fbpx
Health

ಆರೋಗ್ಯಕ್ಕೆ ತರೇಹವಾರಿ ತಂಬುಳಿಗಳು

ಸಾಮಾನ್ಯವಾಗಿ ಗೃಹಿಣಿಯರಿಗೆ ಗೊತ್ತಿರುವುದು ಬಸಲೆ ಸೊಪ್ಪು,ದೊಡ್ದಪತ್ರೆ ಹಾಗೂ ಶುಂಠಿಯಿಂದ ಮಾಡುವ ತಂಬುಳಿಗಳು ಮಾತ್ರ. ನಿಮಗೆ ಗೊತ್ತಾ?ಮಲೆನಾಡಿನ ಶಿವಮೊಗ್ಗ,ಸಾಗರ ಮುಂತಾದ ಕಡೆ ಅನೇಕ ರೀತಿಯ ಗಿಡಗಳ ಸಿಪ್ಪೆ, ಸೊಪ್ಪು, ಬೀಜ, ಕಾಯಿ, ಬೇರು ತೊಗಟೆ ಮುಂತಾದವುಗಳನ್ನು ಉಪಯೋಗಿಸಿ ಸುಮಾರು 100ಕ್ಕೂ ಹೆಚ್ಚು ರೀತಿಯ ತಂಬುಳಿಗಳನ್ನು ತಯಾರಿಸುತ್ತಾರೆ. ‘ಭೋಜನೆ ತಂಬುಳೀಂ ಚೈವ, ಶಯನೆ ಕಂಬಳಿ ಪ್ರಿಯಂ’ ಎಂದು ಸುಭಾಷಿತ ಹೇಳುತ್ತದೆ. ಅಂದರೆ ಊಟಕ್ಕೆ ತಂಬುಳಿ ಇರಬೇಕು, ಹೊದ್ಧು ಮಲಗಲು ಕಂಬಳಿ ಇರಬೇಕು ಎಂದು ಹೇಳುವ ಮೂಲಕ ತಂಬುಳಿಯ ಮಹತ್ವವನ್ನು ಹೇಳಿದ್ದಾರೆ ತಂಬ್ಳಿ ನೈಸರ್ಗಿಕವಾಗಿದ್ದು ಆರೋಗ್ಯಕ್ಕೆ ಉತ್ತಮವಾದ ಆಹಾರವಾಗಿದೆ. ತಂಬ್ಳಿ ಜೊತೆ ಹಾಕುವ ಜೀರಿಗೆ, ಸಾಸುವೆ, ಮೆಣಸು ಜೀರ್ಣಕ್ರಿಯೆಯಲ್ಲಿ ಸಹಾಯಕವಾಗಿದೆ. ನಿಮಗೆ ಗೊತ್ತಿಲ್ಲದ ಕೆಲವು ತಂಬ್ಳಿಗಳ ತಯಾರಿಸುವ ವಿಧಾನ ಹಾಗೂ ಅದರ ಉಪಯೋಗವನ್ನು ತಿಳಿಯೋಣ ಬನ್ನಿರಿ.

images

ಅಮೃತಬಳ್ಳಿ ಸೊಪ್ಪಿನ ತಂಬ್ಳಿ – ಸಂಸ್ಕೃತದಲ್ಲಿ ಇದಕ್ಕೆ ಗುಡುಚಿ ಎಂದು ಕರೆಯುತ್ತಾರೆ.

ಮಾಡುವ ವಿಧಾನ – ಅಮೃತಬಳ್ಳಿಯ ಎಲೆಗಳನ್ನು ತೊಳೆದು ಬಾಣಲೆಯಲ್ಲಿ ಸ್ವಲ್ಪ ತುಪ್ಪ ಹಾಕಿ ಸಣ್ಣ ಉರಿಯಲ್ಲಿ ಬಾಡಿಅಬೇಕು.ಹುರಿಯುವಾಗ 10-12 ಮೆಣಸಿನಕಾಉ ಸ್ವಲ್ಪ ಜೀರಿಗೆ ಹಾಕಿ ಹುರಿದು ನಂತರ ಇದನ್ನು 1 ಲೋಟ ತೆಂಗಿನಕಾಯಿತುರಿಯೊಂದಿಗೆ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ರುಬ್ಬಬೇಕು. ರುಬ್ಬಿದ ಪದಾರ್ಥವನ್ನು ಮಜ್ಜಿಗೆಯೊಂದಿಗೆ ಬೆರೆಸಿ ನಂತರ ಜೀರಿಗೆ, ಸಾಸುವೆ, ಒಣಮೆಣಸಿನಕಾಯಿಯ ಒಗ್ಗರಣೆ ತುಪ್ಪದಲ್ಲಿ ಹಾಕಿದರೆ ಅಮೃತಬಳ್ಳಿಯ ತಂಬ್ಳಿ ರೆಡಿ.

• ಉಪಯೋಗ – ಆಯುರ್ವೇದದ ಪ್ರಕಾರ ಇದು ತಂಪಿನ ಗುಣವುಳ್ಳದ್ದು, ಜ್ವರ ಹಾಗೂ ವಾತರೋಗಗಳನ್ನು ಕಡಿಮೆ ಮಾಡುವುದರಲ್ಲಿ ಎತ್ತಿದ ಕೈ ಮತ್ತು ಪೌಷ್ಠಿಕ ಗುಣಗಳನ್ನು ಹೊಂದಿದೆ.ಬಾಣಂತಿಯಲ್ಲಿ ಹಾಲು ವೃದ್ಧಿಗೆ ಇದು ಸಹಾಯಕಾರಿ. ಪಿತ್ತ, ಕಫ ಮತ್ತು ವಾತವನ್ನು ಇದು ಹತೋಟಿಯಲ್ಲಿಡುತ್ತದೆ.

ಒಂದೆಲಗದ ತಂಬ್ಳಿ –ಇದನ್ನು ಸಂಸ್ಕೃತದಲ್ಲಿ ಮಂಡೂಕ ಪರ್ಣಿ ಎನ್ನುತ್ತಾರೆ.

ಮಾಡುವ ವಿಧಾನ – ಒಂದೆಲಗದ ಎಲೆಗಳನ್ನು ತೊಳೆದು ಜೊತೆಗೆ 8-10 ಕಾಳುಮೆಣಸು ಮತ್ತು 1 ಲೋಟ ತೆಂಗಿನಕಾಯಿಯ ತುರಿಯೊಂದಿಗೆ ರುಬ್ಬಬೇಕು. ರುಬ್ಬಿದ ಪದಾರ್ಥವನ್ನು ಮೊಸರಿನೊಂದಿಗೆ ಬೆರೆಸಿ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ತುಪ್ಪದಲ್ಲಿ ಜೀರಿಗೆ, ಸಾಸುವೆ, ಒಣಮೆಣಸಿನಕಾಯಿಯ ಒಗ್ಗರಣೆ ಹಾಕಿದರೆ ಒಂದೆಲಗದ ತಂಬ್ಳಿ ತಯಾರು.

• ಉಪಯೋಗ –ಆಯುರ್ವೇದದ ಪ್ರಕಾರ ಇದು ನೆನಪಿನ ಶಕ್ತಿಯ ವೃದ್ಧಿಗೆ ದಿವ್ಯ ಔಷಧ, ತಂಪು ಗುಣವುಳ್ಳದ್ದಾಗಿದೆ. ನರಗಳಿಗೆ ಇದು ಚೈತನ್ಯ ತಂದುಕೊಡುತ್ತದೆ. ವಾಯು, ಅಸಿಡಿಟಿಯನ್ನು ಕಡಿಮೆ ಮಾಡುತ್ತದೆ.ಬೇಸಿಗೆಯ ದಿನಗಳಲ್ಲಿ ಮಾತ್ರ ಒಂದೆಲಗದ ತಂಬ್ಳಿಯನ್ನು ತಿನ್ನುವುದು ಒಳ್ಳೆಯ್ದದು.

ಕರಿಬೇವು ಸೊಪ್ಪಿನ ತಂಬ್ಳಿ – ಕರಿಬೇವು ಎಲ್ಲರಿಗೂ ಚಿರಪರಿಚಿತವಾಗಿದ್ದು ಇದನ್ನು ಸಂಸ್ಕೃತದಲ್ಲಿ ಕೃಷ್ಣನಿಂಬ ಎನ್ನುತ್ತಾರೆ.

DSC03013

ಮಾಡುವ ವಿಧಾನ – ಅಮೃತಬಳ್ಳಿ ತಂಬ್ಳಿ ತಯಾರಿಸುವಂತೆ ಇದನ್ನು ತಯಾರಿಸಬಹುದು.

• ಉಪಯೋಗ – ಕರಿಬೇವು ರಕ್ತವರ್ಧಕವಾಗಿದ್ದು ಇದು ರಕ್ತವನ್ನು ಶುದ್ಧೀಕರಿಸುತ್ತದೆ ಕೂಡ.ದಿನನಿತ್ಯ ಊಟದಲ್ಲಿ ಕರಿಬೇವನ್ನು ಬಳಸುವುದರಿಂದ ದೇಹದಲ್ಲಿಯ ಕೆಟ್ಟ ಕೊಲೆಸ್ಟ್ರಾಲ್ ಕರಗಲು ಇದು ಸಹಾಯ ಮಾಡುತ್ತದೆ. ತಲೆ ಕೂದಲ ಬುಡವನ್ನು ಗಟ್ಟಿ ಮಾಡುತ್ತದೆಯಲ್ಲದೆ ಕೂದಲು ಉದುರುವುದನ್ನು ತಡೆಯುತ್ತದೆ.ಮೂತ್ರಕೋಶದ ಕಲ್ಲನ್ನು ಕರಗಿಸಲು ಇದು ಸಹಾಯ ಮಾಡುತ್ತದೆ ಹಾಗೂ ಆಹಾರದಲ್ಲಿರುವ ವಿಶಾಂಶಗಳನ್ನು ತೆಗೆದು ಹಾಕುತ್ತದೆಂದು ಸಂಶೊಧನೆಗಳು ಹೇಳುತ್ತವೆ.

ದಾಳಿಂಬೆ ಸೊಪ್ಪಿನ ತಂಬ್ಳಿ – ಇದನ್ನು ಸಂಸ್ಕೃತದಲ್ಲಿ ದಾಡಿಮ ಎಂದು ಕರೆಯುತ್ತಾರೆ.

ಮಾಡುವ ವಿಧಾನ – ಇದರ ತಂಬ್ಳಿ ಮಾಡಲು ಆದಷ್ಟು ದಾಳಿಂಬೆ ಗಿಡದ ಚಿಗುರೆಲೆಗಳನ್ನು ಆರಿಸಿಕೊಳ್ಳಬೇಕು.ಚಿಗುರೆಲೆಗಳನ್ನು ತೊಳೆದು ಇದನ್ನು ಬಾಡಿಸದೆ ಹಸಿ ಎಲೆಗೆ 8-10 ಮೆಣಸಿನಕಾಳುಗಳನ್ನು ಹಾಕಿ ಒಂದು ಲೋಟ ಕೊಬ್ಬರಿ ತುರಿಯೊಂದಿಗೆ ರುಬ್ಬಬೇಕು. ರುಬ್ಬಿದ ಪದಾರ್ಥವನ್ನು ಕಡಿದ ಮಜ್ಜಿಗೆಯೊಂದಿಗೆ ಬೆರೆಸಿರಿ. ರುಚಿಗೆ ತಕ್ಕಷ್ಟು ಉಪ್ಪು ಹಾಕಿ ತುಪ್ಪದಲ್ಲಿ ಜೀರಿಗೆ, ಸಾಸುವೆ, ಒಣಮೆಣಸಿನಕಾಯಿಯ ಒಗ್ಗರಣೆ ಹಾಕಬೇಕು.

• ಉಪಯೋಗ – ಇದು ಮಕ್ಕಳಲ್ಲಿ ಕಂಡು ಬರುವ ಆಮಶಂಕೆ ಹಾಗೂ ಅತಿಸಾರಕ್ಕೆ ಒಳ್ಳೆಯದು. ಪಿತ್ತವನ್ನು ಕಡಿಮೆ ಮಾಡುತ್ತದೆ,ಕರುಳಿನ ಹುಣ್ಣನ್ನು ವಾಸಿಮಾಡುತ್ತದೆ. ಇದು ವಾತಕಾರಕ ಗುಣವನ್ನು ಹೊಂದಿರುವುದರಿಂದ ವಯಸ್ಸಾದವರು ಬಳಸಬಾರದು.

ನುಗ್ಗೆಸೊಪ್ಪಿನ ತಂಬ್ಳಿ – ಇದನ್ನು ಸಂಸ್ಕೃತದಲ್ಲಿ ಶೋಭಾಂಜನಃ ಎನ್ನುತ್ತಾರೆ.

DSCF3501

 ಮಾಡುವ ವಿಧಾನ – ಅಮೃತಬಳ್ಳಿಯ ತಂಬ್ಳಿಯ ಹಾಗೆ ತಯಾರಿಸಬೇಕು.

• ಉಪಯೋಗ – ಇದು ಉಷ್ಣಗುಣವುಳ್ಳದ್ದಾಗಿರುವುದರಿಂದ ಈ ತಂಬ್ಳಿ ತಯಾರಿಸುವಾಗ ಮೆಣಸಿನಕಾಳನ್ನು ಉಪಯೋಗಿಸಬಾರದು. ಮಕ್ಕಳಲ್ಲಿ ಕಫವನ್ನು ಕಡಿಮೆ ಮಾಡುತ್ತದೆ. ರಕ್ತವನ್ನು ಶುದ್ಧಿಮಾಡುತ್ತದಲ್ಲದೆ ವರ್ಧಿಸುತ್ತದೆ.ಗರ್ಭಿಣಿಯರು ಇದನ್ನು ತಿನ್ನಬಾರದು.

ಪುದಿನಾ ತಂಬ್ಳಿ –

ಮಾಡುವ ವಿಧಾನ – ಅಮೃತಬಳ್ಳಿ ಹಾಗೂ ಒಂದೆಲಗದಲ್ಲಿರುವ ತಂಬ್ಳಿ ತಯಾರಿಸುವ ವಿಧಾನದಿಂದ ಪುದಿನಾ ತಂಬ್ಳಿ ಮಾಡಬಹುದು.

• ಉಪಯೋಗ – ಇದು ಮಕ್ಕಳಲ್ಲಿ ಹಸಿವನ್ನು ಹೆಚ್ಚಿಸಲು ಉತ್ತಮ ಉಷಧವಾಗಿದೆಯಲ್ಲದೆ ವಾತ ಮತ್ತು ಕಫವನ್ನು ಕಡಿಮೆಮಾಡುತ್ತದೆ. ನರದೌರ್ಬಲ್ಯವನ್ನು ಕಡಿಮೆ ಮಾಡುತ್ತದೆ. ಇದನ್ನು ನಿರಂತರವಾಗಿ ಬಳಸುವುದರಿಂದ ಮೊಡವೆ ಸಮಸ್ಯೆ ಕಡಿಮೆಯಾಗುತ್ತದೆ.

ಅಗಸೆ ಸೊಪ್ಪಿನ ತಂಬ್ಳಿ – ಸಂಸ್ಕೃತದಲ್ಲಿ ಇದನ್ನು ಅಗಸ್ತ್ಯ ಎಂದು ಕರೆಯುತ್ತಾರೆ.

ಮಾಡುವ ವಿಧಾನ – ಅಮೃತಬಳ್ಳಿ ತಂಬ್ಳಿ ವಿಧಾನ ಬಳಸಿ ಇದನ್ನು ತಯಾರಿಸಬಹುದು.

• ಉಪಯೋಗ – ಇದು ಅತ್ಯಂತ ಪೌಷ್ಠಿಕವಾದದ್ದು. ವಾತ, ಪಿತ್ತ, ಕಫವನ್ನು ಕದಿಮೆ ಮಾಡುತ್ತದೆ. ದೇಹಕ್ಕೆ ತಂಪನ್ನುಂಟು ಮಾಡುತ್ತದೆ.

ಅಮಟೆ ಸೊಪ್ಪಿನ ತಂಬ್ಳಿ – ಇದನ್ನು ಸಂಸ್ಕೃತದಲ್ಲಿ ಆಮೃತಕ್ ಎನ್ನುತ್ತಾರೆ.

019

ಮಾಡುವ ವಿಧಾನ – ಅಗತ್ಯವಿದ್ದಷ್ಟು ಸೊಪ್ಪನ್ನು ತೊಳೆದು, ತುಪ್ಪವ ಬಾಣಲೆಯಲ್ಲಿ ಹಾಕಿ ಜೊತೆಗೆ 8-10 ಕಾಳುಮೆಣಸು ಹಾಕಿ ಸ್ವಲ್ಪ ಹೊತ್ತು ಬಾಡಿಸಬೇಕು, ನಂತರ ಇದನ್ನು ಳಿ ಕಪ್ ತೆಂಗಿನತುರಿಯೊಂದಿಗೆ ರುಬ್ಬಿ. ಬಾಣಲೆಯಲ್ಲಿ ತುಪ್ಪ ಹಾಕಿ, ಅದಕ್ಕೆ ಸಾಸುವೆ, ಜೀರಿಗೆ, ಒಣಮೆಣಸಿನಕಾಯಿಯ ಒಗ್ಗರಣೆಯೊಂದಿಗೆ ಬೆರೆಸಿ ಲೋಟ ನೀರು ಹಾಕಿ 5-10 ನಿಮಿಷ ಸಣ್ಣ ಉರಿಯಲ್ಲಿ ಕಾಯಿಸಬೇಕು ನಂತರ ಇದು ತಣ್ಣಗಾದ ಮೇಲೆ ಕಡಿದ ಮಜ್ಜಿಗೆ ಬೆರೆಸಿ, ರುಚಿಗೆ ತಕ್ಕಷ್ಟು ಉಪ್ಪು ಹಾಕಿದರೆ ಅಮಟೆ ಸೊಪ್ಪಿನ ತಂಬ್ಳಿ ತಯಾರು.

• ಉಪಯೋಗ – ವಾತರೋಗಕ್ಕೆ ಇದು ರಾಮಬಾಣ.ಉಷ್ಣ ಪ್ರಕೃತಿಯಾದಾಗಿದ್ದುಬೇಸಿಗೆಯಲ್ಲಿ ಇದನ್ನು ಬಳಸಬಾರದು.ಹೊಟ್ಟೆನೋವು ಹಾಗೂ ಆಮಶಂಕೆಯಲ್ಲೂ ಇದು ಬಳಸಲ್ಪಡುತ್ತದೆ.

ಕಾಕಿ ಸೊಪ್ಪಿನ ತಂಬ್ಳಿ

ಮಾಡುವ ವಿಧಾನ – ಅಮೃತಬಳ್ಳಿ ತಂಬ್ಳಿ ತಯಾರಿಸುವಂತೆಯೇ ಇದನ್ನು ತಯಾರಿಸಬಹುದು.

• ಉಪಯೋಗ – ಇದು ಸಮಧಾತು ಗುಣವುಳ್ಳದ್ದಾಗಿದೆ ಇದು ಜೀರ್ಣಕ್ರಿಯೆಯನ್ನು ಹೆಚ್ಚಿಸುತ್ತದೆ ಖಾಯಿಲೆಯಿಂದ ಆಹಾರ ರುಚಿಸದೆ ಇದ್ದಾಗ, ನಾಲಗೆ ಬಿಳಿ ಬಣ್ಣಕ್ಕೆ ತಿರುಗಿದಾಗ ಇದರ ತಂಬ್ಳಿ ತಿಂದರೆ ತುಂಬಾ ಒಳ್ಳೆಯದು. ಪಿತ್ತವನ್ನು ಕಡಿಮೆ ಮಾಡುತ್ತದೆಯಲ್ಲದೆ ಜ್ವರದಿಂದ ಬರುವ ಮೈ ಕೈ ನೋವನ್ನು ಉಪಶಮನ ಮಾಡುತ್ತದೆ.

ಪ್ರಕಾಶ್ ಕೆ ನಾಡಿಗ್
ಶಿವಮೊಗ್ಗ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top