fbpx
ಸಮಾಚಾರ

ಕೇವಲ 50 ರೂ.ಗಾಗಿ ಸ್ನೇಹಿತನ ಕೊಲೆ

ಮೈಸೂರು: ಕೇವಲ 50 ರೂ.ಗೆ ಸ್ನೇಹಿತನನ್ನೇ ವರ್ಷದ ಹಿಂದೆ ಕೊಲೆ ಮಾಡಿದ ಬಿಹಾರ ಮೂಲದ ವ್ಯಕ್ತಿಯೊಬ್ಬನನ್ನು ಕೆ.ಆರ್‌. ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಿಹಾರದ ಜಮಲಾಪುರ ಪಟ್ಟಣದ ಜುರುಬ ಅಲಿಯಾಸ್‌ ಸರ್ವ(35) ಬಂಧಿತನಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಜುರುಬ ತನ್ನ ಜತೆಯಲ್ಲಿ ಇದ್ದ ಸ್ನೇಹಿತ ಮೈಸೂರು ತಾಲೂಕಿನ ಸಾಗರಕಟ್ಟೆ ಗ್ರಾಮದ ಪ್ರಕಾಶನ ತಲೆಯನ್ನು ಕಲ್ಲಿನಿಂದ ಜಜ್ಜಿ ಕೊಲೆ ಮಾಡಿರುವುದು ತಡವಾಗಿ ಬೆಳಕಿಗೆ ಬಂದಿದೆ.

ಕೆ.ಆರ್‌. ನಗರದ ಟಿಎಪಿಸಿಎಂಎಸ್‌ನ ಮಾರುಕಟ್ಟೆಯಲ್ಲಿ ತರಕಾರಿ ವ್ಯಾಪಾರಿ ವ್ಯಾಪಾರದ ದಲ್ಲಾಳಿಯಾಗಿದ್ದ ಪ್ರಕಾಶ ಬಳಿ ಜುರುಬ, ಮದ್ಯ ಸೇವನೆಗೆ 50 ರೂ. ಹಣ ಕೇಳಿದ್ದಾನೆ. ಆದರೆ ಹಣ ನೀಡದ್ದರಿಂದ ಆಕ್ರೋಶಗೊಂಡ ಜುರುಬ, ಆತ ಮಲಗಿದ್ದಾಗ ಕಲ್ಲಿನಿಂದ ಆತನ ತಲೆಯನ್ನು ಜಜ್ಜಿ ಕೊಲೆ ಮಾಡಿದ್ದಾನೆ ಎಂದು ಶನಿವಾರ ಸುದ್ದಿಗೋಷ್ಠೀಯಲ್ಲಿ ಎಸ್ಪಿ ಅಭಿನವ್‌ ಖರೆ ತಿಳಿಸಿದರು. ಮಾರುಕಟ್ಟೆಯಲ್ಲಿ ತರಕಾರಿ ವ್ಯಾಪಾರದ ದಲ್ಲಾಳಿಯಾಗಿದ್ದ ಪ್ರಕಾಶ, ವಾರಕ್ಕೊಂದು ದಿನ ಕೆಲಸ ಮಾಡಿ, ರಾತ್ರಿ ಹೊತ್ತು ಅಲ್ಲೆ ಮಲಗುತ್ತಿದ್ದ. ಮಾರುಕಟ್ಟೆಯಲ್ಲಿ ಈತನೊಂದಿಗೆ ಜುರುಬ ಕೂಡ ಇದ್ದು, ಇಬ್ಬರು ರಾತ್ರಿ ಹೊತ್ತು ಮದ್ಯ ಸೇವಿಸಿ ಮಲಗುತ್ತಿದ್ದರು. 2015 ಸೆ. 6 ರಂದು ಮಾರುಕಟ್ಟೆಯ ಪಡಶಾಲೆಯಲ್ಲಿ ಮಲಗಲು ತೆರಳುತ್ತಿದ್ದಾಗ ಜತೆಯಲ್ಲಿದ್ದ ಜುರುಬ ಕುಡಿಯಲು ಹಣ ಕೇಳಿದ್ದಾನೆ. ಹಣ ನೀಡಲು ಪ್ರಕಾಶ ನಿರಾಕರಿಸಿದ್ದಕ್ಕೆ ರೊಚ್ಚಿಗೆದ್ದ ಜುರುಬ, ಆತ ಮಲಗಿದ ಮೇಲೆ ಕಲ್ಲಿನಿಂದ ತಲೆಯನ್ನು ಜಜ್ಜಿ ಕೊಲೆ ಮಾಡಿದ್ದಾನೆ.

ಹುಚ್ಚನಂತೆ ನಟನೆ: ಕೊಲೆಯಾದ ಬಳಿಕ ತನಗೇನೂ ಗೊತ್ತಿಲ್ಲದಂತೆ ಹುಚ್ಚನಂತೆ ನಟನೆ ಮಾಡುತ್ತಾ ಅಲ್ಲೇ ಓಡಾಡಿಕೊಂಡಿದ್ದ ಜುರುಬ ಕೆಲ ದಿನಗಳ ಬಳಿಕ ನಾಪತ್ತೆಯಾಗಿದ್ದಾನೆ. ಕೊಲೆಯಾದ ದಿನ ಪ್ರಕಾಶ ಮತ್ತು ಜುರುಬ ಒಟ್ಟಿಗೆ ಇದ್ದಿದ್ದನ್ನು ಗಮನಿಸಿದ್ದ ಸ್ಥಳೀಯರು, ಆತನ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದರು. ಈ ಬಗ್ಗೆ ಜಾಡು ಹಿಡಿದು ತನಿಖೆ ನಡೆಸಿದ ಪೊಲೀಸರು, ಜುರುಬನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ. ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದ ವೇಳೆ ಹುಚ್ಚನಂತೆ ವರ್ತಿಸುತ್ತಿದ್ದ ಜುರುಬನನ್ನು ಪೊಲೀಸರು, ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ, ಆತ ಮಾನಸಿಕವಾಗಿ ಆರೋಗ್ಯವಾಗಿದ್ದು, ಆದರೆ ಹುಚ್ಚನಂತೆ ನಟನೆ ಮಾಡುತ್ತಿರುವ ಬಗ್ಗೆ ವರದಿ ಸಿಕ್ಕಿತು ಎಂದು ಎಸ್ಪಿ ಹೇಳಿದರು. ಈ ಸಂಬಂಧ ಕೆ.ಆರ್‌. ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಕೃಪೆ: vijaykarnataka

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top