fbpx
Karnataka

ದುಃಖದ ನಡುವೆಯೂ ಸಿಎಂ ಸಭೆ!

 

ಬೆಂಗಳೂರು: ತಮ್ಮ ಹಿರಿಯ ಪುತ್ರ ರಾಕೇಶ್ ನನ್ನ ಕಳೆದುಕೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ದುಖಃದ ನಡುವೆಯೂ ತಮ್ಮ ನೋವಿಗೆ ಸ್ಪಂದಿಸಿದ ನಾಡಿನ ಜನತೆಗೆ, ರಾಜಕೀಯ ನಾಯಕರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಅಪಾರ ದುಃಖದ ನಡುವೆಯೂ ಅವರು ಯಾರು ಯಾರನ್ನ ಸ್ಮರಿಸಿದ್ದಾರೆ ನೀವೇ ಓದಿ…

ದುಃಖದ ನಡುವೆಯೂ ಸಿಎಂ ಸಭೆ!

ಬಹುಶಃ ಯಾವ ತಂದೆಯೂ ಹೀಗೆ ನಡೆದುಕೊಳ್ಳಲಾರ. ಮಗ ರಾಕೇಶ್ ಅವರ ಅಂತ್ಯಕ್ರಿಯೆ ಮುಗಿದು ಇಂದಿಗೆ ಮೂರು ದಿನ. ಇಂದು ಮೈಸೂರಿನ ಕಾಟೂರು ಫಾರ್ಮ್ ಹೌಸ್ ನ ರಾಕೇಶ್ ಸಮಾಧಿಯ ಬಳಿ ಕುಟುಂಬ ಸದಸ್ಯರೆಲ್ಲ ಸೇರಿ ಹಾಲುಮತದ ಸಂಪ್ರದಾಯದಂತೆ ಹಾಲು,ತುಪ್ಪ ಹಾಕಿ‌ ಪೂಜೆ ಮಾಡುವ ಸಾಧ್ಯತೆಯಿದೆ. ಆದರೆ ಸಿಎಂ ಸಿದ್ದರಾಮಯ್ಯ ಮಾತ್ರ ಅತ್ಯಂತ ದುಃಖದ ನಡುವೆಯೇ ಬೆಂಗಳೂರಿಗರ ಸಮಸ್ಯೆಗಳಿಗೆ ಸ್ಪಂದಿಸಲು ಅಧಿಕಾರಿಗಳ ಸಭೆ ನಡೆಸುತ್ತಿದ್ದಾರೆ. ಆ ಮೂಲಕ ತಮ್ಮ  ಕರ್ತವ್ಯವೇ ದೇವರು ಎಂಬುದನ್ನು ಸಾರುತ್ತ, ತಂದೆಯಾಗಿರುವುದಕ್ಕಿಂತ ಸಿಎಂ ಆಗಿ ರಾಜ್ಯದ ಜನರ ಸಮಸ್ಯೆಗೆ ಸ್ಪಂದಿಸುವುದೇ ಹೆಚ್ಚು ಸೂಕ್ತ ಎಂಬುದನ್ನ ಕರ್ತವ್ಯದ ಮೂಲಕ ತೋರಿಸಿದ್ದಾರೆ. ತಂದೆಯಾಗಿ ಮಗನ ಸಾವಿನ ಬಗ್ಗೆ ದುಃಖ ಇದ್ದರೂ ಅದನ್ನು ತೋರಿಸಿಕೊಳ್ಳದೆ ರಾಜ್ಯದ ಜನರ ಸಮಸ್ಯೆಗೆ ಇಂಥ ಸ್ಥಿತಿಯಲ್ಲೂ ಸ್ಪಂದಿಸುತ್ತಿರುವ ಅವರ ಕರ್ತವ್ಯನಿಷ್ಠ ಎಲ್ಲರ ಮೆಚ್ಚುಗೆಗೆ ಪಾತ್ರವಾಗುತ್ತಿದೆ.

ದುಖಃದ ನಡುವೆಯೂ ಕೃತಜ್ಞತೆ ಹೇಳಿದ ಸಿಎಂ!

“ನನ್ನ ಹಿರಿಮಗ ರಾಕೇಶ್ ಬೆಲ್ಜಿಯಂ ಪ್ರವಾಸಕ್ಕೆ ತೆರಳಿದ್ದ ಸಂದರ್ಭದಲ್ಲಿ ಹಠಾತ್ ಅನಾರೋಗ್ಯಕ್ಕೆ ತುತ್ತಾಗಿ ಚಿಕಿತ್ಸೆ ಫಲಕಾಣದೇ ತೀರಿಕೊಂಡದ್ದು ನನಗೆ ಮತ್ತು ನನ್ನ ಕುಟುಂಬವರ್ಗಕ್ಕೆ ಅಪಾರ ದುಃಖವನ್ನುಂಟು ಮಾಡಿದೆ. ರಾಕೇಶ್ ತನ್ನ ಪತ್ನಿ, ಇಬ್ಬರು ಮಕ್ಕಳು ಕುಟುಂಬಸ್ಥರನ್ನು ಮಾತ್ರವಲ್ಲ ಅವನನ್ನು ಪ್ರೀತಿಸುತ್ತಿದ್ದ ಲಕ್ಷಾಂತರ ಹಿತೈಷಿಗಳನ್ನು ಅಗಲಿಹೋಗಿದ್ದಾನೆ. ನಮ್ಮ ಕುಟುಂಬಕ್ಕೆ ಈ ಆಘಾತದಿಂದ ಹೊರಬರಲು ಬಹಳ ಕಾಲವೇ ಬೇಕಾಗಬಹುದು. ವೈಯಕ್ತಿಕವಾಗಿ ನನಗೆ ನನ್ನ ಮಗ ರಾಕೇಶನ ಅಗಲಿಕೆಯನ್ನು ಸಹಿಸಿಕೊಳ್ಳಲು ಅತ್ಯಂತ ಕಷ್ಟವಾಗಿದೆ.

 ರಾಕೇಶ‍‍ ನನ್ನು ದೂರದ ಬೆಲ್ಜಿಯಂ ದೇಶದ ಬ್ರಸೆಲ್ಸ್ ನ ಯೂನಿವರ್ಟಿಸಿ ಹಾಸ್ಪಿಟಲ್ ನಲ್ಲಿ ತೀವ್ರನಿಘಾ ಘಟಕದಲ್ಲಿ ನಾವು ಆರೈಕೆ ಮಾಡುತ್ತಿದ್ದಾಗ  ರಾಜ್ಯದ ಜನತೆ ಜಾತಿ,ಧರ್ಮ,ಪಕ್ಷ, ಪಂಥ ಎಂಬ ಭೇದ ಮಾಡದೆ ಒಳ್ಳೆಯದಾಗಲಿ ಎಂದು ಮನದುಂಬಿ ಹಾರೈಸಿದ್ದಾರೆ. ನಮ್ಮ ಕುಟುಂಬ ಕಡುದು:ಖದಲ್ಲಿರುವಾಗ ನಾಡಿನ ಜನತೆ ತೋರಿದ ಪ್ರೀತಿ, ಕಾಳಜಿ ಮತ್ತು ನೀಡಿದ ಮಾನಸಿಕ ಸ್ಥೈರ್ಯ ನನ್ನನ್ನು ಮೂಕನನ್ನಾಗಿ ಮಾಡಿದೆ . ಹಲವಾರು ಹಿತೈಷಿಗಳು ಮಂದಿರ,ಮಸೀದಿ, ಚರ್ಚುಗಳಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿರುವುದು ನನ್ನ ಗಮನಕ್ಕೆ ಬಂದಿದೆ. ಇಡೀ ಕರ್ನಾಟಕದ ಜನತೆಯನ್ನು ನನ್ನ ಕುಟುಂಬವೆಂದು ಬಗೆದಿರುವ ನನ್ನನ್ನು ಮತ್ತು ನನ್ನ ಕುಟುಂಬವನ್ನು ತಮ್ಮ ಕುಟುಂಬದ ಭಾಗವೆಂಬಂತೆ ಕಾಳಜಿ ತೋರಿದ ರಾಜ್ಯದ ಸಹೃದಯಿಗಳ ಈ ಪ್ರೀತಿಯನ್ನು ನಾನೆಂದೂ ಮರೆಯಲಾರೆ.

 ಕರ್ನಾಟಕದ ಮುಖ್ಯಮಂತ್ರಿಯೊಬ್ಬರು ಹೀಗೆ ಆಸ್ಪತ್ರೆಯಲ್ಲಿ ತಮ್ಮ ಮಗನ ಆರೈಕೆಯಲ್ಲಿದ್ದಾರೆ ಎಂಬ ಸುದ್ದಿ ತಿಳಿದೊಡನೆಯೇ ವಿಜಯೇಂದ್ರ ಎಂಬ ಬೆಂಗಳೂರು ಮೂಲದ ಬೆಲ್ಜಿಯಂ ನಿವಾಸಿ ಯುವಕ ಮತ್ತು ಅವರ ಪತ್ನಿ ತಾವಾಗಿ ಬಂದು ನಮಗೆ ನೀಡಿದ ನೆರವನ್ನು ನಾನು ಮರೆಯಲಾರೆ. ಅವರು ತಮ್ಮ ಮನೆಯಿಂದ ಅಡುಗೆಯನ್ನು ಸಹ ಮಾಡಿಕೊಂಡು ಬಂದು ನಮಗೆ ನೀಡುತ್ತಿದ್ದುದು ನನಗೆ ಹೃದಯ ತುಂಬಿ ಬಂದ ಕ್ಷಣವಾಗಿತ್ತು. ವಿಜೇಂದ್ರ ಅವರ ಈ ಅಭಿಮಾನ – ಪ್ರೀತಿಗೆ ಎಷ್ಟು ಕೃತಜ್ಞತೆ ಸಲ್ಲಿಸಿದರೂ ಕಡಿಮೆಯೇ.

ಬಹು ಅಂಗಾಗಗಳ ವಿಫಲತೆಯ ಕಾರಣದಿಂದ ರಾಕೇಶ್ ನನ್ನು ನಾವು ಉಳಿಸಿಕೊಳ್ಳಲಾರದೇ ಹೋದೆವು. ನನ್ನ ಮಗನ ಪಾರ್ಥಿವ ಶರೀರವನ್ನು ಮೈಸೂರಿಗೆ ತಂದ ಮೇಲೆ, ಅಂತ್ಯಸಂಸ್ಕಾರಕ್ಕೆ ಮುಂಚಿನ ಗಳಿಗೆಗಳನ್ನು ಯಾವತ್ತೂ ನನ್ನ ಜೀವನದಲ್ಲಿ ಮರೆಯಲಾರೆ. . ರಾಜ್ಯದ ಮೂಲೆಮೂಲೆಗಳಿಂದ ಸಾವಿರಾರು ಜನರು ಬಂದು ರಾಕೇಶನ ಅಂತಿಮ ದರ್ಶನ ಮಾಡಿಕೊಂಡು ಹೋಗಿದ್ದಾರೆ. ಗಣ್ಯರು, ಹಿರಿಯರು, ಕಿರಿಯರು, ಮಕ್ಕಳು, ವೃದ್ಧರು ಲಕ್ಷಾಂತರ ಜನರು ಈ ಸಂದರ್ಭದಲ್ಲಿ ರಾಕೇಶ್ ನನ್ನು ಕೊನೆಯ ಬಾರಿಗೆ ಬೀಳ್ಕೊಡುವಾಗ ನನಗೆ ‘ಮನುಷ್ಯತ್ವ’ದ ಸಾಕ್ಷಾತ್ ದರ್ಶನವಾಯಿತು. ಪಕ್ಷ, ಪಂಗಡ, , ಜಾತಿ ಮತ ಎಲ್ಲವನ್ನೂ ಮೀರಿ ಸಾಗರದೋಪಾದಿಯಲ್ಲಿ ಅಲ್ಲಿ ನೆರೆದಿದ್ದ ಜನರು ಮಗ ರಾಕೇಶನ ಮೇಲೆ, ನಮ್ಮ ಮೇಲೆ ತೋರಿದ ಪ್ರೀತಿ ನನ್ನನ್ನು ಮೂಕನನ್ನಾಗಿಸಿದೆ. ಅವರೆಲ್ಲರಿಗೂ ನಮ್ಮ ಕುಟುಂಬ ಕೃತಜ್ಞವಾಗಿದೆ. ಈ ಸಂದರ್ಭದಲ್ಲಿ ಯಾರಿಗಾದರೂ ಸಣ್ಣಪುಟ್ಟ ಅನಾನೂಕೂಲತೆಗಳು ಆಗಿದ್ದಲ್ಲಿ ಅದಕ್ಕಾಗಿ ನಾನು ವಿಷಾದಿಸುತ್ತೇನೆ

ಮಾನ್ಯ ರಾಜ್ಯಪಾಲರಾದ ವಜುಭಾಯಿ ವಾಲಾ, ಕಾಂಗ್ರೆಸ್  ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್, ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಕೇರಳ ಮಾಜಿ ಮುಖ್ಯಮಂತ್ರಿ ಓಮನ್ ಚಾಂಡಿ, ರಾಜ್ಯದ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಎಚ್.ಡಿ.ಕುಮಾರಸ್ವಾಮಿ, ಜಗದೀಶ್ ಶೆಟ್ಟರ್, ಸದಾನಂದಗೌಡ, ಎಸ್.ಎಂ.ಕೃಷ್ಣ, ಎಲ್ಲಾ ಸಚಿವ ಸಹೋದ್ಯೋಗಿಗಳು ಎಲ್ಲಾ ಪಕ್ಷಗಳ ಅನೇಕ ಶಾಸಕರು, ಸಂಸದರು, ಹಲವು ಮಠಾಧೀಶರು, ಸಾಹಿತಿಗಳು, ಪತ್ರಕರ್ತರು ಈ ಸಂದರ್ಭದಲ್ಲಿ ಜತೆಗಿದ್ದು ಸಂತೈಸಿದರು.  ಅಲ್ಲದೇ ಅನೇಕ ಗಣ್ಯಮಾನ್ಯರು ಮಾಧ್ಯಮಗಳ  ಮೂಲಕ ಟ್ವಿಟರ್ ನಂತಹ ಸಾಮಾಜಿಕ ಮಾಧ‍್ಯಮಗಳ ಮೂಲಕವೂ ತಮ್ಮ ಸಂತಾಪ ತಿಳಿಸಿದ್ದಾರೆ. ಇಡೀ ರಾಜ್ಯದ ಜನತೆ ಮತ್ತು ಹೊರರಾಜ್ಯಗಳ ಜನರೂ ಸಹ ಈ ಸಂದರ್ಭದಲ್ಲಿ ನಮ್ಮ ದುಃಖದಲ್ಲಿ ಭಾಗಿಯಾಗಿರುವುದು ನನ್ನ ಅನುಭವಕ್ಕೆ ಬಂದಿದೆ.

ಈ ಎಲ್ಲರಿಗೂ ಚಿರರುಣಿಯಾಗಿದ್ದೇನೆ.

ಬೆಳೆದು ನಿಂತ ಮಕ್ಕಳು ತಮ್ಮ ಕಣ್ಣೆದುರೇ ಅಗಲಿಹೋಗುವ ಸ್ಥಿತಿ ಯಾವ ತಂದೆತಾಯಿಗೂ ಬಾರದಿರಲಿ ಎನ್ನುವುದಷ್ಟೇ  ನನ್ನ ಪ್ರಾರ್ಥನೆ”

-ಸಿದ್ದರಾಮಯ್ಯ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top