ಮಹಿಳಾ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಸತತ ಐದು ಸೋಲುಂಡು ಅಂಕಪಟ್ಟಿಯ ಕೊನೇ ಸ್ಥಾನದಲ್ಲಿದ್ದ ಚಾಲೆಂಜರ್ಸ್ ಇದೀಗ ಮೇಲೆದ್ದು ನಾಲ್ಕನೇ ಸ್ಥಾನ ಅಲಂಕರಿಸಿದೆ.
ಒತ್ತಡದ ನಡುವೆ ಭಯಮುಕ್ತವಾಗಿ ಬ್ಯಾಟ್ ಬೀಸಿದ ಕನಿಕಾ ಅಹೂಜ, ಎದುರಿಸಿದ 30 ಎಸೆತಗಳಲ್ಲಿ 8 ಫೋರ್ ಮತ್ತು 1 ಸಿಕ್ಸರ್‌ನೊಂದಿಗೆ ಬಿರುಸಿನ 46 ರನ್ ಸಿಡಿಸಿ ತಂಡದ ಗೆಲುವಿನ ಹಾದಿಯನ್ನು ಸುಲಭವಾಗಿಸಿದರು. ಅರ್ಧಶತಕದ ಹೊಸ್ತಿಲಲ್ಲಿ ಕನಿಕಾ ವಿಕೆಟ್ ಕೈಚೆಲ್ಲದರೂ ಪಂದ್ಗಯಶ್ರೇಷ್ಠ ಆಟಗಾರ್ತಿಯಾಗಿ ಹೊರಹೊಮ್ಮಿದರು. ಆರ್‌ಸಿಬಿಗೆ ಟೂರ್ನಿಯಲ್ಲಿ ಮೊದಲ ಜಯ ತಂದ ಹೆಗ್ಗಳಿಕೆ ತಮ್ಮದಾಗಿಸಿಕೊಂಡರು.
ಆಡಿದ 5 ಪಂದ್ಯಗಳಲ್ಲಿ ಒಟ್ಟಾರೆ 86 ರನ್ ಬಾರಿಸಿ ಆರ್‌ಸಿಬಿ ತಂಡದ ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ಬಲವಾಗಿರುವ ಕನಿಕಾ ಅಹೂಜ, ಪಂಜಾಬ್‌ನ ಪಟಿಯಾಲ ಮೂಲದವರು. ಬ್ಯಾಟಿಂಗ್ ಆಲ್‌ರೌಂಡರ್ ಪಂಜಾಬ್‌ನ ಕಿರಿಯರ ತಂಡ, ಭಾರತ ‘ಡಿ’, ಉತ್ತರ ವಲಯ, ಪಂಜಾಬ್ ಮಹಿಳಾ ತಂಡಗಳನ್ನು ಪ್ರತಿನಿಧಿಸಿರುವ ಕನಿಕಾ, ಇದೀಗ ಮಹಿಳಾ ಐಪಿಎಲ್ ಟೂರ್ನಿಯಲ್ಲಿ ಆರ್‌ಸಿಬಿ ತಂಡದ ಪರ ಬ್ಯಾಟ್ ಬೀಸುತ್ತಿದ್ದಾರೆ. ಪಂಜಾಬ್‌ನ ಅಮೃತ್‌ಸರ್‌ನಲ್ಲಿರುವ ಹಿಂದೂ ಕಾಲೇಜಿನಲ್ಲಿ ಬಿ.ಎ ಪದವಿ ಕೂಡ ಪಡೆದುಕೊಂಡಿದ್ದಾರೆ.
ಸುರಿಂದರ್ ಕುಮಾರ್ ಹಾಗೂ ಕೋಮಲ್ ಅಹೂಜ ಅವರ ಕಿರಿಯ ಪುತ್ರಿ ಆಗಿರುವ ಕನಿಕಾ ಅವರಿಗೆ ಅಣ್ಣ (ತುಶಾರ್ ಅಹೂಜ) ಮತ್ತು ಅಕ್ಕ (ದಿವ್ಯಾ ಅಹೂಜ) ಕೂಡ ಇದ್ದಾರೆ. ಟೀಮ್ ಇಂಡಿಯಾ ನಾಯಕಿ ಹರ್ಮನ್‌ಪ್ರೀತ್ ಕೌರ್ ಇವರ ನೆಚ್ಚಿನ ಮಹಿಳಾ ಕ್ರಿಕೆಟರ್ ಆಗಿದ್ದು, 360 ಶೈಲಿಯ ಬ್ಯಾಟಿಂಗ್‌ಗೆ ಹೆಸರುವಾಸಿಯಾದ ಟೀಮ್ ಇಂಡಿಯಾ ತಾರೆ ಸೂರ್ಯಕುಮಾರ್ ಯಾದವ್ ಅವರ ಅಭಿಮಾನಿ ಆಗಿದ್ದಾರೆ.
ಕ್ರಿಕೆಟ್ ವೃತ್ತಿಬದುಕು ಆಯ್ಕೆ ಮಾಡಿಕೊಳ್ಳುವ ಮುನ್ನ ಕನಿಕಾ ಅಹೂಜ ಸ್ಕೇಟಿಂಗ್‌ನಲ್ಲಿ ರಾಷ್ಟ್ರ ಮಟ್ಟದ ಅಥ್ಲೀಟ್ ಆಗಿ ಗುರುತಿಸಿಕೊಂಡಿದ್ದಾರೆ. ಕ್ರಿಕೆಟ್ ಅಥವಾ ಸ್ಕೇಟಿಂಗ್ ಎರಡರಲ್ಲಿ ಯಾವುದನ್ನು ಆಯ್ಕೆ ಮಾಡಿಕೊಳ್ಳುವುದು? ಎಂಬ ಗೊಂದಲ ಎದುರಿಸಿದ್ದಾಗಿ ಸಂದರ್ಶನ ಒಂದರಲ್ಲಿ ಕನಿಕಾ ಹೇಳಿಕೊಂಡಿದ್ದರು. ಕೊನೆಗೆ ಕ್ರಿಕೆಟ್‌ನಲ್ಲಿ ಮುಂದುವರಿಯಲು ನಿರ್ಧಾರ ಮಾಡಿ ಈಗ ಆರ್‌ಸಿಬಿ ತಂಡದಲ್ಲಿ ಮಿಂಚುತ್ತಿದ್ದಾರೆ.
ಪಟಿಯಾಲಾದ ಕ್ರಿಕೆಟ್ ಹಬ್‌ನಲ್ಲಿ ಕ್ಲಬ್ ಕ್ರಿಕೆಟ್ ಆರಂಭಿಸಿದ ಕನಿಕಾ, ಸ್ಕೂಲ್ ಕ್ರಿಕೆಟ್‌ನಲ್ಲಿ ನೀಡಿದ ಉತ್ತಮ ಪ್ರದರ್ಶನದ ಫಲವಾಗಿ ಪಂಜಾಬ್‌ನ ಕಿರಿಯರ ಮಹಿಳಾ ಕ್ರಿಕೆಟ್ ತಂಡಕ್ಕೆ ಆಯ್ಕೆಯಾದರು. ನಂತರ ಹಂತ ಹಂತವಾಗಿ ಬೆಳೆದು ಬಂದಿದ್ದಾರೆ. 15ನೇ ವಯಸ್ಸಿನಲ್ಲಿ ಎದುರಾದ ಗಾಯದ ಸಮಸ್ಯೆ ಕಾರಣ ಅವರು ದೀರ್ಘ ಸಮಯ ಕ್ರಿಕೆಟ್‌ನಿಂದ ದೂರ ಉಳಿಯಬೇಕಾಯಿತು. ಮನೆಯವರು ಕ್ರಿಕೆಟ್ ಎಲ್ಲಿ ಬಿಡುವಂತೆ ಮಾಡುತ್ತಾರೋ ಎಂದು ಹೆದರಿ ಗಾಯದ ಸಮಸ್ಯೆಯಯನ್ನು ಮನೆಯವರಿಂದ ಬಚ್ಚಿಟ್ಟಿದ್ದ ಸಂಗತಿಯನ್ನು ಸಂದರ್ಶನ ಒಂದರಲ್ಲಿ ಕನಿಕಾ ಹೇಳಿಕೊಂಡಿದ್ದರು.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
