fbpx
ಕರ್ನಾಟಕ

ಬೆಂಗಳೂರು ವಿವಿಯಿಂದ ಪದವಿ ಪ್ರದಾನ: ಅರುಣ್ ಮಡಿಲಿಗೆ ಐದು ಚಿನ್ನದ ಪದಕ

ಮಂಗಳವಾರ ನಡೆದ ಬೆಂಗಳೂರು ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ರಾಜ್ಯಪಾಲ ವಜುಭಾಯಿ ವಾಲಾ ಅವರಿಂದ ಅರುಣ್‌  ಚಿನ್ನದ ಪದಕಗಳನ್ನು ಸ್ವೀಕರಿಸಿದರು. ಕನ್ನಡ  ಎಂ. ಎ  ವಿಭಾಗದಲ್ಲಿ ಐದು ಚಿನ್ನದ ಪದಕ  ಹಾಗೂ ಬಹುಮಾನ ಪಡೆಯುವ ಮೂಲಕ ಗಮನ ಸೆಳೆದ ರಾಮನಗರ ಜಿಲ್ಲೆಯ ಕವನಾಪುರದ ಕವಿ, ಕತೆಗಾರ ಅರುಣ್‌ಕುಮಾರ್ .

ಕನ್ನಡ ಸಾಹಿತ್ಯದ ಆಸಕ್ತಿ:

ಅರುಣ್‌ ಬಾಲ್ಯದಲ್ಲಿ ಸಾಹಿತ್ಯದ ಆಸಕ್ತಿ ಬೆಳೆಸಿಕೊಂಡಿದ್ದರು. ಈಗಾಗಲೆ ಕವನ ಸಂಕಲನ (ಋತುಮಾನದ ಹುಡುಗಿ) ಹಾಗೂ ಕಥಾ ಸಂಕಲನ (ಕತ್ತಲು ಕಳೆದರೂ ಕತ್ತಲು) ಪ್ರಕಟಿಸಿದ್ದಾರೆ. ಅವರ ಇನ್ನೊಂದು ಕಥಾ ಸಂಕಲನ ‘ಮುದಿ ನೆಲದ ಚಿಗುರು’ ಪ್ರಕಟಣೆಗೆ ಸಿದ್ಧವಾಗಿದೆ.

‘ಕನ್ನಡ ಸಾಹಿತ್ಯ ಹಾಗೂ ಅಧ್ಯಾಪನ ವೃತ್ತಿ ನನಗೆ ಅಚ್ಚುಮೆಚ್ಚು. ಹಾಗಾಗಿ ಇಷ್ಟಪಟ್ಟು ಕನ್ನಡ ಎಂ.ಎ.ಗೆ ಸೇರಿದೆ. ಕುವೆಂಪು ಹಾಗೂ ದೇವನೂರ ಮಹಾದೇವ ನನ್ನ ನೆಚ್ಚಿನ ಸಾಹಿತಿಗಳು. ಸದ್ಯ ಬಿ.ಇಡಿ ಅಧ್ಯಯನ ಮಾಡುತ್ತಿದ್ದೇನೆ. ಸಾಹಿತ್ಯ ಕೃಷಿ ಮಾಡಬೇಕು, ಅಧ್ಯಾಪಕನಾಗಿ ಯುವ ಸಮುದಾಯದಲ್ಲಿ ಬದಲಾವಣೆ ತರಬೇಕು ಎಂಬುದು ನನ್ನಾಸೆ’ ಎಂದು ಅರುಣ್ ‘ಮಾದ್ಯಮದ’ ಜತೆ ಅನಿಸಿಕೆ ಹಂಚಿಕೊಂಡರು.

‘ನಮ್ಮೂರಿನಲ್ಲಿ ಒಕ್ಕಲಿಗ ಗೆಳೆಯ ನೊಬ್ಬ ದಲಿತ ಹುಡುಗಿಯನ್ನು ಪ್ರೀತಿಸಿ ವಿವಾಹವಾದ. ಆ ದಂಪತಿಯನ್ನು ಊರಿನವರು ಕೀಳಾಗಿ ನಡೆಸಿಕೊಂಡರು. ಅವರಿಬ್ಬರೂ ಈಗ ಊರಿನತ್ತ ತಲೆಹಾಕುತ್ತಿಲ್ಲ. ಜಾತಿಯ ವಿಚಾರದಲ್ಲಿ ನಡೆಯುವ ಇಂತಹ ಕ್ರೂರ ಸಂಪ್ರದಾಯಗಳ ಬಗ್ಗೆ ಆಕ್ರೋಶ ಇದೆ. ಇದೇ ನನ್ನ ಬರವಣಿಗೆಗೂ ಪ್ರೇರಣೆ’ ಎಂದರು.

‘ಈ ಘಟನೆಯ ಬಳಿಕ  ನಾನೂ ಅಂತರ್ಜಾತಿ ವಿವಾಹ ಆಗಬೇಕು ಎಂಬ ತೀರ್ಮಾನಕ್ಕೆ ಬಂದಿದ್ದೇನೆ. ಕುವೆಂಪು ಅವರು ಪ್ರತಿಪಾದಿಸಿದ ಮಂತ್ರ ಮಾಂಗಲ್ಯ  ವಿಧಿಯನ್ವಯ ಮದುವೆಯಾಗುತ್ತೇನೆ’ ಎನ್ನುತ್ತಾರೆ ಅರುಣ್‌.

ಬಿಡುವಿನ ವೇಳೆ ಪೇಂಟರ್‌: ಅರುಣ್‌ ಕೂಡಾ ಬಿಡುವಿನ ವೇಳೆ ಪೇಂಟಿಂಗ್‌ ಕೆಲಸ ಮಾಡಿಕೊಂಡು ವಿದ್ಯಾಭ್ಯಾಸ ಮುಂದುವರಿಸಿದವರು.

ಅರುಣ್‌ ಅವರ ತಂದೆ  ಶ್ರೀನಿವಾಸ ಅವರು ವೃತ್ತಿಯಲ್ಲಿ ಪೇಂಟರ್‌. ತಾಯಿ ಮಂಗಳ ಗೌರಮ್ಮ ಗೃಹಿಣಿ. ‘ಬಡತನವಿದ್ದರೂ ಕಷ್ಟಪಟ್ಟು ಓದಿದ್ದೇನೆ. ನನ್ನ ಓದಿಗೆ ನೆರವಾಗಿದ್ದು ರಮೇಶ್‌ ಹಾಗೂ ನಾರಾಯಣ್‌ ಎಂಬ ಸ್ನೇಹಿತರು. ಅವರಿಬ್ಬರೂ ಕಲಿತವರಲ್ಲ. ಅವರು ಮಾಡಿದ ಸಹಾಯಕ್ಕೆ ಋಣಿಯಾಗಿರುವೆ’ ಎನ್ನುತ್ತಾರೆ ಅರುಣ್‌.

ಮೆಕ್ಯಾನಿಕಲ್‌ ಎಂಜಿನಿಯರಿಂಗ್‌ ವಿಭಾಗ:

ಮೆಕ್ಯಾನಿಕಲ್‌ ಎಂಜಿನಿಯರಿಂಗ್‌ ವಿಭಾಗದಲ್ಲಿ ಐದು ಚಿನ್ನದ ಪದಕಗಳು ಹಾಗೂ ಮೂರು ಬಹುಮಾನಗಳನ್ನು ಗೆದ್ದ ಕಾರ್ತಿಕ್‌ ಟಿ.ಎಂ.ಪ್ರಭು ಅವರಿಗೆ ವೈಮಾಂತರಿಕ್ಷದ ಬಗ್ಗೆ ಅಥವಾ ಅಟೋಮೊಬೈಲ್‌ ಕ್ಷೇತ್ರದಲ್ಲಿ ಪಿಎಚ್‌.ಡಿ ಅಧ್ಯಯನ ನಡೆಸುವ ಕನಸು ಇದೆ. ಅವರು ಸದ್ಯಕ್ಕೆ ಟಾಟಾ ಟೆಕ್ನಾಲಜೀಸ್‌ ಕಂಪೆನಿಯಲ್ಲಿ ಕೆಲಸದಲ್ಲಿದ್ದಾರೆ.

ಎಲೆಕ್ಟ್ರಿಕಲ್‌ ಎಂಜಿನಿಯರಿಂಗ್‌ ವಿಭಾಗ:

ಎಲೆಕ್ಟ್ರಿಕಲ್‌ ಎಂಜಿನಿಯರಿಂಗ್‌ ವಿಭಾಗದಲ್ಲಿ ರ‍್ಯಾಂಕ್‌ ಪಡೆದ ಸರ್ವೇಶ್‌ ಕುಮಾರ್‌ ಅವರು  ಚಿನ್ನದ ಪದಕದ ಜತೆಗೆ ನಾಲ್ಕು ನಗದು ಬಹುಮಾನಗಳನ್ನು ಪಡೆದಿದ್ದಾರೆ.

ದೇಶಕ್ಕಾಗಿ ಸೇವೆ ಸಲ್ಲಿಸುವ ಬಯಕೆ:

‘ಸಿಇಟಿಯಲ್ಲಿ 634 ರ‍್ಯಾಂಕ್‌ ಪಡೆದಿದ್ದ ನನಗೆ ವೈದ್ಯಕೀಯ ಸೀಟು ಸಿಕ್ಕಿತ್ತು. ಎಲೆಕ್ಟ್ರಿಕಲ್‌ ಎಂಜಿನಿಯರಿಂಗ್‌ ಕಷ್ಟ ಎಂಬ ಭಾವನೆ ವಿದ್ಯಾರ್ಥಿಗಳಲ್ಲಿದೆ.ಹಾಗಾಗಿ ಅದನ್ನೇ ಕಲಿಕೆಗೆ ಆಯ್ದುಕೊಂಡೆ. ನನ್ನ ತಂದೆ ಧರಮ್‌ಜಿತ್‌ ವಾಯುಪಡೆಯಲ್ಲಿ ಅಧಿಕಾರಿ. ಅಣ್ಣ ಚಂದ್ರೇಶ್ ಸೇನಾಪಡೆಯಲ್ಲಿ ಲೆಫ್ಟಿನೆಂಟ್ ದರ್ಜೆಯ ಅಧಿಕಾರಿ. ನನಗೂ ದೇಶಕ್ಕಾಗಿ ಸೇವೆ ಸಲ್ಲಿಸುವ ಬಯಕೆ. ಆದರೆ, ನಾನು ಐಎಎಸ್‌ ಅಧಿಕಾರಿಯಾಗಲು ಬಯಸುತ್ತೇನೆ. ಕೇಂದ್ರ ಲೋಕಸೇವಾ ಆಯೋಗ ನಡೆಸುವ ನಾಗರಿಕ ಸೇವಾ ಪರೀಕ್ಷೆಗೆ ಹಾಜರಾಗಲು ಸಿದ್ಧತೆ ನಡೆಸಿದ್ದೇನೆ’ ಎನ್ನುತ್ತಾರೆ  ಕೆಪಿಟಿಸಿಎಲ್‌ನಲ್ಲಿ ಸಹಾಯಕ ಎಂಜಿನಿಯರ್‌ ಆಗಿರುವ ಸರ್ವೇಶ್‌.

ರಸಾಯನವಿಜ್ಞಾನ ವಿಭಾಗ:

ರಸಾಯನವಿಜ್ಞಾನದಲ್ಲಿ ಐದು ಚಿನ್ನದ ಪದಕ ಹಾಗೂ ನಗದು ಬಹುಮಾನವನ್ನು ಪಡೆದ ಆರ್‌. ವನಿತಾ  ಅವರಿಗೆ ಕ್ಯಾನ್ಸರ್‌ ನಿವಾರಕ ಔಷಧಿಯಲ್ಲಿ ಉನ್ನತ ಸಂಶೋಧನೆ ಕೈಗೊಳ್ಳುವ ಹಂಬಲ.  ಅವರು ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಈ ಕುರಿತ ಅಧ್ಯಯನದಲ್ಲಿ ತೊಡಗಿದ್ದಾರೆ. ‘ವಿಜ್ಞಾನಿ ಆಗುವಾಸೆ ನನ್ನದು. ನಾನು ಐಐಎಸ್ಸಿಯಲ್ಲೇ ಸಂಶೋಧನೆ ಮುಂದುವರಿಸುತ್ತೇನೆ’ ಎಂದು ಅವರು ತಿಳಿಸಿದರು

ವಿಜ್ಞಾನ ಶಿಕ್ಷಕಿ ಪ್ರೇರಣೆ: ಎಂ.ಎಸ್ಸಿಯಲ್ಲಿ (ಭೌತವಿಜ್ಞಾನ) ಏಳು ಚಿನ್ನದ ಪದಕಗಳನ್ನು ಗೆದ್ದ ಎಸ್‌. ಕೃಷ್ಣಮೂರ್ತಿ ಅವರ ಸಾಧನೆಗೆ ಪ್ರಾಥಮಿಕ ಶಾಲೆಯ ವಿಜ್ಞಾನ ಶಿಕ್ಷಕಿ ಜೂಲಿಯೆಟ್‌ ಶಾಂತಾ ಕುಮಾರಿ ಅವರೇ ಪ್ರೇರಣೆ.

‘ಉನ್ನತ ಶಿಕ್ಷಣ ಪಡೆಯುವುದಕ್ಕೆ ಶಾಂತಾ ಟೀಚರ್‌ ಅವರ ಪ್ರೋತ್ಸಾಹ ಕಾರಣ. ಅವರಿಂದಾಗಿಯೇ ನನಗೆ ವಿಜ್ಞಾನದಲ್ಲಿ ಆಸಕ್ತಿ ಮೂಡಿತು. ಬಿ.ಎಸ್ಸಿ ಕಲಿಯುವಾಗ ಟ್ಯೂಷನ್‌ ನೀಡುವ ಮೂಲಕ ಫೀಸು ಕಟ್ಟಲು ಹಣ ಹೊಂದಿಸುತ್ತಿದ್ದೆ. ವಿದ್ಯಾಭ್ಯಾಸ ಮುಂದುವರಿಸುವುದು ಕಷ್ಟವಾದಾಗ ಶಾಂತಾ ಅವರು ನೆರವಾಗಿದ್ದಾರೆ’ ಎಂದು ಕೃಷ್ಣಮೂರ್ತಿ ಸ್ಮರಿಸಿದರು.

‘ವೃತ್ತಿಯಲ್ಲಿ ಟೈಲರ್‌ ಆಗಿರುವ ತಂದೆ ಸ್ವಯಂಭು ಅನಕ್ಷರಸ್ಥರು. ತಾಯಿ  ಲಕ್ಷ್ಮಿಕಲಾ ಅವರು ಪಿ.ಯು.ಸಿ.ವರೆಗೆ ಓದಿದ್ದರು. ತಾಯಿಯೇ ನನ್ನಲ್ಲಿ ಕಲಿಯುವ ಛಲ ತುಂಬಿದರು’ ಎಂದು ಹೇಳಿದರು.

ಡಿ.ಕೆ. ರವಿಯಂತಾಗುವ ಕನಸು
‘ಡಿ.ಕೆ.ರವಿ ಅವರಂತೆ ಐಎಎಸ್‌ ಅಧಿಕಾರಿಯಾಗಿ ಉತ್ತಮ ಹೆಸರು ಗಳಿಸಬೇಕು ಎಂಬುದು ನನ್ನ ಜೀವನದ ಗುರಿ’. ಬಿ.ಕಾಂ.ನಲ್ಲಿ ಐದು ಚಿನ್ನದ ಪದಕದ ಜೊತೆ ಮೂರು ಬಹುಮಾನಗಳನ್ನು ಗೆದ್ದಿರುವ ಕೋಲಾರದ ದಾನಮ್ಮ ಚನ್ನಬಸವಯ್ಯ  ಕಾಲೇಜಿನ ವಿದ್ಯಾರ್ಥಿನಿ ಎಸ್‌.ವಿ.ಮೇಘಶ್ರೀ ಅವರ ಕನಸು ಇದು.

‘ನಮ್ಮದು ಮಧ್ಯಮ ವರ್ಗದ ಕುಟುಂಬ. ಬಡವರ ಸಂಕಷ್ಟಗಳನ್ನು ನಾನು ಹತ್ತಿರದಿಂದ ಬಲ್ಲೆ. ಐಎಎಸ್‌ ಅಧಿಕಾರಿಯಾದರೆ ಜನರ ಸೇವೆಗೆ ಅನುಕೂಲವಾಗುತ್ತದೆ. ಭ್ರಷ್ಟಾಚಾರದ ವಿರುದ್ಧ ಹೊರಾಟಕ್ಕೂ ಅವಕಾಶ ಸಿಗುತ್ತದೆ. ಐಎಎಸ್‌ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದೇನೆ’ ಎಂದು ಅವರು ತಿಳಿಸಿದರು. ಮೇಘಶ್ರೀ ಅವರ ತಂದೆ ವಿಶ್ವನಾಥ್‌ ಅವರು ಕಾರ್ಮಿಕ ನಿರೀಕ್ಷಕರು, ತಾಯಿ ಸ್ವರ್ಣ ಲತಾ ಗೃಹಿಣಿ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top