ಭಾರತದಲ್ಲಿ ನಡೆಯುತ್ತಿರುವ ಏಕದಿನ ವಿಶ್ವಕಪ್-2023ರಲ್ಲಿ ನ್ಯೂಜಿಲೆಂಡ್‌ನ ಯುವ ಆಟಗಾರ ರಚಿನ್ ರವೀಂದ್ರ ಅಮೋಘ ಪ್ರತಿಭೆ ತೋರುತ್ತಿದ್ದಾರೆ. ಮೆಗಾ ಟೂರ್ನಮೆಂಟ್‌ನಲ್ಲಿ ಒಂಬತ್ತು ಪಂದ್ಯಗಳಲ್ಲಿ ಮೂರು ಶತಕ ಮತ್ತು ಎರಡು ಅರ್ಧ ಶತಕಗಳೊಂದಿಗೆ, ಅವರು 556 ರನ್‌ಗಳೊಂದಿಗೆ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಬುಧವಾರ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿರುವ ಭಾರತ ಮತ್ತು ನ್ಯೂಜಿಲೆಂಡ್ ಪಂದ್ಯದಲ್ಲಿ ಭಾರತದ ಬೌಲರ್‌ಗಳು ರಚಿನ್ ರವೀಂದ್ರ ಅವರತ್ತ ಗಮನ ಹರಿಸುತ್ತಾರೆ ಎಂದರೆ ಅತಿಶಯೋಕ್ತಿಯಲ್ಲ.
ಈ ದಾಖಲೆಗಳ ಬೆನ್ನಲ್ಲೇ ಭಾರತೀಯ ಮೂಲದ ರಚಿನ್ ರವೀಂದ್ರ ಮನೆಮಾತಾಗಿದ್ದರು. ಇದರ ಬೆನ್ನಲ್ಲೇ ರಚಿನ್ ಹೆಸರಿನ ಸಿಕ್ರೇಟ್ ಕೂಡ ಬಹಿರಂಗವಾಗಿತ್ತು. ರಾಹುಲ್ ದ್ರಾವಿಡ್ (RA) ಹಾಗೂ ಸಚಿನ್ (CHIN) ತೆಂಡೂಲ್ಕರ್ ಅವರ ಹೆಸರನ್ನು ಸಂಯೋಜಿಸಿ ಅವರಿಗೆ ಹೆಸರಿಡಲಾಗಿದೆ ಎಂಬ ಸುದ್ದಿಗಳು ಹರಿದಾಡಿದ್ದವು. ಆದರೆ ಅದೆಲ್ಲವೂ ಸುಳ್ಳು ಸುದ್ದಿ ಎಂದಿದ್ದಾರೆ ರಚಿನ್ ಅವರ ತಂದೆ ರವೀಂದ್ರ ಕೃಷ್ಣಮೂರ್ತಿ.
ರವಿ ಕೃಷ್ಣಮೂರ್ತಿ ಅವರು ಆಂಗ್ಲ ಸುದ್ದಿ ಮಾಧ್ಯಮವೊಂದಕ್ಕೆ ರಚಿನ್ ಜನಿಸಿದಾಗ ನನ್ನ ಹೆಂಡತಿ ಈ ಹೆಸರನ್ನು ಸೂಚಿಸಿದರು ಮತ್ತು ನಾವು ಚರ್ಚಿಸಲು ಹೆಚ್ಚು ಸಮಯ ತೆಗೆದುಕೊಳ್ಳಲಿಲ್ಲ. ಹೆಸರು ಚೆನ್ನಾಗಿದೆ. ಇದನ್ನು ಉಚ್ಚರಿಸುವುದು ಸುಲಭ. ರಚಿನ್ ಎಂಬ ಹೆಸರನ್ನು ಇಟ್ಟಿದ್ದೇವೆ ಎಂದರು. ರಾಹುಲ್ ದ್ರಾವಿಡ್ ಹಾಗೂ ಸಚಿನ್ ಹೆಸರು ರಾಚಿನ್ ಎಂದು ಬಂದಿರುವ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ರವಿ ಕೃಷ್ಣಮೂರ್ತಿ ಸ್ಪಷ್ಟಪಡಿಸಿದ್ದಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
