fbpx
ಜಾಗೃತಿ

ಬತ್ತಿದ ಕೆರೆಗಳನ್ನು ಬದುಕಿಸಬಹುದು, ಸತ್ತಂತಿರುವವರು (ಸರ್ಕಾರ) ಎಚ್ಚರವಾದರೆ!

ಬೆಂಗಳೂರು: ಪ್ರಜಾಪ್ರಭುತ್ವದ ಒಂದು ವೈಶಿಷ್ಟ್ಯವೇನೆಂದರೆ, ಇಲ್ಲಿ ಪ್ರಜಾಪ್ರತಿನಿಧಿಯಾಗಿ ಆಯ್ಕೆಯಾಗಿ ಶಕ್ತಿಕೇಂದ್ರದಲ್ಲಿ ಕೂತವನಿಗೆ ಕಿವಿಯಿಲ್ಲ ಮತ್ತು ತನ್ನ ಸಂಕಟಗಳನ್ನು ಹೇಳಿಕೊಂಡು ಪರಿಹಾರ ಪಡೆಯಬೇಕಾದ ಜನತಾ ಜನಾರ್ದನನಿಗೆ ಧ್ವನಿಯಿಲ್ಲ. ನಿಮ್ಮ ಕಷ್ಟವೇ ನನ್ನ ಕಷ್ಟ, ನಿಮ್ಮ ಕಣ್ಣೀರೊರೆಸುವುದಕ್ಕಾಗಿ ಭಗವಂತ ರೂಪಿಸಿ ಕಳಿಸಿರುವ ಮೃಣ್ಮಯಮೂರ್ತಿ ನಾನು ಎಂದು ಆಕರ್ಷಕವಾಗಿ ಮಾತಾಡಿಕೊಂಡು ಜನರ ತಲೆ ನೇವರಿಸುವ ರಾಜಕಾರಣಿ ಕೂಡ ಅಧಿಕಾರದ ಗದ್ದುಗೆ ಏರಿದ ಮೇಲೆ ಹತ್ತಿ ಬಂದ ಏಣಿಯನ್ನು ಮರೆಯುತ್ತಾನೆ. ಅವನನ್ನು ಆರಿಸಿ ಕಳಿಸಿದ ಜನ ದಶಕಗಳಿಂದ ಪರಿಹಾರವಾಗದ ಸಮಸ್ಯೆಗಳನ್ನು ಅಕ್ಷರ ಅಳಿಸಿಹೋದ ಅರ್ಜಿಗಳಲ್ಲಿ ತುಂಬಿಕೊಂಡು ಬಂಗಲೆಯ ಹೊರಗೆ ನಾಯಿಗಳಂತೆ ಕಾಯಬೇಕಾಗುತ್ತದೆ. ಒಂದಾನೊಂದು ಕಾಲದಲ್ಲಿ ಜನರನ್ನು ತಲೆ ಮೇಲೇರಿಸಿಕೊಂಡು ಮೆರವಣಿಗೆ ಬಂದಿದ್ದ ಅದೇ ರಾಜಕಾರಣಿ ಈಗ ತನ್ನ ಬಳಿ ಅಹವಾಲು ಹಿಡಿದು ಬಂದವರನ್ನು ಕಡೆಗಣ್ಣಲ್ಲೂ ನೋಡದೆ ಕಾರಿನ ದೂಳು ಹಾರಿಸಿಕೊಂಡು ಹೋಗಿ ಬಿಡುತ್ತಾನೆ. ರಾಜಕಾರಣದ ಅತಿ ದೊಡ್ಡ ಶಾಪ ಭ್ರಷ್ಟಾಚಾರವಲ್ಲ, ಅಸಂವೇದನೆ. ನಮ್ಮ ರಾಜಕಾರಣಿಗಳು ಬರಬರುತ್ತ ಕಟ್ಟಿಗೆಯ ತುಂಡುಗಳಂತೆ, ಇಟ್ಟಿಗೆಯಿಂದ ಮಾಡಿದ ಗೊಂಬೆಗಳಂತೆ ಹೃದಯವಿಲ್ಲದೆ ಮಾತಾಡತೊಡಗುತ್ತಾರಲ್ಲ, ಅದುವೇ ಪ್ರಜಾಸತ್ತೆಯ ಮೊದಲ ಸೋಲು. ನಮ್ಮ ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯನವರನ್ನು ನೋಡಿದಾಗೆಲ್ಲ ಪ್ರಜಾಪ್ರಭುತ್ವ ಮತ್ತು ಸಮಾಜವಾದಗಳು ಇಳಿದ ಅಧೋಗತಿಯನ್ನು ಇವರು ಸಾಂಕೇತಿಸುತ್ತಿದ್ದಾರೋ ಅನ್ನಿಸುತ್ತದೆ.

ಕಳೆದ ಎರಡು ವಾರಗಳಿಂದ ಮುಖ್ಯಮಂತ್ರಿಗಳು ರಾಜ್ಯದ ವಿವಿಧೆಡೆಗಳಲ್ಲಿ ಬರ ಪ್ರವಾಸ ಮಾಡುತ್ತಿದ್ದಾರೆ. ಒಂದು ಬರಪೀಡಿತ ಹಳ್ಳಿಯಲ್ಲಿ, ಜನ ಕುಡಿಯಲು ನೀರಿಲ್ಲದೆ ಪರದಾಡುತ್ತಿದ್ದರೂ ಮುಖ್ಯಮಂತ್ರಿಗಳ ಕಾರು ಸಾಗಿ ಬರುವ ದಾರಿಯಲ್ಲಿ ಟ್ಯಾಂಕರಿನಿಂದ ನೀರು ಚೆಲ್ಲಿ ದೂಳು ಏಳದಂತೆ ನೋಡಿಕೊಳ್ಳಲಾಯಿತು. ಇಂಥ ತಲೆ ಕೆಟ್ಟ ಐಡಿಯಾ ಮಾಡಿದ ಸ್ಥಳೀಯ ಪುಢಾರಿಗಳಿಗೆ ಮುಖ್ಯಮಂತ್ರಿಗಳು ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದರೆ ಅದು ಅಲ್ಲಿಯವರಿಗಷ್ಟೇ ಅಲ್ಲ ಕರ್ನಾಟಕದ ಅಪ್ರಜ್ಞಾವಂತ ಜನರಿಗೊಂದು ಪಾಠವಾಗುತ್ತಿತ್ತು. ಒಂದೊಳ್ಳೆಯ ಸಂದೇಶ ಮುಖ್ಯಮಂತ್ರಿಗಳಿಂದ ಜನರಿಗೆ ಹೋದಂತೆ ಆಗುತ್ತಿತ್ತು. ಆದರೆ, ಅವರು ಅದ್ಯಾವುದಕ್ಕೂ ಹೆಚ್ಚು ತಲೆ ಕೆಡಿಸಿಕೊಂಡಂತೆ ಕಾಣಲಿಲ್ಲ. ಕಳೆದ ಮೂರು ವರ್ಷಗಳ ಅವಧಿಯಲ್ಲಿ ಮುಖ್ಯಮಂತ್ರಿಗಳು ನೀರಿನ ಸದ್ಬಳಕೆಯ ವಿಷಯದಲ್ಲಿ ಕನಿಷ್ಠ ಹತ್ತು ನಿಮಿಷ ಅರ್ಥಪೂರ್ಣವಾಗಿ ಮಾತಾಡಿದ್ದನ್ನು ರಾಜ್ಯದ ಜನತೆ ಕೇಳಿಲ್ಲ. ಮಾತೆತ್ತಿದರೆ ಕೇಂದ್ರದಿಂದ ಹೆಚ್ಚಿನ ನೆರವು ಬೇಕು ಎಂಬ ಒಂದು ಬೇಡಿಕೆಯನ್ನಷ್ಟೇ ನಾವು ಅವರಿಂದ ಕೇಳುತ್ತಿದ್ದೇವೆ. ಕೇಂದ್ರ 1200 ಕೋಟಿ ರುಪಾಯಿಗಳನ್ನು ಕೊಟ್ಟ ಮೇಲೂ ಮತ್ತೂ ಒಂದಷ್ಟು ಬರಲಿ ಎನ್ನುವುದಕ್ಕಷ್ಟೇ ಮುಖ್ಯಮಂತ್ರಿಗಳ ಜವಾಬ್ದಾರಿ ಸೀಮಿತವಾದಂತಿದೆ. ಅದು ಬಿಟ್ಟರೆ ಕರಾವಳಿ ಕರ್ನಾಟಕದಲ್ಲಿ ಹರಿಯುವ ನದಿಗಳನ್ನು ಬಲವಂತವಾಗಿ ಪೂರ್ವಾಭಿಮುಖವಾಗಿ ಹರಿಸಿ ಇತ್ತಲಿನ ಜಿಲ್ಲೆಗಳಿಗೆ ನೀರೊದಗಿಸುವ ಅವೈಜ್ಞಾನಿಕ ಕ್ರಮಗಳನ್ನು ಸಮರ್ಥಿಸಿಕೊಂಡು ಮಾತಾಡುತ್ತಿದ್ದಾರೆ. ಎತ್ತಿನಹೊಳೆ ಪ್ರಾಜೆಕ್ಟಿಗಿಂತ ಹಲವು ನೂರು ಕೋಟಿ ರುಪಾಯಿಗಳಷ್ಟು ಕಮ್ಮಿ ದರದಲ್ಲಿ ಮಾಡಿ ಮುಗಿಸಬಹುದಾದ ಶಾಶ್ವತ ಪರಿಹಾರಗಳತ್ತ ಮುಖ್ಯಮಂತ್ರಿಗಳಿಗೆ ದೃಷ್ಟಿಯೇ ಇಲ್ಲ. ಅರಬ್ಬೀ ಸಮುದ್ರದ ಉಪ್ಪು ನೀರನ್ನು ಸಂಸ್ಕರಿಸಿ ಸಿಹಿ ನೀರು ಪಡೆದು ರಾಜ್ಯದ ಕೆಲವು ಜಿಲ್ಲೆಗಳಿಗಾದರೂ ನೀರುಣಿಸಬಹುದು. ಈ ವಿಷಯದಲ್ಲಿ ಮುಖ್ಯಮಂತ್ರಿಗಳಷ್ಟೇ ವಿರೋಧ ಪಕ್ಷದ ಧುರೀಣರೂ ನಯವಂಚಕರು.

ಬೇಡ ಬಿಡಿ, ಕರ್ನಾಟಕದ ಉಳಿದ ಎಲ್ಲಾ ಜಿಲ್ಲೆಗಳ ವಿಷಯವನ್ನೂ ಬಿಟ್ಟು ಬಿಡೋಣ. ನಮ್ಮ ಚರ್ಚೆಯನ್ನು ಬೆಂಗಳೂರಿಗಷ್ಟೇ ಸೀಮಿತಗೊಳಿಸಿಕೊಳ್ಳೋಣ. ನೂರು ವರ್ಷಗಳ ಹಿಂದೆ ನೂರಾರು ಕೆರೆಗಳಿದ್ದ ಬೆಂಗಳೂರಲ್ಲಿ ಈಗ ಉಳಿದಿರುವವೆಷ್ಟು, ದೇವರಿಗೂ ಗೊತ್ತಿಲ್ಲ!

ದಾಸರಹಳ್ಳಿ ಕೆರೆ

Picture1

2014ರಲ್ಲಿ ಬೆಂಗಳೂರು ನಗರದಲ್ಲಿ ಪರಿಶೀಲನೆಗೊಳಪಟ್ಟ ಒಟ್ಟು ಕೆರೆಗಳು 835. ದಾಖಲೆಗಳ ಪ್ರಕಾರ 27604 ಎಕರೆ ಇರಬೇಕಿದ್ದ ಈ ಕೆರೆಗಳಲ್ಲಿ ಒತ್ತುವರಿಯಾಗಿರುವುದು ಬರೋಬ್ಬರಿ 4277 ಎಕರೆ! ಹಾಗೆಯೇ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿದ್ದ 710 ಎಕರೆಗಳ ಒಟ್ಟು ವಿಸ್ತೀರ್ಣ 29972 ಎಕರೆ ಇರಬೇಕಿತ್ತು. ಆದರೆ ಅದರಲ್ಲಿ 6195 ಎಕರೆ ಭಾಗ ಆಧುನಿಕರೆಂಬ ನರಿನಾಯಿಗಳ ಪಾಲಾಗಿವೆ. ಒಟ್ಟಲ್ಲಿ ನಾವು ಈಗಾಗಲೇ ಶರತಲ್ಪದ ಮೇಲೆ ಮಲಗಿ ಉತ್ತರಾಯಣಕ್ಕಾಗಿ ಪ್ರತೀಕ್ಷೆಯಲ್ಲಿರುವ ಭೀಷ್ಮನಗರಿಯಲ್ಲಿ ಕೊನೆಯ ಉಸಿರಾಟ ನಡೆಸಿದ್ದೇವೆ ಎನ್ನುವುದು ಸ್ಪಷ್ಟ. ಈ ವಿಷಮ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸುವ ಅದ್ಭುತ ಅವಕಾಶ ಸಿದ್ಧರಾಮಯ್ಯನವರಿಗೆ ಇತ್ತು.

Bengaluru lake

ಎಪ್ರೀಲ್-ಮೇ ತಿಂಗಳ ಈ ಬೇಸಗೆಯಲ್ಲಿ ಅಳಿದುಳಿದಿರುವ ಕೆರೆಗಳತ್ತ ಜೆಸಿಬಿಗಳನ್ನೂ ಲಾರಿಗಳನ್ನೂ ಕಳಿಸಿ, ಅಲ್ಲಿ ರಾಶಿರಾಶಿ ಬಿದ್ದಿರುವ ಕಸ ತೆಗೆಸಿ ಸಮರೋಪಾದಿಯಲ್ಲಿ ಸ್ವಚ್ಛತಾ ಕಾರ್ಯ ನಡೆಸಿ, ಹೂಳೆತ್ತುವ ಕೆಲಸಕ್ಕೆ ಚಾಲನೆ ಕೊಡಬಹುದಾಗಿತ್ತು.

ಮಳೆಗಾಲಕ್ಕೆ ಎರಡು ವಾರವಿದೆ ಎಂಬಷ್ಟರಲ್ಲಿ ಬೆಂಗಳೂರಿನ ಅಷ್ಟೂ ಕೆರೆಗಳು ಸಂಪೂರ್ಣ ಸ್ವಚ್ಛವಾಗಿ, ಮುಂಗಾರ ಮಾರುತಗಳಿಗೆ ಸರ್ವವಿಧದಲ್ಲೂ ಸಜ್ಜುಗೊಳ್ಳುವಂತೆ ನೋಡಿಕೊಳ್ಳಬಹುದಾಗಿತ್ತು. ಕೊಳಚೆ ತೂಬುಗಳನ್ನು ಕಟ್ಟುನಿಟ್ಟಾಗಿ ಮುಚ್ಚಿಸಿ ಕೆರೆಗಳ ಒಡಲನ್ನು ಕಾಪಿಡಬಹುದಾಗಿತ್ತು. ಇಚ್ಛಾಶಕ್ತಿಯಿದ್ದರೆ, ಬೆಂಗಳೂರು ತನ್ನ ಸುಂದರ ಕೆರೆಗಳಿಂದಲೇ ಆಕರ್ಷಣೆಯ ಕೇಂದ್ರಬಿಂದುವಾಗುವಂತೆ, ಪ್ರವಾಸಿಗಳನ್ನೂ ವಲಸೆ ಹಕ್ಕಿಗಳನ್ನೂ ಕೈಬೀಸಿ ಕರೆಯುವಂತೆ, “ಕೆರೆ ಪ್ರವಾಸೋದ್ಯಮ”ದ ಪ್ರಮುಖ ತಾಣವಾಗುವಂತೆ ರೂಪಿಸಬಹುದಾಗಿತ್ತು. ನಗರದ ಕೆರೆಗಳು ಆರೋಗ್ಯಪೂರ್ಣವಾಗಿದ್ದರೆ, ಮಳೆಗಾಲದಲ್ಲಿ ವರುಣ ಅದೆಷ್ಟೇ ತಾಂಡವ ಕುಣಿದರೂ ಅಷ್ಟೂ ನೀರನ್ನು ತಮ್ಮ ಗರ್ಭದಲ್ಲಡಗಿಸಿಕೊಂಡು ನಗರವನ್ನು ಕಾಪಾಡಬಲ್ಲವು. ಪಾತಾಳ ಕಂಡಿರುವ ಅಂತರ್ಜಲ ಮಟ್ಟವನ್ನು ಸುಧಾರಿಸಬಲ್ಲವು. ಈ ನಗರ ಇನ್ನಷ್ಟು ಸಾವಿರ ಜನರಿಗೆ ಸಹನೀಯವಾಗುವಂತೆ ಮಾಡಬಲ್ಲವು. ನಗರದ ಹಸಿರಿಗೆ ಉಸಿರಾಗಬಲ್ಲವು. ಬೇಸಗೆಯಲ್ಲಿ ಈ ನಗರ ಹನಿ ನೀರಿಗೂ ಹಾಹಾಕಾರ ಹೊಡೆಯಬೇಕಾದ ಪರಿಸ್ಥಿತಿಯನ್ನು ತಪ್ಪಿಸಬಲ್ಲವು. ಇವೆಲ್ಲವನ್ನು, ಸಿದ್ಧರಾಮಯ್ಯನವರು ಸಂವೇದನಾಶೀಲ ಮುಖ್ಯಮಂತ್ರಿಗಳಾಗಿದ್ದರೆ ಯೋಚಿಸುತ್ತಿದ್ದರು.

ಇನ್ನೆರಡು ವಾರದಲ್ಲಿ ಮಳೆಗಾಲ ಆರಂಭ. ಈ ವರ್ಷದ ಮಾನ್ಸೂನ್ ಸಹಜವಾಗಿರುತ್ತದೆ ಎಂದು ಹವಾಮಾನ ಇಲಾಖೆ ಭವಿಷ್ಯ ನುಡಿದಿರುವದರಿಂದ ಒಳ್ಳೆಯ ಮಳೆ-ಬೆಳೆ ಆಗುತ್ತದೆಂದು ಆಶಿಸೋಣ. ಆದರೆ, ಹಿಡಿ ಹಿಡಿ ಎನ್ನುತ್ತ ಹಿಡಿತುಂಬ ಸುರಿವ ಮಳೆಯನ್ನು ಭವಿಷ್ಯಕ್ಕಾಗಿ ಕಾಪಿಟ್ಟುಕೊಳ್ಳುವ ಸರಳ ಸಂಗತಿಯನ್ನೂ ಮಾಡಲಾರೆವಲ್ಲಾ ಎಂಬುದೇ ಅಚ್ಚರಿ ಮತ್ತು ಖೇದದ ಸಂಗತಿ. ಈ ವರ್ಷವೂ ಬೆಂಗಳೂರಲ್ಲಿ ಮಳೆ ಸುರಿಯುತ್ತದೆ. ಸುರಿದ ಬಹುಪಾಲು ಶುದ್ಧ ಜಲ ಸಿಕ್ಕಸಿಕ್ಕ ರೋಡು-ತೋಡುಗಳಲ್ಲಿ ಹರಿದು ರಾಜಕಾಲುವೆಯ ಕೊಳಚೆಯಲ್ಲಿ ಬೆರೆತು ವೃಷಭಾವತಿಯ ಹೊಟ್ಟೆ ಸೇರುತ್ತದೆ. ಈಗಾಗಲೇ ಅಪಾಯಕಾರಿ ರಾಸಾಯನಿಕಗಳಿಂದ ತುಂಬಿ ಹೋಗಿರುವ ಕೆರೆಗಳ ಒಡಲಿಗೆ ಮಳೆಯ ಶುದ್ಧ ನೀರು ಬೀಳುತ್ತದೆ. ಒಂದೆರಡು ದಿನ ಹನಿ ಕಡಿಯದಂತೆ ಮಳೆ ಜಡಿದರೆ ಸಾಕು ಇಡೀ ಬೆಂಗಳೂರು ನಗರ ಜಲಸಾಗರದಲ್ಲಿ ತೇಲುವ ತೆಪ್ಪವಾಗುತ್ತದೆ. ರಾಜ್ಯ ಸರಕಾರ ತನ್ನದೂ ಅಲ್ಲ ತನ್ನಪ್ಪನದೂ ಅಲ್ಲವೆಂಬ ನಿರ್ಲಿಪ್ತತೆಯಿಂದ ನೂರಾರು ಕೋಟಿಗಳ ಪರಿಹಾರ ಹಣ ಬಿಡುಗಡೆ ಮಾಡುತ್ತದೆ. ತನ್ನ ಖಜಾನೆ ಬರಿದಾದರೆ ಅತ್ತ ಕೇಂದ್ರದಿಂದ ಒಂದಷ್ಟು ಕೋಟಿಗಳು ಬರಲಿ ಎಂದು ನಿರೀಕ್ಷಿಸುತ್ತದೆ. ನಗರದ ಯಾವ ಕೆರೆಗೂ ಧಾರಣ ಶಕ್ತಿ ಇಲ್ಲವಾದ್ದರಿಂದ ಮಳೆಗಾಲ ಮುಗಿಯುತ್ತಲೇ ಇವುಗಳಲ್ಲಿ ನೊರೆ, ಜೊಂಡು, ಮೀನುಗಳ ರಾಶಿ ರಾಶಿ ಹೆಣ ಕಾಣಿಸುತ್ತವೆ. ಮತ್ತೆ ಮುಂದಿನ ವರ್ಷದ ಬೇಸಗೆಗೆ ಇರುತ್ತೇವೆ ನಾವು ಹೀಗೆಯೇ… ಗ್ಲೋಬಲ್ ವಾರ್ಮಿಂಗನ್ನು ಬಯ್ಯುತ್ತ, ಧಗೆಧಗೆ ಎಂದು ಚೀರಾಡುತ್ತ, ನೀರಿಲ್ಲದ ನಲ್ಲಿಗಳ ಎದುರು ಬಾಯ್ತೆರೆದು ಕೂತ ಕೊಡಗಳ ಫೋಟೋಗಳನ್ನು ಫೇಸ್‍ಬುಕ್ಕಿನಲ್ಲಿ ಅಪ್‍ಲೋಡ್ ಮಾಡುತ್ತ, ಬರ ಪರಿಹಾರಕ್ಕೆ ದಿಲ್ಲಿಯಿಂದ ಬರುವ ಸಾವಿರ ಕೋಟಿಗಳ ಪರಿಹಾರಕ್ಕೆ ಬಕಗಳಂತೆ ಕಾಯುತ್ತ, ಮತ್ತೆ ಮಳೆಗಾಗಿ ಪ್ರಾರ್ಥಿಸುತ್ತ.

ನಿಜ ಬೆಂಗಳೂರಿನ ಕೆರೆಗಳೆಲ್ಲ ಗುಳುಂ ಆಗಿ ಸೈಟು, ಮನೆ. ಇನ್ನುಳಿದವು ಹೂಳು. ನೀರೆಲ್ಲಿ? ಬರಗಾಲ ಖುದ್ದಾಗಿ ನಿಂತು ಆಹ್ವಾನಿಸಿ ಆಗಿದೆ. ಇವಗಲಾದರೂ ಸರ್ಕಾರ ಎಚ್ಚೆತ್ತುಕೊಳಲಿ. ನಮ್ಮ ಈ ಪ್ರಯತ್ನ ಅವರೆಲ್ಲರ ಕಿವಿ ಮುಟ್ಟಲಿ!

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

1 Comment

1 Comment

Leave a Reply

Your email address will not be published. Required fields are marked *

To Top