fbpx
News

ಡಿವೈಎಸ್ ಪಿ ಆತ್ಮಹತ್ಯೆ ಕೇಸ್; ಚಿಕ್ಕಮಗಳೂರಿಗೆ ಸಿಐಡಿ ತಂಡ ಭೇಟಿ, ತನಿಖೆ

ಚಿಕ್ಕಮಗಳೂರು: ಚಿಕ್ಕಮಗಳೂರು ಡಿವೈಎಸ್ಪಿ ಕಲ್ಲಪ್ಪ ಹಂಡಿಭಾಗ್(34ವರ್ಷ) ಆತ್ಮಹತ್ಯೆ ಮತ್ತು ತೇಜಸ್ ಗೌಡ ಅಪಹರಣದ ಪ್ರಕರಣದ ಬಗ್ಗೆ ಸಿಐಡಿ ಅಧಿಕಾರಿಗಳು ತನಿಖೆಯನ್ನು ಚುರುಕುಗೊಳಿಸಿದ್ದು, ಬುಧವಾರ ಸಿಐಡಿ ತಂಡ ಚಿಕ್ಕಮಗಳೂರಿಗೆ ಭೇಟಿ ನೀಡಿದೆ.

ಯುವಕ ತೇಜಸ್ ಗೌಡ ಅಪಹರಣದ ಆರೋಪ ಎದುರಿಸುತ್ತಿದ್ದ ಡಿವೈಎಸ್ಪಿ ಕಲ್ಲಪ್ಪ ಹಂಡಿಭಾಗ್ ಬೆಳಗಾವಿಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದರು. ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಲಾಗಿತ್ತು.

ಸಿಐಡಿ ತಂಡದ ಎಸ್ಪಿ ರಾಜಪ್ಪ ನೇತೃತ್ವದ ತಂಡ ಚಿಕ್ಕಮಗಳೂರಿನ ಪೊಲೀಸ್ ವಸತಿಗೃಹದ ಪರಿಶೀಲನೆ ನಡೆಸಿದೆ. ಚಿಕ್ಕಮಗಳೂರಿನ ಪೊಲೀಸ್ ವರಿಷ್ಠಾಧಿಕಾರಿ ಕೂಡಾ ಮಾಹಿತಿ ನೀಡಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.

ಐಡಿ ಎಸ್ಪಿ ರಾಜಪ್ಪ ಅವರ ನೇತೃತ್ವದಲ್ಲಿ ಇಬ್ಬರು ಡಿವೈಎಸ್ ಪಿ, ಇಬ್ಬರು ಇನ್ಸ್ ಪೆಕ್ಟರ್‍ಗಳಿದ್ದು ಆತ್ಮಹತ್ಯೆಗೆ ಕಾರಣವೆನ್ನಲಾದ ಬೆಟ್ಟಿಂಗ್, ಅಪಹರಣ ಇನ್ನಿತರ ಅಂಶಗಳ ಕುರಿತು ವಿಚಾರಣೆ ಕೈಗೊಂಡಿದೆ 10ಲಕ್ಷಕ್ಕಾಗಿ ಅಪಹರಣ ಮಾಡಿದ ಸಂಬಂಧ ಬಸವನಹಳ್ಳಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಇರುವ ಅಂಶಗಳ ಬಗ್ಗೆ ಪರಿಶೀಲನೆ ನಡೆಸಿರುವುದಾಗಿ ವರದಿ ವಿವರಿಸಿದೆ.

ಬೆಂಗ್ಳೂರಲ್ಲಿ ಎಸಿಪಿಯಾಗಲಿದ್ದರು

ಬೆಂಗಳೂರು: ಡಿವೈಎಸ್ಪಿ ಕಲ್ಲಪ್ಪ ಅವರಿಗೆ ಬೆಂಗಳೂರಿನಲ್ಲಿ ಸಹಾಯಕ ಪೊಲೀಸ್ ಆಯುಕ್ತರನ್ನಾಗಿ (ಎಸಿಪಿ) ವರ್ಗ ಮಾಡಲು ಸರ್ಕಾರ ನಿರ್ಧರಿಸಿತ್ತು. ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರನ್ನು ಚಿಕ್ಕಮಗಳೂರಿನಲ್ಲಿ ಭೇಟಿ ಮಾಡಿದ್ದ ಸಂದರ್ಭದಲ್ಲಿ ಕಲ್ಲಪ್ಪ ಅವರೇ ಬೆಂಗಳೂರಿನಲ್ಲಿ ಸೇವೆ ಸಲ್ಲಿಸುವ ಆಸೆಯನ್ನು ಹೇಳಿಕೊಂಡು, ಅವಕಾಶ ನೀಡುವಂತೆ ಮನವಿ ಮಾಡಿದ್ದರು. ಪರಮೇಶ್ವರ್ ಬೆಂಗಳೂರಿನಲ್ಲಿ ಎಸಿಪಿಯಾಗಿ ನೇಮಕ ಮಾಡುವ ನಿರ್ಧಾರ ಕೈಗೊಂಡಿದ್ದರು. ಬೆಂಗಳೂರಿಗೆ ವರ್ಗಾವಣೆ ಮಾಡುವ ಅಧಿಕಾರಿಗಳ ಪಟ್ಟಿಯಲ್ಲೂ ಕಲ್ಲಪ್ಪ ಹೆಸರಿತ್ತು. ಇಂತಹ ದಕ್ಷ ಅಧಿಕಾರಿ ಕಳೆದುಕೊಂಡಿರುವುದು ನೋವಾಗಿದೆ ಎಂದು ಸಚಿವ ಪರಮೇಶ್ವರ್ ತಿಳಿಸಿದರು.

ನಿಗೂಢವಾಗಿರುವ ಪ್ರಕರಣ 

 ಶಿವಮೊಗ್ಗ/ಚಿಕ್ಕಮಗಳೂರು : ಡಿವೈಎಸ್ಪಿ ಕಲ್ಲಪ್ಪ ಹಂಡಿಭಾಗ ಅವರೇ ಹಣಕ್ಕಾಗಿ ಬೇಡಿಕೆ ಇಟ್ಟು ಅಪಹರಣ ಮಾಡಿಸಿದ್ದರೆ? ಸ್ನೇಹಿತರು ಹೆಣೆದ ಬಲೆಯಲ್ಲಿ ಸಿಲುಕಿದರೆ? ಕಲ್ಲಪ್ಪ ಅವರಿಗೆ ಹಣದ ಅಗತ್ಯವಿದ್ದ ಕಾರಣದಿಂದಲೇ ಅಪಹರಣ ಮಾಡಿಸಿದರೆ? ಮೊಬೈಲ್ ಸಂಭಾಷಣೆ ಧ್ವನಿಮುದ್ರಣ ಮಾಡಿಕೊಂಡಿರುವುದನ್ನು ಗಮನಿಸಿದರೆ ಪೂರ್ವಯೋಜಿತ ಸಂಚೇ ಎಂಬ ಪ್ರಶ್ನೆಗಳಿಗೆ ತನಿಖೆಯಿಂದಲೇ ಉತ್ತರ ಸಿಗಬೇಕಿದೆ. ಆರಂಭದಲ್ಲಿ ಕಲ್ಲಪ್ಪ ಅವರೇ ಹಣಕ್ಕಾಗಿ ಅಪಹರಣ ಮಾಡಿಸಿದ್ದರು ಎಂಬ ಆರೋಪ ಇತ್ತು. ಆದರೆ ಇದೀಗ ಈ ಪ್ರಕರಣ ಹಲವು ಆಯಾಮಗಳನ್ನು ಪಡೆದುಕೊಳ್ಳತೊಡಗಿದೆ. ಅಪಹರಣ ಕ್ಕೊಳಗಾಗಿದ್ದ ತೇಜಸ್ ದೂರು ದಾಖಲಿಸಿದ ನಂತರ ಪ್ರಕರಣ ಬೆಳಕಿಗೆ ಬಂದಿದೆ. ಆದರೆ ಈ ಬಗ್ಗೆ ಇಲಾಖೆ ಅಧಿಕಾರಿಗಳಿಗೆ ಮೊದಲೇ ಮಾಹಿತಿ ಇತ್ತು. ಎಸ್ಪಿ ಸಂತೋಷ್ಬಾಬು ಕಲ್ಲಪ್ಪ ಅವರನ್ನು ಕರೆದು ವಿವರಣೆ ಕೇಳಿದ್ದರು ಎಂಬ ಮಾಹಿತಿ ಇದೆ. ಇದು ಚಿಕ್ಕಮಗಳೂರು ಜಿಲ್ಲೆಯ ಪ್ರಭಾವಿ ರಾಜಕಾರಣಿಯೊಬ್ಬರವರೆಗೂ ಹೋಗಿದ್ದು, ಅವರೇ ಎಸ್ಪಿಯೊಂದಿಗೆ ಮಾತನಾಡಿ ಕೆಲ ಸೂಚನೆ ನೀಡಿದ್ದರು ಎಂಬ ಮಾತೂ ಇದೆ.

ಊಹಾಪೋಹಗಳದ್ದೇ ಕಾರುಬಾರು

ಡಿವೈಎಸ್ಪಿ ಕಲ್ಲಪ್ಪ ಅವರೊಂದಿಗೆ ಆತ್ಮೀಯವಾಗಿದ್ದ ಬಜರಂಗದಳ ಜಿಲ್ಲಾ ಸಂಚಾಲಕ ಪ್ರವೀಣ್ ಖಾಂಡ್ಯ ಸೇರಿ ಆರು ಮಂದಿ ನಾಪತ್ತೆಯಾಗಿದ್ದಾರೆ. ಈ ಪ್ರಕರಣದಲ್ಲಿ ಅವರ ಪಾತ್ರ ಏನು ಎಂಬುದೂ ನಿಗೂಢವಾಗಿದೆ. ಅಪಹರಣ ಸಂಬಂಧ ಎಸ್ಪಿ ಸಂತೋಷಬಾಬು ಕೂಡ ಕಲ್ಲಪ್ಪ ಅವರನ್ನು ಎಚ್ಚರಿಸಿದ್ದರು ಎಂದು ಹೇಳಲಾಗಿದ್ದು, ಅಪಹರಣ ಮತ್ತು ಹಣದ ವ್ಯವಹಾರ ಹಂಡಿಭಾಗಗೆ ತಿಳಿದಿರಲಿಲ್ಲ. ಪ್ರವೀಣ್ ಜತೆ ವಿಶ್ವಾಸದಿಂದ ಇದ್ದ ಕಾರಣ ಹಣ ಪಡೆದಿದ್ದಾರೆಂಬ ಮಾತುಗಳೂ ಕೇಳಿಬರುತ್ತಿವೆ.

ಐಪಿಎಲ್ ಬೆಟ್ಟಿಂಗ್

ಐಪಿಎಲ್ ಜ್ವರ ಯಾವಾಗ ಆರಂಭವಾಯಿತೋ ಅಂದಿನಿಂದ ಜಿಲ್ಲೆಯಲ್ಲಿ ಬೆಟ್ಟಿಂಗ್ ದಂಧೆ ಬಿರುಸಾಗಿದೆ. ಕೆಲವು ಕಾಫಿ ಪ್ಲಾಂಟರ್ಸ್ ಮಾಲೀಕರ ಮಕ್ಕಳು ಇದನ್ನೇ ದಂಧೆ ಮಾಡಿಕೊಂಡರು. ಕೆಲವರು ಫೈನಾನ್ಸ್ ಆರಂಭಿಸಿ ಬರುವ ಬಡ್ಡಿ ಹಣದಲ್ಲಿ ಕ್ರಿಕೆಟ್ ಬೆಟ್ಟಿಂಗ್ ಆಡಿ ದುಪ್ಪಟ್ಟು ಹಣ ಮಾಡುವ ದಂಧೆ ಕಂಡುಕೊಂಡರು. ಇಂತಹ ದಂಧೆಯಲ್ಲಿ ಸುಮಾರು 30ಕ್ಕಿಂತ ಹೆಚ್ಚು ಯುವಕರು ತೊಡಗಿಸಿಕೊಂಡು ಬೆಂಗಳೂರು, ಮುಂಬೈ ಮುಂತಾದ ನಗರಗಳ ಟೆಕ್ಕಿಗಳ ಸಂಪರ್ಕ ಬೆಳೆಸಿಕೊಂಡಿದ್ದಾರೆ ಎನ್ನಲಾಗಿದೆ.

ನಾಪತ್ತೆಯಾದವರು

ಬಜರಂಗದಳ ಜಿಲ್ಲಾ ಸಂಚಾಲಕ ಪ್ರವೀಣ್ ಖಾಂಡ್ಯ

ಮಂಗಳೂರು ಮೂಲದ ನವೀನ್ ಶೆಟ್ಟಿ

ಅಭಿಜಿತ್ ಮತ್ತು ಇತರ ಆರು ಜನ

ಪೊಲೀಸ್ ಇಲಾಖೆಯಲ್ಲಿ ಸದಭಿಪ್ರಾಯ

ಕಲ್ಲಪ್ಪ ಅವರ ಬಗ್ಗೆ ಇಲಾಖೆಯಲ್ಲಿ ಒಳ್ಳೆಯ ಅಭಿಪ್ರಾಯವಿದೆ. ಅವರು ಎಂದಿಗೂ ಲಂಚಕ್ಕೆ ಕೈ ಒಡ್ಡಿದವರಲ್ಲ. ಅತಿಯಾದ ನಂಬಿಕೆ ಅವರನ್ನು ಈ ಸ್ಥಿತಿಗೆ ತಂದಿದೆ ಎಂಬ ಮಾತುಗಳು ಪೊಲೀಸ್ ಇಲಾಖೆಯಲ್ಲಿ ಕೇಳಿಬರುತ್ತಿವೆ. ಯಾರದ್ದೋ ವ್ಯವಹಾರದಲ್ಲಿ ತಿಳಿದೋ, ತಿಳಿಯದೆಯೋ ಥಳಕು ಹಾಕಿಕೊಂಡ ಪರಿಣಾಮ ಹಣಕ್ಕಾಗಿ ಅಪಹರಣ ಆರೋಪಕ್ಕೆ ಗುರಿಯಾಗಬೇಕಾಯಿತು. ಸ್ನೇಹ ಬಳಸಿ ಹಲವರು ಅಕ್ರಮ ಚಟುವಟಿಕೆಗಳಿಗೆ ಕಲ್ಲಪ್ಪ ಹೆಸರನ್ನು ಬಳಕೆ ಮಾಡಿಕೊಂಡು ಲಾಭ ಪಡೆದರು. ಆದರೆ ವಿನಾಕಾರಣ ಆರೋಪಕ್ಕೆ ಗುರಿಯಾಗಿ ಪ್ರಾಣ ಕಳೆದುಕೊಂಡಿದ್ದು ಕಲ್ಲಪ್ಪ ಎಂದು ಪೊಲೀಸ್ ಸಿಬ್ಬಂದಿಯೊಬ್ಬರು ಹೇಳಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top