fbpx
News

ಕಾಶ್ಮೀರದಲ್ಲಿ 300 ಕನ್ನಡಿಗರು ಅತಂತ್ರ ಸ್ಥಿತಿ. ಆಹಾರಕ್ಕೆ ಪರದಾಟ!

ಬೆಂಗಳೂರು: ಹಿಂಸಾಚಾರ ಪೀಡಿತ ಕಾಶ್ಮೀರದಲ್ಲಿ ಹುನಗುಂದ ತಹಶೀಲ್ದಾರ ಸುಭಾಷ ಸಂಪಗಾವಿ ಹಾಗೂ ಅವರ ಕುಟುಂಬ ಸೇರಿದಂತೆ ಕರ್ನಾಟಕದ 300ಕ್ಕೂ ಅಧಿಕ ಪ್ರವಾಸಿಗರು ಸಿಲುಕಿಕೊಂಡಿದ್ದು, ಹಲ ಯಾತ್ರಿಕರು ಕಳೆದ ಮೂರು ದಿನದಿಂದ ಅನ್ನ, ನೀರಿಲ್ಲದೆ ಪರದಾಡುತ್ತಿದ್ದಾರೆ. ಇನ್ನೊಂದೆಡೆ ಅಮರನಾಥ ಯಾತ್ರೆಗೆ ತೆರಳಿರುವ ಕನ್ನಡಿಗರು ಸುರಕ್ಷಿತವಾಗಿದ್ದಾರೆ. ಯಾವುದೇ ದುರ್ಘಟನೆ ವರದಿಯಾಗಿಲ್ಲ ಎಂದು ಕರ್ನಾಟಕ ಭವನದ ನಿವಾಸಿ ಆಯುಕ್ತ ಅತುಲ್ ಕುಮಾರ್ ತಿವಾರಿ ಸ್ಪಷ್ಟಪಡಿಸಿದ್ದಾರೆ.

ಬಾಗಲಕೋಟೆಯ 15 ಮಂದಿ, ವಿಜಯಪುರ ಜಿಲ್ಲೆಯ 17 ಯಾತ್ರಾರ್ಥಿಗಳು ಕಾಶ್ಮೀರದಲ್ಲಿ ಸಿಲುಕಿರುವ ಅಧಿಕೃತ ಮಾಹಿತಿ ಮಾದ್ಯಮಕ್ಕೆ ಲಭ್ಯವಾಗಿದೆ. ತಹಶೀಲ್ದಾರ ಸುಭಾಷ ಸಂಪಗಾವಿ ಕುಟುಂಬ ಸದ್ಯ ಶ್ರೀನಗರದ ಪಠಾಣ್ ಚೌಕ್ನಲ್ಲಿ ವಾಹನದಲ್ಲೇ ಆಶ್ರಯ ಪಡೆದಿದ್ದಾರೆ.

ಈ ಬಗ್ಗೆ ಉದಯವಾಣಿ ಜೊತೆ ದೂರವಾಣಿಯಲ್ಲಿ ಮಾಹಿತಿ ಹಂಚಿಕೊಂಡ ತಹಶೀಲ್ದಾರ ಸುಭಾಷ ಸಂಪಗಾವಿ,ಉಗ್ರರು ಮತ್ತು ಪೊಲೀಸರ ನಡುವಣ ಗಲಾಟೆಯಿಂದ ಶ್ರೀನಗರದಲ್ಲಿ ಮೂರು ದಿನಗಳಿಂದ 144 ಕಲಂ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ನಮ್ಮ ಕುಟುಂಬದವರೂ ಸೇರಿ ಒಟ್ಟು 62 ಜನರು ಪ್ರವಾಸಿಗರು ನಮ್ಮ ಬಸ್ನಲ್ಲಿದ್ದಾರೆ. ಶ್ರೀನಗರದ ಪಠಾಣ್ ಚೌಕ್ನಲ್ಲಿ ನಮ್ಮ ಬಸ್ ತಡೆಯಲಾಗಿದೆ. ದೇಶದ ಹಲವೆಡೆಯಿಂದ ಬಂದಿರುವ 5000ಕ್ಕೂ ಹೆಚ್ಚು ಪ್ರವಾಸಿಗರು ಶ್ರೀನಗರದಲ್ಲಿದ್ದೇವೆ ಎಂದರು.

ಹುನಗುಂದ ತಹಶೀಲ್ದಾರ ಸುಭಾಷ ಸಂಪಗಾವಿ, ಅವರ ಪತ್ನಿ ವೀಣಾ, ಬಾಮೈದ ಮಧುಕರ ಸೇರಿ ಕುಟುಂಬದ ಒಟ್ಟು 9 ಜನರು ಈ ಪ್ರವಾಸ ತಂಡದಲ್ಲಿದ್ದಾರೆ. ಜೂನ್30ರಂದು ಬೆಂಗಳೂರಿನಿಂದ ದೆಹಲಿಗೆ ವಿಮಾನದ ಮೂಲಕ ತೆರಳಿ, ಅಲ್ಲಿಂದ ಪ್ರವಾಸಿ ಬಸ್ ಮೂಲಕ ಅಮರನಾಥ ಯಾತ್ರೆ ಕೈಗೊಂಡಿದ್ದರು. ಜು. 6ರಂದು ಅಮರನಾಥ ದರ್ಶನ ಮಾಡಿ, ವಾಘಾ ಗಡಿ ನೋಡಲು ಅಮೃತಸರ ಮೂಲಕ ಪ್ರಯಾಣ ನಿಗದಿ ಮಾಡಿದ್ದರು.

ಮೂರು ದಿನದಿಂದ ಅನ್ನ, ನೀರಿಲ್ಲ: ಮೂರು ದಿನದಿಂದ ಅನ್ನ, ನೀರು ಸಿಗುತ್ತಿಲ್ಲ. ಇಲ್ಲಿನ ಸೈನಿಕರು ತಮ್ಮಲ್ಲಿರುವ ಕೆಲ ಆಹಾರ ಪದಾರ್ಥಗಳನ್ನು ಮೊದಲ ದಿನ ಕೊಟ್ಟಿದ್ದರು. ನಮ್ಮ ಬಸ್ನ ಮಾಲೀಕರು ತಂದಿದ್ದ ಅಕ್ಕಿಯಿಂದ ಅನ್ನ ಬೇಯಿಸಿಕೊಟ್ಟರು. ಅದೆಲ್ಲ 2ನೇ ದಿನಕ್ಕೆ ಖಾಲಿಯಾಗಿದೆ. ಇಂಟರ್ನೆಟ್, ಮೊಬೈಲ್ ಯಾವುದೂ ಕಾರ್ಯ ನಿರ್ವಹಿಸುತ್ತಿಲ್ಲ. ಜಮ್ಮು- ಕಾಶ್ಮೀರ ಸರ್ಕಾರ ಯಾವುದಕ್ಕೂ ಸ್ಪಂದಿಸುತ್ತಿಲ್ಲ. ಇಲ್ಲಿರುವ 5000ಕ್ಕೂ ಪ್ರಯಾಣಿಕರಲ್ಲಿ ಹೆಚ್ಚಿನವರು ಮಹಿಳೆ ಮತ್ತು ಮಕ್ಕಳು. ನಿಷೇಧಾಜ್ಞೆ ತೆರವಾದ ಬಳಿಕ ಇಲ್ಲಿಂದ ಕಳುಹಿಸುವುದಾಗಿ ಶ್ರೀನಗರದ ಅಧಿಕಾರಿಗಳು ಹೇಳಿದ್ದಾರೆಂದು ಸಂಪಗಾವಿ ತಿಳಿಸಿದರು.

ಡಾ| ತೆಲಸಂಗ ಕುಟುಂಬವೂ ಶ್ರೀನಗರದಲ್ಲಿ: ಬಾಗಲಕೋಟೆ ನಗರದ ಖ್ಯಾತ ವೈದ್ಯೆ, ಬಾಗಲಕೋಟೆ ಸ್ವತ್ಛ ಹಾಗೂ ಹಸಿರು ನಗರದ BSW ತಂಡದ ಸದಸ್ಯರಾಗಿರುವ ಡಾ| ಜಯಶ್ರೀ ತೆಲಸಂಗ, ಡಾ| ಶ್ರೀಕಾಂತ ತೆಲಸಂಗ ಹಾಗೂ ಪುತ್ರಿ ಸೋನಾಲಿ ಅವರೂ ಅಮರನಾಥ ಯಾತ್ರೆಯಿಂದ ವಾಪಸಾಗುವ ದಾರಿಯಲ್ಲಿ ಶ್ರೀನಗರದಿಂದ 80 ಕಿ.ಮೀ. ದೂರದಲ್ಲಿರುವ ಸೋನಮಾರ್ಗದ ಸೈನಿಕರ ಕ್ಯಾಂಪ್ನಲ್ಲಿ ತಂಗಿದ್ದಾರೆ.

ಇಲ್ಲೇನೂ ಸಮಸ್ಯೆಯಿಲ್ಲ, ತಾವು ಸುರಕ್ಷಿತವಾಗಿರುವುದಾಗಿ ಡಾ| ಶ್ರೀಕಾಂತ ತೇಲಸಂಗ ಉದಯವಾಣಿಗೆ ತಿಳಿಸಿದರು. ವಿಜಯಪುರದ 17 ಯಾತ್ರಾರ್ಥಿಗಳು ಶ್ರೀನಗರದ ಗ್ರ್ಯಾಂಡ್ ಕಾಶ್ಮೀರ್ ಹೊಟೇಲ್ನಲ್ಲಿ ಆಶ್ರಯ ಪಡೆದಿದ್ದಾರೆ.ಇಲ್ಲಿಯೂ ಆಹಾರಕ್ಕಾಗಿ ಪರದಾಟ ಮುಂದುವರಿದಿದೆ.ದಕ್ಷಿಣ ಕನ್ನಡ ಜಿಲ್ಲೆ ಕಿನ್ನಿಗೋಳಿಯ ಪ್ರಶಾಂತ್ ಪುರೋಹಿತ್ ಎಂಬುವವರು 9 ಜನರನ್ನು ಕರೆದುಕೊಂಡು ಭಾನುವಾರ ರಾತ್ರಿ ದಿಲ್ಲಿಯಿಂದ ಜಮ್ಮುವಿಗೆ ಪ್ರಯಾಣಿಸಿದ್ದಾರೆ. “ಇನ್ನೂ ಮೂರು ದಿನ ಜಮ್ಮುವಿನಲ್ಲಿರುತ್ತೇವೆ. ಜಮ್ಮುವಿನಲ್ಲಿ ಯಾವುದೇ ಸಮಸ್ಯೆ ಇಲ್ಲ’ ಎಂದು ಪ್ರಶಾಂತ್ ತಿಳಿಸಿದ್ದಾರೆ.

ಯಡಿಯೂರಪ್ಪ ಪತ್ರ: ಅಮರನಾಥ ಯಾತ್ರೆಗೆ ತೆರಳಿರುವ ಕರ್ನಾಟಕದ ಯಾತ್ರಾರ್ಥಿಗಳ ಸುರಕ್ಷತೆ ಹಾಗೂ ಅವರನ್ನು ಗಲಭೆಗ್ರಸ್ಥ ಪ್ರದೇಶದಿಂದ ಹೊರತರಲು ಅಗತ್ಯ ಕ್ರಮ ಕೈಗೊಳ್ಳುವಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಕೇಂದ್ರ ಸರ್ಕಾರಕ್ಕೆ ಅವರಿಗೆ ಪತ್ರ ಬರೆದಿದ್ದಾರೆ.

ಕನ್ನಡಿಗ ಯಾತ್ರಾರ್ಥಿಗಳ ರಕ್ಷಣೆ ಮತ್ತು ಸುರಕ್ಷತೆಯ ದೃಷ್ಟಿಯಿಂದ ಕೇಂದ್ರ ಸರ್ಕಾರ ಹಾಗೂ ಜಮ್ಮು-ಕಾಶ್ಮೀರ ಸರ್ಕಾರಕ್ಕೆ ಅಗತ್ಯ ಸಹಕಾರ ನೀಡಲು ರಾಜ್ಯ ಬಿಜೆಪಿ ಘಟಕ ಸಿದ್ಧವಿದೆ ಎಂದು ಅವರು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.

ಕನ್ನಡಿಗರು ಸುರಕ್ಷಿತ: ತಿವಾರಿ ಜಮ್ಮು-ಕಾಶ್ಮೀರ ಗಲಭೆ ಕುರಿತು ಆತಂಕಪಡಬೇಕಿಲ್ಲ. ಅಮರನಾಥ ಯಾತ್ರೆಗೆ ತೆರಳಿರುವ ಕನ್ನಡಿಗರು ಸುರಕ್ಷಿತವಾಗಿದ್ದಾರೆ ಎಂದು ಕರ್ನಾಟಕ ಭವನದ ನಿವಾಸಿ ಆಯುಕ್ತ ಅತುಲ್ ಕುಮಾರ್ ತಿವಾರಿ ಸ್ಪಷ್ಟಪಡಿಸಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆಯಂತೆ ಜಮ್ಮು-ಕಾಶ್ಮೀರದ ಹಿರಿಯ ಅಧಿಕಾರಿಗಳು, ಕಂಟ್ರೋಲ್ ರೂಂನೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ. ಜಮ್ಮು-ಕಾಶ್ಮೀರದಿಂದ ದೆಹಲಿಗೆ ಆಗಮಿಸುವ ಕನ್ನಡಿಗರ ಸುರಕ್ಷತೆಗೆ ಕರ್ನಾಟಕ ಭವನದ ಅಧಿಕಾರಿಗಳ ತಂಡ ರಚಿಸಲಾಗಿದೆ. ಕರ್ನಾಟಕದ ಯಾತ್ರಿಕರಿಗೆ ಸಂಬಂಧಿಸಿದ ಮಾಹಿತಿಗೆ ತಂಡದ ಅಧಿಕಾರಿಗಳಾದ ಅನೀಸ್ ಕೆ. ಜಾಯ್ ಮೊ:98683 93979, ಶ್ರೀಕಾಂತ ರಾವ್ ಮೊ: 98683 93971, ರೇಣುಕುಮಾರ್ ಮೊ: 98683 93953 ಸಂಪರ್ಕಿಸಬಹುದು. ಅಲ್ಲದೆ, ಜಮ್ಮು-ಕಾಶ್ಮಿರದ ಕಂಟ್ರೋಲ್ ರೂಂ 01942506479ಗೆ ಕೂಡ ಮಾಹಿತಿ ನೀಡಬಹುದೆಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹಿಂಸಾಚಾರದಿಂದಾಗಿ ಬಸ್ಗಳಲ್ಲೇ ಇರುವಂತೆ ಸೂಚನೆ ನೀಡಿರುವ ಭದ್ರತಾ ಪಡೆಗಳು ನಮಗೆ ಅಗತ್ಯ ರಕ್ಷಣೆಯನ್ನು ನೀಡಿವೆ ಎಂದು ಕನ್ನಡಿಗ ಯಾತ್ರಾರ್ಥಿಗಳು ನನ್ನ ಬಳಿ ಹೇಳಿಕೊಂಡಿದ್ದಾರೆ. ಇದರಿಂದಾಗಿಯೇ ಯಾತ್ರಾರ್ಥಿಗಳಿಗೆ ಯಾವುದೇ ಅನಾಹುತವಾಗಿಲ್ಲ. ಆದಾಗ್ಯೂ ಇವರ ಸುರಕ್ಷತೆಗೆ ತುರ್ತಾಗಿ ಕ್ರಮ ಕೈಗೊಳ್ಳಬೇಕೆಂದು ಕೇಂದ್ರಕ್ಕೆ ಮನವಿ ಮಾಡಿದ್ದೇನೆ.

– ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top