fbpx
Karnataka

ಅತಿ ಶ್ರೀಘ್ರವೇ ಉತ್ತರ ಕರ್ನಾಟಕ ಭಾಗದಲ್ಲಿ ರಸಗೊಬ್ಬರ ಕಾರ್ಖಾನೆ ಸ್ಥಾಪನೆ

ಬೆಂಗಳೂರು: ಕೇಂದ್ರ ಸರ್ಕಾರದ ರಸಗೊಬ್ಬರ ಕಾರ್ಖಾನೆಯನ್ನು ವಿವಿಧ ಜಿಲ್ಲೆಗಳಲ್ಲಿ ಸ್ಥಾಪಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಅವರೊಂದಿಗೆ ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್ ನಿಯೋಗ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮನವಿ ಸಲ್ಲಿಸಿದೆ. ಬೀದರ್ ಜಿಲ್ಲೆಯ ಜನಪ್ರತಿನಿಗಳ ನಿಯೋಗ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಬೀದರ್ ಜಿಲ್ಲೆಯ ಅಭಿವೃದ್ಧಿಗೆ ಒತ್ತು ನೀಡುವಂತೆ ಮನವಿ ಮಾಡಿದ್ದು, ಕಾರ್ಖಾನೆಗಳನ್ನು ಜಿಲ್ಲೆಯಲ್ಲಿ ಸ್ಥಾಪಿಸಬೇಕು, ಬಂಡವಾಳ ಹೂಡಿಕೆ ಸಂದರ್ಭದಲ್ಲಿ ಬೀದರ್ಗೆ ಹೆಚ್ಚಿನ ಆದ್ಯತೆ ನೀಡಬೇಕೆಂದು ಒತ್ತಾಯಿಸಿದರು.

ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಕೇಂದ್ರ ರಸಾಯನಗೊಬ್ಬರ ಸಚಿವ ಅನಂತ್‍ಕುಮಾರ್ ವಿಶೇಷ ಕಾಳಜಿ ವಹಿಸಿದ ಪರಿಣಾಮ ರಾಜ್ಯಕ್ಕೆ ಎರಡು ಕಾರ್ಖಾನೆಗಳು ಲಭ್ಯವಾಗಿವೆ. ಸುಮಾರು 10ಸಾವಿರ ಕೋಟಿ ಬಂಡವಾಳ ಹೂಡಿಕೆಯಲ್ಲಿ ವಾರ್ಷಿಕ ನೂರು ಲಕ್ಷ ಮೆಟ್ರಿಕ್ ಟನ್ ಗೊಬ್ಬರ ಉತ್ಪಾದನೆ ಮಾಡುವ ಈ ಕಾರ್ಖಾನೆಗಳಿಗೆ ದಾಬೋಲ್‍ನಿಂದ ಬಿಡದಿಗೆ ಸರಬರಾಜಾಗುವ ಗ್ಯಾಸ್ ಪಡೆಯಲು ತೀರ್ಮಾನಿಸಲಾಗಿದೆ. ಈ ಹಿಂದೆ ರಾಜ್ಯ ಸರ್ಕಾರ ಕರ್ನಾಟಕದಲ್ಲಿ ಬಾಗಲಕೋಟೆ, ವಿಜಯಪುರ, ದಾವಣಗೆರೆ ಹಾಗೂ ರಾಯಚೂರಿನಲ್ಲಿ ರಾಸಯನಿಕ ಕಾರ್ಖಾನೆ ಆರಂಭಿಸುವಂತೆ ಪ್ರಸ್ತಾವನೆ ಸಲ್ಲಿಸಿತ್ತು. ಕಾರ್ಖಾನೆ ಆರಂಭಿಸಲು ಮುಂದೆ ಬಂದರೆ ಸರ್ಕಾರದ ವತಿಯಿಂದ ಭೂಮಿ, ನೀರು, ವಿದ್ಯುತ್ ಸೇರಿದಂತೆ ಎಲ್ಲಾ ರೀತಿಯ ಮೂಲಭೂತ ಸೌಲಭ್ಯ ಒದಗಿಸುವುದಾಗಿ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಆಶ್ವಾಸನೆ ಕೊಟ್ಟಿದ್ದರು. ಎಚ್ಚೆತ್ತುಕೊಂಡ ಅನಂತ್‍ಕುಮಾರ್: ಪ್ರಧಾನಿ ನರೇಂದ್ರಮೋದಿ ಸಂಪುಟದಲ್ಲಿ ಪ್ರಭಾವಿ ಸಚಿವರಾಗಿದ್ದ ಅನಂತ್‍ಕುಮಾರ್ ರಾಜ್ಯಕ್ಕೆ ಮಹತ್ವದ ಕೊಡುಗೆಯನ್ನು ನೀಡಬೇಕೆಂಬುದು ಅವರ ಬಹುದಿನದ ಕನಸಾಗಿತ್ತು. ಇದೀಗ ಸರ್ಕಾರವೇ ಮೂಲಭೂತ ಸೌಕರ್ಯ ಒದಗಿಸಲು ಮುಂದೆ ಬಂದಿದ್ದರಿಂದ ಅನಂತ್‍ಕುಮಾರ್ ರಾಜ್ಯಕ್ಕೆ ಎರಡು ಕಾರ್ಖಾನೆಗಳನ್ನು ಮಂಜೂರು ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಹಿಂದೆ ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ) ರಾಯಚೂರಿಗೆ ಕೈ ತಪ್ಪಿದ್ದು, ಭಾರೀ ವಿವಾದವನ್ನೇ ಸೃಷ್ಟಿಸಿತ್ತು. ಧಾರವಾಡಕ್ಕೆ ಮಂಜೂರಾಗಿದ್ದ ಐಐಟಿಯನ್ನು ರಾಯಚೂರಿಗೆ ನೀಡಬೇಕೆಂದು ತಿಂಗಳುಗಟ್ಟಲೆ ಪ್ರತಿಭಟನೆ ನಡೆಸಲಾಗಿತ್ತು. ಅಂತಿಮವಾಗಿ ಐಐಟಿ ಇದೀಗ ಧಾರವಾಡದಲ್ಲಿಯೇ ಪ್ರಾರಂಭವಾಗಿದೆ.

ಈ ಸಮತೋಲವನ್ನು ಸರಿದೂಗಿಸಲು ಮುಂದಾಗಿರುವ ಕೇಂದ್ರ ಸರ್ಕಾರ ಮೊದಲ ಹಂತದಲ್ಲೇ ರಾಯಚೂರು ಹಾಗೂ ದಾವಣಗೆರೆ ಕಾರ್ಖಾನೆಗಳನ್ನು ಮಂಜೂರು ಮಾಡಿದೆ ಎಂದು ತಿಳಿದು ಬಂದಿದೆ. ರಾಯಚೂರು ಜಿಲ್ಲೆಯಲ್ಲಿ ಕೃಷಿ ಇಲಾಖೆಗೆ ಸೇರಿದ 7ಸಾವಿರ ಎಕರೆ ಜಮೀನು ಲಭ್ಯವಿರುವ ಕಾರಣ ಇಲ್ಲಿ ಕಾರ್ಖಾನೆ ಪ್ರಾರಂಭವಾಗಲಿದೆ. ಇನ್ನು ದಾವಣಗೆರೆಯಲ್ಲೂ ಕೂಡ ಸಾಕಷ್ಟು ಪ್ರಮಾಣದ ಜಮೀನು ಇರುವ ಹಿನ್ನೆಲೆಯಲ್ಲಿ ಹೊರ ಭಾಗದಲ್ಲಿ ಕಾರ್ಖಾನೆ ಆರಂಭವಾಗಲಿದೆ. ಮುಂದಿನ ದಿನಗಳಲ್ಲಿ ವಿಜಯಪುರ ಹಾಗೂ ಮೈಸೂರು ಇಲ್ಲವೇ ಚಾಮರಾಜನಗರದಲ್ಲಿ ಈ ಕಾರ್ಖಾನೆಗಳು ಪ್ರಾರಂಭವಾಗಲಿವೆ ಎಂದು ತಿಳಿದು ಬಂದಿದೆ.

ಉತ್ತರ ಕರ್ನಾಟಕ ಭಾಗದಲ್ಲಿ ರಸಗೊಬ್ಬರ ಕಾರ್ಖಾನೆ ಆರಂಭಿಸುವುದಾಗಿ ಕೇಂದ್ರ ಸಚಿವ ಅನಂತ್ ಕುಮಾರ್ ಹೇಳಿದ್ದಾರೆ. ಬೀದರ್ ಜಿಲ್ಲೆ ಮೂಲಕ ರಿಲಾಯನ್ಸ್ ಸಂಸ್ಥೆಯ ಗ್ಯಾಸ್ ಪೈಪ್ಲೈನ್ ಹಾದು ಹೋಗಿದೆ. ರಸಗೊಬ್ಬರ ಕಾರ್ಖಾನೆ ಸ್ಥಾಪನೆಗೆ ಅಗತ್ಯವಾದ ಎಲ್ಲ ಸೌಲಭ್ಯಗಳಿವೆ. ಇಲ್ಲಿ ಈ ಎರಡೂ ಸಂಸ್ಥೆಗಳಿಗೆ ಕಾರ್ಖಾನೆ ಸ್ಥಾಪನೆ ಮಾಡಲು ಕೇಂದ್ರಕ್ಕೆ ಶಿಫಾರಸು ಮಾಡಬೇಕು ಎಂದು ಸಲಹೆ ನೀಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top