ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಮತ್ತೊಂದು ಚಿರತೆ ಸಾವನ್ನಪ್ಪಿದೆ. ‘ತೇಜಸ್’ ಎಂಬ ಹೆಸರಿನ ಗಂಡು ಚಿರತೆ ಸಾವನ್ನಪ್ಪಿದೆ. ಕುನೋ ರಾಷ್ಟ್ರೀಯ ಉದ್ಯಾನವನದ ಮೇಲ್ವಿಚಾರಣಾ ತಂಡವು ಚಿರತೆಯ ಕುತ್ತಿಗೆಯಲ್ಲಿ ಗಾಯದ ಗುರುತುಗಳನ್ನು ಗಮನಿಸಿ ಅದನ್ನು ಪಾಲ್ಪುರದ ವನ್ಯಜೀವಿ ಇಲಾಖೆಗೆ ವರ್ಗಾಯಿಸಿತು. ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಚಿರತೆ ಸಾವನ್ನಪ್ಪಿದೆ. ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನವನದಲ್ಲಿ ಇತ್ತೀಚಿನ ಸತ್ತ ಚಿರತೆಯ ಜೊತೆಗೆ ಒಟ್ಟು 4 ಚಿರತೆಗಳು ಮತ್ತು 3 ಚಿರತೆ ಮರಿಗಳು ಸಾವನ್ನಪ್ಪಿವೆ.
ತೇಜಸ್ ಚಿರತೆಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಚಿರತೆಯ ಸಾವಿಗೆ ಕಾರಣದ ಬಗ್ಗೆ ತನಿಖೆ ಆರಂಭಿಸಲಾಗಿದೆ. ಚಿರತೆಯ ಕತ್ತಿನ ಮೇಲೆ ಗಾಯಗಳು ಎಲ್ಲೆಡೆ ಇವೆ. ಅವು ಹೇಗೆ ಸಂಭವಿಸಿದವು ಎಂದು ತನಿಖೆ ನಡೆಸುತ್ತಿದ್ದಾರೆ.
ಪ್ರಾಜೆಕ್ಟ್ ಚೀತಾದ ಭಾಗವಾಗಿ, ಕೇಂದ್ರ ಸರ್ಕಾರವು ದಕ್ಷಿಣ ಆಫ್ರಿಕಾ ಮತ್ತು ನಮೀಬಿಯಾದಿಂದ ಕುನೋ ರಾಷ್ಟ್ರೀಯ ಉದ್ಯಾನವನಕ್ಕೆ ಚಿರತೆಗಳನ್ನು ಸ್ಥಳಾಂತರಿಸಿದೆ. ಈ ಚಿರತೆಗಳಲ್ಲಿ ಇದುವರೆಗೆ ನಾಲ್ಕು ಚಿರತೆಗಳು ಮತ್ತು ಇನ್ನೂ ಮೂರು ಮರಿಗಳು ಸಾವನ್ನಪ್ಪಿವೆ. ಮಾರ್ಚ್ 27 ರಂದು ಸಶಾ ಎಂಬ ಹೆಣ್ಣು ಚಿರತೆ ಮೂತ್ರಪಿಂಡ ಸಂಬಂಧಿ ಕಾಯಿಲೆಯಿಂದ ಸಾವನ್ನಪ್ಪಿತ್ತು.
ನಂತರ ಏಪ್ರಿಲ್ 13 ರಂದು ಉದಯ್ ಎಂಬ ಗಂಡು ಚಿರತೆ ಹೃದಯ ವೈಫಲ್ಯದಿಂದ ಸಾವನ್ನಪ್ಪಿತು ಮತ್ತು ಮೇ 9 ರಂದು ದಕ್ಷಾ ಎಂಬ ಹೆಣ್ಣು ಚಿರತೆಯು ಮಿಲನದ ಸಮಯದಲ್ಲಿ ಗಾಯಗೊಂಡು ಸಾವನ್ನಪ್ಪಿತು. ಮೇ 25 ರಂದು ಮೂರು ಚಿರತೆ ಮರಿಗಳು ಸಾವನ್ನಪ್ಪಿವೆ.
ಮತ್ತೊಂದೆಡೆ, ಕುನೊ ರಾಷ್ಟ್ರೀಯ ಉದ್ಯಾನದಲ್ಲಿ ಚಿರತೆಗಳ ಸಾವು ಆತಂಕಕಾರಿಯಾಗಿದೆ. ಪ್ರತಿಕೂಲ ಹವಾಮಾನ ಮತ್ತು ಆರೋಗ್ಯ ಸಮಸ್ಯೆಗಳಿಂದ ಚಿರತೆಗಳು ಸತತವಾಗಿ ಸಾವನ್ನಪ್ಪುತ್ತಿರುವ ಬಗ್ಗೆ ಪ್ರಾಣಿ ಪ್ರಿಯರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
