fbpx
Kannada Bit News

ಸಾಮಾಜಿಕ ಜಾಲತಾಣ ಮಾಧ್ಯಮವನ್ನು ಬಳಸಿಕೊಂಡು ಸರ್ಕಾರದ ವಿರುದ್ಧ ಜನಾಂದೋಲನ

ಸಾಮಾಜಿಕ ಜಾಲತಾಣ ಮಾಧ್ಯಮವನ್ನು ಬಳಸಿಕೊಂಡು ಸರ್ಕಾರದ ವಿರುದ್ಧ ಜನಾಂದೋಲನಕ್ಕೆ ಬಿಜೆಪಿ ವಕ್ತಾರ ಸುರೇಶ್‌ಕುಮಾರ್ ಕರೆ

ಸಾಮಾಜಿಕ ಜಾಲತಾಣ ಮಾಧ್ಯಮವನ್ನು ಬಳಸಿಕೊಂಡು ರಾಜ್ಯ ಸರ್ಕಾರದ ದುರಾಡಳಿತವನ್ನು ಬಯಲಿಗೆ ಎಳೆಯುವಂತೆ ನಗರ ಬಿಜೆಪಿ ಪದಾಧಿಕಾರಿ ಗಳಿಗೆ ಪಕ್ಷದ ವಕ್ತಾರ ಎಸ್. ಸುರೇಶ್‌ಕುಮಾರ್ ಸಲಹೆ ನೀಡಿದ್ದಾರೆ. ಮಲ್ಲೇಶ್ವರದಲ್ಲಿರುವ ಬಿಜೆಪಿ ಕಚೇರಿಯಲ್ಲಿ ಗುರುವಾರ ಏರ್ಪಡಿಸಲಾಗಿದ್ದ ಬೆಂಗಳೂರು ಮಹಾನಗರ ಬಿಜೆಪಿ ಕಾರ್ಯಕಾರಿಣಿ ಸಭೆ ಉದ್ಘಾಟಿಸಿ ಮಾತನಾಡಿದರು.

ಸರ್ಕಾರದ ಬಗ್ಗೆ ಜನ ರೋಸಿ ಹೋಗಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಬೆಂಗಳೂರು ಈಗ ಕನಿಷ್ಠ ಮೂಲಸೌಕರ್ಯಗಳಿಂದ ವಂಚಿತವಾಗಿದೆ. ಈ ವಿಷಯ ವಿಶ್ವಮಟ್ಟದಲ್ಲಿ ಬೆಂಗಳೂರಿನ ಬ್ರ್ಯಾಂಡ್ ಮೌಲ್ಯಕ್ಕೆ ಧಕ್ಕೆ ಉಂಟು ಮಾಡಿದೆ. ನಗರಕ್ಕೆ ಮೂಲಸೌಕರ್ಯ ಒದಗಿಸುವಲ್ಲಿ ಬಿಬಿಎಂಪಿ ಮತ್ತು ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿವೆ ಎಂದು ದೂರಿದರು.

ಮಹದಾಯಿಗಾಗಿ ಹೋರಾಟ ನಡೆಸುತ್ತಿದ್ದ ರೈತರ ಮೇಲೆ ಪೊಲೀಸರ ಲಾಠಿ ಪ್ರಹಾರ ಸೇರಿ ದುರಾಡಳಿತ ಬಗ್ಗೆ ಸಾಮಾಜಿಕ ಜಾಲತಾಣಗಳ ಮೂಲಕ ಜನಾಂದೋಲನ ರೂಪಿಸಬೇಕು ಎಂದು ಸೂಚಿಸಿದರು.ಭಾರತಕ್ಕಾಗಿ ಓಟ: ಆ.14ರ ಮಧ್ಯರಾತ್ರಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಆಯೋಜಿಸಲಾಗಿರುವ ‘ಭಾರತಕ್ಕಾಗಿ ಓಟ ಮತ್ತು ಸ್ವಾತಂತ್ರ್ಯೋತ್ಸವ ಧ್ವಜಾರೋಹಣ’ ಕಾರ್ಯಕ್ರಮದ ಸಿದ್ಧತೆಗಳ ಬಗ್ಗೆ ಸಭೆ ಚರ್ಚಿಸಿತು. ಕಾರ್ಯಕ್ರಮದಲ್ಲಿ ಭಾಗಿಯಾಗುವಂತೆ ಕನಿಷ್ಠ 10 ಸಾವಿರ ಯುವಕರನ್ನು ಪ್ರೇರೇಪಿಸುವ ಗುರಿ ನೀಡಲಾಗಿದೆ. ಇದಕ್ಕಾಗಿ ನಿಮ್ಮೆಲ್ಲರ ಶ್ರಮ ಆಗತ್ಯ ಎಂದು ಸುರೇಶ್‌ಕುಮಾರ್ ಹೇಳಿದರು. ಓಟಕ್ಕಾಗಿ ವಿಶೇಷವಾಗಿ ರೂಪಿಸಲಾಗಿರುವ ಟಿ ಶರ್ಟ್‌ಗಳನ್ನು ಬಿಡುಗಡೆ ಮಾಡಿದರು.

ನಗರದಲ್ಲಿ ಸುರಿದ ಮಹಾ ಮಳೆಯಿಂದ ದೊಡ್ಡ ಪ್ರಮಾಣದಲ್ಲಿ ಅನಾಹುತ ಆಗಿದೆ. ಜನ ಎದುರಿಸಿದ ಸಮಸ್ಯೆಗೆ ಆರ್‌ಎಸ್‌ಎಸ್ ಕಾರ್ಯಕರ್ತರು ಸ್ಪಂದಿಸಿದ ರೀತಿಯಲ್ಲೇ ಬೆಂಗಳೂರು ನಗರ ಬಿಜೆಪಿ ಕಾರ್ಯಕರ್ತರೂ ಕೆಲಸ ಮಾಡಬೇಕು. – ಸುರೇಶ್ ಕುಮಾರ್ ಬಿಜೆಪಿ ವಕ್ತಾರ

ನಿರ್ಣಯಗಳು

ನಗರದಲ್ಲಿ ರಸ್ತೆಗಳು ಹದಗೆಟ್ಟಿದ್ದು, ಎಲ್ಲೆಂದರಲ್ಲಿ ಗುಂಡಿಗಳು ಬಿದ್ದಿವೆ. ಇವು ಜನರ ಪ್ರಾಣಕ್ಕೆ ಕಂಟಕವಾಗಿವೆ. ಬೆಂಗಳೂರಿನ ಮೌಲ್ಯ ಕುಸಿಯುತ್ತಿದೆ. ಇತ್ತೀಚೆಗೆ ಸುರಿದ ಮಳೆಯಿಂದ ಬೆಂಗಳೂರಿನ ಬಹುತೇಕ ಪ್ರದೇಶದಲ್ಲಿ ಪ್ರವಾಹ ಉಂಟಾಗಿತ್ತು. ಇದಕ್ಕೆ ಕೆರೆ ಮತ್ತು ರಾಜಕಾಲುವೆ ಒತ್ತುವರಿಯೇ ಕಾರಣ. ಒತ್ತುವರಿ ತೆರವುಗೊಳಿಸುವಂತೆ ಬಿಬಿಎಂಪಿ ಮತ್ತು ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ಮತ್ತು ವಿವಿಧ ರೀತಿಯ ಹೋರಾಟ ಮಾಡುವ ರಾಜಕೀಯ ನಿರ್ಣಯಗಳನ್ನು ಕಾರ್ಯಕಾರಿಣಿ ಸಭೆ ಕೈಗೊಂಡಿತು.

Source: ವಿಜಯವಾಣಿ ಸುದ್ದಿಜಾಲ ಬೆಂಗಳೂರು

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

ನಮ್ಮಲ್ಲಿ ಜನಪ್ರಿಯ

To Top