fbpx
ಸಮಾಚಾರ

ಅಮೆರಿಕದಲ್ಲಿ ಕನ್ನಡದ ಕುಡಿ ಅಮಲಾಳ ಭರತನಾಟ್ಯ ರಂಗಪ್ರವೇಶ

ದಿನಾಂಕ 18 ಜೂನ್, 2016ರಂದು ಶನಿವಾರ ಸಂಜೆ, ಅಮೆರಿಕ ಸಂಯುಕ್ತ ಸಂಸ್ಥಾನಗಳ ಒಹಾಯೊ ರಾಜ್ಯದ ಕ್ಲೀವ್ಲೆಂಡ್ ನಗರದಲ್ಲಿ ವೈದ್ಯರಾಗಿರುವ ಡಾ. ನವೀನ್ ಉಳಿ, ಮತ್ತು ಪುಷ್ಪಲತಾ ಉಳಿ ಅವರ ಮಗಳು ಅಮಲಾ ಮಾನಸಾ ಉಳಿಯ ಭರತನಾಟ್ಯ ರಂಗಪ್ರವೇಶದ ವಿಶಿಷ್ಟ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದ ಪ್ರಾರಂಭ ನೃತ್ಯಾಂಜಲಿಯೊಂದಿಗೆ ಆಯಿತು. ನಂತರ ಮಹಾಗಣಪತಿಂ ಭಜೇ.., ಮತ್ತು ಭಾವಯಾಮಿ ರಘುರಾಮಮ್. ರಾಮಾಯಣದ ಈ ರಾಗಮಾಲಿಕೆಯನ್ನು ರಾಮಾಯಣದ ವಿವಿಧ ಪಾತ್ರಗಳನ್ನು ಪ್ರೇಕ್ಷಕರ ಮನಮುಟ್ಟುವಂತೆ ನೃತ್ಯಾಭಿನಯದಿಂದ ಬಣ್ಣಿಸಿದ ಅಮಲಾ ತನ್ನ ಪ್ರತಿಭೆಯ ಅದ್ಭುತ ಪ್ರದರ್ಶನ ನೀಡಿದಳು.ಮಧ್ಯವಿರಾಮದ ನಂತರ ಪುರಂದರದಾಸರ ‘ಚಂದ್ರಚೂಡ ಶಿವಶಂಕರ ಪಾರ್ವತಿ ರಮಣನೆ’, ಮತ್ತು ‘ಆಡ ಹೋದಲ್ಲಿ ಮಕ್ಕಳು ಆಡಿಕೊಳ್ಳುವರೆ’ ಈ ಎರಡು ಕೃತಿಗಳಲ್ಲಿ ಕ್ರಮವಾಗಿ ಪೌರಾಣಿಕ ಶಿವನ ಬಗೆಬಗೆಯ ರೂಪಗಳನ್ನು ಮತ್ತು ಕೃಷ್ಣನ ಬಾಲ ಲೀಲೆಗಳ ಸಂಕೀರ್ಣ ಭಾವಗಳನ್ನು ಬಹಳ ಲಾಲಿತ್ಯದಿಂದ ಪ್ರದರ್ಶಿಸಿದಳು. ಅಭಿನಯಿಸುತ್ತಿರುವ ಪಾತ್ರಗಳನ್ನು ಅರ್ಥೈಸಿಕೊಂಡು ಪ್ರದರ್ಶಿಸುವ ಸಾಮರ್ಥ್ಯವನ್ನು ತೋರಿದ ಅಮಲಾ ಬಹಳ ಪ್ರಬುದ್ಧ ನರ್ತಕಿಯಾಗುವ ಭರವಸೆಯನ್ನು ಮೂಡಿಸಿದಳು.

ಒಂದು ತಿಲ್ಲಾನದ ನಂತರ ಪುರಂದರದಾಸರ ‘ಪಂಕಜ ಮುಖಿಯರು ವೆಂಕಟರಮಣಗೆ’ ಮಂಗಳವನ್ನು ಪ್ರದರ್ಶಿಸುವ ಮೂಲಕ ಕಾರ್ಯಕ್ರಮ ಮುಗಿಯಿತು.

ಭಾರತದಿಂದ ಬಂದಿದ್ದ ಕಲಾವಿದರಾದ ಪುಸ್ತಕಂ ರಮಾ (ಗಾಯಕಿ), ಜನಾರ್ದನರಾವ್ (ಮೃದಂಗ), ಜಯರಾಮ್ ಕಿಕ್ಕೇರಿ (ಕೊಳಲು), ಮತ್ತು ಭಾರ್ಗವ ಹಾಲಂಬಿ (ರಿದಮ್ ಪ್ಯಾಡ್) ತಮ್ಮ ಸಂಗೀತದಿಂದ ಕಾರ್ಯಕ್ರಮದ ಸೊಬಗನ್ನು ಹೆಚ್ಚಿಸಿದರು.ಅಮಲಾ ಅಮೆರಿಕದಲ್ಲೇ ಹುಟ್ಟಿ ಬೆಳೆದ ಕನ್ನಡದ ಕುಡಿ. ಆರನೆಯ ವರ್ಷದಿಂದಲೇ ಭರತನಾಟ್ಯ ಕಲಿಯುತ್ತಿದ್ದಾಳೆ. ಕೇವಲ ಭರತನಾಟ್ಯ ಮಾತ್ರವಲ್ಲ, ಕೊರಿಯನ್ ಸಮರಕಲೆಯಾದ ಟೇ ಕ್ವಾನ್ ಡೊದಲ್ಲಿ ಬ್ಲ್ಯಾಕ್ ಬೆಲ್ಟ್ ಪಡೆದಿದ್ದಾಳೆ. ಕ್ಲೀವ್ಲೆಂಡ್ ನ ಸೋಲನ್ ಹೈಸ್ಕೂಲ್ ನ ವಿದ್ಯಾರ್ಥಿನಿಯಾದ ಅಮಲಾ, ಶಾಲೆಯ ಸಿಂಫೊನಿಯಾ ಆರ್ಕೆಸ್ಟ್ರಾದಲ್ಲಿ ಕೂಡಾ ಭಾಗವಹಿಸುತ್ತಾಳೆ. ಮುಂದಿನ ವರ್ಷಕ್ಕೆ ಪರ್ಡ್ಯೂ ವಿಶ್ವವಿದ್ಯಾಲಯದಲ್ಲಿ ಕೆಮಿಕಲ್ ಇಂಜಿನಿಯರಿಂಗ್ ವ್ಯಾಸಂಗಕ್ಕೆ ಸೇರಲಿದ್ದಾಳೆ.

ಅವಳ ಗುರು ಸುಜಾತಾ ಶ್ರೀನಿವಾಸನ್ ಒಹಾಯೊ ರಾಜ್ಯದಲ್ಲಿರುವ ಶ್ರೀ ಕಲಾಮಂದಿರದ ಸಂಸ್ಥಾಪಕಿ. ಭಾರತದಿಂದ ದೂರದಲ್ಲಿದ್ದರೂ ಭಾರತೀಯ ಶಾಸ್ತ್ರೀಯ ಕಲೆಗಳನ್ನು ಉಳಿಸಿ, ಬೆಳೆಸಲು ಈ ಸಂಸ್ಥೆಯನ್ನು ನಡೆಸುತ್ತಿದ್ದಾರೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top