ತಿರುಮಲ ತಿರುಪತಿ ವೆಂಕಣ್ಣನ ಪ್ರಸಾದ ಲಡ್ಡು ಎಲ್ಲರಿಗೂ ಇಷ್ಟ. ತಿರುಪತಿಯಲ್ಲಿ ಸಿಗುವ ಜಗತ್ಪ್ರಸಿದ್ಧ ಲಡ್ಡೂಗಳನ್ನು ಭಕ್ತರು ತಪ್ಪದೇ ಪಡೆದುಕೊಳ್ಳುತ್ತಾರೆ. ತಿರುಪತಿ ಲಡ್ಡುವಿನಲ್ಲಿ ಬಳಸುವ ತುಪ್ಪ ಕರ್ನಾಟಕದದ್ದು ಎಂಬುದು ಅನೇಕರಿಗೆ ತಿಳಿದಿಲ್ಲ. ಇದುವರೆಗೂ ತಿರುಪತಿಯಲ್ಲಿ ತಯಾರಿಸುವ ಲಡ್ಡುಗಳಿಗೆ ಕೆಎಂಎಫ್ ನ ನಂದಿನಿ ತುಪ್ಪವನ್ನು ಬಳಸಲಾಗುತ್ತಿತ್ತು. ಆದರೆ, ಈಗ ಬೇಸರದ ಸಂಗತಿ ಎಂದರೆ ತಿರುಪತಿಯಲ್ಲಿ ಮಾಡುವ ಲಡ್ಡುಗಳಿಗೆ ನಂದಿನಿ ತುಪ್ಪವನ್ನು ಬಳಸುತ್ತಿಲ್ಲ.
ಸುಮಾರು 50 ವರ್ಷಗಳ ನಂತರ ತಿರುಪತಿ ಲಡ್ಡು ಮತ್ತು ನಂದಿನಿ ತುಪ್ಪದ ನಡುವಿನ ಸಂಬಂಧ ಕಡಿದು ಹೋಗಿದೆ. ಇಷ್ಟು ದಿನ ಪೂರೈಸುತ್ತಿದ್ದ ತುಪ್ಪವನ್ನು ಇನ್ನು ಮುಂದೆ ತಿರುಪತಿ ಲಡ್ಡು ಮಾಡಲು ಕಳುಹಿಸುವುದಿಲ್ಲ ಎಂದು ಕೆಎಂಎಫ್ ಅಧ್ಯಕ್ಷ ಭೀಮಾ ನಾಯ್ಕ ಸ್ಪಷ್ಟಪಡಿಸಿದರು.
ತಿರುಪತಿಗೆ 6 ತಿಂಗಳಲ್ಲಿ 14 ಲಕ್ಷ ಕೆ.ಜಿ ತುಪ್ಪ ನೀಡಬೇಕಿದ್ದರೆ, ಇದುವರೆಗೆ ದೇವಸ್ಥಾನಕ್ಕೆ ಸಬ್ಸಿಡಿ ಆಧಾರದ ಮೇಲೆ ತುಪ್ಪ ಪೂರೈಕೆಯಾಗುತ್ತಿತ್ತು. ಆದರೆ, ಈ ಬಾರಿ ಕಡಿಮೆ ಬೆಲೆಗೆ ನಂದಿನಿ ತುಪ್ಪ ನೀಡಲು ಸಾಧ್ಯವಿಲ್ಲ ಎಂದು ಕೆಎಂಎಫ್ ಟೆಂಡರ್ ಹಿಂಪಡೆದಿದೆ. ಕರ್ನಾಟಕದಲ್ಲಿ ಹಾಲಿನ ಕೊರತೆ ಇರುವುದರಿಂದ ಅದರ ಉತ್ಪನ್ನಗಳ ಬೆಲೆಯನ್ನು ಹೆಚ್ಚಿಸುವುದು ನಮಗೂ ಅನಿವಾರ್ಯವಾಗಿದೆ. ಹಾಗಾಗಿಯೇ ನಂದಿನಿ ತುಪ್ಪದ ಬೆಲೆಯೂ ಏರಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ನಂದಿನಿ ತುಪ್ಪವನ್ನು ಕಡಿಮೆ ಬೆಲೆಗೆ ಮಾರಾಟ ಮಾಡದಿರಲು ಕೆಎಂಎಫ್ ನಿರ್ಧರಿಸಿದೆ.
ಆಗಸ್ಟ್ 1ರಿಂದ ಹಾಲಿನ ದರ ಏರಿಕೆ ಮಾಡಲಾಗಿದ್ದು, ತುಪ್ಪಕ್ಕೆ ಹೆಚ್ಚಿನ ಬೆಲೆ ನೀಡುವಂತೆ ಒತ್ತಾಯಿಸಿದ್ದೇವೆ ಎಂದು ಕೆಎಂಎಫ್ ಅಧ್ಯಕ್ಷ ಭೀಮಾ ನಾಯ್ಕ ಸ್ಪಷ್ಟಪಡಿಸಿದರು. ಕೆಎಂಎಫ್ ತುಪ್ಪವು ತನ್ನ ಗುಣಮಟ್ಟದಿಂದಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆಯನ್ನು ಹೊಂದಿದೆ. ಯಾವುದೇ ಕಂಪನಿ ಕಡಿಮೆ ಬೆಲೆಗೆ ಬಿಡ್ ಮಾಡಿದರೆ ಗುಣಮಟ್ಟಕ್ಕೆ ಧಕ್ಕೆಯಾಗುತ್ತದೆ, ಲಡ್ಡೂಗಳಿಗೆ ರುಚಿ ನೀಡುವಲ್ಲಿ ನಂದಿನಿ ತುಪ್ಪ ಪ್ರಮುಖ ಪಾತ್ರ ವಹಿಸುತ್ತದೆ ಎಂದರು.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
