fbpx

ಪೈಲ್ವಾನ್ ಪೈರಸಿ ಮಾಡಿದ್ದ ಕಿಡಿಗೇಡಿಯ ಬಂಧನ.

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ‘ಪೈಲ್ವಾನ್’ ಚಿತ್ರವನ್ನು ಪೈರಸಿ ಮಾಡಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ರಾಕೇಶ್ ಅಲಿಯಾಸ್ ವಿರಾಟ್ ಬಂಧಿತ ಆರೋಪಿ. ರಾಕೇಶ್ ಪೈಲ್ವಾನ್ ಸಿನಿಮಾದ ಲಿಂಕ್ ಅನ್ನು ತನ್ನ ಫೇಸ್‍ಬುಕ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದನು. ಹೀಗಾಗಿ ಸಿಸಿಬಿ ಪೊಲೀಸರು ನೆಲಮಂಗಲದ ಹಿಮಚೇನಹಳ್ಳಿಯಲ್ಲಿ ಆರೋಪಿ ರಾಕೇಶ್‍ನನ್ನು ಬಂಧಿಸಿದ್ದಾರೆ.

ಪೈಲ್ವಾನ್ ಸಿನಿಮಾದ ಕಾಪಿರೈಟ್ ಉಲ್ಲಂಘಿಸಿ ಸಂಪೂರ್ಣ ಚಿತ್ರವನ್ನು ವೀಕ್ಷಿಸುವ ಲಿಂಕನ್ನು ಸಾರ್ವಜನಿಕವಾಗಿ ಫೇಸ್‍ಬುಕ್ ಖಾತೆಯಲ್ಲಿ ಪೋಸ್ಟ್ ಮಾಡಿಕೊಂಡಿದ್ದ. ಅಷ್ಟೇ ಅಲ್ಲದೆ ಇತರರಿಗೂ ಲಿಂಕ್ ಕಳುಹಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿ ರಾಕೇಶ್ ವಿರಾಟ್ (ಯುವ) ಎಂಬ ಹೆಸರಿನಲ್ಲಿ ಫೇಸ್‍ಬುಕ್ ಖಾತೆಯನ್ನು ಹೋಂದಿದ್ದ. ಸಿನಿಮಾ ಬಿಡುಗಡೆಯಾದ ದಿನವೇ ಕಂಪ್ಲೀಟ್ ಸಿನಿಮಾದ ಲಿಂಕನ್ನು ತನ್ನ ಫೇಸ್‌‍ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದ. ಫೇಸ್‍ಬುಕ್‌ನಲ್ಲಿ ಸ್ಕ್ರೀನ್ ಶಾಟ್‍ ಹಾಕಿಕೊಂಡು ಸಿನಿಮಾ ಲಿಂಕ್ ಪಡೆಯಲು ಇಚ್ಛಿಸುವವರು ತನಗೆ ಇನ್‍ಬಾಕ್ಸ್ ಮಾಡುವಂತೆ ಹೇಳಿದ್ದ.

ಈ ಕುರಿತು ಪ್ರತಿಕ್ರಿಯಿಸಿರುವ ಸಿಸಿಬಿ ಆಯುಕ್ತ ಸಂದೀಪ್​ ಪಾಟೀಲ್​, “ಇತ್ತೀಚೆಗೆ ‘ಪೈಲ್ವಾನ್’​ ಸಿನಿಮಾ ಲೀಕ್ ಆದ ಬಗ್ಗೆ ಹಾಗೂ ಅದರ ಲಿಂಕ್​ ಶೇರ್​ ಮಾಡುತ್ತಿರುವ ಬಗ್ಗೆ ನಮಗೆ ದೂರು ಬಂದಿತ್ತು. ಪ್ರಕರಣದ ಪ್ರಮುಖ ಆರೋಪಿ ರಾಕೇಶ್​ ಎಂಬುವವನ್ನು ಬಂಧಿಸಿದ್ದೇವೆ. ಈ ಲಿಂಕ್​ ಈತನ ಬಳಿ ಹೇಗೆ ಬಂತು ಮತ್ತು ಎಷ್ಟು ಜನರಿಗೆ ಇದನ್ನು ಈತ ಶೇರ್​ ಮಾಡಿದ್ದಾನೆ ಎನ್ನುವುದನ್ನು ತನಿಖೆ ನಡೆಸುತ್ತೇವೆ,” ಎಂದಿದ್ದಾರೆ.

ರಾಕೆಶ್​ ಫೇಸ್​ಬುಕ್​ ಖಾತೆಯಲ್ಲಿ ದರ್ಶನ್​ ಹಾಗೂ ವಿರಾಟ್ ಕೊಹ್ಲಿ ಫೋಟೋಗಳಿವೆ. ಹೀಗಾಗಿ ಈತ ದರ್ಶನ್​ ಹಾಗೂ ವಿರಾಟ್​ ಅಭಿಮಾನಿ ಎನ್ನಲಾಗುತ್ತಿದೆ. ದರ್ಶನ್​ ಅಭಿನಯದ ‘ವಿರಾಟ್​’ ಸಿನಿಮಾ ನೋಡಿ ಈತ ತನ್ನ ಹೆಸರನ್ನು ರಾಕೇಶ್ ವಿರಾಟ್​ ಎಂದು ಬದಲಾಯಿಸಿಕೊಂಡಿದ್ದಾನೋ ಅಥವಾ ಈತ ಕೊಹ್ಲಿ ಅಭಿಮಾನಿಯೋ ಎಂಬುದು ತಿಳಿದುಬಂದಿಲ್ಲ. ಈ ಬಗ್ಗೆ ಪೊಲೀಸರಿಂದ ಅಧಿಕೃತ ಮಾಹಿತಿ ಸಿಕ್ಕಿಲ್ಲ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

To Top