ಕನ್ನಡ ಹೋರಾಟಗಾರ ಕೋ.ನ.ನಾಗರಾಜ ರವರಿಗೆ – ‘ಕನ್ನಡ ಮಾಣಿಕ್ಯ ಪ್ರಶಸ್ತಿ’
ಅದು ಅರವತ್ತರ ದಶಕ, ಬೆಂಗಳೂರಿನಲ್ಲಿ ಅನ್ಯ ಭಾಷಿಕರ ಹಾವಳಿ; ಉಪಟಳ; ಕನ್ನಡ ಭಾಷೆಯ ಬಗ್ಗೆ ತಾತ್ಸಾರ; ಕನ್ನಡಿಗರನ್ನು ಕಡೆಗಣಿಸುವುದು; ವ್ಯವಹಾರ; ಅಂಗಡಿ; ಮುಂಗಟ್ಟುಗಳಲ್ಲಿ ಕನ್ನಡವನ್ನು ನಿರ್ಲಕ್ಷಿಸುವುದು ಸರ್ವೇ ಸಾಮಾನ್ಯವಾಗಿತ್ತು. ಈ ಎಲ್ಲಾ ಬೆಳವಣಿಗೆಗಳನ್ನೂ ಅತ್ಯಂತ ಹತ್ತಿರದಿಂದ ನೋಡುತ್ತಿದ್ದ ಕೆಚ್ಚೆದೆಯ ಯುವಕನೊಬ್ಬನಿಗೆ ಕನ್ನಡ ಮಾತೆಗೆ ಆಗುತ್ತಿದ್ದ ಅವಮಾನವನ್ನು ತಡೆಯಲಾಗಲಿಲ್ಲ. ಸಂಭಾವಿತ, ವ್ಯಾಪಾರಸ್ಥ ಕುಟುಂಬದ ಆ ಯುವಕ ಹಿಂದೂ-ಮುಂದೆ ನೋಡದೆ ಕನ್ನಡವೇ ನನ್ನ ಕುಲ, ಕನ್ನಡವೇ ನನ್ನ ದೈವವೆಂದು ಏಕಾ ಏಕಿ ಯಾಗಿ ಕನ್ನಡ ಚಳುವಳಿ ಮತ್ತು ಹೋರಾಟಕ್ಕೆ ಧುಮುಕಿದರು.
ಅವರು ಕೊರಟಗೆರೆ ನರಸಯ್ಯಶೆಟ್ಟಿ ನಾಗರಾಜ [ಕೋ.ನ. ನಾಗರಾಜ]
70 ರ ಹರೆಯದ, ಕೋ. ನ.ನಾಗರಾಜ ರವರದು ಹೋರಾಟದ ಜೀವನ. 70 ರ ಹರೆಯದಲ್ಲೂ ಉತ್ಸಾಹ ಭರಿತರಾಗಿ ಮಾತನಾಡುವ ನಾಗರಾಜ ರವರು, 1962 ರಿಂದ ಕನ್ನಡ ಚಳವಳಿಯಲ್ಲಿ ತೊಡಗಿಸಿಕೊಂಡವರು. ಬೆಂಗಳೂರಿನಲ್ಲಿ ಅಂದು ಕನ್ನಡ ಮತ್ತು ಕನ್ನಡಿಗ ಸ್ಥಿತಿ ಹೀನಾಯವಾಗಿತ್ತು. ಈ ಸಂದರ್ಭದಲ್ಲಿ ಮಾವಳ್ಳಿಯಲ್ಲಿ ನೂರಾರು ಯುವಕರನ್ನು ಸೇರಿಸಿ ಮಾವಳ್ಳಿ ಕರ್ನಾಟಕ ಸಂಘವನ್ನು 1965 ರಲ್ಲಿ ನಿರ್ಮಿಸಿ, ವಾಟಾಳ್ ರವರ ಎಲ್ಲಾ ಹೋರಾಟಗಳಲ್ಲಿ ಪಾಲ್ಗೊಂಡು ತಮ್ಮದೇ ಆದ ಛಾಪು ಮೂಡಿಸಿದವರು.
ಲಾಠಿ ರುಚಿ, ಪೊಲೀಸ್ ದೌರ್ಜನ್ಯಕ್ಕೆ ಕುಗ್ಗದ ಶಕ್ತಿ
ಇವರ ಕನ್ನಡ ಪರ ಕಾರ್ಯಕ್ಕೆ ಅನೇಕ ಬಾರಿ ಲಾಠಿ ರುಚಿ ಕಂಡಿದ್ದುಂಟು. ಸರಿ-ಸುಮಾರು 20 ಪೊಲೀಸ್ ಠಾಣೆಗಳಲ್ಲಿ ಗಳಲ್ಲಿ 45 ಕ್ಕೂ ಹೆಚ್ಚು ದಿನ ಜೈಲುವಾಸ ಅನುಭವಿಸಿದ್ದಾರೆ. ಸಂಭಾವಿತ; ವ್ಯಾಪಾರಸ್ಥ ಕುಟುಂಬದವರಾದ ಕೋ.ನ.ನಾ -ರವರು ತಮ್ಮ ಮುಂದಿದ್ದ ಆಕರ್ಷಣೀಯ, ಲಾಭದಾಯಕ ವೃತ್ತಿಯನ್ನು ಕಡೆಗಣಿಸಿ; ತಮ್ಮ ವಿದ್ಯಾಭ್ಯಾಸವನ್ನು ಮೊಟಕುಗೊಳಿಸಿ ಕನ್ನಡ ಸೇವೆಗೆ ಇಳಿದ ಧುರೀಣರು.
ಹೊಸೂರು ನಮ್ಮ ಊರು, ಸೋಪ್ ಫ್ಯಾಕ್ಟರಿ ಉತ್ಪನ್ನಗಳಲ್ಲಿ ಕನ್ನಡವನ್ನು ಬಳಸಲು, ತಾಳವಾಡಿ ಚಳುವಳಿ, ಕರ್ನಾಟಕ ರಾಜ್ಯ ಎಂದು ನಾಮಕರಣವಾಗಲಿ, ಇನ್ನು ಹತ್ತು ಹಲವಾರು ಚಳುವಳಿಯಲ್ಲಿ ಭಾಗವಹಿಸಿದ ಹಿರಿಯ ಕನ್ನಡ ಹೋರಾಟಗಾರರಿಗೆ – ಡಾ. ವಿಷ್ಣು ಸೇನಾ ಸಮಿತಿ ಯಿಂದ – ‘ಕನ್ನಡ ಮಾಣಿಕ್ಯ’ 2016 ನ ಪ್ರಶಸ್ತಿ ಮತ್ತು ಗೌರವ ಸಂದಿರುವುದು ಅವರ ಅಭಿಮಾನಿಗಳಿಗೆ ಮತ್ತು ಕನ್ನಡಾಭಿಮಾನಿಗಳಿಗೆ ಅತ್ಯಂತ ಸಂತೋಷದ ವಿಷಯ ಅಂದರೆ ತಪ್ಪಾಗಲಾರದು.
‘ಕಣ್ಣು ತೆರೆಯದ’ ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಕಳೆದ 50 ವರ್ಷಗಳಿಂದ ಸಕ್ರಿಯವಾಗಿ ಕನ್ನಡ ಹೋರಾಟಗರಾಗಿ, ತಮ್ಮ ಸ್ವಂತ ಖರ್ಚಿನಿಂದ ಮಾವಳ್ಳಿ ಕನ್ನಡ ಸಂಘ ನಿರ್ಮಿಸಿ, ಯುವಕರಲ್ಲಿ ಕನ್ನಡ ಪ್ರಜ್ಞೆ ಮೂಡಿಸಿ, ಪೋಲೀಸರ ಲಾಠಿ ರುಚಿ ಕಂಡು, ಲಾಭದಾಯಕವಾದ ವೃತ್ತಿಯನ್ನು ಬಿಟ್ಟು ಇಂದಿಗೂ ಉತ್ಸಾಹಭರಿತವಾಗಿ ಮಾತನಾಡುವ ಕೋ.ನ.ನಾಗರಾಜ್ -ರವರಿಗೆ ಈ ವರೆಗೂ ಮಹಾನಗರ ಪಾಲಿಕೆ ಅಥವಾ ಕನ್ನಡ ಸಂಸ್ಕೃತಿ ಇಲಾಖೆಯು ಯಾವುದೇ ಗೌರವಾರ್ಪಣೆ ಅಥವಾ ಪ್ರಶಸ್ತಿ ಪ್ರದಾನ ಮಾಡಿಲ್ಲ. ಯಾವುದೇ ರಾಜಕೀಯ ಪಕ್ಷಗಳೊಂದಿಗೆ ಗುರುತಿಸಿಕೊಳ್ಳದ ಕೋ.ನ. ನಾ ರವರ ಸೇವೆಗೆ ಗೌರವಾರ್ಪಣೆ, ಪ್ರಶಸ್ತಿ ನೀಡುವುದು ಸರ್ಕಾರದ ಆದ್ಯ ಕರ್ತವ್ಯ; ಆದರೆ, ಅದ್ಯಾಕೋ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿಗಳಿಗೆ ಮತ್ತು ಸಚಿವರಿಗೆ ಇವರ ಸೇವೆ ಇನ್ನೂ ಗುರುತಿಸಿಲ್ಲ.
ಡಾ II ವಿಷ್ಣು ಸೇನಾ ಸಮಿತಿಯಿಂದ ಗೌರವಾರ್ಪಣೆ
ಇವರ ಸೇವೆಯನ್ನು ಮನಗೊಂಡು ತಮ್ಮ 2016 ನೆಯ ಕನ್ನಡ ಮಾಣಿಕ್ಯ ಪ್ರಶಸ್ತಿಯನ್ನು ನೀಡಿರುವ ಡಾ II ವಿಷ್ಣು ಸೇನಾ ಸಮಿತಿಯವರಿಗೆ ಕನ್ನಡಿಗರು ಅಭಾರಿಯಾಗಿರಬೇಕು. ಒಬ್ಬ ನೈಜ ಕನ್ನಡ ಹೋರಾಟಗಾರರನ್ನು ಗುರುತಿಸಿ, ಸರ್ಕಾರ ಮಾಡುವ ಕೆಲಸವನ್ನು ಡಾ II ವಿಷ್ಣು ಸೇವಾ ಸಮಿತಿ ಮಾಡಿರುವುದು ಶ್ಲಾಘನೀಯ. ಇವರ ಹೋರಾಟದುದ್ದಕ್ಕೂ ತಮ್ಮ ಬೆನ್ನುಲುಬಾಗಿ ನಿಂತಿರುವುದು ಇವರ ಧರ್ಮಪತ್ನಿ ಶ್ರೀಮತಿ ಲಲಿತಮ್ಮ ನವರು.
ನಾಗರಾಜ ಮತ್ತು ಲಲಿತಮ್ಮ ದಂಪತಿಗಳಿಗೆ ಆ ದೇವರು ಆಯುರಾರೋಗ್ಯ ನೀಡಿ, ಇನ್ನಷ್ಟು ನಾಡಿನ ಪರ, ಕನ್ನಡ ಪರ ಕಾರ್ಯಕ್ರಮಗಳನ್ನು ಮಾಡಲಿ ಎಂದು ಹಾರಿಸೋಣ. ಹಾಗೆಯೇ, ಕನ್ನಡ ಮಾಣಿಕ್ಯ ಪ್ರಶಸ್ತಿ ವಿಜೇತರಿಗೆ ನಮ್ಮ ಶುಭಾಶಯಗಳನ್ನು ತಿಳಿಸುತ್ತೇವೆ.
ಈಗಲಾದರೂ ಎಚ್ಚೆತ್ತುಕೊಳ್ಳಲಿ ಘನ ಸರ್ಕಾರ ಮತ್ತು ಮಹಾನಗರ ಪಾಲಿಕೆ !
ಬೆಂಗಳೂರಿನ ದಕ್ಷಿಣ ಭಾಗದಲ್ಲಿ ಒಂದು ಪ್ರಮುಖ ರಸ್ತೆಯನ್ನು ಪಾಲಿಕೆ/ಸರ್ಕಾರ ಗುರುತಿಸಿ ಇವರ ಹೆಸರನ್ನಿಡಬೇಕು ಮತ್ತು ಕನ್ನಡ ಸಂಸ್ಕೃತಿ ಇಲಾಖೆ ಇವರಿಗೆ ಗೌರವಾರ್ಪಣೆ ಮಾಡಬೇಕೆಂಬುದು ನಮ್ಮ ಆಗ್ರಹ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
