fbpx
Awareness

ರಕ್ಷಾ ಬಂಧನದ ಮಹತ್ವ…

ನಮ್ಮ ದೇಶ ಪರಸ್ಪರ ಭಾವನಾತ್ಮಕ ಸಂಬಂಧಗಳಿಗೆ ಹಣ, ಒಡವೆಗಳಿಗಿಂತ ಹೆಚ್ಚಿನ ಮಾನ್ಯತೆ ನೀಡಲಾಗುತ್ತದೆ. ಆದ್ದರಿಂದಲೇ ಪ್ರಪಂಚದ ಎಲ್ಲಾ ದೇಶಿಗರಿಂದ ಆಕರ್ಷಣೆಗೊಳಪಟ್ಟಿದೆ. ನಾವು ಭಾರತೀಯರೆಂದು ಹೇಳಿಕೊಳ್ಳಲು ತುಂಬಾ ಹೆಮ್ಮೆ ಎನಿಸುತ್ತದೆ ಅಲ್ಲವೇ.. ನಿಜ. ಸಂಬಂಧಗಳಲ್ಲಿ ರಕ್ತ ಸಂಬಂಧವೇ ಶಾಶ್ವತವಾದದ್ದು, ಇದನ್ನು ಬಿಟ್ಟರೆ ಮತ್ಯಾವ ಸಂಬಂಧವೂ ಶಾಶ್ವತವಲ್ಲ ಎನ್ನುವ ನಂಬಿಕೆಗಳಿಗೆ ವ್ಯತಿರಿಕ್ತವೆಂಬಂತೆ ರಕ್ತ ಸಂಬಂಧಗಳನ್ನೂ ಮೀರಿಸಿದ ಕೆಲವು ಸಂಬಂಧಗಳೂ ಪ್ರತಿಯೊಬ್ಬರ ಜೀವನದಲ್ಲಿ ಹೆಚ್ಚಿನ ಮಹತ್ವವಹಿಸುತ್ತವೆ. ಸಂಬಂಧಗಳು ಎಂದ ಮಾತ್ರಕ್ಕೆ ಕುಟುಂಬ, ಪರಿವಾರಕ್ಕೆ ಮಾತ್ರ ಸೀಮಿತವಾಗಿರದೆ ಎಲ್ಲೋ ಹುಟ್ಟಿ, ಎಲ್ಲೋ ಬೆಳೆದು, ಎಲ್ಲೋ ಸೇರಿ ಪರಸ್ಪರ ಭಾವನಾತ್ಮಕ ಸಂಬಂಧಗಳಲ್ಲಿ ಬೆಸೆದುಕೊಳ್ಳುವುದೂ ಒಂದು.

ಒಳ್ಳೆಯ ಸಹೋದರನೊಬ್ಬ ರಕ್ತ ಹಂಚಿಕೊಂಡೇ ಹುಟ್ಟಬೇಕೆಂದಿಲ್ಲ. ಬೆನ್ನಿಗೆ ಬಿದ್ದವನೇ ತಮ್ಮನೆಂದೇನೂ ಇಲ್ಲ. ರಕ್ಷಣೆಯ ಭಾರ ಅಣ್ಣನೊಬ್ಬನ ಹೆಗಲ ಮೇಲಿಲ್ಲ. ಅಣ್ಣನಷ್ಟೇ ಏಕೆ ? ಪ್ರಾಮಾಣಿಕವಾಗಿ ತನ್ನವರೆಂದುಕೊಳ್ಳುವ ಆತ್ಮೀಯ ಭಾವವನ್ನು ತೋರಿಸುವ ಹೆಣ್ಣಿನ ಮಾನ-ಪ್ರಾಣ ರಕ್ಷಿಸುವ ಪ್ರತಿಯೊಬ್ಬರೂ ಅಣ್ಣ-ತಮ್ಮಂದಿರೇ ಅಲ್ಲವೆ? ಅದಕ್ಕಾಗಿ ರಾಖಿ ಕಟ್ಟುವ ಸಂಪ್ರದಾಯ ಇರಲೇಬೇಕೆಂದೇನೂ ಇಲ್ಲ. ಹಾಗೆ ನೋಡಿದರೆ ಉತ್ತಮ ವ್ಯಕ್ತಿಯೊಬ್ಬ ತನ್ನ ಯಾವ ಪಾತ್ರದಲ್ಲೂ ಉತ್ತಮ. ಒಳ್ಳೆಯ ಮಗನಾಗಿ, ಅಣ್ಣ-ತಮ್ಮ ಸಹೋದ್ಯೋಗಿ, ಸ್ನೇಹಿತ, ಪತಿ, ತಂದೆ ಹೀಗೆ ಯಾವುದೇ ಸಂಬಂಧವಿರಲಿ ಭಕ್ಷಕರಾಗಿರದೆ ರಕ್ಷಕರನ್ನಾಗಿಸುವ ಒಂದು ಅವಿನಾಭಾವ ಆಚರಣೆಯೇ ಈ ರಕ್ಷಾ ಬಂಧನ.

ಒಡಹುಟ್ಟಿದವರಲ್ಲದೆ ಹೊರಗಿನವರನ್ನೂ ಕೂಡ ಸಹೋದರರಂತೆ ಭಾವಿಸಿ ನಡೆದುಕೊಳ್ಳಬೇಕೆಂಬ ಸಂದೇಶವನ್ನು ಸಮಾಜಕ್ಕೆ ಸಾರುವ ಹಬ್ಬವೇ ರಾಖಿ ಹಬ್ಬ. ಹಿಂದೆ ಯುದ್ಧಕ್ಕೆ ಹೋಗುವ ತಮ್ಮ ಸಹೋದರ ಮತ್ತು ಊರಿನ ಇತರೆ ಯುವಕರಿಗೆ ಮಹಿಳೆಯರು ರಾಖಿ ಕಟ್ಟಿ ಯುದ್ಧದಲ್ಲಿ ಗೆದ್ದು ಬರುವಂತೆ ಹಾರೈಸಿ ಕಳುಹಿಸುತ್ತಿದ್ದರು. ಯಾವುದೇ ಬಂಧವು ಭದ್ರವಾಗಿ ಉಳಿಯಬೇಕಾದರೆ ನಂಬಿಕೆ ಎಂಬ ಬುನಾದಿ ಅತ್ಯಗತ್ಯ. ನಂಬಿಕೆ ಇರುವವರೆಗೂ ಮಾತ್ರ ಸಂಬಂಧಗಳು ಜೀವಂತವಾಗಿರುತ್ತವೆ.ಒಂದು ಹಂತದಲ್ಲಿ ಸಂಬಂಧಗಳನ್ನು ಬೆಸೆಯುವ ಈ ನಂಬಿಕೆ ಎನ್ನುವ ಕೊಂಡಿಯನ್ನು ಆಚರಣೆಗಳ ಮೂಲಕ ನಮ್ಮೆದುರಿಗೆ ತಂದಿಡುತ್ತವೆ. ಇಂತಹ ಆಚರಣೆಗಳಲ್ಲಿ ರಕ್ಷಾ ಬಂಧನ ಹಬ್ಬವು ಒಂದು.

ದೇಶದ ವಿವಿಧ ರಾಜ್ಯಗಳಲ್ಲಿ ರಕ್ಷಾ ಬಂಧನ ಕುರಿತಂತೆ ಹಲವಾರು ಹೆಸರುಗಳಿಂದ ಕರೆಯಲ್ಪಡುವ ಹಾಗೂ ಆಚರಿಸಲ್ಪಡುವ ಹಬ್ಬವಾಗಿದೆ. ವಿಶೇಷವಾಗಿ ಹೆಣ್ಣು ಮಕ್ಕಳು ಆಚರಿಸುವ ಹಬ್ಬಗಳ ಪೈಕಿ ರಕ್ಷಾ ಬಂಧನವೂ ಕೂಡ ಒಂದಾಗಿದ್ದು, ಧಾರ್ಮಿಕ ಆಚರಣೆಯ ಜೊತೆಗೆ ಅಣ್ಣ, ತಂಗಿ ಮಧ್ಯೆ ಪರಸ್ಪರ ಬಾಂಧವ್ಯ ಬೆಸೆಯುವ ಹಬ್ಬವಾಗಿದೆ. ಪ್ರತಿವರ್ಷ ನೂಲು ಹುಣ್ಣಿಮೆ ದಿನದಂದು ಆಚರಿಸಲ್ಪಡುತ್ತದೆ. ಶ್ರಾವಣ ಮಾಸದ ನೂಲ ಹುಣ್ಣಿಮೆಯನ್ನು ರಕ್ಷಾ ಬಂಧನದ ಹಬ್ಬವನ್ನಾಗಿ ಆಚರಿಸುತ್ತಾ ಬಂದಿದೆ. ಅಂದು ಸಹೋದರಿಯರು ರಾಖಿಗಳನ್ನು (ರಕ್ಷಾ ಬಂಧನ) ಶ್ರೀ ಕೃಷ್ಣನ ಮುಂದೆ ಇರಿಸಿ ಪೂಜಿಸಿ ಅನವರತ ನಮ್ಮ ಸಹೋದರರನ್ನು ರಕ್ಷಿಸು ಎಂದು ಬೇಡಿಕೊಳ್ಳುತ್ತಾರೆ. ನಂತರ ಸಹೋದರನ ಹಣೆಗೆ ಕುಂಕುಮ, ಅಕ್ಷತೆಗಳನ್ನು ಹಚ್ಚಿ ರಕ್ಷಾ ಬಂಧನವನ್ನು ಕಟ್ಟಿ ಆರತಿ ಮಾಡಿ ಅವರ ಬದುಕಲ್ಲಿ ಯಾವಾಗಲೂ ಸಿಹಿ ತುಂಬಿರಲಿ ಎಂದು ಹಾರೈಸಿ ಸಿಹಿ ತಿನ್ನಿಸುತ್ತಾರೆ. ಸಹೋದರಿಯ ಈ ಪ್ರೀತಿಗೆ ಪ್ರತಿಯಾಗಿ ಸಹೋದರನು ಎಲ್ಲಾ ರೀತಿಯಲ್ಲೂ ರಕ್ಷಿಸುತ್ತೇನೆಂದು ಪುಟ್ಟ ಉಡುಗೊರೆಯೊಂದನ್ನು ನೀಡುವುದು ಈ ಹಬ್ಬದ ಸ್ಪೆಷಲ್.

ಹಿಂದೆ ದ್ವಾಪರ ಯುಗದಲ್ಲಿ ಶ್ರೀಕೃಷ್ಣನು ತನ್ನ ಸಂಬಂಧಿ ಶಿಶುಪಾಲ (ಮಾವ)ನನ್ನು ಸಂಹರಿಸಲು ತನ್ನ ಬೆರಳಿನಲ್ಲಿರುವ ಸುದರ್ಶನ ಚಕ್ರವನ್ನು ಕಳುಹಿಸಿದ್ದನಂತೆ. ಅದು ಹಿಂದಿರುಗುವ ಸಂದರ್ಭದಲ್ಲಿ ಬೆರಳಿಗೆ ಗಾಯವಾಗಿ ರಕ್ತ ಸೋರುತ್ತಿತ್ತಂತೆ. ಅದನ್ನು ಅಲ್ಲೆ ಇದ್ದ ದ್ರೌಪದಿಯು ನೋಡಿ ತಕ್ಷಣ ತನ್ನ ಸೀರೆಯ ಅಂಚನ್ನು ಸೀಳಿ ತೆಗೆದು ಕೃಷ್ಣನ ಬೆರಳಿಗೆ ಕಟ್ಟಿ ರಕ್ತ ಹರಿಯುವುದನ್ನು ತಡೆದಳಂತೆ.ಆಗ ಶ್ರೀ ಕೃಷ್ಣ ಪರಮಾತ್ಮನು ದ್ರೌಪದಿಗೆ ಅನವರತ ನಾನು ನಿನಗೆ ರಕ್ಷಣೆ ನೀಡುತ್ತೇನೆ ಎಂದು ಮಾತು ಕೊಟ್ಟಿದ್ದನಂತೆ. ಅಷ್ಟೇ ಅಲ್ಲದೆ ಮುಂದೆ ಭೂ ಲೋಕದಲ್ಲಿ ಯಾರು ಈ ದಿನದಂದು ತನ್ನ ಸೋದರಿಯಿಂದ ನೂಲಿನ ಎಳೆಯನ್ನು ಕಟ್ಟಿಸಿಕೊಂಡು ಸೋದರಿಯರನ್ನು ರಕ್ಷಿಸುತ್ತಿರುತ್ತಾರೋ ನಾನು ಅವರನ್ನು ರಕ್ಷಿಸುತ್ತೇನೆ ಎಂದು ವರ ನೀಡಿದ್ದರಂತೆ. ಶ್ರೀ ಕೃಷ್ಣ ಪರಮಾತ್ಮನು ಕೊಟ್ಟ ಮಾತಿನಂತೆ ದ್ರೌಪದಿಯ ವಸ್ತ್ರ ಹರಣವಾಗುತ್ತಿದ್ದಾಗ ರಕ್ಷಣೆಗೆ ಧಾವಿಸಿದನು. ಪಾಂಡವರ ವನವಾಸದಲ್ಲಿ ನನ್ನ ಸಹೋದರಿ ಹಸಿವನ್ನು ಅನುಭವಿಸಬಾರದೆಂದು ದ್ರೌಪದಿಗೆ ಎಂದೂ ಬರಿದಾಗದ ಅಕ್ಷಯ ಪಾತ್ರೆಯನ್ನೂ ನೀಡಿ ಅನೇಕ ಸಂಕಷ್ಟಗಳಿಂದ ಕಾಪಾಡುತ್ತಾ ಪಾಂಡವರ ಹಿತಕ್ಕಾಗಿ ತಂಗಿಯ ಸುಖಕ್ಕಾಗಿ ಕೊನೆಯವರೆಗೂ ಅವರೊಟ್ಟಿಗೆ ಇದ್ದನೆಂದು ಈ ಕಥೆ ಹೇಳುತ್ತದೆ. ಇಲ್ಲಿ ದ್ರೌಪದಿಯ ಸ್ವಂತ ಅಣ್ಣ ದೃಷ್ಟ್ಯದ್ಯುಮ್ನ ನಾಗಿದ್ದು, ಶ್ರೀ ಕೃಷ್ಣನಿಗೂ ದ್ರೌಪದಿಗೂ ಇರುವುದು ರಕ್ತ ಸಂಬಂಧವಲ್ಲ. ಆದರೆ, ಇದು ಭಾವನಾತ್ಮಕ ಸಂಬಂಧಕ್ಕೆ ಒಂದು ಉತ್ತಮ ನಿದರ್ಶನ. ನಮ್ಮ ದೇಶದ ಇತಿಹಾಸದ ಪುಟಗಳಲ್ಲಿ ಇನ್ನೂ ಅನೇಕ ನಿದರ್ಶನಗಳಿವೆ. ಮೊಗಲ್ ಸಂಸ್ಥಾನದ ಹುಮಾಯೂನ್-ರಾಣಿ ಕರ್ಣಾವತಿಗೆ ಸಂಬಂಧಿಸಿದಂತೆಯೂ ಒಂದು ಕಥೆ ಇದೆ. ಬಹದ್ದೂರ್ ಷಾನಿಂದ ತೊಂದರೆ ಅನುಭವಿಸುತ್ತಿದ್ದ ರಾಣಿ ಕರ್ಣಾವತಿ ಮೊಘಲ್ ದೊರೆ ಹುಮಾಯೂನ್‍ಗೆ ರಾಖಿ ಕಳುಹಿಸಿ ರಕ್ಷಣೆಯಾಚಿಸಿದ್ದಳಂತೆ. ಹುಮಾಯೂನ್ ಬಹದ್ದೂರ್ ಷಾನನ್ನು ಯುದ್ಧದಲ್ಲಿ ಮಣಿಸಿ ಕರ್ಣಾವತಿ ಕಳೆದುಕೊಂಡಿದ್ದ ರಾಜ್ಯವನ್ನು ಅವಳ ಮಗನಿಗೆ ದೊರಕುವಂತೆ ಮಾಡಿದನಂತೆ. ಪ್ರತಿಯೊಬ್ಬ ಪುರುಷನು ಶ್ರೀಕೃಷ್ಣನಂತೆ ದ್ರೌಪತಿಯನ್ನು ರಕ್ಷಿಸುವಂತಹ ಅಣ್ಣನಾಗಬೇಕು.

ಆದರೆ, ಇಂದು ಹಬ್ಬವನ್ನು ಕೇವಲ ಒಂದು ಶೋಕಿಗಾಗಿ ಆಚರಿಸಲಾಗುತ್ತಿದ್ದು, ಇದರ ಮೂಲ ಉದ್ದೇಶದ ಮೌಲ್ಯವನ್ನೇ ಕಳೆದುಕೊಂಡು ಬರಿಯ ತೋರಿಕೆಯ ಆಚರಣೆಯಾಗಿ ಬದಲಾಗುತ್ತಿರುವುದೇ ವಿಪರ್ಯಾಸ. ಏಕೆಂದರೆ ಇಂದು ದೇಶಾದ್ಯಂತ ಇರುವ ಕಾಮುಖ ಕಣ್ಣುಗಳಿಗೆ ಅದೆಷ್ಟೋ ಹೆಣ್ಣುಗಳು ಬಲಿಯಾಗುತ್ತಿವೆ. ಲೆಕ್ಕಕ್ಕೆ ಸಿಗದಷ್ಟು ಅತ್ಯಾಚಾರ ಪ್ರಕರಣಗಳು ದಾಖಲಾಗುತ್ತಿವೆ. ಹೆಣ್ಣಿನ ಮಾನವನ್ನು ಕಿತ್ತು ತಿನ್ನುವ ರಣಹದ್ದುಗಳ ಮಧ್ಯೆ ಹೆಣ್ಣಿನ ರಕ್ಷಣೆಗೆ ಅಣ್ಣನ ಭಾವನೆ ಅನಿವಾರ್ಯ.

ರಕ್ಷಾ ಬಂಧನ ಬರಿ ಒಂದು ಆಚರಣೆಯಲ್ಲ ಅದು ಸಂಬಂಧಗಳನ್ನು ಬೆಸೆಯುವ, ಭರವಸೆಯ ಆಶಾಕಿರಣವನ್ನು ಮೂಡಿಸಿ ಹೆಣ್ಣಿನ ರಕ್ಷಣೆಗೆ ನಮ್ಮ ಹಿರಿಯರು ನಮಗೆ ರೂಢಿಸಿಕೊಟ್ಟ ಒಂದು ಜವಾಬ್ದಾರಿ ಕೆಲಸ, ಅಣ್ಣನಾದವನು ತಂಗಿಗೆ ತಾನು ಬದುಕಿರುವವರೆಗೂ ರಕ್ಷಣೆ ನೀಡುತ್ತೇನೆಂದೂ, ಅಣ್ಣನ ಶ್ರೇಯಸ್ಸಲ್ಲೇ ತನ್ನ ಜೀವನವಿದೆ ಎಂದು ನಂಬಿ ಕಟ್ಟುವ ರಾಖಿಗೆ ಉಡುಗೊರೆ ಕೊಡುವುದಕ್ಕಿಂತ ಬೆಲೆಯೇ ಕಟ್ಟಲಾಗದ ನಂಬಿಕೆ ಎಂಬ ಉಡುಗೊರೆಯನ್ನು ರಕ್ಷಣೆ ಎಂಬ ಪಾತ್ರೆಯಲ್ಲಿಟ್ಟು ನೀಡಿದರೆ ಸಾಕು ಅದುವೆ ಬೆಲೆ ಕಟ್ಟಲಾಗದ ಸಂಬಂಧಗಳಿಗೆ ಬೆಲೆ ಬಾಳುವ ಉಡುಗೊರೆಯಾಗುವುದು.

source : ಈ ಸಂಜೆ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

ರಕ್ಷಾ ಬಂಧನದ ಮಹತ್ವ…
Click to comment

Leave a Reply

Your email address will not be published.

ನಮ್ಮಲ್ಲಿ ಜನಪ್ರಿಯ

To Top