ಈ ಬಾರಿಯ ಫಲಿತಾಂಶದಲ್ಲೂ ಬಾಲಕಿಯರದ್ದೇ ಮೇಲುಗೈ
ಬೆಂಗಳೂರು: 2016ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದೆ. ಬುಧವಾರ ವೆಬ್ಸೈಟ್ನಲ್ಲಿ ಫಲಿತಾಂಶ ಲಭ್ಯವಾಗಿದೆ ಹಾಗು ಮೇ 26ರಂದು ಕಾಲೇಜುಗಳಲ್ಲಿ ಫಲಿತಾಂಶವನ್ನು ಪ್ರಕಟಿಸಲಾಗುತ್ತದೆ. ಈ ಬಾರಿ ಒಟ್ಟು ಶೇ 57.20ರಷ್ಟು ಫಲಿತಾಂಶ ಬಂದಿದೆ. ಮಲ್ಲೇಶ್ವರಂನಲ್ಲಿರುವ ಪದವಿ ಪೂರ್ವ ಶಿಕ್ಷಣ ಇಲಾಖೆ ಕಚೇರಿಯಲ್ಲಿ ಬುಧವಾರ ಬೆಳಗ್ಗೆ 10.30ಕ್ಕೆ ಪತ್ರಿಕಾಗೋಷ್ಠಿ ನಡೆಸಿದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಅವರು ಫಲಿತಾಂಶವನ್ನು ಪ್ರಕಟಿಸಿದರು.
ಶೇ 90.48ರಷ್ಟು ಫಲಿತಾಂಶ ಪಡೆದಿರುವ ದಕ್ಷಿಣ ಕನ್ನಡ ಜಿಲ್ಲೆ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದೆ. ಶೇ 90.35ರಷ್ಟು ಫಲಿತಾಂಶ ಪಡೆದಿರುವ ಉಡುಪಿ ದ್ವಿತೀಯ ಸ್ಥಾನ, ಶೇ 79.35 ರಷ್ಟು ಫಲಿತಾಂಶ ಪಡೆದಿರುವ ಕೊಡಗು ಮೂರನೇ ಸ್ಥಾನದಲ್ಲಿದೆ. ಯಾದಗಿರಿ ಜಿಲ್ಲೆಗೆ ಕೊನೆಯ ಸ್ಥಾನ. ಕಲಾ ವಿಭಾಗದಲ್ಲಿ ಬಳ್ಳಾರಿ ಜಿಲ್ಲೆಯ ಕೊಟ್ಟೂರು ತಾಲೂಕಿನ ಇಂದೂ ಪಿಯು ಕಾಲೇಜಿನ ಅನಿತಾ ಬಸಪ್ಪ, ವಾಣಿಜ್ಯ ವಿಭಾಗದಲ್ಲಿ ವಿಜಯಪುರದ ವಿ.ಎಸ್.ದರ್ಬಾರ್ ಪಿಯು ಕಾಲೇಜಿನ ಸಹನಾ ಕುಲಕರ್ಣಿ, ವಿಜ್ಞಾನ ವಿಭಾಗದಲ್ಲಿ ಬೆಂಗಳೂರಿನ ಸರ್ದಾರ್ ವಲ್ಲಭಬಾಯ್ ಪಟೇಲ್ ಕಾಲೇಜಿನ ರಕ್ಷಿತಾ ತಮನ್ ಪ್ರಥಮ ಸ್ಥಾನ ಪಡೆದಿದ್ದಾರೆ.
ಬಾಳೆ ಹಣ್ಣು ವ್ಯಾಪಾರಿಯ ಮಗಳು ಅನಿತಾ ಬಸಪ್ಪ: ಕಲಾವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿರುವ ಅನಿತಾ ಬಸಪ್ಪ ಅವರ ತಂದೆ ಬಾಳೆ ಹಣ್ಣು ವ್ಯಾಪಾರಿಗಳು. ಅನಿತಾ 600 ಕ್ಕೆ 597 ಅಂಕಗಳನ್ನು ಪಡೆದು ಪ್ರಥಮ ಸ್ಥಾನ ಪಡೆದಿದ್ದಾರೆ. ಮುಂದೆ ಐಎಎಸ್ ಅಧಿಕಾರಿಯಾಗುವ ಕನಸು ಹೊಂದಿದ್ದಾರೆ.
ರಕ್ಷಿತಾ ತಮನ್: ವಿಜ್ಞಾನ ವಿಭಾಗದಲ್ಲಿ ಬೆಂಗಳೂರಿನ ಬಸವೇಶ್ವರ ನಗರದ ಸರ್ದಾರ್ ವಲ್ಲಭಬಾಯ್ ಪಟೇಲ್ ಕಾಲೇಜಿನ ರಕ್ಷಿತಾ ತಮನ್ ಪ್ರಥಮ ಸ್ಥಾನ ಪಡೆದಿದ್ದಾರೆ. 600 ಕ್ಕೆ 596 ಅಂಕಗಳನ್ನು ಪಡೆದಿದ್ದಾರೆ.
ಸಹನಾ ಕುಲಕರ್ಣಿ: ವಾಣಿಜ್ಯ ವಿಭಾಗದಲ್ಲಿ ವಿಜಯಪುರದ ವಿ.ಎಸ್ ದರ್ಬಾರ್ ಕಾಲೇಜಿನ ವಿಧ್ಯಾರ್ಥಿನಿ ಸಹನಾ ಕುಲಕರ್ಣಿ 600 ಕ್ಕೆ 594 ಅಂಕಗಳನ್ನು ಪಡೆದು ಮೊದಲ ಸ್ಥಾನ ಗಳಿಸಿದ್ದಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
