fbpx
Awareness

ಸಂಶೋಧನೆ ಹೆಸರಿನಲ್ಲಿ ಬೇಕೆ ಪ್ರಾಣಿಗಳ ಮಾರಣಹೋಮ?

ಆಧುನಿಕತೆ ಬೆಳೆದಂತೆ ಮಾನವ ಕೂಡ ಬೆಳೆಯುತ್ತಿದ್ದಾನೆ, ಹಾಗೆಯೇ ಆಧುನಿಕತೆಗೆ ಒಗ್ಗಿಕೊಂಡು ಹಲವಾರು ಕಾಯಿಲೆಗಳಿಗೂ ತುತ್ತಾಗುತ್ತಿದ್ದಾನೆ. ಇಂಥಹ ಖಾಯಿಲೆಗಳನ್ನು ವಾಸಿ ಮಾಡುವ ಸಲುವಾಗಿ ಔಷದ ಕ್ಷೇತ್ರದಲ್ಲಿ ಹೊಸ ಹೊಸ ಔಷಧಗಳ ಅವಿಷ್ಕಾರಕ್ಕಾಗಿ ಸಂಶೋಧನೆಗಳು ನಡೆಯುತ್ತಲೇ ಇದೆ. ಹೀಗೆ ಅವಿಷ್ಕಾರಗೊಂಡ ಔಷಧಗಳು ಮಾರುಕಟ್ಟೆಗೆ ಬರುವ ಮುನ್ನ ಅನೇಕ ಪರೀಕ್ಷೆಗಳಿಗೆ ಒಳಗಾಗಬೇಕು. ಹೊಸ ಔಷಧಿ ಮನುಷ್ಯನ ಮೇಲೆ ಮಾಡುವ ಅಡ್ಡ ಪರಿಣಾಮ ಏನು? ಕೊಡಬೇಕಾದ ಪ್ರಮಾಣ (ಡೋಸ್) ಎಲ್ಲವನ್ನು ನಿರ್ಧರಿಸಬೇಕು. ಇದನ್ನು ಹೇಗೆ ನಿರ್ಧರಿಸುವುದು? ಯಾರ ಮೇಲೆ ಪ್ರಯೋಗಿಸುವುದು? ಈಗ ಹಲವಾರು ಪಾಶ್ಚಿಮಾತ್ಯ ದೇಶಗಳಲ್ಲಿ ಮಾನವರ ಮೇಲೆ ಇದನ್ನು ಪ್ರಯೋಗಿಸಿ ಅಧ್ಯಯನ ನಡೆಸುವುದನ್ನು ನಿಷೇಧಿಸಲಾಗಿದೆ. ಹಾಗಾದರೆ ಯಾರ ಮೇಲೆ ಪ್ರಯೋಗ ಮಾಡಲಾಗುತ್ತದೆ? ಈಗ ಭಾರತವೂ ಸೇರಿದಂತೆ ಇಂಥಹ ಅಧ್ಯಯನಗಳಿಗೆ ಬಲಿಯಾಗುತ್ತಿರುವುದು ಲಕ್ಷಾಂತರ ಮೂಕ ಪ್ರಾಣಿಗಳೆಂದರೆ ನಿಮಗೆ ಆಶ್ಚರ್ಯವಾಗಬಹುದು!. ಆಶ್ಚರ್ಯವಾದರೂ ಇದು ಸತ್ಯ! ಈ ಬರ್ಬರ ಕ್ರೂರ ಕೃತ್ಯಕ್ಕೆ ನೀಡಿರುವ ಹೆಸರು ‘ವಿವಿಸೆಕ್ಷನ್’ ಇದು ಸಂಶೋಧನಾ ಹೆಸರಿನ ಪರ್ಯಾಯ ಪದವೆಂದು ಪ್ರಾಣಿಗಳ ಮೇಲೆ ಪ್ರಯೋಗ ಮಡುವ ಪ್ರಯೋಗಾಲಯಗಳು. ಹೆಸರನ್ನು ಸಮರ್ಥಿಸಿಕೊಳ್ಳುತ್ತವೆ ಬೇರೆ!

animal-testing

ಆದರೆ ವಾಸ್ತವವೇ ಬೇರೆ! ನಿಮಗೆ ಗೊತ್ತೆ ಮಂಗ, ಮೊಲ ಹಾಗೂ ಇಲಿಯನ್ನೊಳಗೊಂಡಂತೆ 100 ಮಿಲಿಯನ್‍ಗಿಂತ ಅಧಿಕ ಪ್ರಾಣಿಗಳು ಪ್ರಯೋಗಾಲಯಗಳಲ್ಲಿ ನಡೆಸುವ ಪ್ರಯೋಗಕ್ಕೆ ಬಲಿಯಾಗುತ್ತವೆ. ಈ ಪ್ರಯೋಗಗಳಲ್ಲಿ ಹಲವು ಫಲಪ್ರದವಾದರೆ, ಇನ್ನುಳಿದವುಗಳು ಅನುತ್ತಿರ್ಣವಾಗುತ್ತವೆ. ಆದರೆ ಈ ಪ್ರಯೋಗದ ಅಡ್ಡ ಪರಿಣಾಮವೆನು, ದೇಹದ ಮೇಲೆ ಏನು ಪರಿಣಾಮ ಬೀರುತ್ತಿದೆ ಎಂದರಿಯದ ಮುಗ್ಧ ಪ್ರಾಣಿಗಳು ತಮ್ಮ ಜೀವನವನ್ನ್ಲು ಬಲಿಕೊಡುತ್ತವೆ. ಪ್ರಪಂಚದಲ್ಲಿ ಅಷ್ಟೆ ಅಲ್ಲದೆ ಭಾರತದ ಕೆಲವು ವಿಶ್ವವಿದ್ಯಾಲಯಗಳು, ಕಾರ್ಪೊರೇಟ್ ಹಾಗೂ ಸರ್ಕಾರಿ ಪ್ರಯೋಗಾಲಯಗಳಲ್ಲಿ ಈ ಮುಗ್ಧ ಜೀವಿಗಳು ದಿನವೂ ತಮ್ಮ ಪ್ರಾಣ ತೆತ್ತುತ್ತಿವೆ.

ಪ್ರಾಣಿಗಳು ಸಹ ನಮ್ಮ ಹಾಗೆ ನೋವು ಮನೋವೈಜ್ಞಾನಿಕ ಯಾತನೆಯನ್ನು ಅಭಿವ್ಯಕ್ತ ಪಡಿಸುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ! ಆದರೆ ಪ್ರಾಣಿಗಳು ಸಸ್ತನಿಯಾದರೂ, ಪ್ರಾಣಿಗಳ ಹಾಗೂ ಮನುಷ್ಯರ ವರ್ಗಪ್ರಭೇಧದಲ್ಲಿ ಅಜಗಜಾಂತರ ವ್ಯತ್ಯಾಸವಿದೆ. ಹಾಗಾಗಿ ಮಂಗ, ಇಲಿ, ಮೊಲ, ನಾಯಿ, ಮೊದಲಾದ ಪ್ರಾಣಿಗಳ ಮೇಲೆ ಔಷದಗಳನ್ನು ಪ್ರಯೋಗಿಸಿ. ಅವು ಸುರಕ್ಷಿತ ಎಂದು ದಾಖಲೆಗಳನ್ನು ಕಲೆ ಹಾಕಿ ಮನುಷ್ಯನ ಮೇಲೆ ಅವುಗಳನ್ನು ರೋಗಿಗಳಿಗೆ ಬಳಸುವುದು ಸೂಕ್ತವಲ್ಲ ಎಂದು ಹಲವು ವಿಜ್ಞಾನಿಗಳು ಅಭಿಪ್ರಾಯ ಪಟ್ಟಿದ್ದಾರೆ. ವಾಸ್ತವವಾಗಿ ಪ್ರಾಣಿಗಳ ಮೇಲೆ ಪ್ರಯೋಗಿಸಿದ 10 ಔಷಧಿಗಳಲ್ಲಿ 9 ಔಷಧಿಗಳು ಸುರಕ್ಷಿತ ಹಾಗೂ ಪರಿಣಾಮಕಾರಿಯಾದರೂ, ಅದು ಮನುಷ್ಯನ ಮೇಲೆ ತನ್ನ ಪ್ರಭಾವ ಬೀರದೇ ಹೋಗಬಹುದು, ಅಥವಾ ಅಡ್ಡಪರಿಣಾಮ ಬೀರಬಹುದು. ಹಿಂದೆ ಹೆಚ್.ಐ.ವಿಯನ್ನು ತಡೆಗಟ್ಟಲು 90 ಲಸಿಕೆಗಳು ವಿಫಲವಾಗಿದ್ದು ಈಗ ಇತಿಹಾಸ ಕೆಲವೊಂದು ಸಂದರ್ಭಗಳಲ್ಲಿ ಈ ಲಸಿಕೆಗಳು ಈ ವೈರಸ್‍ಗಳು ದ್ವಿಗುಣಗೊಳ್ಳುವಂತೆ ಮಾಡಿದ ನಿದರ್ಶನಗಳು ಇದೆ. ಪ್ರಾಣಿಗಳ ಮೇಲೆ ಹೊಸ ಔಷಧಗಳು ಪ್ರಭಾವ ಬೀರುತ್ತವೆ ಎಂದ ಮಾತ್ರಕ್ಕೆ ಮನುಷ್ಯರಲ್ಲಿ ಅವು ಪ್ರಭಾವ ಬೀರುತ್ತವೆ ಎಂಬುದು ವಾಸ್ತವಕ್ಕೆ ದೂರವಾದ ಮಾತು!

ಮನುಷ್ಯರಿಗಾಗಿ ಅಭಿವೃದ್ಧಿಪಡಿಸುವ ಔಷಧಿಗಳನ್ನು ಪ್ರಾಣಿಗಳ ಮೇಲೆ ಪ್ರಯೋಗ ಮಾಡುವುದರಿಂದ ಮನುಷ್ಯನ ಬಳಕೆಗೆ ಅವು ಸುರಕ್ಷಿತ ಎಂದು ಪ್ರಮಾಣಿಕರಿಸಲು ಬರುವುದಿಲ್ಲ ಎಂದು ಇತ್ತಿಚೆಗೆ ವಿಜ್ಞಾನಿಗಳೇ ಒಪ್ಪಿಕೊಂಡಿದ್ದಾರೆ. ಕಳೆದ ಕೆಲವು ತಿಂಗಳುಗಳ ಹಿಂದೆ ಅಮೇರಿಕಾದ ನ್ಯಾಷನಲ್ ಹೆಲ್ತ್ ಇನ್ಸಿಟಿಟ್ಯೂಟ್‍ನ ಮಾಜಿ ನಿರ್ದೇಶಕರಾದ ಡಾ|| ಇಲಿಯಾಸ್ ಜರಹೂನಿ ಮನುಷ್ಯರ ಬಳಕೆಗೆ ಅಭಿವೃದ್ಧಿ ಪಡಿಸಿದ ಔಷಧಿಗಳು ಪ್ರಾಣಿಗಳ ಮೇಲೆ ಪ್ರಯೋಗಿಸಿ ಸಂಶೋಧನೆ ನಡೆಸುವುದರಿಂದ ಅಷ್ಟೊಂದು ಫಲಪ್ರದ ಫಲಿತಾಂಶ ದೊರೆಯುದಿಲ್ಲ ಎಂದು ಅಭಿಪ್ರಾಯ ಪಟ್ಟಿದ್ದಾರೆ. ರೋಗ ವಿಧಾನ ಶಾಸ್ತ್ರವನ್ನು ಅಭ್ಯಸಿಸಲು ಈ ಔಷಧಿಗಳನ್ನು ಮನುಷ್ಯರ ಮೇಲೆ ಪ್ರಯೋಗಿಸಬೇಕೆ ಹೊರತು, ಪ್ರಾಣಿಗಳ ಮೇಲಲ್ಲ. ಇದು ಇನ್ಮುಂದೆ ನಿಲ್ಲಬೇಕು. ಪ್ರಾಣಿಗಳ ಮೇಲೆ ಪ್ರಯೋಗಿಸುವುದಕ್ಕಿಂತ ಆಧುನಿಕ ವಿಧಾನಗಳನ್ನು ಕಂಡು ಹಿಡಿಯಬೇಕು ಎಂದು ಅಭಿಪ್ರಾಯ ಪಟ್ಟಿದ್ದಾರೆ.

alt-living-brain-02

ಅನೇಕ ಮಾನವೀಯ ಹಾಗೂ ಪರಿಣಾಮಕಾರಿಯಾದ ಪ್ರಾಣಿಗಳನ್ನು ಬಳಸದೇ ವೈದ್ಯಕೀಯ ಅವಿಷ್ಕಾರಗಳನ್ನು ನೆಡಸಬಹುದಾದ ಅನೇಕ ಅಧುನಿಕ ವೈದ್ಯಕೀಯ ವಿಧಾನಗಳು ಈಗ ಲಭ್ಯವಿದೆ. ಮುಗ್ಧ ಪ್ರಾಣಿಗಳನ್ನು ಇಂತಹ ವೈದ್ಯಕೀಯ ಪ್ರಯೋಗಗಳಿಗೆ ಒಳಪಡಿಸುವ ಬದಲು, ಮಾನವರ ಜೀವಕೋಶಗಳ ಸ್ನಾಯುಗಳನ್ನು ಉಪಯೋಗಿಸಿ ಹೊಸ ಔಷಧಿಗಳು ಮನುಷ್ಯರ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತವೆ ಎಂಬುದನ್ನು ಅಧ್ಯಯನ ಮಾಡಬಹುದಾಗಿದೆ. ಪ್ರಾಣಿಗಳ ಮಾರಣ ಹೋಮ ಮಾಡುವ ಬದಲು ಮನುಷ್ಯರ ಸ್ನಾಯುಗಳ ಮೇಲೆ ಜೀವಕೋಶದ ಮೇಲೆ ವೈದ್ಯಕೀಯ ಅಧ್ಯಯನ ನಡೆಸುವುದು ಒಳಿತಲ್ಲವೆ? ಲೆಕ್ಕವಿಲ್ಲದಷ್ಟು ಮಂಗಗಳು, ನಾಯಿಗಳು, ಮೊಲಗಳು ಹಾಗೂ ಇನ್ನಿತರ ಪ್ರಾಣಿಗಳು ವೈದ್ಯಕೀಯ ಅಧ್ಯಯನಕ್ಕೊಳದಾಗ ಔಷಧೀಯ ಅಡ್ಡಪರಿಣಾಮವಾಗಿ ಕಣ್ಣು ಕಳೆದುಕೊಳ್ಳುತ್ತವೆ. ದೇಹವನ್ನು ಸೀಳಿಸಿಕೊಳ್ಳುತ್ತವೆ, ದೇಹವನ್ನು ಸುಡಿಸಿಕೊಳ್ಳುತ್ತವೆ. ವಿಷಪ್ರಾಶನ ಮಾಡಿಸಿಕೊಳ್ಳುತ್ತವೆ. ಕೆಲವೊಮ್ಮೆ ಅಧ್ಯಯನದ ಒಂದು ಭಾಗವಾಗಿ ಅವುಗಳನ್ನು ಉಪವಾಸವಿರಿಸಲಾಗುತ್ತಿದ್ದರೂ, ಇವೆಲ್ಲಲ್ಲವೂ ಪ್ರಯೋಗಾಲಗಳ ಮುಚ್ಚಿದ ಬಾಗಿಲ ಹಿಂದೆ ನಡೆಯುತ್ತಿರುವುದರಿಂದ ಹೊರ ಜಗತ್ತಿಗೆÀ ಈ ಮೂಕಪ್ರಾಣಿಗಳ ರೋದನ ಕೇಳಿಸುವುದೇ ಇಲ್ಲ.! ಗೃಹಪಯೋಗಿ ವಿಂಡೋ ಕ್ಲಿನರ್‍ಗಳ ಪರಿಕ್ಷೆಗೆ ಈ ಮೂಕಪ್ರಾಣಿಗಳು ತಮ್ಮ ದೇಹವನ್ನು ಒಡ್ಡಿಕೊಳ್ಳುತ್ತಿವೆ ಎಂದರೆ ನಿಮಗೆ ಆಶ್ಚರ್ಯವಾಗಬಹುದು. ಆಶ್ಚರ್ಯವಾದರೂ ಇದು ಸತ!! ತಂಪುಪಾನಿಯಗಳು ಹಾಗೂ ಕೆಲವೊಂದು ಆಹಾರ ಪದಾರ್ಥಗಳು, ಅಷ್ಟೇ ಏಕೆ ಚಹಾದ ಪ್ರಯೋಗಕ್ಕೂ ಈ ಪ್ರಾಣಿಗಳನ್ನು ಬಳಸಲಾಗುತ್ತದೆ.

ಈ ಮುಗ್ಧ ಪ್ರಾಣಿಗಳಿಗೂ ಬದುಕುವ ಹಕ್ಕು ಇದೆಯಲ್ಲವೇ? ಪ್ರಾಣಿಗಳು ಚಿಕ್ಕದಿರಲಿ ಅಥವಾ ದೊಡ್ಡವಿರಲಿ ಇವುಗಳನ್ನು ತಿನ್ನುವುದಕ್ಕಾಗಲೀ ಪ್ರಯೋಗಕ್ಕಾಗಲೀ ಮನೋರಂಜನೆಗಾಗಲೀ ಅವುಗಳನ್ನು ಬಲಿಪಶು ಮಾಡುವುದು ಯಾರು ಒಪ್ಪುವಂತಹ ವಿಷಯವಲ್ಲ, ನಮ್ಮ ಭಾರತದ ಪ್ರಯೋಗಾಲಗಳಲ್ಲೆ ಹಲವಾರು ನಾಯಿಗಳ ಮೇಲೆ ಬಲವಂತವಾಗಿ ವಿಷವುಣಿಸಿ ಅದರ ಪರಿಣಾಮವನ್ನು ದಾಖಲಿಸಲಾಗುತಿದೆ. ಕೆಲವು ಜಾತಿಯ ಬೇಟೆನಾಯಿಗಳ (BEAGLES) ಗಳ ಕಾಲನ್ನು ಕತ್ತರಿಸಿ ಅದರಲ್ಲಿ ಟ್ರಾನ್ಸ್‍ಮೀಟರ್ಸ್ ಗಳನ್ನು ಕೂಡಿಸುವರು. ಅವುಗಳ ಜನನಾಂಗದಳಲ್ಲಿ ನಳಿಕೆಗಳನ್ನು ತೂರಿಸಿ ಅದರಲ್ಲಿ ನಿರಂತರವಾಗಿ ಔಷಧಿಗಳನ್ನು ಸೇರಿಸಿ ಅಧ್ಯಯನ ಮಾಡುವ ಭರ್ಬರ ಪ್ರಯೋಗಗಳು ನಡೆಯುತ್ತಿದ್ದು, ಈ ಮೂಕ ಪ್ರಾಣಿಗಳ ಮೂಕವೇದನೆ ಮುಚ್ಚಿದ ಪ್ರಯೋಗಾಲಯಗಳ ಬಾಗಿಲ ಹಿಂದೆ ಕ್ಷೀಣಿಸುತ್ತಿದೆ.

ಇಂತಹ ಪ್ರಾಣಿಗಳ ಮೂಕರೋಧನ, ಇವುಗಳ ಮೇಲಿನ ಪ್ರಯೋಗಗಳು ನಿಲ್ಲಬೇಕೆಂದರೆ ಇಂಥಹ ಪ್ರಯೋಗಗಳು ನಡೆಯದಂತೆ ಸಾರ್ವಜನಿಕರು, ಪ್ರಾಣಿಪ್ರಿಯರು ಪ್ರತಿಭಟಿಸಬೇಕು. ಇದಕ್ಕಾಗಿ ಹಲವಾರು ಸಂಘ ಸಂಸ್ತೆಗಳು ಶ್ರಮಿಸುತ್ತಿದೆ. ಅವುಗಳಲ್ಲಿ ಮುಖ್ಯವಾಗಿ PETA (People for the ethical treatment of the animal) ಸಹ ಒಂದು. ಈ ಸಂಸ್ಥೆಯು 70 ಬೇಟೆನಾಯಿಗಳನ್ನು ಪ್ರಯೋಗಕ್ಕೆ ಒಳಪಡುವ ಮುನ್ನವೇ ಸಂರಕ್ಷಿಸಿದೆ ಪ್ರಪಂಚದಾದ್ಯಂತ ಅಭಿಯಾನ ನಡೆಸಿದ “ಪೇಟಾ”ಕ್ಕೆ ಧ್ವನಿಗೂಡಿಸಿದ 50 ಸಾವಿರಕ್ಕೂ ಹೆಚ್ಚು ಜನ ಇ-ಮೇಲ್ ಕಳುಹಿಸುವ ಮೂಲಕ ಈ ನಾಯಿಗಳನ್ನು ಬಿಡುಗಡೆ ಮಾಡಬೇಕೆಂದು ಒತ್ತಾಯ ಹೇರಿದ್ದರು. ನಟ ತ್ರಿಫಾ ಕೃಷ್ಣನ್ ಸೇರಿದಂತೆ ಅನೇಕ ಸೆಲಿಬ್ರಟಿಗಳು ಇದರಲ್ಲಿ ಭಾಗಿಯಾಗಿ ಒತ್ತಡ ಹೇರಿದ ಮೇಲೆ ಸರ್ಕಾರ ಈ ಮುಗ್ಧ ನಾಯಿಗಳನ್ನು ಪ್ರಯೋಗಾಲಯಗಳಿಂದ ಬಿಡುಗಡೆ ಮಾಡಿದೆ. ಬೆಂಗಳೂರುನಗರದಲ್ಲಿರುವ ಥಿರಫೆಟಿಕ್ ಔಷಧಿಯ ಪ್ರಯೋಗಾಲಯವೂ ಸಹ ಈ ನಾಯಿಗಳನ್ನು ಆಮದು ಮಾಡಿಕೊಳ್ಳುತ್ತಿವೆ. ಎಂದು “ಪೇಟಾ” ಹೇಳಿದೆ. ಅಷ್ಟೆ ಅಲ್ಲ ಪ್ರಯೋಗಾಲಯ ಈ ನಾಯಿಗಳನ್ನು ಆಮದು ಮಾಡಿಕೊಳ್ಳುವಾಗ ಈ ನಾಯಿಗಳನ್ನು ಸಾಕುವ ಉದ್ದೇಶಕ್ಕೆಂದು ಆಮದು ದಾಖಲೆಗಳಲ್ಲಿ ಸುಳ್ಳು ವಿವರ ನೀಡಿದ್ದು, ಅಷ್ಟೆ ಅಲ್ಲ ಈ ನಾಯಿಗಳನ್ನು ರಫ್ತು ಮಾಡುವ ಚೈನಾದ ಕಂಪನಿ “ಕೆಥೆ ಫೆಸಿಫಿಕ್” ಏರ್‍ಲೈನ್ಸ್,ಗೆ ಈ ನಾಯಿಗಳನ್ನು ಪ್ರಯೋಗಾಲಯದಲ್ಲಿ ಪ್ರಯೋಗಾಕ್ಕಾಗಿ ಅಲ್ಲ ಎಂದು ಸುಳ್ಳು ಪ್ರಮಾಣ ಪತ್ರವನ್ನು ನೀಡಿದ್ದು, ಇವುಗಳನ್ನೆಲ್ಲ ತಿಳಿದ ಪೇಟಾ ಸರ್ಕಾರಕ್ಕೆ ಸುಳ್ಳು ದಾಖಲೆಗಳನ್ನು ತೋರಿಸಿ ಮನವರಿಕೆ ಮಾಡಿದ ನಂತರ ಈ ಮುಗ್ಧ ನಾಯಿಗಳು ಬಿಡುಗಡೆ ಹೊಂದಿರುವುದೇ ಅಲ್ಲ! “ಪೇಟಾ”ದ ಉಗ್ರ ಹೋರಾಟದ ಫಲವಾಗಿ ಈ ನಾಯಿಗಳು ಶ್ವಾನಪ್ರಿಯರ ಮನೆಯಲ್ಲಿ ಆಶ್ರಯ ಪಡೆದು ಸುಖಜೀವನ ನಡೆಸುತ್ತಿವೆ. ಪೇಟಾ ಈ ನಾಯಿಗಳ ರಕ್ಷಣೆ ಮಾಡದೆ ಹೋಗಿದ್ದರೆ ಯಾವ ಔಷಧೀಯ ಅಡ್ದ ಪರಿಣಾಮಕ್ಕೊಳಗಾಗಿ ಪ್ರಯೋಗಾಲಯಲಯದ ಬಾಗಿಲ ಹಿಂದೆ ನರಳುತ್ತಿದ್ದವೋ ಏನೋ? ಈ ನಾಯಿಗಳೇನೋ ಅದೃಷ್ಟ ಮಾಡಿದ್ದವು ಆದರೆ ಹಲವಾರು ದುರಾದೃಷ್ಟ ಮೊಲ ಇಲಿ, ಮಂಗಗಳು ಇನ್ನು ಜೀವತ್ತೆತ್ತುತಲೇ ಇವೆ.

ಈ ಪ್ರಾಣಿಗಳನ್ನು ವೈದ್ಯಕೀಯ ಅಧ್ಯಯನಕ್ಕೆ ಬಳಸಿಕೊಳ್ಳುವುದು ಅತ್ಯಂತ ಹೇಯ ಕೃತ್ಯವಾಗಿದೆ. ಜನಸಾಮಾನ್ಯರು ಪೇಟಾ ದಂತಹ ಸಂಘಸಂಸ್ಥೆಗಳೊಡನೆ ಕೈ ಜೋಡಿಸಿ ಇದನ್ನು ತಡೆಯಬೇಕಾಗಿದೆ. ಪೇಟಾ ಸಂಸ್ಥೆಯ ಪ್ರಯತ್ನ್‍ದ ಫಲವಾಗಿ ಪ್ರಪಂಚದಾದ್ಯಂತ ಮಂಗಗಳ ರಫ್ತನ್ನು ನಿಲ್ಲಿಸಲಾಗಿದೆ. ಈಗಾಗಲೇ ಏರ್ ಕೆನಡಾ, ಯುನೈಟೆಡ್ ಏರ್‍ಲೈನ್ಸ್, ವಿನ್ನೋಟ್ನಾಮ್ ಎರಲೈನ್ಸ್, ಫಿಲಿಪೈನ್ಸ್ ಎರ್‍ಲೈನ್ಸ್, ಚೀನಾದ ಇಸ್ಟರ್ನ್ ಏರ್ ಲೈನ್ಸ್‍ಗಳು ಪ್ರಯೋಗಕ್ಕಾಗಿ ಪ್ರಾಣಿಗಳ ಸಾಗಾಟವನ್ನು ನಿಷೇಧಿಸಿದೆ. ಕಳೆದ ದಶಕದ ಹಿಂದೆ “ಪೇಟಾ” ಹಾಗೂ ಕೆಲವಿಜ್ಞಾನಿಗಳು ಪದವಿ, ಪದವಿ ಪೂರ್ವ ಶಿಕ್ಷಣ ಪದ್ಧತಿ ವಿಜ್ಞಾನ ವಿಭಾಗದಲ್ಲಿ ಪ್ರಾಣಿಗಳ ದೇಹ ರಚನಾ ಶಾಸ್ತ್ರವನ್ನು ಅಭ್ಯಾಸ ಮಾಡಲು ಪ್ರಾಣಿಗಳ ದೇಹವನ್ನು ಛೇದಿಸುವುದನ್ನು (dissection) ನಿಷೇಧಿಸಲಾಯಿತು. ಹಿಗೆ ನಿಷೇದಿಸದ್ದಿದ್ದರೆ, ಅದೆಷ್ಟು ಕಪೆಗಳು ತಮ್ಮ ಜೀವ ಕಳೆದುಕೊಳ್ಳುತ್ತಿದ್ದವೋ? ಅಧುನಿಕ ವಿದಾನ ಹಾಗೂ ಕಂಪ್ಯೂಟರ್ ಇಮೇಜಿಂಗ್ ಹಾಗೂ ಮಾದರಿಗಳ ಮೂಲಕ ಈಗ ದೇಹರಚನಾ ಶಾಸ್ತ್ರವನ್ನು ಅಭ್ಯಾಸಮಾಡಿಸಲಾಗುತ್ತಿದೆ. ಇದೇ ಅಲ್ಲ ಪೇಟಾದ ಅಭಿಯಾನದ ಫಲವಾಗಿ ಡ್ರಗ್ ಕಂಟ್ರೋಲ್ ಜನರಲ್ ಆಫ್ ಇಂಡಿಯಾ ಇತ್ತೀಚೆಗೆ ಭಾರತದಲ್ಲಿ ಸೌಂದರ್ಯ ಸಾಧನಗಳನ್ನು ಪ್ರಾಣಿಗಳ ಮೇಲೆ ಪ್ರಯೋಗಿಸಿ ಪರೀಕ್ಷಿಸುವುದನ್ನು ನಿಷೇಧಿಸಿ ಆದೇಶ ಹೊರಡಿಸುವ ಮೂಲಕ ಪ್ರಪಂಚಕ್ಕೆ ಒಂದು ಸಂದೇಶವನ್ನು ರವಾನಿಸಿದ್ದಾರೆ. ಹಾಗಾಗಿ ಪ್ರಾಣಿಗಳ ಮೇಲೆ ನಡೆಯುವ ಈ ತರಹದ ಕೃತ್ಯಗಳು ಪ್ರಪಂಚದಾದ್ಯಂತ ನಿಷೇಧವಾಗುವ ಸಾಧ್ಯತೆ ಇದೆ. ಪ್ರಾಣಿಗಳ ವರ್ಗ ಪ್ರಭೇದಕ್ಕೂ ಹಾಗೂ ಮನುಷ್ಯರ ವರ್ಗಪ್ರಭೇದಕ್ಕೂ ಅಜಗಜಾಂತರ ವ್ಯತ್ಯಾಸವಿದ್ದು, ಪ್ರಾಣಿಗಳ ಮೇಲೆ ಔಷಧ ಪ್ರಯೋಗಿಸಿ ಫಲಪ್ರದವಾದರೆ ಅದು ಮನುಷ್ಯರ ಮೇಲೂ ಪರಿಣಾಮ ಬೀರುತ್ತದೆ ಎಂದು ಒಪ್ಪುವುದು ಸಾಧ್ಯವಿಲ್ಲ ಎಂದು ವಿಜ್ಞಾನಿಗಳೇ ಅಭಿಪ್ರಾಯಪಟ್ಟಿದ್ದಾರೆ. ಹಾಗಾಗಿ ಪ್ರಾಣಿಗಳ ಮೇಲೆ ನಡೆಯುತ್ತಿರುವ ಬರ್ಬರ ಪ್ರಯೋಗಗಳು ನಿಲ್ಲಬೇಕು. ಪ್ರಾಣಿಪ್ರಿಯರು ಸಾರ್ವಜನಿಕರು ಪೇಟಾದಂತಹ ಸಂಘಸಂಸ್ಥೆಗಳೊಡನೆ ಕೈ ಜೋಡಿಸಿ ಸಹಕರಿಸಿದಾಗ ಮಾತ್ರ ಈ ಮೂಕ ರೋದನೆಯನ್ನು ನಿಲ್ಲಿಸಲು ಸಾಧ್ಯ!!.

ಪ್ರಕಾಶ್ ಕೆ ನಾಡಿಗ್
ಶಿವಮೊಗ್ಗ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top