ತಿರುವನಂತಪುರ: ತಾಳಿ ಕಟ್ಟುವ ಕೇವಲ ಎರಡು ತಾಸಿನ ಮೊದಲು, ಮದುಮಗಳೊಬ್ಬಳು ತಾನುಟ್ಟ ಉಡುಗೆಯಲ್ಲಿ ಹೊರಹೋಗಿದ್ದಳು. ಆಕೆ ಎಲ್ಲಿದ್ದಾಳೆ ಎಂದು ಹುಡುಕಿದವರಿಗೆ ಮಾತ್ರ ಮದುಮಗಳಿದ್ದ ಸ್ಥಳವನ್ನು ಕಂಡು ಅಚ್ಚರಿಯಾಗಿತ್ತು. ಯಾಕೆಂದರೆ ಆಕೆ ಅಷ್ಟೊಂದು ಅವಸರದಿಂದ ಹೊರಟು ಹೋಗಿದ್ದು ತನ್ನ ಮತದಾನದ ಹಕ್ಕನ್ನು ಚಲಾಯಿಸಲು!
ಸೋಮವಾರದಂದು ಈ ಘಟನೆ ನಡೆದಿದ್ದು ಇದೇ ದಿನ ಕೇರಳದಲ್ಲಿ ಮತದಾನ ಪ್ರಕ್ರಿಯೆ ನಡೆದಿತ್ತು. ವಾಸ್ತವವಾಗಿ ಹೇಳಬೇಕೆಂದರೆ ಕೆಲವೊಂದು ಕಾರಣಗಳಿಂದ ಮದುಮಗಳು ಅನು ಈ ಮೊದಲು ಒಂದು ಬಾರಿಯೂ ಮತದಾನ ಮಾಡಿರಲಿಲ್ಲ, ಹೀಗಾಗಿ ಮದುವೆಯ ಮೊದಲು ಒಂದು ಬಾರಿಯಾದರೂ ಮತ ಚಲಾಯಿಸಬೇಕು ಎಂದು ನಿರ್ಧರಿಸಿದ ಈ ಅನು ತಾನುಟ್ಟ ಪೋಶಾಕಿನಲ್ಲೇ ಮತ ಕೇಂದ್ರಕ್ಕೆ ತೆರಳಿ ತನ್ನ ಹಕ್ಕನ್ನು ಚಲಾಯಿಸಿದ್ದಾಳೆ. ಈಕೆಗೆ ಈ ವಿಚಾರವಾಗಿ ಪ್ರಶ್ನಿಸಿದಾಗ ನನಗೆ ಮದುವೆಗಿಂತ ಮತ ಚಲಾಯಿಸುವುದೇ ಅತಿ ಮುಖ್ಯವಾಗಿತ್ತು ಎಂದಿದ್ದಾಳೆ.
25 ವರ್ಷದ ಅನು(ಮದು ಮಗಳು)ವನ್ನು ಮದುವೆಗೆ ತಯಾರುಗೊಳಿಸಲು ಬ್ಯೂಟಿ ಪಾರ್ಲರ್ನವರು ಹಾಗೂ ಕುಟುಂಬಸ್ಥರು ಅಗತ್ಯಕ್ಕಿಂತ ಹೆಚ್ಚು ಸಮಯ ವ್ಯಯಿಸಿದ್ದರು. ಇದರಿಂದ ಮದುವೆಗೆ ತುಂಬಾ ತಡವಾಗುತ್ತದೆ ಎಂದು ಮೊದಲೇ ಆಕೆಯನ್ನು ಎಚ್ಚರಿಸಿದ್ದರು. ಆದರೆ ಇವರೆಲ್ಲರ ಮಾತನ್ನು ಕಡೆಗಣಿಸಿದ ಅನು ತನ್ನ ಮನದ ಮಾತನ್ನು ಕೇಳಿ ಮತ ಚಲಾಯಿಸಲು ತೆರಳಿದ್ದಾಳೆ.
ಮತ ಚಲಾಯಿಸಿದ ಅನುಗೆ ಮದುವೆಗೆ ತಡವಾಗುತ್ತಿದೆ ಎಂಬ ಅರಿವಿತ್ತು. ಹೀಗಾಗಿ ಆಕೆ ಕೈ ಬೆರಳಿಗೆ ಶಾಹಿ ಹಾಕುತ್ತಿದ್ದಂತೆ ಮದುವೆ ಮಂಟಪದ ಕಡೆಗೆ ತನ್ನ ಕಾರಿನಲ್ಲಿ ತೆರಳಿದ್ದಾಳೆ. ಯಾಕೆಂದರೆ ಮದುವೆ ಕಾರ್ಯಕ್ರಮಕ್ಕೆ ಸರಿಯಾದ ಸಮಯಕ್ಕೆ ತೆರಳುವುದು ಅತಿ ಅಗತ್ಯವಾಗಿತ್ತು, ಇದರೊಂದಿಗೆ ಮದುವೆ ಮಂಟಪ ಮತ ಕ್ಷೇತ್ರದಿಂದ ಸುಮಾರು ಒಂದು ತಾಸಿನ ದೂರದಲ್ಲಿತ್ತು.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
