇದಿಕೆಯಕ ಮೇಲೆ ಒಂದು ಕಡೆ ದೀಪಿಕಾ ನಿರೂಪಕಿಯಾಗಿ ಕಾರ್ಯ ನಿರ್ವಹಿಸಿದರೆ, ಮತ್ತೊಂದು ಕಡೆ ರಾಮ್ ಚರಣ್ ಮತ್ತು ಜ್ಯೂನಿಯರ್ ಎನ್.ಟಿ.ಆರ್ ‘ನಾಟು ನಾಟು’ ಹಾಡಿಗೆ ಲೈವ್ ಪರ್ಫಾರ್ಮೆನ್ಸ್ ನೀಡಲಿದ್ದಾರೆ. ಇದಲ್ಲದೆ ಗಾಯಕರಾದ ರಾಹುಲ್ ಸಿಪ್ಲಿಗುಂಜ್ ಮತ್ತು ಕಾಲಾ ಭೈರವ ಹಾಡಲಿದ್ದಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
