fbpx

ಕರ್ನಾಟಕ ಉಪಚುನಾವಣೆ: ಮಸ್ಕಿ, RR ನಗರ ಕ್ಷೇತ್ರಗಳಿಗೆ ಚುನಾವಣೆಯಾಕಿಲ್ಲ? ಕಾರಣ ಬಿಚ್ಚಿಟ್ಟ ರಾಜ್ಯ ಮುಖ್ಯಚುನಾವಣಾಧಿಕಾರಿ ಸಂಜೀವ್ ಕುಮಾರ್

ಕಾಂಗ್ರೆಸ್ ಹಾಗೂ ಜೆಡಿಎಸ್‌ನಿಂದ ಅನರ್ಹಗೊಂಡೊರುವ 17 ಶಾಸಕರ ಕ್ಷೇತ್ರಗಳ ಪೈಕಿ 15 ಕ್ಷೇತ್ರಗಳಿಗೆ ಕೇಂದ್ರ ಚುನಾವಣೆ ಆಯೋಗ ಉಪಚುನಾವಣೆ ದಿನಾಂಕ ಘೋಷಣೆ ಮಾಡಿದೆ.

17 ಕ್ಷೇತ್ರಗಳ ಪೈಕಿ 15 ಕ್ಷೇತ್ರಗಳಿಗೆ ಏಕಿ ಉಪಚುನಾವಣೆ? ಉಳಿದ ಮಸ್ಕಿ ಮತ್ತು ಬೆಂಗಳೂರಿನ ರಾಜರಾಜೇಶ್ವರಿ ನಗರ (ಆರ್‌ಆರ್‌ ನಗರ) ಕ್ಷೇತ್ರಗಳಿಗೆ ಬೈ ಎಲೆಕ್ಷನ್ ಏಕೆ ಇಲ್ಲ? ಎನ್ನುವ ಚರ್ಚೆ ರಾಜ್ಯ ರಾಜಕಾರಣದಲ್ಲಿ ಶುರುವಾಗಿತ್ತು. ಇದೀಗ ಚರ್ಚೆಗಳಿಗೆ ಕರ್ನಾಟಕ ಚುನಾವಣೆ ಆಯೋಗದ ಮುಖ್ಯಸ್ಥ ಸಂಜೀವ್ ಕುಮಾರ್ ಅವರು ತೆರೆ ಎಳೆದಿದ್ದಾರೆ.

ಕಳೆದ ಚುನಾವಣೆಯಲ್ಲಿ ಮಸ್ಕಿ ಕ್ಷೇತ್ರದಲ್ಲಿ ಪ್ರತಾಪ್​ ಗೌಡ ಅವರು ಆಯ್ಕೆಯಾಗಿದ್ದನ್ನು ಪ್ರಶ್ನಿಸಿ ಪರಾಜಿತ ಅಭ್ಯರ್ಥಿ ಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದಾರೆ. ಜತೆಗೆ ಆರ್​. ಆರ್​. ನಗರ ಕ್ಷೇತ್ರದಲ್ಲಿ ನಕಲಿ ವೋಟರ್​ ಐಡಿ ಮತ್ತು ಮುನಿರತ್ನ ಆಯ್ಕೆ ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆ ಹೈಕೋರ್ಟ್​ನಲ್ಲಿ ಬಾಕಿ ಇದೆ. ಈ ಹಿನ್ನೆಲೆಯಲ್ಲಿ ಅರ್ಜಿ ಇತ್ಯರ್ಥವಾಗುವವರೆಗೆ ಚುನಾವಣೆ ನಡೆಯುವುದಿಲ್ಲ ಎಂದು ತಿಳಿಸಿದರು.

ಕಳೆದ 2018 ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಜಾಲಹಳ್ಳಿಯ ಅಪಾರ್ಟ್ ಮೆಂಟ್ ಒಂದರಲ್ಲಿ ಸಾವಿರಾರು ಗುರುತಿನ ಚೀಟಿ ಪತ್ತೆಯಾಗಿದ್ದವು. ಈ ಪ್ರಕರಣದಲ್ಲಿ ಅನರ್ಹ ಶಾಸಕ ಮುನಿರತ್ನ ಹೆಸರನ್ನು ಜಾಲಹಳ್ಳಿ ಪೊಲೀಸರು ದೋಷಾರೋಪ ಪಟ್ಟಿಯಲ್ಲಿ ಕೈಬಿಟ್ಟಿದ್ದರು. ಇದನ್ನು ಪ್ರಶ್ನಿಸಿ ಪರಾಜಿತ ಅಭ್ಯರ್ಥಿ ಪಿ.ಎಂ ಮುನಿರಾಜುಗೌಡ 7ನೇ ಎಸಿಎಂಎಂ ನ್ಯಾಯಾಲಯದ ಮೆಟ್ಟಿಲೇರಿದ್ದರು. ಮುನಿರತ್ನ ಅವರನ್ನು ಆರೋಪಿಯನ್ನಾಗಿ ಮಾಡಬೇಕು ಎಂಬುವುದು ಅವರ ವಾದವಾಗಿದೆ. ಈ ಪ್ರಕರಣ ಕೋರ್ಟಿನಲ್ಲಿ ಇರುವುದರಿಂದ ಈ ಕ್ಷೇತ್ರದ ಉಪ ಚುನಾವಣೆ ತಡೆಹಿಡಿಯಲಾಗಿದೆ ಎಂದು ಚುನಾವಣಾಧಿಕಾರಿ ಹೇಳಿದರು.

ಮಸ್ಕಿ ಕ್ಷೇತ್ರದಿಂದ ಕಾಂಗ್ರೆಸ್‌ನ ಪ್ರತಾಪ್‌ ಗೌಡ ಪಾಟೀಲ್ ಕೇವಲ 213 ಮತಗಳಿಂದ ಗೆಲುವು ಸಾಧಿಸಿದ್ದರು. ಚುನಾವಣೆಯಲ್ಲಿ ಅಕ್ರಮವಾಗಿ ಮತದಾನ ಮಾಡಿಸಲಾಗಿದೆ ಎಂದು ಈ ಬಗ್ಗೆ ಬಿಜೆಪಿ ಪರಾಜಿತ ಅಭ್ಯರ್ಥಿ ಆರ್‌. ಬಸವನಗೌಡ ಅವರು ಕೋರ್ಟ್‌ ಮೆಟ್ಟಿಲೇರಿದ್ದು, ಅದು ಹೈಕೋರ್ಟ್‌ನಲ್ಲಿದೆ. ಈ ಹಿನ್ನೆಲೆಯಲ್ಲಿ ಮಸ್ಕಿಗೆ ಉಪಚುನಾವಣೆಗೆ ದಿನಾಂಕ ಘೋಷಣೆ ಮಾಡಿಲ್ಲ. ಎಂದು ಸಂಜೀವ್ ಕುಮಾರ್ ಹೇಳಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

To Top