ಸ್ವರ್ಣ ಗೌರೀ ವ್ರತ.
ಸ್ವರ್ಣ ಗೌರೀ ವ್ರತ ಪೂಜೆಯನ್ನು ಕರ್ನಾಟಕ ಮತ್ತು ಆಂದ್ರಪ್ರದೇಶ ರಾಜ್ಯಗಳಲ್ಲಿ ಹುಡುಗಿಯರು ಮತ್ತು ಮದುವೆಯಾದ ಮಹಿಳೆಯರು ಆಚರಿಸುತ್ತಾರೆ. ಮಾತೇ ಗೌರೀ ದೇವಿಯೂ ಗಣೇಶನ ತಾಯಿ ಕೂಡ ಹೌದು.ಈ ಹಬ್ಬವು ಬರುವುದು ಬಾದ್ರಪದ ಮಾಸದ ಶುಕ್ಲ ಪಕ್ಷದಲ್ಲಿ,ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಿನಲ್ಲಿ ಬರುತ್ತದೆ .ಈ ವರ್ಷ 2017ರಲ್ಲಿ ಆಗಸ್ಟ್ 24 ರಂದು,ಗುರುವಾರ, ಭಾದ್ರಪದ ಅಮಾವಾಸ್ಯೆಯಂದು,ಹೇವಿಳಂಬಿ ಸಂವತ್ಸರದ,ಉತ್ತರಫಾಲ್ಗುಣಿ ಮತ್ತು ಹಸ್ತಾ ನಕ್ಷತ್ರದಲ್ಲಿ ಬಂದಿದೆ.
ಹಾಗೆಯೇ ಮಾರನೇ ದಿನ ಬೆಳ್ಳಗ್ಗೆ ಅಂದರೆ ಶುಕ್ರವಾರ 25 ನೇ ತಾರೀಖಿನಂದು ಗಣೇಶ ಚತುರ್ಥಿ ಹಬ್ಬವು ಬಂದಿದೆ.
ಈ ಪೂಜೆ ಮತ್ತು ವ್ರತವು ಮದುವೆಯಾದ ಹೆಂಗಸರಿಗೆ ಬಹಳ ಶ್ರೇಷ್ಠ ಮತ್ತು ಅಷ್ಟೇ ಮಹತ್ವವನ್ನು ಹೊಂದಿದೆ.ಪಾರ್ವತಿ ದೇವಿ ಅಥವಾ ಗೌರೀ ದೇವಿಯ ಬಳಿ ತಮ್ಮ ಗಂಡಂದಿರಿಗೆ ಸುದೀರ್ಘವಾದ ಆಯಸ್ಸನ್ನು ಕೊಟ್ಟು ಆಶೀರ್ವದಿಸಿ ಕಾಪಾಡು ಎಂದು ಕೇಳಿಕೊಂಡು ಅದನ್ನು ದೇವಿಯು ಈಡೇರಿಸುತ್ತಾಳೆ ಎನ್ನುವ ನಂಬಿಕೆ ಜನರ ಮನಸ್ಸಿನಲ್ಲಿದೆ.
ಗೌರೀ ದೇವಿಯ ಜೇಡಿ ಮಣ್ಣಿನಿಂದ ಮಾಡಿದ ಮೂರ್ತಿಯನ್ನು ಒಂದು ಚಿಕ್ಕ ಬೆಳ್ಳಿ ಅಥವಾ ತಾಮ್ರದ ತಟ್ಟೆಯಲ್ಲಿ ಅಕ್ಕಿಯನ್ನು ತುಂಬಿ ಗೌರೀ ದೇವಿಯ ಮೂರ್ತಿಯನ್ನು ಸ್ಥಾಪಿಸಬೇಕು. ಹರಿಶಿನವನ್ನು ನೀರು ಅಥವಾ ಹಾಲಿನಲ್ಲಿ ಕಲೆಸಿ ಅದರಿಂದ ಒಂದು ಸಣ್ಣ ಪಿರಮಿಡ್ ಆಕಾರಾದ ರೀತಿಯಲ್ಲಿ ಮಾಡಿ ಅದನ್ನು ಸಹ ನಾವು ಗೌರಿ ಎಂದು ಭಾವಿಸಿ ಪೂಜೆ ಮಾಡಬಹುದು.
ಈ ಪೂಜೆಯನ್ನು ಹೆಂಗಸರು ಮಾಡುತ್ತಾರೆ ಇವರ ಪೂಜೆ ಮಾಡುವಾಗ ಜೊತೆಯಲ್ಲಿ ಒಬ್ಬರು ಪೂಜಾರಿ ಕೂಡ ಇರುತ್ತಾರೆ ಅಥವಾ ಇದ್ದರೆ ಒಳ್ಳೆಯದು.ಆಗ ಅವರು ನಾವು ಹೇಗೆ ಪೂಜೆ ಮಾಡಬೇಕೆಂದು ಹಿಂದೆ ನಿಂತು ವಿಧಾನವನ್ನು ಹೇಳುತ್ತಾರೆ ಮತ್ತು ಶ್ಲೋಕ, ಮಂತ್ರಗಳನ್ನು ಪಠಿಸುತ್ತಿರುತ್ತಾರೆ.ಇದರಿಂದ ಪೂಜೆ ಮತ್ತು ವ್ರತ ಎರಡು ಯಾವುದೇ ವಿಗ್ನ ಮತ್ತು ದೋಷಗಳು ಇಲ್ಲದೆ ಸಂಪೂರ್ಣವಾಗುತ್ತದೆ.
ದೇವಿಗೆ ಅನೇಕ ಪೂಜಾ ಸಾಮಗ್ರಿಗಳನ್ನು ಅರ್ಪಿಸಬೇಕು ಅವು ಯಾವುವೆಂದರೆ ಹೂವು,ಹಣ್ಣು,ತೆಂಗಿನಕಾಯಿ, ಬಾಳೆಹಣ್ಣು,ಹರಿಶಿನ, ಕುಂಕುಮ, ವೀಳ್ಯದೆಲೆ ,ಅಡಿಕೆ,ಉದುಬತ್ತಿ,ಕರ್ಪುರ,ಧೂಪ,ದೀಪ,ನೈವೇದ್ಯ, ಹೀಗೆ ಇನ್ನು ಒಟ್ಟಾಗಿ ವಿವಿಧ 16 ಬಗೆ ಬಗೆಯ ಪೂಜಾ ಸಾಮಾಗ್ರಿಗಳನ್ನು ಗೆಜ್ಜೇವಸ್ತ್ರ ಸಹಿತ ಸಿದ್ಧತೆ ಮಾಡಿಕೊಳ್ಳಬೇಕು.
ಒಂದು ನೂಲಿನ ಉಂಡೆಯನ್ನು ತೆಗೆದುಕೊಂಡು ಅದನ್ನು ಹರಿಶಿನ ಬಳಸಿ ಹಳದಿ ಬಣ್ಣಕ್ಕೆ ಮಾಡಿಕೊಂಡು ಅದರಲ್ಲಿ 16 ಗಂಟುಗಳನ್ನು ಹಾಕಬೇಕು ಅದನ್ನು ಸಹ ಮಹಿಳೆಯರು ಪೂಜೆಗೆ ಇಟ್ಟು ಪೂಜಿಸಬೇಕು.ಪೂಜೆ ಎಲ್ಲವೂ ಮುಗಿದ ನಂತರ ಮುತೈದೆ ಮಹಿಳೆಯರು ಬೇರೆ ಮುತೈದೆಯರ ಕೈಯಿಂದ ಈ ದಾರವನ್ನು ತಮ್ಮ ಬಲಗೈಗೆ ಕಟ್ಟಿಸಿಕೊಳ್ಳಬೇಕು.
ಆ ದಿನದಂದು ಮಹಿಳೆಯರು ಮತ್ತು ಮಕ್ಕಳು ಹೊಸ ಬಟ್ಟೆ ತೊಟ್ಟು, ಹಸಿರು ಬಳೆಗಳನ್ನು ಎರಡೂ ಕೈಗೆ ಹಾಕಿಕೊಂಡು, ಹಣೆಗೆ ಕುಂಕುಮವನ್ನು ಇಟ್ಟುಕೊಂಡು,ತಲೆಗೆ ಹೂವನ್ನು ಮುಡಿದು ,ಸಿಂಗಾರ ಮಾಡಿಕೊಂಡು ಕೆನ್ನೆಗೆ ಹರಿಶಿನ ಹಚ್ಚಿಕೊಂಡು ಶೋಭಿತರಾಗಿ ಭಕ್ತಿ ಶ್ರದ್ಧೆಯಿಂದ ಲಕ್ಷಣವಾಗಿ ಸುಮಂಗಲಿಯರಂತೆ ಈ ಸ್ವರ್ಣಗೌರೀ ವ್ರತ ಮತ್ತು ಪೂಜೆಯನ್ನು ಮಾಡಬೇಕು.
ಅಂದು ವಿವಿಧ ಬಗೆ ಬಗೆಯ ಭಕ್ಷ್ಯ ಭೋಜನಗಳನ್ನು ತಯಾರಿಸುತ್ತಾರೆ ಮತ್ತು ಅವುಗಳನ್ನು ಗೌರೀ ದೇವಿಗೆ ನೈವೇದ್ಯ ಮಾಡಿ ಸಮರ್ಪಿಸಿಬೇಕು. ಚಿತ್ರಾನ್ನ, ಪಾಯಸ, ಕಾಯಿ ಹೋಳಿಗೆ,(ಒಬ್ಬಟ್ಟು)ಹೋಳಿಗೆ ಸಾರು(ಒಬ್ಬಟ್ಟಿನ ಸಾರು),ಅನ್ನ,ಹೆಸರುಬೇಳೆ ಅಥವಾ ಕೋಸಂಬರಿ, ಕಾಯಿ ಕಡುಬು, ತರಕಾರಿ ಪಲ್ಯ,ಅಂಬೊಡೆ ಭಜ್ಜಿ ಮತ್ತು ಬೋಂಡ.ಇವನ್ನೆಲ್ಲಾ ತಯಾರಿಸಿ ಮೊದಲು ದೇವಿಗೆ ಅರ್ಪಿಸಿ,ನೈವೇದ್ಯ ಮಾಡಿ ನಂತರ ಮನೆಯವರೆಲ್ಲರೂ ಒಟ್ಟಾಗಿ ಕುಳಿತು ಊಟ ಮಾಡಬೇಕು.
ಪೂಜೆ ಮುಗಿದ ನಂತರ ಹೆಂಗಸರು ಮರದಲ್ಲಿ ಇಡುವ ಒಂಬತ್ತು ವಿವಿಧ ತರದ ನವಧಾನ್ಯಗಳು ಇದರ ಜೊತೆಗೆ ಬೆಲ್ಲ,ಹಸಿರು ಬಳೆ, ಹರಿಶಿನ, ಕುಂಕುಮ,ಸೀರೆ ,ಕುಪ್ಪಸ,ವೀಳ್ಯದೆಲೆ, ಅಡಿಕೆ,ಹಣ್ಣುಗಳು ಮತ್ತು ದಕ್ಷಿಣೆ (ಹಣ) ತಮ್ಮ ಇಷ್ಟಕ್ಕೆ ಆನುಸಾರವಾಗಿ ಮರದಲ್ಲಿ ಇಟ್ಟು ಮರದಿಂದಲೇ ಮುಚ್ಚಬೇಕು.ಇದಕ್ಕೆ “ಮರದ ಬಾಗಿನ” ಎಂದು ಹೆಸರು.ಸಾಮಾನ್ಯವಾಗಿ ಎಲ್ಲರೂ ಬಾಗಿನ ಎಂದು ಕರೆಯುತ್ತಾರೆ. ಈ ಪೂಜೆಯನ್ನು ಮದುವೆಯಾದ ಹೆಂಗಸರು ತಮ್ಮ ತಾಯಿಯ ಮನೆಯಲ್ಲಿಯೇ(ತವರು ಮನೆಯಲ್ಲಿ) ಮಾಡಬೇಕು ಇದು ಅವರ ತಾಯಿ ತಂದೆಯರಿಗೆ ಗೌರವ ಕೊಡುವ ಸೂಚಕ ಮತ್ತು ಸಂಕೇತವೂ ಕೂಡ ಆಗಿದೆ.
ಸ್ವರ್ಣಗೌರೀ ವ್ರತದ ಮಾರನೇ ದಿನ ಗೌರಿ ದೇವಿಯ ಜೊತೆಗೆ ಗಣೇಶನ ಚತುರ್ಥಿಯ ದಿನ ಗಣೇಶನನ್ನು ಗೌರಿಯ ಸಮೇತ ಸ್ಥಾಪಿಸಿ ಪೂಜೆ ಮಾಡಿ,ಗೌರಿಗೆ ಉಡಿ ತುಂಬಿ,ಎಲ್ಲಾ ಪವಿತ್ರ ವಸ್ತುಗಳನ್ನಿಟ್ಟು ಅವು ಹರಿಶಿನ, ಕುಂಕುಮ,ಹಸಿರು ಬಳೆ, ಹೂ- ಹಣ್ಣು, ತೆಂಗಿನಕಾಯಿ,ವೀಳ್ಯದೆಲೆ ಅಡಿಕೆ ,ಹರಿಶಿನದ ಕೊಂಬು ಮತ್ತು ಒಣ ಕೊಬ್ಬರಿಯನ್ನಿಟ್ಟು ಬೀಳ್ಕೊಡುಗೆ ಕೊಡಬೇಕು .ಗೌರೀ ದೇವಿಯ ಮೂರ್ತಿಯನ್ನು ಗಣೇಶನ ಮಣ್ಣಿನ ಮೂರ್ತಿಯ ಜೊತೆ ನೀರಿನಲ್ಲಿ ವಿಸರ್ಜನೆ ಮಾಡಬೇಕು.ನಿಮಗೆ ಕೆರೆ,ಕಟ್ಟೆ,ಬಾವಿ,ನದಿ,ಹಳ್ಳಗಳು ನಿಮ್ಮ ಮನೆಯ ಹತ್ತಿರದಲ್ಲಿ ಇಲ್ಲದಿದ್ದರೆ ಮನೆಯಲ್ಲಿಯೇ ಒಂದು ಬಕೆಟನಲ್ಲಿ ಶುದ್ಧವಾದ ನೀರನ್ನು ತೆಗೆದುಕೊಂಡು ವಿಸರ್ಜನೆ ಮಾಡಬಹುದು.ತದನಂತರ ಎಲ್ಲರಿಗೂ ಪ್ರಸಾದ ವಿನಿಯೋಗ ಮಾಡಬೇಕು. ಇಲ್ಲಿಗೆ ಸ್ವರ್ಣಗೌರೀ ಪೂಜೆ ಮತ್ತು ವ್ರತ ಸಂಪೂರ್ಣ ವಾಯಿತು.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
