fbpx
Karnataka

ಹತ್ತು ರೂಪಾಯಿಗೆ ಭರ್ಜರಿ ಊಟ!

ಬಹಳ ಆಶ್ಚರ್ಯ. ಈ ಕಾಲದಲ್ಲೂ ಹತ್ತು ರುಪಾಯಿಗೆ ಹೊಟ್ಟೆ ತುಂಬ ಊಟ ಕೊಡುವವರು ಇದ್ದಾರಾ. ಹತ್ತು ರೂಪಾಯಿಗೆ ಈ ಕಾಲದಲ್ಲಿ ಏನು ಬರುತ್ತೆ ಸ್ವಾಮಿ? ದುನಿಯಾ ಕಾಟ್ಲಿ ಆಗಿದೆ ಎಂಬ ಮಾತು ಬಿಡಿ. ದುಡ್ಡನ ಬೆಲೆ, ಅನ್ನದ ಬೆಲೆ ಕಿಮ್ಮತ್ತು ಗೊತ್ತಾಗಬೇಕೆಂದರೆ ಇಲ್ಲಿದೆ ಬನ್ನಿ. ಇಲ್ಲಿ ಹತ್ತು ರೂಪಾಯಿಗೆ ಹೊಟ್ಟೆ ತುಂಬಾ ಊಟಮಾಡಿ ಮಲಗಬಹುದು. ನಂಬೋಕೆ ಕಷ್ಟವಾದರೂ ಸುದ್ದಿ ಮಾತ್ರ ಪಕ್ಕ. ಕೇವಲ 10 ರೂಗೆ ಒಂದೊತ್ತು ಊಟ ಸಿಗುತ್ತೆ. ಹಾಗಂತ ಅಮ್ಮಾ ಕ್ಯಾಂಟಿನ್ ನಲ್ಲಿ ಅನ್ಕೊಂಡ್ರು ತಪ್ಪು ಅಥವಾ ಮೈಸೂರಿನ ಅಣ್ಣಾ ಕ್ಯಾಂಟಿನ್ ಕೂಡ ಇದಲ್ಲ ಇದು ರಾಂಪ್ರಸಾದ್ ಹೋಟೆಲ್.

ಒಂದು ಕೆಜಿ ಅಕ್ಕಿಗೆ ನಲ್ವತ್ತು ರೂ, ತರಕಾರಿ ಬೆಲೆ ಬಾನೆತ್ತರಕ್ಕೆ, ನಿತ್ಯೋಪಯೋಗಿ ವಸ್ತುಗಳ ಬೆಲೆ ಲೆಕ್ಕಕ್ಕೆ ನಿಲುಕುವುದಿಲ್ಲ. ಹೀಗೆ ಪ್ರತಿಯೊಂದು ವಸ್ತುಗಳ ಬೆಲೆಯೂ ಗಗನಕ್ಕೇರುತ್ತಿದ್ದರೆ ಇಲ್ಲಿರುವ ಒಂದು ಹೋಟೆಲ್ ನಲ್ಲಿ ಮಾತ್ರ ಊಟದ ಬೆಲೆ ಹತ್ತರಿಂದ ಏರುವುದಿಲ್ಲ.  ‘ಅನ್ನ, ಸಾಂಬಾರ್, ಗಸಿ, ಪಲ್ಯ, ಉಪ್ಪಿನಕಾಯಿ, ಮಜ್ಜಿಗೆ… ಸಾಮಾನ್ಯ ಹೋಟೆಲೊಂದಕ್ಕೆ ಹೋಗಿ ಇಷ್ಟು ಊಟ ಮಾಡಿದರೆ ಎಷ್ಟು ಹಣ ಪಾವತಿಸಬೇಕಾಗುತ್ತದೆ ಎಂದು ಎಲ್ಲರಿಗೂ ಗೊತ್ತು, ಕಡಿಮೆ ಎಂದರೂ 40ರಿಂದ  50 ರೂ ನೀಡಬೇಕು, ಕೆಲೆವೆಡೆ ಅದು ಅರುವತ್ತು, ಎಪ್ಪತ್ತಕ್ಕೂ ಏರುತ್ತದೆ.  ಆದರೆ ಸುಳ್ಯದ ಶ್ರೀರಾಂಪೇಟೆಯ ಸುಂದರ ಸರಳಾಯರ ಹೋಟೆಲ್ ರಾಂಪ್ರಸಾದ್ ಗೆ ಹೋದರೆ ಇಷ್ಟು ಊಟಕ್ಕೆ ನೀಡಬೇಕಾಗುವುದು ಕೇವಲ ಹತ್ತು ರೂ ಮಾತ್ರ. ಆಶ್ಚರ್ಯವಾದರೂ ಇದು ಸತ್ಯ.

ರಾಜ್ಯದಲ್ಲಿಯೇ ಇಂದು ಬಲು ಅಪರೂಪವೆನಿಸುವ ಹೋಟೆಲ್ ರಾಂಪ್ರಸಾದ್ ಈ ರೀತಿ ಅನ್ನ ಸೇವೆ ಮಾಡುವುದು ಇಂದು ನಿನ್ನೆಯಿಂದಲ್ಲ. ಅದು ನಿರಂತರ 78 ವರ್ಷದಿಂದ ಮುಂದುವರಿಸಿಕೊಂಡು ಬಂದಿದ್ದಾರೆ. ಎಲ್ಲಾ ವಸ್ತುಗಳ ಬೆಲೆಯೂ ಗಗನಕ್ಕೇರಿ ಮನುಷ್ಯನಿಗೆ ಒಂದು ಹೊತ್ತಿನ ಊಟ ಮಾಡುವುದೇ ಕಷ್ಟವಾಗಿರುವ ಇಂದಿನ  ದಿನದಲ್ಲೂ ಸುಂದರ ಸರಳಾಯರು ಹತ್ತು ರೂಗಳಿಗೆ ಊಟ ಹಾಕುತ್ತಿದ್ದಾರೆ. ಹಲವಾರು ದಶಕಗಳಿಂದ ನಿರಂತರವಾದ ಸೇವೆ, ಜೊತೆಗೆ ಇವರಿಗೆ ಇದು ಜೀವನಮಾರ್ಗ ಕೂಡ.  1938 ರಲ್ಲಿ ಸುಂದರ ಸರಳಾಯರ ತಂದೆ ವೆಂಕಟೇಶ ಸರಳಾಯರು ಸುಳ್ಯದಲ್ಲಿ ಮುಳಿಹುಲ್ಲಿನ ಕಟ್ಟಡದಲ್ಲಿ ಈ ಹೋಟೆಲ್ ಆರಂಭಿಸಿದ್ದರು. ಅಂದು ಒಂದು ಊಟದ ಬೆಲೆ ನಾಲ್ಕಾಣೆ, ಇಂದಿನ ಹತ್ತು ರೂಗಳಿಗೆ ಅಂದಿನ ನಾಲ್ಕಾಣೆ ಸಮಾನ. ಅಂದರೆ ಅದೇ ಬೆಲೆಗೆ ಇಂದು ಕೂಡ ಪ್ರತಿನಿತ್ಯ ವಿದ್ಯಾರ್ಥಿಗಳೂ ಸೇರಿ ಸುಮಾರು 200 ಮಂದಿಗೆ ಸರಳಾಯರು ಊಟ ಹಾಕುತ್ತಾರೆ. ಕಡಿಮೆ ದರದ ಸ್ವಾದಿಷ್ಟ ಊಟ ಸವಿಯಲೆಂದೇ ಪ್ರತಿದಿನ ಸುಳ್ಯ ನಗರದ ವಿವಿಧ ವಿದ್ಯಾಸಂಸ್ಥೆಗಳಿಂದ ನೂರ ಐವತ್ತಕ್ಕೂ ಹೆಚ್ಚು ಮಂದಿ ವಿದ್ಯಾರ್ಥಿಗಳು  ಆಗಮಿಸುತ್ತಾರೆ. ಸಮೀಪದ ಕಚೇರಿಗಳಿಂದ, ಸಂಸ್ಥೆಗಳಲ್ಲಿ ಕೆಲಸ ಮಾಡುವವರೂ ಬರುತ್ತಾರೆ. ಮಧ್ಯಾಹ್ನದ ವೇಳೆ ಸರಳಾಯರ ಪುಟ್ಟ ಹೋಟೆಲ್ ಫುಲ್.. ಫುಲ್.. ವಿದ್ಯಾರ್ಥಿಗಳ, ಸಾರ್ವಜನಿಕರ ಹೊಟ್ಟೆ ತುಂಬಿದಂತೆ ಸರಳಾಯರ ಮನಸ್ಸೂ ತುಂಬಿ ಬರುತ್ತದೆ.

ಎರಡೂ ಕಿ.ಮಿ.ದೂರದ ಕಾಲೇಜುಗಳಿಂದಲೂ ವಿದ್ಯಾರ್ಥಿಗಳು ಬಂದು ಹತ್ತು ರೂ ಊಟ ಮಾಡಿ ಫುಲ್ ಖುಷ್ ಆಗಿ ಹಿಂತಿರುಗುತ್ತಾರೆ. `ನಮ್ಮಂಥಹಾ ವಿದ್ಯಾರ್ಥಿಗಳಿಗೆ ಹತ್ತು ರೂಗೆ ಊಟ ದೊರೆಯುವುದು ಒಂದು ರೀತಿಯ ವರದಾನ’ ಎಂದು ವಿದ್ಯಾಥಿಗಳು ಹೇಳುತ್ತಾರೆ. ಆಹಾರ ಉತ್ಪನ್ನಗಳಿಗೆ ಎಷ್ಟೇ ಜಾಸ್ತಿ ಆದರೂ ಹೋಟೆಲ್ ಗಳ ದರಪಟ್ಟಿ ದಿನೇ ದಿನೇ ಏರಿದರೂ ಸರಳಾಯರ ಹೋಟೆಲ್ ನ ಊಟದ ದರಪಟ್ಟಿ ಏರುವುದೇ ಇಲ್ಲ. ಕಳೆದ ಒಂದೆರಡು ವರ್ಷಗಳಿಂದ ಅಷ್ಟೇ ಇಲ್ಲಿನ ಊಟದ ದರ ಹತ್ತಕ್ಕೆ ಏರಿದೆ. ಸುಮಾರು 20 ವರ್ಷಗಳಿಂದ ರಾಂಪ್ರಸಾದ್ ನಲ್ಲಿ ಐದು ರುಪಾಯಿ ಚಾಲ್ತಿಯಲ್ಲಿತ್ತು.  ಅದಕ್ಕಿಂತ ಮೊದಲು ಹಲವು ವರ್ಷಗಳ ಕಾಲ ಊಟಕ್ಕೆ ನಾಲ್ಕು , ಮೂರು, ಎರಡು, ಒಂದು ರೂ ಚಾಲ್ತಿಯಲ್ಲಿತ್ತು. ಈಗಿನ ಕಾಲದಲ್ಲಿ ಒಂದು ಊಟ ಹಾಕಲು ಹತ್ತು ರೂಗಳಿಂದ ದುಪ್ಪಟ್ಟು ಖರ್ಚೇ ತಗುಲುವಾಗ ಇದು ಹೇಗೆ ಸಾಧ್ಯವಾಗುತ್ತದೆ ಎಂಬ ಸಹಜ ಕುತೂಹಲಕ್ಕೆ ಸುಂದರ ಸರಳಾಯರಲ್ಲಿ ಉತ್ತರವೂ ಇದೆ. ಇತರ ಕಾಫಿ, ತಿಂಡಿ ಸಾಮಾನ್ಯ ಬೆಲೆಗೆ ನೀಡುವುದರಿಂದ, ಕ್ಯಾಟರಿಂಗ್ ಮಾಡಿ ಇತರ ಕಡೆ ಆಹಾರ ಸರಬರಾಜು ಮಾಡುವುದರಿಂದ ದೊರೆಯುವ ಲಾಭದಲ್ಲಿ ಅದನ್ನು ಸರಿದೂಗಿಸಲಾಗುವುದು. ಅಲ್ಲದೇ ಸುಂದರ ಸರಳಾಯರ ಪುತ್ರ ರಾಘವೇಂದ್ರ ಮತ್ತು ಇತರ ಕುಟುಂಬ ಸದಸ್ಯರು ಪೂರ್ಣವಾಗಿ ಹೋಟೆಲ್ ನಲ್ಲಿ ತೊಡಗಿಸುವ ಕಾರಣ ಖರ್ಚನ್ನು ಕಡಿಮೆ ಮಾಡಿ  `ಅನ್ನಸೇವೆ’ಮಾಡುತ್ತೇವೆ ಎನ್ನುತ್ತಾರವರು. ಇವರ ಜೊತೆಗೆ ಒಂದಿಬ್ಬರನ್ನು ಸಹಾಯಕ್ಕಾಗಿ ಸೇರಿಸಿಕೊಳ್ಳುತ್ತಾರೆ. ಸರಳಾಯರಿಗೆ ಹೋಟೆಲ್ ರಂಗದಲ್ಲಿ 57 ವರ್ಷದ ಅನುಭವವಿದೆ. 43 ವರ್ಷದಿಂದ ಸ್ವಂತ ಹೋಟೆಲ್ ನಡೆಸುತ್ತಾರೆ. ಮೊದಲಿನಿಂದಲೂ ಕಡಿಮೆ ದರದ ಹೋಟೆಲ್ ಎಂಬ ಹೆಸರು ಜನಜನಿತ. ಆ ಹೆಸರನ್ನು ಸುಂದರ ಸರಳಾಯ ಮತ್ತು ಪುತ್ರರು ಇಂದಿಗೂ ಉಳಿಸಿಕೊಂಡು ಬಂದಿದ್ದಾರೆ. ತಾನು ಇರುವ ತನಕ ಇದೇ ರೀತಿಯಾಗಿ ಕಡಿಮೆ ದರದಲ್ಲಿ ಊಟ ಮತ್ತು ಆಹಾರ ನೀಡಬೇಕೆಂಬುದು ಬಯಕೆ ಎನ್ನುತ್ತಾರೆ ಸರಳಾಯರು. ಸರಳಾಯರು ತಯಾರಿಸುವ ಆಹಾರ ರುಚಿಕರವಾಗಿದೆ ಎಂಬುದು ಇನ್ನೊಂದು ವೈಶಿಷ್ಟ್ಯ.

‘ಕಡಿಮೆ ಖರ್ಚಿನಲ್ಲಿ ರುಚಿಕರವಾದ ಆಹಾರ ತಯಾರಿಸುವ ಬಗ್ಗೆ ಹಾಸ್ಟೇಲ್ ನ ಮತ್ತಿತರ ಅಡುಗೆ ಸಿಬ್ಬಂದಿಗಳಿಗೆ ಸುಂದರ ಸರಳಾಯರು ತರಬೇತಿಯನ್ನೂ ನೀಡಿದ್ದರು. ರೋಟರಿ, ಜೇಸಿಯಂತಹಾ ಹಲವು ಸಂಸ್ಥೆಗಳು ಇವರ ಸೇವೆಯನ್ನು ಮೆಚ್ಚಿ ಸನ್ಮಾನಿಸಿವೆ.

-ಎಂ ಎ ಮುಡಿಪು(ಪತ್ರಿಕೆಯಿಂದ)

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top