fbpx
ಕರ್ನಾಟಕ

ಕೇರಳಿಗರಿಗೆ ಕರ್ನಾಟಕದ ಗಡಿ ಕಸದ ತೊಟ್ಟಿಯೆ?

ಕೇರಳದಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ಮೈಸೂರು, ಕೊಡಗು, ಚಾಮರಾಜನಗರ ಜಿಲ್ಲೆಗಳ ಅರಣ್ಯ ಅಥವಾ ನಿರ್ಜನ ಪ್ರದೇಶದಲ್ಲಿ ಎಸೆದು ಹೋಗುವ ಕೃತ್ಯಗಳು ಇತ್ತೀಚೆಗೆ ಹೆಚ್ಚಾಗುತ್ತಿದ್ದು, ಗಡಿಭಾಗದಲ್ಲಿರುವ ತಪಾಸಣೆ ಕೇಂದ್ರಗಳಲ್ಲಿರುವ ಸಿಬ್ಬಂದಿಗಳ ನಿರ್ಲಕ್ಷ್ಯವೇ ಕಾರಣ ಎಂಬ ಆರೋಪ ಕೇಳಿ ಬರುತ್ತಿದೆ.

chamarajanagar

ಕೇರಳ ರಾಜ್ಯದಿಂದ ಕಾಸಾಯಿಖಾನೆಯ ತ್ಯಾಜ್ಯಗಳನ್ನು ಲಾರಿಯಲ್ಲಿ ತಂದು ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಪಂಜನಹಳ್ಳಿ ಹಾಗೂ ವೀರನಪುರ, ನಲ್ಲೂರು ಅಮಾನಿಕೆರೆಯ ಪ್ರದೇಶದಲ್ಲಿ 75ಕ್ಕೂ ಹೆಚ್ಚಿನ ಪ್ಲಾಸ್ಟಿಕ್ ಚೀಲಗಳಲ್ಲಿ ಕೊಳೆತ ಮಾಂಸವನ್ನು ಎಸೆದು ಹೋಗಿದ್ದಾರೆ. ಇದರಿಂದ ಸುತ್ತಲಿನ ಪ್ರದೇಶದಲ್ಲಿ ದುರ್ವಾಸನೆ ಹರಡಿದ್ದು, ಇದನ್ನು ತೆರವುಗೊಳಿಸಲು ಯಾರೂ ಮುಂದಾಗದ ಕಾರಣ ಇಲ್ಲಿನ ನಿವಾಸಿಗಳು ದುರ್ವಾಸನೆಯಲ್ಲೇ ದಿನ ಕಳೆಯುವಂತಾಗಿದೆ.

ರಾತ್ರಿ ಕೇರಳದ ಕಾಸಾಯಿಖಾನೆಗಳಿಂದ ಕುರಿ, ಕೋಳಿ, ದನಗಳ ಕೊಂಬು, ಕರುಳು. ಮೂಳೆ ಸೇರಿದಂತೆ ಮಾಂಸದ ಅಂಗಡಿಗಳ ನಿರುಪಯುಕ್ತ ತ್ಯಾಜ್ಯಗಳನ್ನು ಇಲ್ಲಿ ತಂದು ಎಸೆಯಲಾಗಿದೆ. ಇದು ದಿನಕಳೆದಂತೆ ದುರ್ವಾಸನೆ ಬೀರುತ್ತಿದ್ದರಿಂದ ಹತ್ತಿರ ಹೋಗಿ ನೋಡಿದವರಿಗೆ ಮೂಟೆಗಳಲ್ಲಿ ಕಟ್ಟಿರುವ ತ್ಯಾಜ್ಯ ಕಂಡು ಬಂದಿದೆ.

chamarajanagar-garbage

ಈ ಬಗ್ಗೆ ಗುಂಡ್ಲುಪೇಟೆಯ ಪೊಲೀಸ್ ಠಾಣೆಗೆ ದೂರವಾಣಿ ಮೂಲಕ ತಿಳಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಇದರಿಂದ ಆಕ್ರೋಶಗೊಂಡ ಗ್ರಾಮಸ್ಥರು ಪ್ರತಿಭಟನೆಗಿಳಿದಿದ್ದು, ನಂತರ ತಾಲೂಕು ಆರೋಗ್ಯಾಧಿಕಾರಿ ಡಾ.ನರೇಂದ್ರಬಾಬು ಸ್ಥಳಕ್ಕೆ ಭೇಟಿ ನೀಡಿ ಚೀಲಗಳನ್ನು ಬಿಚ್ಚಿ ಪರಿಶೀಲನೆ ನಡೆಸಿದಾಗ ಅವುಗಳಲ್ಲಿ ಕೋಳಿ, ಕುರಿ ಹಾಗೂ ಜಾನುವಾರುಗಳ ಮಾಂಸದ ನಿರುಪಯುಕ್ತ ಭಾಗಗಳು, ಮೂಳೆ ಹಾಗೂ ಕೊಂಬುಗಳಿದ್ದು, ಇವುಗಳನ್ನು ಹೊಂಡ ತೆಗೆದು ಭೂಮಿಯಲ್ಲಿ ಹೂಳುವಂತೆ ಗ್ರಾಮಪಂಚಾಯಿತಿಗೆ ಸೂಚಿಸಿದ್ದಾರೆ.

ಕೇರಳದಿಂದ ಕರ್ನಾಟಕದತ್ತ ಬರುವ ಲಾರಿಗಳನ್ನು ತಪಾಸಣೆ ಮಾಡಿ ಕ್ರಮ ಕೈಗೊಳ್ಳದಿದ್ದರೆ ಮುಂದೊಂದು ದಿನ ಕೇರಳಿಗರಿಗೆ ಕರ್ನಾಟಕ ಕಸದ ತೊಟ್ಟಿ ಆಗುವುದರಲ್ಲಿ ಸಂಶಯವಿಲ್ಲ.

Source: oneindia

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top