fbpx
ಸಮಾಚಾರ

ಹಿಂದಿ ಹೇರಿಕೆಗೆ ಇದೆ ಒಂದು ಇತಿಹಾಸ

ಸಾಮಾಜಿಕ ಜಾಲತಾಣಗಳಲ್ಲಿ ಹಿಂದಿ ಭಾಷೆಗೆ ಆದ್ಯತೆ ಕೊಡಬೇಕೆಂದು ಕೇಂದ್ರ ಸರ್ಕಾರವು ಹೊರಡಿಸಿದ ಸುತ್ತೋಲೆಗೆ ತಮಿಳು­ನಾಡಿನಿಂದ ಆರಂಭಿಸಿ ದಕ್ಷಿಣ ಭಾರತದ ವಿರೋಧ ವ್ಯಕ್ತವಾಗಿದೆ. ಜೊತೆಗೆ ಜಮ್ಮು– ಕಾಶ್ಮೀರದ ಮುಖ್ಯಮಂತ್ರಿಯೂ ದನಿಗೂಡಿಸಿ­ದ್ದಾರೆ. ಆನಂತರ ಪ್ರಧಾನ ಮಂತ್ರಿಗಳ ಕಾರ್ಯಾ­ಲಯ ಮತ್ತು ಸಂಬಂಧಿಸಿದ ಸಚಿವರು ಸ್ಪಷ್ಟನೆ ನೀಡಿ– ಇದು ಹಿಂದಿಯು ರಾಜ್ಯ ಭಾಷೆಯಾಗಿ­ರುವ ಪ್ರಾಂತ್ಯಗಳಿಗೆ ಮಾತ್ರ ಸಂಬಂಧಿಸಿದ್ದೆಂದು ಹೇಳಿದ್ದಾರೆ. ಆದರೆ ಸುತ್ತೋಲೆಯಲ್ಲಿ ಈ ಅಂಶ ಇಲ್ಲ ಎನ್ನುವುದು ಸತ್ಯ; ಇದು ಹಿಂದಿ ಹೇರಿಕೆಯ ಒಂದು ಪ್ರಯತ್ನ ಎಂಬುದು ವಾಸ್ತವ.

ಆದರೆ ಹಿಂದಿ ‘ಹೇರಿಕೆ’ಯೆನ್ನುವುದು ಈಗಿನ ಸರ್ಕಾರಕ್ಕಷ್ಟೇ ಸೀಮಿತವಾದುದಲ್ಲ. ಸ್ವಾತಂತ್ರ್ಯಾ­ನಂತರದ ಕಾಂಗ್ರೆಸ್‌ ಸರ್ಕಾರವೂ ಇದಕ್ಕೆ ಹೊರ­ತಾ­ಗಿ­ರಲಿಲ್ಲ. ಕಾಂಗ್ರೆಸ್‌ ಆಡಳಿತದಲ್ಲಿ ಹಿಂದಿ ಪರವಾದ ಅತ್ಯುತ್ಸಾಹದ ಕ್ರಮಗಳು ಕಾಣಿಸಿ­ಕೊಂಡಾ­ಗೆಲ್ಲ ಪ್ರತಿರೋಧ ವ್ಯಕ್ತವಾಗುತ್ತ ಬಂದದ್ದ­ರಿಂದ ‘ಹೇರಿಕೆ’ಯ ಉತ್ಸಾಹವು ಹಿನ್ನೆ­ಲೆಗೆ ಸರಿದಿತ್ತು. ಈಗ ‘ಮೋದಿ ಸರ್ಕಾರ’ ದಿಂದ ಮುನ್ನೆಲೆಗೆ ಬಂದಿದೆ.

ಸ್ವಾತಂತ್ರ್ಯಪೂರ್ವ ರಾಷ್ಟ್ರೀಯ ಚಳವಳಿಗಳ ಪರಿ­ಣಾಮದಿಂದಲೋ ಏನೊ ಸಂವಿಧಾನದಲ್ಲಿ ಇತರೆ ಭಾರತೀಯ ಭಾಷೆಗಳಿಗಿಂತ ಹಿಂದಿಗೆ ವಿಶೇಷ­ವಾದ ಸ್ಥಾನಮಾನ ಲಭ್ಯವಾಗಿದೆ; ಸಂಯುಕ್ತ ಸರ್ಕಾರದ (ಕೇಂದ್ರ) ಮತ್ತು ರಾಜ್ಯ­ಗಳ ಆಡಳಿತ ಭಾಷೆ, ಶಿಕ್ಷಣದಲ್ಲಿ ಭಾಷಾ ಅಲ್ಪ­ಸಂಖ್ಯಾತರ ಮಾತೃಭಾಷೆ ಮತ್ತಿತರ ಭಾಷಾ ಸಂಬಂಧಿ ವಿಧಿಗಳನ್ನು ಕುರಿತು ಸಂವಿಧಾನದ ಕರಡು ಪರಿಶೀಲನಾ ಸಭೆಯಲ್ಲಿ 1949ರ ಸೆಪ್ಟೆಂಬರ್ 12, 13, 14 ರಂದು ಒಟ್ಟು ಮೂರು ದಿನಗಳ ಕಾಲ ವಿವರವಾಗಿ ಚರ್ಚಿಸಿ ತೀರ್ಮಾ­ನಕ್ಕೆ ಬರಲಾಗಿದೆ. ಇದರ ಫಲವಾಗಿ ಅಂತಿಮಗೊಂಡ ಹಿಂದಿ ಸಂಬಂಧಿ ವಿಧಿಗಳು ಹೀಗಿವೆ: ಸಂವಿಧಾನದ 343ನೇ ವಿಧಿಯು ಸಂಯುಕ್ತ (ಕೇಂದ್ರ) ಸರ್ಕಾರದ ಆಡಳಿತ ಭಾಷೆಯನ್ನು ನಿರ್ಣಯಿಸಿದೆ. 343 (1)ರ ಪ್ರಕಾರ ದೇವ­ನಾಗರಿ ಲಿಪಿಯಲ್ಲಿರುವ ಹಿಂದಿಯೇ ಸಂಯುಕ್ತ ಸರ್ಕಾರದ ಆಡಳಿತ ಭಾಷೆ. ಆದರೆ ಅಂತರ­ರಾಷ್ಟ್ರೀಯ­ವಾಗಿ ಒಪ್ಪಿತವಾದ ಅಂಕಿಗಳನ್ನು ಬಳಸಬಹುದು. 343 (2) ನೇ ವಿಧಿಯು ಸಂವಿ­ಧಾ­ನವು ಅಂಗೀಕೃತವಾದ ದಿನದಿಂದ ಹದಿನೈದು ವರ್ಷಗಳವರೆಗೆ ಇಂಗ್ಲಿಷನ್ನು ಆಡಳಿತ ಭಾಷೆ­ಯಾಗಿ ಬಳಸಬಹುದು. ರಾಷ್ಟ್ರಪತಿಗಳು ಇಂಗ್ಲಿಷ್‌ ಜೊತೆಗೆ ಹಿಂದಿ ಬಳಸಲು ಆದೇಶಿಸ­ಬಹುದು. 343 (3)ನೇ ವಿಧಿಯಂತೆ ಹದಿನೈದು ವರ್ಷಗಳ ನಂತರ ಇಂಗ್ಲಿಷನ್ನು ಮುಂದುವರೆ­ಸಲು ಸಂಸತ್ತು ಕಾನೂನು ಮಾಡಬೇಕು; ದೇವ­ನಾ­ಗರಿ ಅಂಕಿಗಳನ್ನು ಬಳಸಲೂ ಕಾನೂನು ಮಾಡಬಹುದು.

ಸಂವಿಧಾನ ಅಂಗೀಕೃತವಾದ ಹದಿನೈದು ವರ್ಷ­ಗಳ ನಂತರ ‘ಹಿಂದಿ ಹೇರಿಕೆ’ ಆರಂಭ­ಗೊಂಡು, ತಮಿಳುನಾಡು ಮತ್ತು ದಕ್ಷಿಣ ರಾಜ್ಯ­ಗಳ ವಿರೋಧ ವ್ಯಕ್ತವಾಗಿದ್ದರಿಂದ 1966 ರಲ್ಲಿ ಇಂಗ್ಲಿಷ್‌ ಮತ್ತು ಹಿಂದಿ ಎರಡೂ ಕೇಂದ್ರ ಸರ್ಕಾರ ಆಡಳಿತ ಭಾಷೆಗಳೆಂಬ ಅಧಿಕೃತತೆ ಲಭ್ಯ­ವಾಯಿತು. ಪ್ರತಿರೋಧ ತಣ್ಣಗಾಯಿತು. ಆದರೆ ಆಡಳಿತ ಭಾಷೆಯ ವಲಯವನ್ನು ಮೀರಿಯೂ ಹಿಂದಿಗೆ ಪ್ರಾಶಸ್ತ್ಯ ಮತ್ತು ಪ್ರೋತ್ಸಾಹ ಕೊಡುವ ವಿಧಿ­ಗಳು ಸಂವಿಧಾನದಲ್ಲೇ ಅಡಕವಾಗಿವೆ. ಈ ಸಂಬಂಧ­ವಾಗಿ ಸಂವಿಧಾನದ 344, 346 ಮತ್ತು 351ನೇ ವಿಧಿಗಳನ್ನು ನೋಡಬಹುದು. 344ನೇ ವಿಧಿಯ ಪ್ರಕಾರ ರಾಷ್ಟ್ರಪತಿಗಳು ಆಯೋಗ­ವೊಂದನ್ನು ರಚಿಸಿ ಶಿಫಾರಸುಗಳನ್ನು ಪಡೆಯ­ಬಹುದು. ಈ ಆಯೋಗವು ಸಂಯುಕ್ತ ಸರ್ಕಾರ ಆಡಳಿತದಲ್ಲಿ ಹಿಂದಿ ಭಾಷಾ ಬಳಕೆಯ ಪ್ರಗತಿಯನ್ನು ಪರಿಶೀಲಿಸುವುದು; ಸಂಯುಕ್ತ ಸರ್ಕಾರ­ದಲ್ಲಿ ಇಂಗ್ಲಿಷ್‌ ಬಳಕೆಯನ್ನು ನಿಯಂತ್ರಿ­ಸುವ ಕ್ರಮಗಳನ್ನು ತಿಳಿಸುವುದು; 348ನೇ ವಿಧಿಯ ಪ್ರಕಾರ ಉಚ್ಚನ್ಯಾಯಾಲಯಗಳಲ್ಲಿ ಬಳಸುವ ಭಾಷೆ ಬಗ್ಗೆ ಪರಿಶೀಲಿಸಿ ಶಿಫಾರಸು ಮಾಡುವುದು; ಸಾರ್ವಜನಿಕ ಸೇವೆಯಲ್ಲಿರುವ ಹಿಂದಿ­ಯೇತರ ಪ್ರದೇಶಗಳ ವ್ಯಕ್ತಿಗಳ ಹಿತಾಸಕ್ತಿ­ಯನ್ನು ಗಮನಿಸುವುದು– ಹೀಗೆ ವಿವಿಧ ಅಂಶ­ಗಳನ್ನು ಒಳಗೊಂಡಿದ್ದರೂ ಮೊದಲನೇ ಮತ್ತು ಎರಡನೇ ಅಂಶಗಳು ಹಿಂದಿಯ ಪರವಾದ ಪ್ರಾಮುಖ್ಯ ಪಡೆದಿರುವುದನ್ನು ಗಮನಿಸಬೇಕು.

ಸಂವಿಧಾನದ 346ನೇ ವಿಧಿಯು ರಾಜ್ಯ– ರಾಜ್ಯ­ಗಳ ನಡುವೆ ಮತ್ತು ರಾಜ್ಯಗಳು ಮತ್ತು ಕೇಂದ್ರ ಸರ್ಕಾರದ ನಡುವೆ ಬಳಸಬೇಕಾದ ಭಾಷೆಯ ಬಗ್ಗೆ ತಿಳಿಸುತ್ತ– ಎರಡು ಅಥವಾ ಹೆಚ್ಚು ರಾಷ್ಟ್ರಗಳು ಒಪ್ಪಿದಲ್ಲಿ ಹಿಂದಿಯನ್ನು ಬಳಸ­ಬಹುದು– ಎಂದು ಸ್ಪಷ್ಟಪಡಿಸುತ್ತದೆ. 343ನೇ ವಿಧಿಯ ಪ್ರಕಾರ ಇಂಗ್ಲಿಷ್‌ ಮತ್ತು ಹಿಂದಿ– ಎರಡೂ ಭಾಷೆಗಳನ್ನು ಕೇಂದ್ರದ ಆಡ­ಳಿತ ಭಾಷೆಗಳೆಂದು ಅಧಿಕೃತಗೊಳಿಸಿರುವಾಗ ಹಿಂದಿಯ ಬಳಕೆಗಾಗಿಯೇ ಮತ್ತೊಂದು ವಿಧಿ­ಯಲ್ಲಿ ಪ್ರತ್ಯೇಕ ಪ್ರಸ್ತಾಪ ಮಾಡಿ ಪ್ರಾಶಸ್ತ್ಯ ನೀಡ­ಲಾಗಿ­ದೆ­ಯೆಂಬುದನ್ನು ಗಮನಿಸಬೇಕು. ಇನ್ನು 351ನೇ ವಿಧಿಯು ಹಿಂದಿಯ ಅಭಿವೃದ್ಧಿಗಾಗಿ ವಿಶೇಷ ನಿರ್ದೇಶನವನ್ನು ನೀಡುತ್ತದೆ: ‘ಇಂಡಿ­ಯಾದ ಬಹುಸಂಸ್ಕೃತಿಗಳ ಸಮಸ್ತ ಸಂಗತಿಗಳನ್ನು ಅಭಿವ್ಯಕ್ತಿಸಲು ಸಾಧ್ಯವಾಗುವಂತೆ ಹಿಂದಿ ಭಾಷೆ­ಯನ್ನು ಅಭಿವೃದ್ಧಿಗೊಳಿಸುವುದು ಮತ್ತು ಪ್ರೋತ್ಸಾ­­ಹಿ­ಸು­ವುದು ಕೇಂದ್ರ (ಸಂಯುಕ್ತ) ಸರ್ಕಾರದ ಕರ್ತವ್ಯ’– ಇದು ಈ ವಿಧಿಯಲ್ಲಿ­ರುವ ಸ್ಪಷ್ಟ ನಿರ್ದೇಶನ; ಇದರ ಜೊತೆಗೆ ಹಿಂದಿಯನ್ನು ಅದರ ಮೂಲ ಸ್ವರೂಪಕ್ಕೆ ಧಕ್ಕೆ ತರದಂತೆ ಶ್ರೀಮಂತಗೊಳಿಸಿ ಬೆಳೆಸಬೇಕಾದ ಸೂಚನೆಯನ್ನೂ ಈ ವಿಧಿಯು ನೀಡುತ್ತದೆ.

ಈ ಸಂವಿಧಾನಾತ್ಮಕ ನಿರ್ದೇಶನದಂತೆ 1960 ರಲ್ಲೇ ‘ಹಿಂದಿ ಕೇಂದ್ರೀಯ ನಿರ್ದೇಶನಾಲಯ’­ವನ್ನು ಸ್ಥಾಪಿಸ ಲಾಗಿದೆ. ಈ ನಿರ್ದೇಶನಾಲಯದ ಮೂಲಕ ದೇಶೀಯರು ಮತ್ತು ವಿದೇಶೀಯರಿಗೆ ಹಿಂದಿಯನ್ನು ಕಲಿಸುವ, ಪ್ರಸಾರ ಮಾಡುವ, ಪುಸ್ತಕ ಪ್ರಕಟಿಸುವ, ಪ್ರಶಸ್ತಿ ನೀಡುವ, ಹಿಂದಿಪರ ಸಂಸ್ಥೆ­ಗಳಿಗೆ ಧನ ಸಹಾಯ ಮಾಡುವ ಕೆಲಸ­ಗಳನ್ನು ಮಾಡುತ್ತ ಬರಲಾಗಿದೆ. ಕೇಂದ್ರ ಸರ್ಕಾರ­ದಿಂದ ಸ್ಥಾಪಿತವಾದ ‘ವಿಜ್ಞಾನ ಮತ್ತು ತಂತ್ರ­ಜ್ಞಾನ ಪಾರಿಭಾಷಿಕ ಆಯೋಗ’ವು ಎಲ್ಲ ಭಾರತೀಯ ಭಾಷೆಗಳನ್ನು ಒಳಗೊಳ್ಳಬೇಕಾಗಿ­ದ್ದರೂ ಹಿಂದಿ ಕೇಂದ್ರಿತವಾಗಿ ಕೆಲಸ ಮಾಡುತ್ತ ಬಂದಿದೆ. ಹಿಂದಿಯಲ್ಲಿ ಪಾರಿಭಾಷಿಕ ಗ್ರಂಥಗಳ ಪ್ರಕಟಣೆಗೆ ಪ್ರಾಶಸ್ತ್ಯ ನೀಡಿದೆ. ಅಪರೂಪ­ಕ್ಕೆಂಬಂತೆ ಪ್ರಾದೇಶಿಕ ಪಾರಿಭಾಷಿಕ ಪುಸ್ತಕಗ­ಳನ್ನು ಹೊರತರಲಾಗಿದೆ. ದೇಶದ ಎರಡನೇ ಪಂಚ­ವಾರ್ಷಿಕ ಯೋಜನೆಯಲ್ಲೇ ಸಂವಿಧಾನದ 351ನೇ ವಿಧಿಯ ಪ್ರಕಾರ ಹಿಂದಿಯೇತರ ರಾಜ್ಯ­ಗಳಲ್ಲಿ ಹಿಂದಿಯನ್ನು ನೆಲೆಯೂರಿಸಲು, ಬೆಳೆ­ಸಲು ನೂರಕ್ಕೆ ನೂರು ಧನ ಸಹಾಯ ಮಾಡಲು ತೀರ್ಮಾನಿಸಲಾಗಿದೆ. ಹಿಂದಿಯಲ್ಲದೆ ಇಂಗ್ಲಿಷ್‌, ಉರ್ದು ಮತ್ತು ಪ್ರಾದೇಶಿಕ ಭಾಷೆಗಳಿಗಾಗಿ ಸಂಸ್ಥೆ­­ಗಳನ್ನು ಸ್ಥಾಪಿಸಿದ್ದರೂ ಹಿಂದಿಗೆ ಸಂವಿಧಾ­ನಾ­ತ್ಮಕ ಬೆಂಬಲವಿದೆಯೆಂಬುದನ್ನು ಮುಂದು ಮಾಡಿ ಯಥೇಚ್ಛ ಯೋಜನೆಗಳನ್ನು ರೂಪಿಸ­ಲಾಗಿದೆ. ಹಿಂದಿಯನ್ನು ಬಿಟ್ಟರೆ ಸಂಸ್ಕೃತಕ್ಕೆ ಈ ಸ್ಥಾನಮಾನ ಮತ್ತು ಧನ, ಲಭ್ಯವಾಗಿದೆ.

ಹೀಗೆ, ಹಿಂದಿಯನ್ನು ಮೊಟ್ಟಮೊದಲ ಸ್ಥಾನ­ದಲ್ಲಿ ಸ್ಥಾಪಿಸುವ ಪ್ರಯತ್ನಗಳಿಗೊಂದು ಇತಿಹಾ­ಸವೇ ಇದೆ. ಇಂಥ ಪ್ರಜ್ಞಾಪೂರ್ವಕ ಪ್ರಯತ್ನ­ಗಳು ಹಿನ್ನೆಲೆಗೆ ಸರಿದು ಸಮತೋಲನದ ವಾತಾ­ವ­ರ­ಣ­ವೊಂದು ಬೆಳೆದು ಬರುತ್ತಿರುವ ಮತ್ತು ಅದಕ್ಕಾಗಿ ಆಶಿಸುತ್ತಿರುವ ಸಂದರ್ಭದಲ್ಲಿ ಮೋದಿ­­ಯವರ ಬಿ.ಜೆ.ಪಿ. ಸರ್ಕಾರದಿಂದ ‘ಹಿಂದಿಗೆ ಸಾಮಾಜಿಕ ಜಾಲತಾಣಗಳಲ್ಲಿ ಆದ್ಯತೆ ಕೊಡ­ಬೇಕು’ ಎಂಬ ನಿರ್ದೇಶನ ಬಂದಿದೆ. ಈ ಕ್ರಮ­ವನ್ನು ಭಾಷೆಗೆ ಸಂಬಂಧಿಸಿದ ಒಂದು ‘ಬಿಡಿ ಕ್ರಮ’ ವಾಗಿ ನೋಡಿದರೆ ಸಾಲದು. ಯಾಕೆಂದರೆ ಮೋದಿ ಸರ್ಕಾರವು ಆರಂಭಿಸಿರುವ ಕೇಂದ್ರೀಕೃತ ಆಡಳಿತ ವಿಧಾನದ ಒಂದು ವಿಸ್ತರಣಾ ಕ್ರಮ­ವಾಗಿಯೂ ಹಿಂದಿಯೊಂದಕ್ಕೆ ಕೊಡಮಾಡಲು ಹೊರಟ ಈ ಆದ್ಯತೆಯನ್ನು ಅರ್ಥ ಮಾಡಿಕೊಳ್ಳ­ಬಹುದು. ವಿದೇಶಿ ಪ್ರತಿನಿಧಿಗಳ ಜೊತೆಯೂ ಹಿಂದಿಯಲ್ಲೇ ಸಂವಾದಿಸುವ ಮೋದಿಯವರ ಭಾಷಾಬದ್ಧತೆ, ಹಿಂದಿಗೆ ಆದ್ಯತೆ ಕೊಡಬೇಕೆಂಬ ಸುತ್ತೋಲೆ ಮತ್ತು ಕೇಂದ್ರೀಕೃತಗೊಳ್ಳುತ್ತಿರುವ ಆಡಳಿತ ವಿಧಾನಗಳಿಗೂ ಪರಸ್ಪರ ಸಂಬಂಧ­ವಿದೆ. ವಿಕೇಂದ್ರೀಕರಣ ವಿರೋಧಿಯಾದ ಮನೋ­ಧರ್ಮ ಮತ್ತು ತಾತ್ವಿಕತೆಯೊಂದು ಇಲ್ಲಿ ಕೆಲಸ ಮಾಡುತ್ತಿರಬಹುದೆ ಎಂಬ ಆಧಾರಪೂರ್ವಕ ಅನುಮಾನವನ್ನು ಪರಿಶೀಲಿಸಬೇಕಾಗಿದೆ.

ಯಾವುದೇ ಸರ್ಕಾರದ ಬಗ್ಗೆ ಒಂದು ತಿಂಗಳ ಆಡಳಿತದ ಆಧಾರದಲ್ಲಿ ಅಂತಿಮ ನಿರ್ಣಯಕ್ಕೆ ಬರುವುದು ಸಾಧುವಲ್ಲ. ಆದರೆ ಒಂದು ತಿಂಗಳ ಅವಧಿಯಲ್ಲಿ ಕೈಗೊಂಡ ನಿರ್ಣಯಗಳಿಂದ ಕೆಲವು ಸ್ಪಷ್ಟ ಸುಳುಹುಗಳನ್ನು ಕಂಡುಕೊಳ್ಳು­ವುದು ಸಾಧ್ಯವಿದೆ. ಮೋದಿಯವರು ಅಧಿಕಾರಕ್ಕೆ ಬಂದ ಕೂಡಲೇ ಮಾಡಿದ ಒಂದು ಮುಖ್ಯ ಕೆಲಸ– ಸಂಪುಟ ಕಾರ್ಯದರ್ಶಿಯನ್ನು ಸುಗ್ರೀ­ವಾಜ್ಞೆ ಮೂಲಕ ನೇಮಿಸಿಕೊಂಡದ್ದು. ಈ ಹುದ್ದೆಗೆ ಬಂದ ವ್ಯಕ್ತಿಯನ್ನು ಅಸ್ತಿತ್ವದಲ್ಲಿರುವ ನಿಯಮ­ಗಳ ಅನ್ವಯ ನೇಮಿಸಿಕೊಳ್ಳು­ವಂತಿರ­ಲಿಲ್ಲ. ಹಿಂದಿನ ಉನ್ನತ ಹುದ್ದೆಯಿಂದ (TRAI) ನಿವೃತ್ತರಾದ ನಂತರ ಐದು ವರ್ಷಗಳ ಕಾಲ ಬೇರಾವ ಹುದ್ದೆಯನ್ನೂ ಸ್ವೀಕರಿಸುವಂತಿರಲಿಲ್ಲ. ಆದರೆ ಮೋದಿಯವರು ಅದೇ ವ್ಯಕ್ತಿ ಬೇಕೆಂದು ಸುಗ್ರೀವಾಜ್ಞೆ ಮೂಲಕ ನೇಮಿಸಿಕೊಂಡರು. ನಿರ್ದಿಷ್ಟ ಉದ್ದೇಶಕ್ಕಾಗಿ ಅಸ್ತಿತ್ವದಲ್ಲಿದ್ದ ನೇಮ­ಕಾತಿ ನಿಯಂತ್ರಣವನ್ನು ಮೀರಿದರು. ಅಧಿಕಾರ ವಹಿಸಿಕೊಂಡ ಒಂದೇ ವಾರದೊಳಗೆ ಒಬ್ಬ ಸಚಿವರು ಕಾಶ್ಮೀರಕ್ಕೆ ಸಂಬಂಧಿಸಿದ 370ನೇ ವಿಧಿಯನ್ನು ರದ್ದು ಮಾಡುವ ಬಗೆಗಿನ ಚರ್ಚೆಗೆ ‘ಪ್ರಧಾನಿಯವರ ಆಶಯ’ದಂತೆ ಚಾಲನೆ ನೀಡಿ­ದರು. ಮತ್ತೊಬ್ಬ ಸಚಿವರು ಏಕರೂಪ ನಾಗರಿಕ ಸಂಹಿ­ತೆಯ ಪ್ರಸ್ತಾಪ ಮಾಡಿದರು. ಹಿಂದಿನ ಸರ್ಕಾ­ರವು ರೂಪಿಸಿದ್ದ ‘ಸಚಿವರ ತಂಡ’ಗಳ ಪದ್ಧತಿ­ಯನ್ನು ಮೋದಿಯವರು ರದ್ದುಗೊಳಿಸಿ­ದರು. ವಿವಿಧ ವಿಷಯಗಳ ಕೂಲಂಕಷ ಪರಿಶೀಲ­ನೆ­ಗಾಗಿ ಒಂದೊಂದು ವಿಷಯಕ್ಕೂ ನಾಲ್ಕೈದು ಜನ ಸಚಿವರ ತಂಡವನ್ನು (G.O.M.) ರಚಿ­ಸುವ ಪದ್ಧತಿಯು ಚಾಲ್ತಿಯಲ್ಲಿತ್ತು. ಇವರು ನಿರ್ದಿಷ್ಟ ವಿಷಯಗಳನ್ನು ಚರ್ಚಿಸಿದ ನಂತರ ಸಂಪು­ಟದ ಚರ್ಚೆಗೆ ಟಿಪ್ಪಣಿ ಸಿದ್ಧವಾಗುತ್ತಿತ್ತು. ಈ ಪದ್ಧತಿಯ ಸಾಧಕ ಬಾಧಕಗಳೇನೆ ಇರಲಿ, ಮೋದಿ­ಯವರು ಬಂದ ಕೂಡಲೇ ಸಚಿವರ ತಂಡ ರಚನೆಯ ಪರಿಕಲ್ಪನೆಗೆ ತಿಲಾಂಜಲಿ ನೀಡಿ ಎಲ್ಲ ಸಚಿ­ವರೂ ನೇರವಾಗಿ ತನಗೇ ವಿಷಯ ತಿಳಿಸ­ಬೇಕೆಂದು ಆದೇಶಿಸಿದರು. ಸಚಿವರು ತಮ್ಮ ಆಪ್ತ ಕಾರ್ಯದರ್ಶಿಗಳನ್ನೂ ಸ್ವತಂತ್ರವಾಗಿ ನೇಮಿಸಿ­ಕೊಳ್ಳ­ದಂತೆ ನಿರ್ಬಂಧಿಸಿದರು. ಸ್ವಜಾತಿ, ಸ್ವಹಿತಾ­ಸಕ್ತಿಯ ಕಾರಣಕ್ಕಾಗಿ ನೇಮಕ ಮಾಡಿಕೊಳ್ಳು­ವುದು ಬೇಡವೆಂದು ಸೂಚಿಸುವುದು ಸರಿ. ಆದರೆ ಅದರಾಚೆಗೂ ನಿರ್ಬಂಧ ವಿಧಿಸಿ ತನ್ನ ಒಪ್ಪಿಗೆ­ಯನ್ನು ‘ಕಡ್ಡಾಯ’ ಗೊಳಿಸುವ ಕ್ರಮ ಸರಿಯೆ? ರಕ್ಷಣಾ ಇಲಾಖೆಯಲ್ಲಿ ನೂರಕ್ಕೆ ನೂರು ನೇರ ವಿದೇಶಿ ಬಂಡವಾಳ ಹೂಡಿಕೆಗೆ ಅವಕಾಶ ಕೊಡುವ ಏಕಪಕ್ಷೀಯ ತೀರ್ಮಾನ ಸೂಕ್ತವೆ?

ಒಟ್ಟಾರೆಯಾಗಿ ಈ ಎಲ್ಲ ಅಂಶಗಳಲ್ಲಿ ಕಾಣು­ವುದು– ಕೇಂದ್ರೀಕೃತ ಆಡಳಿತ ವಿಧಾನದ ಸೂಚನೆ ಮತ್ತು ಅನೇಕದಿಂದ ಏಕದ ಕಡೆ ಸಾಗು­ತ್ತಿ­ರುವ ಚಲನೆ. ಈ ಮನೋಧರ್ಮ ಮತ್ತು ತಾತ್ವಿಕತೆಯ ವಿಸ್ತರಣೆಯು ಭಾಷಾ ವಿಷಯಕ್ಕೂ ಬಂದಂತೆ ಕಾಣುತ್ತದೆ. ಇದರ ಫಲವಾಗಿಯೇ ಹಿಂದಿ ಕೇಂದ್ರಿತ ಆದ್ಯತೆಯ ಸುತ್ತೋಲೆಯನ್ನು ಇಷ್ಟು ಶೀಘ್ರವಾಗಿ ಹೊರಡಿಸಲಾಗಿದೆ. ಆದರೆ ಮೋದಿ ಸರ್ಕಾರದ ಈ ಸುತ್ತೋಲೆಯನ್ನು ಸಂವಿ­ಧಾನ ವಿರೋಧಿ ಎಂದು ಏಕಾಏಕಿ ಹೇಳಲಾಗು­ವು­ದಿಲ್ಲ. ಹಾಗೆ ಹೇಳಿದಾಗ ಮೋದಿ ಸರ್ಕಾರವು ಸಂವಿ­ಧಾನದ 351ನೇ ವಿಧಿಯನ್ನು ತೋರಿಸ­ಬ­ಹುದು. ಹೀಗಾಗಿ ಮೋದಿ ಸರ್ಕಾರವು ಸಂವಿ­ಧಾನ ವಿರೋಧದ ಆರೋಪದಿಂದ ತಪ್ಪಿಸಿಕೊಳ್ಳ­ಬಹುದಾದರೂ ಬಲವಂತ ಹಿಂದಿ ಹೇರಿಕೆಯ ವಿರುದ್ಧ­ವಾಗಿ ನಡೆದ ಆಂದೋಲನಗಳಿಂದ ಮೂಡಿದ, ಅರಿವಿನ ಗುರುವಾದ ಅಲಿಖಿತ ಸಂವಿ­ಧಾನಕ್ಕೆ ವಿರುದ್ಧವಾಗಿ ವರ್ತಿಸಿದ ಆರೋಪದಿಂದ ತಪ್ಪಿಸಿಕೊಳ್ಳಲಾಗದು.

ಈ ದೃಷ್ಟಿಯಿಂದ ಮೋದಿ ಸರ್ಕಾರದ ಸುತ್ತೋ­­ಲೆ­ಯನ್ನು ನಾವು ವಿರೋಧಿಸಬೇಕು. ಜೊತೆಗೆ ಈ ತಾತ್ಕಾಲಿಕ ವಿರೋಧವನ್ನು ಮೀರಿದ ತಾತ್ವಿಕತೆಯತ್ತ ಸಾಗಬೇಕು. ಸಾಮಾಜಿಕ – ಆರ್ಥಿಕ ಸಮಾನತೆಯ ಅದ್ಭುತ ಸಂವಿಧಾನ­ವನ್ನು ನೀಡಿದ ಡಾ. ಅಂಬೇಡ್ಕರ್‌ ಅವರು ತಿದ್ದು­ಪಡಿಯ ಪ್ರಜಾಸತ್ತಾತ್ಮಕ ಅವಕಾಶವನ್ನೂ ಕಲ್ಪಿಸಿ­ದ್ದಾರೆ. ಈ ಅವಕಾಶವನ್ನು ಬಳಸಿಕೊಂಡು, ಸಂವಿ­ಧಾನ­ದಲ್ಲಿರುವ ಹಿಂದಿ ಕೇಂದ್ರಿತ ವಿಧಿಗ­ಳನ್ನು ಎಲ್ಲ ಭಾರತೀಯ ಭಾಷೆಗಳಿಗೂ ವಿಸ್ತರಿಸು­ವಂತೆ ಹೋರಾಟ ಕಟ್ಟಬೇಕು. ಅಷ್ಟೇ ಅಲ್ಲ, ಭಾಷಾ ಸಂಬಂಧಿತ ವಿಧಿಗಳನ್ನು ಒಟ್ಟಾಗಿ ಚರ್ಚಿಸಿ ಸಂವಿಧಾನಾತ್ಮಕ ಒಕ್ಕೂಟ ವ್ಯವಸ್ಥೆ­ಯನ್ನು ವಾಸ್ತವಗೊಳಿಸುವ ನಿರ್ಣಯಗಳಿಗೆ ಕಾರಣ­ವಾಗಬೇಕು. ಈ ಮೂಲಕ ಸರ್ವಭಾಷಾ ಸಮಾನತೆಯು ಸಂವಿಧಾನದ ಭಾಗವಾಗಬೇಕು; ಕೇಂದ್ರ ಸರ್ಕಾರದ ನೀತಿಯಾಗಬೇಕು. ಮೋದಿ­ಯವರ ಸರ್ಕಾರಕ್ಕೆ ಇದನ್ನು ಮನವರಿಕೆ ಮಾಡಿ­ಕೊಡಬೇಕು.

- ಬರಗೂರು ರಾಮಚಂದ್ರಪ್ಪ

– ಬರಗೂರು ರಾಮಚಂದ್ರಪ್ಪ

 

 

 

 

ಕೃಪೆ:ಪ್ರಜಾವಾಣಿ

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top