fbpx
News

ನಾಡಿನ ಜನತೆಗೆ ಸ್ವಾತಂತ್ರ್ಯ ದಿನದ ಶುಭಾಶಯ ಕೋರಿದ ಸಿಎಂ.

ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಸಿಎಂ ಸಿದ್ದರಾಮಯ್ಯ ಧ್ವಜಾರೋಹಣ. ನಾಡಿನ ಜನತೆಗೆ ಸ್ವಾತಂತ್ರ್ಯ ದಿನದ ಶುಭಾಶಯ ಕೋರಿದ ಸಿಎಂ.

15-08-2016/ಬೆಳಿಗ್ಗೆ 9-00 ಗಂಟೆ/ಫೀಲ್ಡ್ ಮಾರ್ಷಲ್ ಮಾಣಿಕ್ ಷಾ ಕವಾಯತು ಮೈದಾನ, ಬೆಂಗಳೂರು

ಭಾರತದ 70 ನೇ ಸ್ವಾತಂತ್ರ್ಯ ದಿನಾಚರಣೆಯ ಈ ಸುಸಂದರ್ಭದಲ್ಲಿ ನಾಡಿನ ಎಲ್ಲಾ ಸೋದರ-ಸೋದರಿಯರಿಗೆ ತುಂಬು ಹೃದಯದ ಶುಭಕಾಮನೆಗಳು.

ಅರವತ್ತೊಂಬತ್ತು ವರ್ಷಗಳ ಹಿಂದೆ ಆಗಸ್ಟ್ 15 ರಂದು ಪರಕೀಯರ ಆಡಳಿತದ ಅಂಧಕಾರದಿಂದ ಸ್ವಾತಂತ್ರ್ಯದ ಹೊಸ ಬೆಳಕಿಗೆ ಭಾರತ ತನ್ನನ್ನು ತೆರೆದುಕೊಂಡಿತು. ಅದು ಶತಮಾನಗಳ ಕಾಲದ ವಸಾಹತುಷಾಹಿ ಪ್ರಭುತ್ವಕ್ಕೆ ಇತಿಶ್ರೀ ಹಾಡಿ ನಮ್ಮ ಬದುಕನ್ನು ನಾವೇ ಕಟ್ಟಿಕೊಳ್ಳುತ್ತೇವೆ ಎಂದು ಈ ದೇಶದ ಪ್ರಜೆಗಳು ಒಕ್ಕೊರಲ ದನಿಯಿಂದ ನಿರ್ಧರಿಸಿದ ಅಮೃತ ಘಳಿಗೆ.

ನಾವಿಂದು ಅನುಭವಿಸುತ್ತಾ ಆನಂದಿಸುತ್ತಿರುವ ಸ್ವಾತಂತ್ರ್ಯ ನಿರಾಯಾಸವಾಗಿ ಪ್ರಾಪ್ತಿಯಾದುದಲ್ಲ, ಇದು ಬ್ರಿಟಿಷರ ದಯಾಭಿಕ್ಷೆಯೂ ಆಗಿರಲಿಲ್ಲ, 1857 ರ ಮೊದಲ ಸ್ವಾತಂತ್ರ್ಯ ಸಂಗ್ರಾಮದ ಹಿನ್ನಡೆ ಅನುಭವಿಸಿದ ನಂತರ ನಮ್ಮ ದೇಶಭಕ್ತ ನಾಯಕರು ಎಚ್ಚರಿಕೆಯಿಂದ ರೂಪಿಸಿ ಮುನ್ನಡೆಸಿದ ಹೋರಾಟದ ಪ್ರಯತ್ನದ ಫಲವೇ ನಮ್ಮ ಸ್ವಾತಂತ್ರ್ಯ. ಈ ಹೋರಾಟದ ಮುಂಚೂಣಿಯಲ್ಲಿ ಇದ್ದದ್ದು 1885 ರಲ್ಲಿ ಸ್ಥಾಪನೆಯಾದ ಭಾರತ ರಾಷ್ಟ್ರೀಯ ಕಾಂಗ್ರೆಸ್. ತನ್ನ ಮೊದಲ ಆರು ದಶಕಗಳನ್ನು ಮಹಾತ್ಮ ಗಾಂಧಿ ಅವರ ನೇತೃತ್ವದಲ್ಲಿ ಸ್ವಾತಂತ್ರ್ಯ ಹೋರಾಟಕ್ಕಾಗಿ ಶ್ರಮಿಸಿದ ಕಾಂಗ್ರೆಸ್ ಪಕ್ಷ ನಂತರದ ದಿನಗಳಲ್ಲಿ ಬಲಿಷ್ಠ, ಸಮೃದ್ಧ ಭಾರತದ ನಿರ್ಮಾಣದಲ್ಲಿ ತೊಡಗಿಸಿಕೊಂಡಿತು.

ಸ್ವಾತಂತ್ರ್ಯ ಹೋರಾಟದಲ್ಲಿ ಕರ್ನಾಟಕದ ಪಾತ್ರ ಅವಿಸ್ಮರಣೀಯ. ಬ್ರಿಟಿಷರ ಕರಾಳ ಕಾನೂನುಗಳ ವಿರುದ್ಧ ಬಾಲಾಜಿ ನಿಂಬಾಳ್ಕರ್ ಹಾಗೂ ಜಡಗಬಾಲರ ನಾಯಕತ್ವದಲ್ಲಿ ಹೋರಾಡಿದ ಹಲಗಲಿಯ ಬೇಡವೀರರು, ಬೈಲಹೊಂಗಲದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, ಮೈಸೂರು ಹುಲಿ ಟಿಪ್ಪೂ ಸುಲ್ತಾನ್, ವೀರರಾಣಿ ಕಿತ್ತೂರು ಚೆನ್ನಮ್ಮ, ಬೂದಿ ಬಸಪ್ಪ ನಾಯಕ, ಸುರಪುರದ ವೆಂಕಟಪ್ಪ ನಾಯಕ, ಕೊಡಗಿನ ಸ್ವಾಮಿ ಅಪರಾಂಪರ ಮೊದಲಾದ ಧೀರ ಹೋರಾಟಗಾರರ ಬಲಿದಾನವನ್ನು ನಾವು ಈ ದಿನ ಸ್ಮರಿಸಬೇಕು.

ಅಂತೆಯೇ, ಗಾಂಧೀಜಿ ಅವರ ಕರೆಗೆ ಓಗೊಟ್ಟ, ‘ಕರ್ನಾಟಕದ ಸಿಂಹ’ ಗಂಗಾಧರ ರಾವ್ ದೇಶಪಾಂಡೆ, ಹರ್ಡೀಕರ್ ಮಂಜಪ್ಪ, ಆಲೂರು ವೆಂಕಟರಾವ್, ಮೈಲಾರ ಮಹಾದೇವಪ್ಪ್ಟ ಅವರಂತಹ ದೇಶ ಪ್ರೇಮಿಗಳು, ದಂಡಿ ಸತ್ಯಾಗ್ರಹದ ಕರೆಗೆ ಓಗೊಟ್ಟು ಕರ ನಿರಾಕರಣೆ ಮಾಡಿದ ಅಂಕೋಲದ ಸತ್ಯಾಗ್ರಹಿಗಳು, ‘ಏಸೂರು ಕೊಟ್ಟರೂ ಈಸೂರು ಬಿಡೆವು’ ಎಂದು ಬ್ರಿಟಿಷರಿಗೆ ಸವಾಲು ಹಾಕಿ ಪ್ರಾಣತ್ಯಾಗ ಮಾಡಿದ ಈಸೂರಿನ ಸತ್ಯಾಗ್ರಹಿಗಳು, ಹೀಗೆ ಭಾರತೀಯರ ಉತ್ತಮ ಭವಿಷ್ಯಕ್ಕಾಗಿ ಅಂದು ಹೆಜ್ಜೆ ಹಾಕಿದ ಸಾವಿರ ಸಾವಿರ ಧೀರ ದೇಶ ಪ್ರೇಮಿ ಕನ್ನಡಿಗರಿಗೆ ನಾವು ಈ ದಿನ ತಲೆಬಗ್ಗಿಸಿ ಗೌರವ ಸಲ್ಲಿಸಬೇಕು.

ಇಂದು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವವನ್ನು ಹೊಂದಿರುವ ದೇಶ ನಮ್ಮದು. ಹಿರಿಯರ ತ್ಯಾಗ-ಬಲಿದಾನಗಳ ಮೂಲಕ ಪಡೆದ ಸ್ವಾತಂತ್ರ್ಯದಿಂದ ನಾವು ಸಾಧಿಸಿರುವುದು ಕಡಿಮೆಯೇನಲ್ಲ. ಇಲ್ಲಿಯವರೆಗೆ ದೇಶ-ರಾಜ್ಯಗಳನ್ನು ಆಳಿದ ಎಲ್ಲಾ ಸರ್ಕಾರಗಳು ಈ ಸಾಧನೆಗೆ ಕೊಡುಗೆ ನೀಡಿರುವುದನ್ನು ನೆನಪುಮಾಡಿಕೊಂಡು ಕೃತಜ್ಞತೆ ಸಲ್ಲಿಸುವುದು ನಮ್ಮೆಲ್ಲರ ಕರ್ತವ್ಯ.

ಸ್ವಾತಂತ್ರ್ಯದ ಅರ್ಥ ಸಂಕುಚಿತವಾದುದಲ್ಲ, ವಿಶಾಲವಾದುದು. ಅದು ಕೇವಲ ರಾಜಕೀಯ ಕ್ಷೇತ್ರಕ್ಕೆ ಸೀಮಿತವಾದುದಲ್ಲ. ನಮ್ಮ ಭಾಷೆ, ಸಂಸ್ಕೃತಿ, ಆಹಾರ, ಉಡುಗೆ ತೊಡುಗೆ ಎಲ್ಲವೂ ನಮ್ಮ ಸ್ವಾತಂತ್ರ್ಯ. ಮತ್ತೊಬ್ಬರ ಈ ಸ್ವಾತಂತ್ರ್ಯವನ್ನು ಗೌರವಿಸುವುದು ನಿಜವಾದ ದೇಶಪ್ರೇಮ. ದೇಶಭಕ್ತಿ ಎನ್ನುವುದು    ರಾಜಕೀಯ ಘೋಷಣೆ ಅಲ್ಲ, ಆಗಬಾರದೂ ಕೂಡಾ. ಅದು ಪ್ರತಿಯೊಬ್ಬ ಭಾರತೀಯನ ಹೃದಯಂತರಾಳದಿಂದ ಪುಟಿದೆದ್ದು ಬರುವ ಜೀವಪರ ದನಿ. ದೇಶಭಕ್ತಿ ಎಂದರೆ ಭಾರತ ಮಾತೆಗೆ ಕೇವಲ ಜೈಕಾರ ಹಾಕುವುದಲ್ಲ. ಬಡವರ ಬಗ್ಗೆ ಕಾಳಜಿ, ಶೋಷಿತರ ಬಗ್ಗೆ ಅನುಕಂಪ. ಮಹಿಳೆಯರ ಬಗ್ಗೆ ಗೌರವ ತೋರುವುದೇ ನಿಜವಾದ ದೇಶಪ್ರೇಮ. ಸಮಾನತೆಯ ತಳಹದಿಯ ಮೇಲೆ ಸಮಾಜ ನಿರ್ಮಾಣದ ಮೂಲಕ ಸಂವಿಧಾನದ ಆಶಯಗಳನ್ನು ಪ್ರಾಮಾಣಿಕವಾಗಿ ಈಡೇರಿಸುವುದೇ ದೇಶಪ್ರೇಮ. ಈ ಪುಣ್ಯದ ಕಾಯಕವನ್ನೇ ನಮ್ಮ ಸರ್ಕಾರ ಕಳೆದ ಮೂರು ವರ್ಷಗಳಿಂದ ಮಾಡುತ್ತಾ ಬಂದಿದೆ.

ಈ ದೇಶವನ್ನು ಪರಸ್ಪರ ಪ್ರೀತಿ, ಸಹಕಾರ ಮತ್ತು ಸೌಹಾರ್ದತೆಯ ಮೂಲಕ ಕಟ್ಟಬೇಕಾಗಿದೆ. ದ್ವೇಷಾಸೂಯೆಗಳಿಂದ ಕೆಡವಿಹಾಕಬಹುದು, ಕಟ್ಟಲಾಗುವುದಿಲ್ಲ. ಸಾವು-ನೋವುಗಳು ಜಗತ್ತಿನ ಯಾವ ಮೂಲೆಯಲ್ಲಾದರೂ ನಡೆಯಲಿ, ಅದಕ್ಕಾಗಿ ನಮ್ಮ ಮನ ಮರುಗಬೇಕು, ಸಂಭ್ರಮಪಡಬಾರದು. ಶಿಕ್ಷಣ ನಮಗೆ ವಿಶಾಲ ದೃಷ್ಟಿಕೋನ ನೀಡುತ್ತದೆ, ವೈಚಾರಿಕವಾಗಿ ಬೆಳೆಸುತ್ತದೆ, ವೈಜ್ಞಾನಿಕವಾಗಿ ಯೋಚಿಸುವಂತೆ ಮಾಡುತ್ತದೆ ಎಂದು ನಾವು ತಿಳಿದಿದ್ದೆವು. ಆದರೆ, ದೇಶದಲ್ಲಿ ಇತ್ತೀಚಿಗೆ ನಡೆಯುತ್ತಿರುವ ಕೆಲವು ಅಮಾನವೀಯ ಘಟನೆಗಳು ನಮ್ಮ ಅಭಿಪ್ರಾಯವನ್ನು ಬುಡಮೇಲು ಮಾಡುವಂತಿವೆ. ದಲಿತರು, ಅಲ್ಪಸಂಖ್ಯಾತರು ಮತ್ತು ಮಹಿಳೆಯರು ಇನ್ನೂ ನಮ್ಮ ಸಮಾಜದಲ್ಲಿ ಸುರಕ್ಷಿತವಾಗಿ ಬಾಳುವ ಸ್ಥಿತಿಯಲ್ಲಿ ಇಲ್ಲ. ದಲಿತರು ಮತ್ತು ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯ, ಮಹಿಳೆಯರ ಮೇಲಿನ ಅತ್ಯಾಚಾರದ ಪ್ರಕರಣಗಳು ನಮ್ಮ ಸಮಾಜಕ್ಕೆ ಅಂಟಿದ ಕಳಂಕ. ಇಂತಹ ಅಮಾನವೀಯ ನಡವಳಿಕೆಗಳ ವಿರುದ್ಧದ ಹೋರಾಟ ಸ್ವಾತಂತ್ರ್ಯ ಹೋರಾಟದ ಮಾದರಿಯಲ್ಲಿಯೇ ನಡೆಯಬೇಕಾಗಿದೆ. ಅದು ಬಡತನ, ಅನಕ್ಷರತೆ, ಮೂಢ ನಂಬಿಕೆ, ಜಾತೀಯತೆ ಕೋಮುವಾದದ ವಿರುದ್ಧದ ಹೋರಾಟ.

ಮೂರು ವರ್ಷಗಳ ಅವಧಿಯಲ್ಲಿ ನಮ್ಮ ಸರ್ಕಾರ ಪ್ರಾಮಾಣಿಕವಾಗಿ ಮಾಡಿದ ಪ್ರಯತ್ನದ ಫಲ ಜನತಾ ಜನಾರ್ಧನರಾದ ನಿಮ್ಮ ಮುಂದಿದೆ. ಚುನಾವಣಾ ಕಾಲದಲ್ಲಿ ಪಕ್ಷದ ಪ್ರಣಾಳಿಕೆ ಮೂಲಕ ನೀಡಿದ್ದ ಭರವಸೆಗಳ ಪೈಕಿ ಮುಕ್ಕಾಲು ಪಾಲನ್ನು ಕಳೆದ ನಾಲ್ಕು ಮುಂಗಡ ಪತ್ರಗಳ ಮೂಲಕ ನಾವು ಈಡೇರಿಸಿದ್ದೇವೆ ಎಂದು ಹೇಳಿಕೊಳ್ಳುವ ಹೆಮ್ಮೆ ನಮ್ಮದು.

ಸ್ವಾತಂತ್ರ್ಯೋತ್ಸವ ಆಚರಣೆಯ ಈ ಸಂದರ್ಭದಲ್ಲಿ ನಮ್ಮ ಪಾಲಿನ ಪ್ರಭುಗಳಾದ ನಾಡ ಪ್ರಜೆಗಳಿಗೆ ನಮ್ಮ ಸಾಧನೆಯ ಹಿನ್ನೋಟ ಮತ್ತು ಯೋಜನೆಗಳ ಮುನ್ನೋಟವನ್ನು ನೀಡುವುದು ನಮ್ಮ ಸರ್ಕಾರದ ಕರ್ತವ್ಯವೂ ಆಗಿದೆ. ಸಾಗಬೇಕಾದ ದಾರಿ ಇನ್ನೂ ಇದೆ. ಸಾಗಿ ಬಂದ ದಾರಿಯ ಬಗ್ಗೆ ತೃಪ್ತಿ ಇದೆ, ಹೆಮ್ಮೆಯೂ ಇದೆ. ಮುಂದೆ ಸಾಗಬೇಕಾದ ದಾರಿಯನ್ನು ಕ್ರಮಿಸುವ ಆತ್ಮವಿಶ್ವಾಸವಿದೆ.

ನಮ್ಮದು ರೈತಪರ ಸರ್ಕಾರ ಎನ್ನುವುದು ಕೇವಲ ಘೋಷಣೆಯಲ್ಲ. ನುಡಿದಂತೆ ನಡೆದು ತೋರಿಸಿದ್ದೇವೆ. ಆದರೆ ಪ್ರಕೃತಿ ಎದುರು ಮಾನವ ಅಸಹಾಯಕ. ಕಳೆದ ಐದು ವರ್ಷಗಳಿಂದ ರಾಜ್ಯ ನಿರಂತರವಾಗಿ ಬರಗಾಲಕ್ಕೆ ತುತ್ತಾಗಿರುವುದರಿಂದ ರಾಜ್ಯದ ರೈತರು ಕಷ್ಟದಲ್ಲಿದ್ದಾರೆ.

ಕಳೆದ ವರ್ಷದ ಮಳೆ ಅಭಾವದಿಂದಾಗಿ ರಾಜ್ಯದ 176 ತಾಲ್ಲೂಕುಗಳ ಪೈಕಿ 136 ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಬೇಕಾಯಿತು. ಇಂತಹ ಕಷ್ಟದ ಕಾಲದಲ್ಲಿ ಎಂದಿನಂತೆ ನೊಂದ ಜನತೆಯ ಜೊತೆ ಸರ್ಕಾರ ದೃಢವಾಗಿ ನಿಂತು ಕೊಂಡಿತ್ತು.

ನಾನೇ ಖುದ್ದಾಗಿ ಬರಪೀಡಿತ 18 ಜಿಲ್ಲೆಗಳಿಗೆ ಭೇಟಿ ನೀಡಿ ಜನರ ಕಷ್ಟಗಳನ್ನು ಆಲಿಸಿದ್ದೇನೆ, ಜನರಿಗೆ ಕುಡಿಯುವ ನೀರು ಮತ್ತು ಉದ್ಯೋಗ, ಜಾನುವಾರುಗಳಿಗೆ ಗೋಶಾಲೆ, ಮೇವು ಮತ್ತು ಔಷಧಿ ಒದಗಿಸುವ ಪರಿಹಾರ ಕಾರ್ಯದ ಮೇಲ್ವಿಚಾರಣೆ ನಡೆಸಿದ್ದೇನೆ.

ಬರಗಾಲದ ಕಾರಣಕ್ಕಾಗಿ ಮಧ್ಯಮಾವಧಿ ಮತ್ತು ದೀರ್ಘಾವಧಿ ಕೃಷಿ ಸಾಲಗಳ ಪಾವತಿಯನ್ನು ಒಂದು ವರ್ಷ ಮುಂದೂಡಲಾಗಿದೆ. ಅಲ್ಲದೆ, 2015 ರ ಸೆಪ್ಟೆಂಬರ್ 30 ರ ವರೆಗೆ ಬಾಕಿ ಇರುವ ಸಹಕಾರಿ ಸಂಘಗಳ ಸಾಲದ ಮೇಲಿನ ಬಡ್ಡಿಯನ್ನು ಮನ್ನಾ ಮಾಡಲಾಗಿದೆ. ಇದರಿಂದ 2.07 ಲಕ್ಷ ರೈತರಿಗೆ 316.54 ಕೋಟಿ ರೂ. ನೆರವು ನೀಡಿದಂತಾಗಿದೆ.

ಕಳೆದೆರಡು ವರ್ಷಗಳಲ್ಲಿ ರೈತರಿಗೆ ಕೊಡುವಂತಹ ಅಲ್ಪಾವಧಿ, ಮಧ್ಯಮಾವಧಿ ಮತ್ತು ದೀರ್ಘಾವಧಿ ಸಾಲದ ಪ್ರಮಾಣ ಶೇಕಡಾ 50 ಕ್ಕಿಂತಲೂ ಹೆಚ್ಚಾಗಿದೆ. ಸುಮಾರು 1800 ಕೋಟಿ ರೂಪಾಯಿಗಳಷ್ಟು ಬಡ್ಡಿಯನ್ನು ಸರ್ಕಾರವೇ ಭರಿಸಿದೆ.

ರಾಜ್ಯದ ರೈತರು ರಾಷ್ಟ್ರೀಕೃತ ಬ್ಯಾಂಕ್‍ಗಳ ಮೂಲಕ ಪಡೆದ ಸಾಲದ ಮೊತ್ತ 29 ಸಾವಿರ ಕೋಟಿ ರೂಪಾಯಿಗಳಷ್ಟಿದೆ. ಈ ಮೊತ್ತದಲ್ಲಿ ಅರ್ಧದಷ್ಟನ್ನಾದರೂ ಕೇಂದ್ರ ಸರ್ಕಾರ ಮನ್ನಾ ಮಾಡಿದರೆ, ಸಹಕಾರಿ ಸಂಘಗಳ ಮೂಲಕ ರೈತರು ಪಡೆದ ಸಾಲದ ಅರ್ಧದಷ್ಟನ್ನು ಮನ್ನಾ ಮಾಡಲು ರಾಜ್ಯ ಸರ್ಕಾರ ಸಿದ್ಧವಿದೆ.

ರಾಜ್ಯದ ಯಾವ ವ್ಯಕ್ತಿಯೂ ಚಿಕಿತ್ಸೆಯ ಕೊರತೆಯಿಂದ ನರಳುವಂತಾಗಬಾರದು ಎಂಬುದು ನಮ್ಮ ಸರ್ಕಾರದ ಸದಾಶಯವಾಗಿದೆ. ಕಳೆದ ಮೂರು ವರ್ಷಗಳಿಂದ ಈ ನಿಟ್ಟಿನಲ್ಲಿ ನಮ್ಮ ಪ್ರಯತ್ನ ಸಾಗಿದೆ. ಬಡತನದ ಕಾರಣಕ್ಕಾಗಿ ವೈದ್ಯಕೀಯ ಚಿಕಿತ್ಸೆ ಪಡೆದುಕೊಳ್ಳಲಾಗದ 65 ಸಾವಿರ ರೋಗಿಗಳಿಗೆ ಕಳೆದ ಮೂರು ವರ್ಷಗಳ ಅವಧಿಯಲ್ಲಿ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ 200 ಕೋಟಿ ರೂ. ನೆರವು ನೀಡಲಾಗಿದೆ.

ಮುಖ್ಯಮಂತ್ರಿಯಾಗಿ ಮೊದಲ ಬಜೆಟ್ ಮಂಡಿಸಿದಾಗ ಶಿಶು ಮರಣ ಪ್ರಮಾಣವನ್ನು ಪ್ರತಿ ಸಾವಿರಕ್ಕೆ 24 ಕ್ಕೆ ಇಳಿಸುವುದು ನಮ್ಮ ಸಂಕಲ್ಪ ಎಂದು ಹೇಳಿದ್ದೆ. ಕಳೆದ ಮೂರು ವರ್ಷಗಳ ಅವಧಿಯಲ್ಲಿ ಶಿಶು ಮರಣ ಪ್ರಮಾಣವನ್ನು ಸಾವಿರಕ್ಕೆ 38 ರಿಂದ 28 ಕ್ಕೆ ಇಳಿಸಿದ್ದೇವೆ. ಇದೇ ಅವಧಿಯಲ್ಲಿ ಐದು ವರ್ಷದೊಳಗಿನ ಮಕ್ಕಳ ಮರಣ ಪ್ರಮಾಣವನ್ನು ಸಾವಿರಕ್ಕೆ 37 ಇಳಿಸುವ ಮೂಲಕ ಮಿಲೇನಿಯಂನ ಗುರಿಯನ್ನು ಸಾಧಿಸಿದ್ದೇವೆ.

ರಾಜ್ಯದ ಎಲ್ಲಾ ಜಿಲ್ಲಾ ಆಸ್ಪತ್ರೆ ಹಾಗೂ ಪ್ರತಿಯೊಂದು ಜಿಲ್ಲೆಯ ಒಂದು ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಒಟ್ಟು 57 ಡಯಾಲಿಸಿಸ್ ಘಟಕ ಸ್ಥಾಪಿಸಲಾಗಿದೆ. ಮೂತ್ರ ಪಿಂಡ ರೋಗದಿಂದ ನರಳುತ್ತಿರುವ ರೋಗಿಗಳಿಗೆ ನಿಯತವಾಗಿ ವಾರಕ್ಕೆ ಎರಡು-ಮೂರು ಬಾರಿ ಡಯಾಲಿಸಿಸ್ ಚಿಕಿತ್ಸೆಯನ್ನು ನೀಡಲಾಗುತ್ತಿದೆ.

ಆಯುಷ್ ಇಲಾಖೆಯನ್ನು ಮತ್ತಷ್ಟು ಜನ-ಸ್ನೇಹಿ ಮಾಡಲು ಯೋಜಿಸಲಾಗಿದೆ. ಮುಂದಿನ ಎರಡು ವರ್ಷಗಳಲ್ಲಿ ಮಂಗಳೂರು, ಗದಗ, ಚಿಕ್ಕಬಳ್ಳಾಪುರ ಮತ್ತು ದಾವಣಗೆರೆ ನಗರಗಳಲ್ಲಿ 50 ಹಾಸಿಗೆಗಳ ಆಯುಷ್ ಸಂಯುಕ್ತ ಆಸ್ಪತ್ರೆಗಳನ್ನು ಪ್ರಾರಂಭಿಸಲು ಯೋಜಿಸಲಾಗಿದೆ. ಅಂತೆಯೇ, ಮೈಸೂರು ನಗರದಲ್ಲಿ 100-ಹಾಸಿಗೆಗಳ ಹೈ-ಟೆಕ್ ಪಂಚಕರ್ಮ ಆಸ್ಪತ್ರೆ ಹಾಗೂ 100-ಹಾಸಿಗೆಗಳ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ಆಸ್ಪತ್ರೆಯನ್ನು ಪ್ರಾರಂಭಿಸಲಾಗುವುದು.

ಅನ್ನಭಾಗ್ಯ ಯೋಜನೆಯಡಿ ಪ್ರತಿ ಫಲಾನುಭವಿಗೆ ಒಂದು ಕೆ ಜಿ ಅಕ್ಕಿಯನ್ನು ಹೆಚ್ಚುವರಿಯಾಗಿ ಕೊಡುವ ಹಾಗೂ ಬಡತನ ರೇಖೆಗಿಂತಲೂ ಕೆಳಗಿರುವ ಪಡಿತರ ಚೀಟಿ ಹೊಂದಿರುವವರಿಗೆ ರಿಯಾಯಿತಿ ದರದಲ್ಲಿ ಒಂದು ಕೆ ಜಿ ತೊಗರಿಬೇಳೆ ನೀಡುವ ಪ್ರಸ್ತಾವನೆ ಸರ್ಕಾರದ ಪರಿಶೀಲನೆಯಲ್ಲಿದೆ.

ರಾಜ್ಯ ಸರ್ಕಾರದ ಮತ್ತೊಂದು ಮಹತ್ವಾಕಾಂಕ್ಷೆಯ ಕ್ಷೀರ ಭಾಗ್ಯ ಯೋಜನೆ ರಾಜ್ಯದ 1.08 ಕೋಟಿ ಮಕ್ಕಳ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಗೆ ವರದಾನವಾಗಿದೆ. ವಾರಕ್ಕೆ ಮೂರು ದಿನ 150 ಮಿಲಿ ಲೀಟರ್ ಕೆನೆ-ಭರಿತ ಹಾಲು ವಿತರಿಸುತ್ತಿರುವ ಈ ಯೋಜನೆಯನ್ನು ವಾರಕ್ಕೆ ಐದು ದಿನಗಳ ಅವಧಿಗೆ ವಿಸ್ತರಿಸಲಾಗುವುದು.

ಮಕ್ಕಳ ಮನಸ್ಸಿನಲ್ಲಿ ಅಸಮಾನತೆ ಹಾಗೂ ತಾರತಮ್ಯದ ನೋವು ನುಸುಳಬಾರದು ಎಂಬ ಸದುದ್ದೇಶದಿಂದ ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ 1 ರಿಂದ 10 ನೇ ತರಗತಿಯವರೆಗಿನ ಎಲ್ಲಾ ಮಕ್ಕಳಿಗೆ ಸಮವಸ್ತ್ರ ನೀಡುವುದರ ಜೊತೆಗೆ ಬೂಟು (ಷೂ) ಮತ್ತು ಕಾಲು ಚೀಲ (ಸಾಕ್ಸ್) ವಿತರಿಸುವ 113 ಕೋಟಿ ರೂ. ಯೋಜನೆಗೆ  ಪ್ರಸಕ್ತ ಸಾಲಿನಲ್ಲಿ ಚಾಲನೆ ನೀಡಲಾಗಿದೆ.

ರಸ್ತೆಗಳು ಅಭಿವೃದ್ಧಿಯ ಪಥಗಳು. ಅತ್ಯುತ್ತಮ ರಸ್ತೆಗಳು ನಿರ್ಮಾಣವಾದಲ್ಲಿ ರಸ್ತೆಯ ಇಕ್ಕೆಲೆಗಳಲ್ಲಿರುವ ಗ್ರಾಮಗಳಲ್ಲಿ ಆರ್ಥಿಕ ಚಟುವಟಿಕೆಗಳು ಪ್ರಾರಂಭವಾಗಲಿವೆ ಎಂಬುದು ಸರ್ಕಾರದ ದೂರದೃಷ್ಟಿ.

ರಾಜ್ಯದಲ್ಲಿ 8,927 ಕಿ.ಮೀ. ರಾಜ್ಯ ಹೆದ್ದಾರಿಗಳು ಮತ್ತು 17,163 ಕಿ.ಮೀ. ಜಿಲ್ಲಾ ಮುಖ್ಯ ರಸ್ತೆಗಳ ಅಭಿವೃದ್ಧಿ, ನವೀಕರಣವನ್ನು ಪೂರ್ಣಗೊಳಿಸಲಾಗಿದೆ. ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪ ಯೋಜನೆಗಳ ಅಡಿಯಲ್ಲಿ 2,778 ಕಿ.ಮೀ. ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡಲಾಗಿದೆ. ರಾಜ್ಯದಲ್ಲಿ 1,668 ಕಿ.ಮೀ. ಹೊಸ ರಾಷ್ಟ್ರೀಯ ಹೆದ್ದಾರಿಗಳ ಘೋಷಣೆಯಾಗಿದೆ. ಅಲ್ಲದೆ, 3800 ಕಿ.ಮೀ. 43 ಹೊಸ ರಾಷ್ಟ್ರೀಯ ಹೆದ್ದಾರಿಗಳನ್ನಾಗಿ ಮೇಲ್ದರ್ಜೆಗೇರಿಸಲು ತಾತ್ವಿಕ ಅನುಮೋದನೆ ನೀಡಲಾಗಿದೆ. ರಾಜ್ಯದಲ್ಲಿ ಪ್ರಮುಖ ರಸ್ತೆಗಳನ್ನು ಜೋಡಿಸುವ ಸೇತುವೆಗಳನ್ನು ಅಭಿವೃದ್ಧಿಪಡಿಸಲು 1,000 ಕೋಟಿ ರೂ. ಮೊತ್ತದಲ್ಲಿ ಯೋಜನೆ ರೂಪಿಸಲಾಗುತ್ತಿದೆ.

ಗುಡಿಸಲು ಮುಕ್ತ ಕರ್ನಾಟಕದ ಕನಸು ನನಸುಗೊಳಿಸುವಲ್ಲಿ ನಮ್ಮ ಸರ್ಕಾರ ಯಶಸ್ಸಿನ ಹಾದಿಯಲ್ಲಿದೆ. ಐದು ವರ್ಷಗಳಲ್ಲಿ 15 ಲಕ್ಷ ಮನೆಗಳನ್ನು ನಿರ್ಮಿಸಬೇಕೆಂಬುದು ನಮ್ಮ ಗುರಿಯಾಗಿತ್ತು. ಮೂರು ವರ್ಷಗಳ ಅವಧಿಯಲ್ಲಿ ಸರ್ಕಾರ 8.5 ಲಕ್ಷ ಮನೆಗಳನ್ನು ನಿರ್ಮಿಸಿ ದಾಖಲೆ ಮಾಡಿದೆ. ಇದೇ ಅವಧಿಯಲ್ಲಿ 32 ಸಾವಿರ ನಿವೇಶನಗಳನ್ನು ಹಂಚಿಕೆ ಮಾಡಿದ್ದೇವೆ. ಇದಕ್ಕಾಗಿ ವೆಚ್ಚ ಮಾಡಿರುವ ಹಣ 7540 ಕೋಟಿ ರೂಪಾಯಿ.

ಆಶ್ರಯ ಯೋಜನೆಯಡಿ ಹಿಂದಿನ ವರ್ಷಗಳಲ್ಲಿ 10.84 ಲಕ್ಷ ಫಲಾನುಭವಿಗಳಿಗೆ ನೀಡಲಾಗಿದ್ದ 1458 ಕೋಟಿ ರೂ ಸಾಲ ಹಾಗೂ 1030 ಕೋಟಿ ರೂ ಬಡ್ಡಿ ಸೇರಿದಂತೆ 2488 ಕೋಟಿ ರೂ ಮನ್ನಾ ಮಾಡಲಾಗಿದೆ.

ಮುಂದಿನ ಎರಡು ವರ್ಷಗಳಲ್ಲಿ ಆರು ಲಕ್ಷ ಮನೆಗಳ ನಿರ್ಮಾಣ ಹಾಗೂ ನಲವತ್ತು ಸಾವಿರ ನಿವೇಶನಗಳನ್ನು ಹಂಚಲು ಗುರಿ ಹೊಂದಲಾಗಿದೆ. ಇದರಲ್ಲಿ ಡಾ ಬಿ. ಆರ್. ಅಂಬೇಡ್ಕರ್ ನಿವಾಸ್ ಯೋಜನೆಯಡಿ ಗ್ರಾಮೀಣ ಪ್ರದೇಶದಲ್ಲಿ 1,60,000 ಮನೆಗಳು ಹಾಗೂ ನಗರ ಪ್ರದೇಶದಲ್ಲಿ 90,000 ಮನೆಗಳನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ವಿತರಿಸುವ ಗುರಿ ಹೊಂದಲಾಗಿದೆ.

ವಿಶೇಷ ವಸತಿ ಯೋಜನೆಯನ್ನು ದೇವರಾಜ ಅರಸು ವಸತಿ ಯೋಜನೆ ಎಂದು ಮರು ನಾಮಕರಣ ಮಾಡಲಾಗಿದೆ. ಈ ಯೋಜನೆಯಡಿ 14 ವಿಶೇಷ ವರ್ಗದವರಿಗಾಗಿ 20,000 ಮನೆಗಳನ್ನು ನಿರ್ಮಿಸಿ ವಿತರಿಸುವ ಗುರಿ ನಿಗದಿಪಡಿಸಲಾಗಿದೆ.

ನಗರದ ಸ್ವಚ್ಛತೆಯನ್ನು ಕಾಯ್ದುಕೊಳ್ಳುವಲ್ಲಿ ಮಹತ್ತರ ಪಾತ್ರ ನಿರ್ವಹಿಸುವ ಪೌರ ಕಾರ್ಮಿಕರಿಗೆ ಮನೆ ಒದಗಿಸುವ ಪೌರ ಕಾರ್ಮಿಕರ ಗೃಹ ಭಾಗ್ಯ ಯೋಜನೆಯನ್ನು ಜಾರಿಗೆ ತರಲಾಗಿದೆ. ಈ ಯೋಜನೆಯಲ್ಲಿ ಪ್ರತಿ ಮನೆಯ ನಿರ್ಮಾಣದ ಗರಿಷ್ಠ ಘಟಕ ವೆಚ್ಚ 7.5 ಲಕ್ಷ ರೂ. ನಿಗದಿಪಡಿಸಲಾಗಿದೆ. ಇದರಲ್ಲಿ ಫಲಾನುಭವಿಗೆ ಶೇಕಡಾ 80 ರಷ್ಟು ಅಂದರೆ 6 ಲಕ್ಷ ರೂ ಅನುದಾನ ನೀಡಲಾಗುವುದು. ಮುಂದಿನ ಎರಡು ವರ್ಷಗಳಲ್ಲಿ ವಿವಿಧ ಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಖಾಯಂ ಪೌರ ಕಾರ್ಮಿಕರಿಗೆ ಈ ಯೋಜನೆಯ ಅಡಿಯಲ್ಲಿ 4500 ವಸತಿ ಗೃಹಗಳನ್ನು ನಿರ್ಮಿಸಿಕೊಡಲಾಗುವುದು.

ವಿದ್ಯುತ್ ಎಂಬುದು ಅಭಿವೃದ್ಧಿಯ ಜೀವ ನಾಡಿ ಎನಿಸಿದೆ. ಕಳೆದ ಮೂರು ವರ್ಷಗಳ ಅವಧಿಯಲ್ಲಿ  1,333.85 ಮೆಗಾ ವ್ಯಾಟ್‍ನಷ್ಟು ವಿದ್ಯುತ್ ಉತ್ಪಾದನೆ ಸಾಮಥ್ರ್ಯ ಹೆಚ್ಚಾಗಿದೆ. ಇದರಲ್ಲಿ ಪರಿಸರ-ಸ್ನೇಹಿ ಪರ್ಯಾಯ ಇಂಧನ ಮೂಲಗಳಿಂದ 365.85 ಮೆಗಾವ್ಯಾಟ್ ಸಾಮಥ್ರ್ಯದ ವಿದ್ಯುತ್ ಸೇರ್ಪಡೆಯಾಗಿದೆ.

ಪ್ರಸಕ್ತ ಹಣಕಾಸು ವರ್ಷದ ಅಂತ್ಯಕ್ಕೆ ಯರಮರಸ್ ಘಟಕ-1 ಹಾಗೂ ಘಟಕ-2 ರಿಂದ ಒಟ್ಟಾರೆ 1600 ಮೆಗಾ ವ್ಯಾಟ್ ಸೇರ್ಪಡೆಯಾಗುವ ನಿರೀಕ್ಷೆ ಇದೆ.

ಯಲಹಂಕದಲ್ಲಿ 370 ಮೆಗಾ ವ್ಯಾಟ್ ಸಾಮಥ್ರ್ಯದ ಅನಿಲ ಆಧಾರಿತ ವಿದ್ಯುತ್ ಉತ್ಪಾದನಾ ಕೇಂದ್ರದ ಕಾಮಗಾರಿಗಳಿಗೆ ಈಗಾಗಲೇ ಚಾಲನೆ ನೀಡಲಾಗಿದೆ. ಅಲ್ಲದೆ, ತುಮಕೂರು ಜಿಲ್ಲೆಯ ಪಾವಗಡ ತಾಲ್ಲೂಕಿನ 12,000 ಎಕರೆ ಪ್ರದೆಶದಲ್ಲಿ 2000 ಮೆಗಾ ವ್ಯಾಟ್ ಸಾಮಥ್ರ್ಯದ ಸೌರ ಉದ್ಯಾನ (ಸೋಲಾರ್ ಪಾರ್ಕ್) ಸ್ಥಾಪಿಸುವ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ.

ಕಳೆದ ಮೂರು ವರ್ಷಗಳಿಂದ ಬಂಡವಾಳ ಹೂಡಿಕೆದಾರರಿಗೆ ಇಡೀ ರಾಷ್ಟ್ರದಲ್ಲೇ ಕರ್ನಾಟಕ ರಾಜ್ಯವು ನೆಚ್ಚಿನ ತಾಣವಾಗಿದೆ ಎಂದು ಹೇಳಲು ಹೆಮ್ಮೆಯಾಗುತ್ತಿದೆ.

ಕೇಂದ್ರ ಸರ್ಕಾರವೇ ಇತ್ತೀಚೆಗೆ ಬಿಡುಗಡೆಗೊಳಿಸಿರುವ ಅಂಕಿ-ಅಂಶಗಳ ಪ್ರಕಾರ ಪ್ರಸಕ್ತ ವರ್ಷದ ಜನವರಿ ತಿಂಗಳಿನಿಂದ ಜೂನ್ ವರೆಗಿನ ಅವಧಿಯಲ್ಲಿ 67,757 ಕೋಟಿ ರೂಪಾಯಿ ಬಂಡವಾಳವು ರಾಜ್ಯದಲ್ಲಿ ಹೂಡಿಕೆಯಾಗಿ, ಇಡೀ ದೇಶದಲ್ಲಿಯೇ ನಮ್ಮ ಕರ್ನಾಟಕವು ಮೊದಲ ಸ್ಥಾನ ಪಡೆದಿದೆ.

ಪ್ರಸಕ್ತ ಸಾಲಿನ ಫೆಬ್ರವರಿಯಲ್ಲಿ ಆಯೋಜಿಸಿದ್ದ “ಇನ್‍ವೆಸ್ಟ್ ಕರ್ನಾಟಕ 2016” ವಿಶ್ವ ಬಂಡವಾಳ ಹೂಡಿಕೆದಾರರ ಸಮ್ಮೇಳನದಲ್ಲಿ 1.77 ಲಕ್ಷ ಕೋಟಿ ರೂ ಬಂಡವಾಳ ಭರವಸೆಗಳ 1080 ಯೋಜನೆಗಳಿಗೆ ಅನುಮೋದನೆ ದೊರೆತಿದೆ. ಇದರಿಂದ 4.82 ಲಕ್ಷ ಉದ್ಯೋಗ ಸೃಷ್ಟಿಯಾಗಲಿದೆ. ಅಲ್ಲದೆ, ಈ ಕಾರ್ಯಕ್ರಮದಲ್ಲಿ 122 ಯೋಜನೆಗಳ ಒಡಂಬಡಿಕೆಗಳಿಗೆ ಸಹಿ ಮಾಡಲಾಗಿದೆ. ರಾಜ್ಯದಲ್ಲಿ ಬಂಡವಾಳ ಹೂಡಿಕೆದಾರರನ್ನು ಆಕರ್ಷಿಸಲು “ಇನ್‍ವೆಸ್ಟ್ ಕರ್ನಾಟಕ ಫೋರಂ” ಸಂಸ್ಥೆಯನ್ನು ಸ್ಥಾಪಿಸಲಾಗಿದೆ.

ರಾಜ್ಯದ ಪ್ರಮುಖ ನಗರಗಳಲ್ಲಿ ಉಚಿತ ವೈ-ಫೈ ಹಾಟ್‍ಸ್ಪಾಟ್‍ಗಳನ್ನು ಹಾಗೂ ಎಲ್ಲಾ ಪಂಚಾಯತ್‍ಗಳಲ್ಲಿ ಉಚಿತ ವೈ-ಫೈ ಸೌಲಭ್ಯವನ್ನು ಒದಗಿಸುವ ಮಹತ್ವಾಕಾಂಕ್ಷೆಯ ಯೋಜನೆಯನ್ನು ಶೀಘ್ರವೇ ಜಾರಿಗೆ ತರಲಾಗುವುದು.

ಕಾವೇರಿ ಹಾಗೂ ಕೃಷ್ಣಾ ಕೊಳ್ಳದ ಎಲ್ಲಾ ನೀರಾವರಿ ಯೋಜನೆಗಳಿಗಾಗಿ ಮುಂದಿನ ಐದು ವರ್ಷಗಳಲ್ಲಿ ವರ್ಷಕ್ಕೆ 10,000 ಕೋಟಿ ರೂ ನಂತೆ 50,000 ಕೋಟಿ ರೂ ವೆಚ್ಚ ಮಾಡಬೇಕೆಂಬ ನಿರ್ಧಾರ ಕೈಗೊಂಡಿದ್ದೆವು. ಇದೀಗ ಐದು ವರ್ಷಗಳಲ್ಲಿ ರಾಜ್ಯ ಸರ್ಕಾರವು ನೀರಾವರಿ ಯೋಜನೆಗಳಿಗೆ ಮಾಡುವ ವೆಚ್ಚ 50,000 ಕೋಟಿ ರೂ ಅಲ್ಲ, 60,000 ಕೋಟಿ ರೂ ತಲುಪುವ ನಿರೀಕ್ಷೆ ಇದೆ. ಇದು ರೈತರ ಬಗೆಗಿನ ನಮ್ಮ ಸರ್ಕಾರದ ಕಾಳಜಿ ಮತ್ತು ಬದ್ಧತೆಯನ್ನು ಬಿಂಬಿಸುತ್ತದೆ.

ನಾಡಿನ ಜಲ-ನೆಲ-ಭಾಷೆಯ ವಿಚಾರದಲ್ಲಿ ರಾಜ್ಯದ ಎಲ್ಲಾ ರಾಜಕೀಯ ಪಕ್ಷಗಳು ಪಕ್ಷಭೇದ ಮರೆತು ಒಗ್ಗಟ್ಟಿನ ಪ್ರದರ್ಶನ ಮಾಡಿಕೊಂಡು ಬಂದ ಆರೋಗ್ಯಕರ ಪರಂಪರೆ ನಮ್ಮದು. ಕೃಷ್ಣಾ ಮತ್ತು ಕಾವೇರಿ ನದಿ ನೀರು ಹಂಚಿಕೆ ವಿವಾದವನ್ನು ಇದೇ ರೀತಿಯಲ್ಲಿ ನಾವು ಎದುರಿಸಿದ್ದೇವೆ.

ಮಹದಾಯಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ನಡೆದ ಸರ್ವಪಕ್ಷಗಳ ಸಭೆಯಲ್ಲಿ ರಾಜಕೀಯ ಪಕ್ಷಗಳ ನಾಯಕರು ವ್ಯಕ್ತಪಡಿಸಿದ ಒಮ್ಮತದ ಸಹಕಾರಕ್ಕೆ ನಾನು ಅಭಾರಿಯಾಗಿದ್ದೇನೆ. ನೆಲ-ಜಲ-ಭಾಷೆಯ ವಿಚಾರದಲ್ಲಿ ರಾಜ್ಯದ ಹಿತಾಸಕ್ತಿಯ ಸಂಪೂರ್ಣ ರಕ್ಷಣೆ ಮಾಡಲಾಗುವುದು. ಇದರಲ್ಲಿ ನಮ್ಮ ಸರ್ಕಾರ ಯಾವುದೇ ರೀತಿಯ ರಾಜಿಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ. ಈ ವಿಷಯದಲ್ಲಿ ಅನಗತ್ಯ ಪ್ರಚೋದನೆ ಇಲ್ಲವೆ ಭಾವೋಧ್ವೇಗಕ್ಕೆ ಒಳಗಾಗದೆ ಸರ್ಕಾರದ ಮೇಲೆ ಭರವಸೆ ಇಟ್ಟು ಸಹಕರಿಸಬೇಕೆಂಬುದೇ ರಾಜ್ಯದ ಜನತೆಯಲ್ಲಿ ನನ್ನ ಕಳಕಳಿಯ ಪ್ರಾರ್ಥನೆ.

ಕೃಷ್ಣಾ ಮೇಲ್ದಂಡೆ ಯೋಜನೆಯ ಮೂರನೆ ಹಂತದ ಅನುಷ್ಠಾನಕ್ಕೆ ಸರ್ಕಾರ ಆದ್ಯತೆ ನೀಡಿದೆ. ಈ ಯೋಜನೆಯ ಉಪ ಯೋಜನೆಗಳಾದ ಮುಳವಾಡ, ಕೊಪ್ಪಳ, ಮಲ್ಲಾಬಾದ್, ರಾಂಪುರ, ಚಿಮ್ಮಲಗಿ, ಇಂಡಿ, ಏತ ನೀರಾವರಿ ಯೋಜನೆಗಳು, ನಾರಾಯಣಪುರ ಬಲದಂಡೆ ಕಾಲುವೆ ವಿಸ್ತರಣೆ ಮತ್ತು ಹೆರ್ಕಲ್ ಏತ ನೀರಾವರಿ ಯೋಜನೆಗಳು ಅನುಷ್ಠಾನದ ಹಾದಿಯಲ್ಲಿವೆ.     ಕುಡಿಯುವ ನೀರಿನ ಕೊರತೆ ಎದುರಿಸುತ್ತಿರುವ ಜಿಲ್ಲೆಗಳಿಗೆ ಕುಡಿಯುವ ನೀರು ಒದಗಿಸಲು 13 ಸಾವಿರ ಕೋಟಿ ರೂ. ವೆಚ್ಚದ ಎತ್ತಿನಹೊಳೆ ಯೋಜನೆಯ ಮೊದಲ ಹಂತದ ಕಾಮಗಾರಿ ಭರದಿಂದ ಸಾಗಿದೆ. ಸಿಂಗಟಾಲೂರು ಏತ ನೀರಾವರಿ ಯೋಜನೆಯ ಅಂದಾಜು ಮೊತ್ತವನ್ನು 5768 ಕೋಟಿ ರೂ. ಗಳಿಗೆ ಪರಿಷ್ಕರಿಸಿ ಒಟ್ಟು 2.65 ಲಕ್ಷ ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಲು ಕ್ರಮಕೈಗೊಳ್ಳಲಾಗಿದೆ.

ಆಲಮಟ್ಟಿ ಆಣೆಕಟ್ಟನ್ನು 524.25 ಮೀಟರ್‍ಗೆ ಏರಿಸುವ ಉದ್ದೇಶಕ್ಕಾಗಿ ಮುಳುಗಡೆ ಪ್ರದೇಶದ ಭೂ ಸ್ವಾಧೀನ ಪುನರ್ವಸತಿ ಹಾಗೂ ಪುನರ್ ನಿರ್ಮಾಣ ಕಾಮಗಾರಿಗಳನ್ನು ಚುರುಕುಗೊಳಿಸಲು ಉನ್ನತಮಟ್ಟದ ಸಮಿತಿ ಮತ್ತು ಕ್ರಿಯಾ ಯೋಜನೆ ಪರಿಶೀಲನಾ ಸಮಿತಿಯನ್ನು ರಚಿಸಲಾಗಿದೆ.

ಮಳೆಗಾಲದಲ್ಲಿ ಹೆಚ್ಚುವರಿಯಾಗಿ ಹರಿದು ಸಮುದ್ರ ಸೇರುವ ಕಾವೇರಿ ನದಿಯ ಹೆಚ್ಚುವರಿ ನೀರನ್ನು ಬಳಸಿಕೊಂಡು ಮೇಕೆದಾಟು ಸಮೀಪ ಕಾವೇರಿ ನದಿಗೆ ಸಮತೋಲನ ಜಲಾಶಯವನ್ನು ನಿರ್ಮಿಸಲು 5912 ಕೋಟಿಗಳಿಗೆ ರೂ. ಸಂಕ್ಷಿಪ್ತ ಯೋಜನಾ ವರದಿಯನ್ನು ತಯಾರಿಸಲಾಗಿದೆ. ಮೇಕೆದಾಟು ಯೋಜನೆಯಿಂದ 400 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆಯ ಜೊತೆಗೆ ಬೆಂಗಳೂರು ನಗರಕ್ಕೆ ಕುಡಿಯುವ ನೀರು ಒದಗಿಸಲು ಅನುಕೂಲವಾಗುತ್ತದೆ.

ಕಾವೇರಿ ನೀರಾವರಿ ನಿಗಮವು ಕೆರೆ ತುಂಬಿಸುವ ಯೋಜನೆಗಳನ್ನು ಕೈಗೆತ್ತಿಕೊಂಡಿದೆ. ಮುಂದಿನ ಎರಡು  ವರ್ಷಗಳಲ್ಲಿ 1002 ಕೋಟಿ ರೂ. ಅಂದಾಜು ಮೊತ್ತದ 12 ಯೋಜನೆಗಳನ್ನು ಕೈಗೊಳ್ಳಲು ಉದ್ದೇಶಿಸಲಾಗಿದೆ. ಇದರಲ್ಲಿ ತುಮಕೂರು ಜಿಲ್ಲೆಯಲ್ಲಿ ಐದು ಕೆರೆಗಳು, ಚಾಮರಾಜನಗರ ಜಿಲ್ಲೆಯ 24 ಕೆರೆಗಳು, ರಾಮನಗರ ಜಿಲ್ಲೆಯ 167 ಕೆರೆಗಳು, ಹಾಸನ ಜಿಲ್ಲೆಯ 53 ಕೆರೆಗಳು, ಮೈಸೂರು ಜಿಲ್ಲೆಯ 181 ಕೆರೆಗಳೂ ಸೇರಿದಂತೆ ಒಟ್ಟಾರೆ 430 ಕೆರೆಗಳಿಗೆ ನೀರನ್ನು ತುಂಬಿಸಿ 341 ಗ್ರಾಮಗಳಿಗೆ ಕುಡಿಯುವ ನೀರು ಒದಗಿಸಲು ಯೋಜಿಸಲಾಗಿದೆ.

ಸಣ್ಣ ನೀರಾವರಿ ಯೋಜನೆಗಳ ಮೂಲಕ ಕಳೆದ ಮೂರು ವರ್ಷಗಳಲ್ಲಿ 99,540 ಹೆಕ್ಟೇರ್ ಪ್ರದೇಶದಲ್ಲಿ ಹೊಸದಾಗಿ ನೀರಾವರಿ ಸೌಲಭ್ಯವನ್ನು ಸೃಜಿಸಲಾಗಿದೆ. “ಕೆರೆ ಅಭಿವೃದ್ಧಿ-ನಾಡಿನ ಶ್ರೇಯೋಭಿವೃದ್ಧಿ” ಕಾರ್ಯಕ್ರಮದಡಿ ಗುರುತಿಸಲಾಗಿದ್ದ 104 ಕೆರೆಗಳ ಪೈಕಿ 92 ಕೆರೆಗಳ ಸಮಗ್ರ ಅಭಿವೃದ್ಧಿ ಕಾರ್ಯವನ್ನು ಕೈಗೊಳ್ಳಲಾಗಿದೆ.

ಬೆಂಗಳೂರು ನಗರದ ಕೋರಮಂಗಲ-ಚಲ್ಲಘಟ್ಟ ಕಣಿವೆಯಿಂದ ಹರಿಯುವ ಕೊಳಚೆ ನೀರನ್ನು ಸಂಸ್ಕರಿಸಿ ಚಿಕ್ಕಬಳ್ಳಪುರ ಜಿಲ್ಲೆಯ ಚಿಂತಾಮಣಿ ತಾಲ್ಲೂಕಿನ ಐದು ಕೆರೆಗಳು ಹಾಗೂ ಕೋಲಾರ ಜಿಲ್ಲೆಯ 121 ಕೆರೆಗಳು ಒಳಗೊಂಡಂತೆ ಒಟ್ಟು 126 ಕೆರೆಗಳಿಗೆ ನೀರು ತುಂಬಿಸುವ 1280 ಕೋಟಿ ರೂ ವೆಚ್ಚದ ಏತ ನೀರಾವರಿ ಯೋಜನೆಗೆ ಈಗಾಗಲೇ ಚಾಲನೆ ನೀಡಲಾಗಿದೆ.

ಬೆಂಗಳೂರು ನಗರ ಜಿಲ್ಲೆ ಆನೇಕಲ್ ತಾಲ್ಲೂಕಿನ ಸುಮಾರು 60 ಕೆರೆಗಳಿಗೆ ದಕ್ಷಿಣ ಪಿನಾಕಿನಿ ನದಿಗೆ ಹರಿಯುತ್ತಿರುವ ಬೆಂಗಳೂರು ನಗರದ ಸಂಸ್ಕರಿಸಿದ ಕೊಳಚೆ ನೀರನ್ನು ತುಂಬಿಸಲು ಮುತ್ತಸಂದ್ರ ಗ್ರಾಮದ ಸಮೀಪ 240 ಕೋಟಿ ರೂ. ವೆಚ್ಚದಲ್ಲಿ ಏತ ನೀರಾವರಿ ಯೋಜನೆಯನ್ನು ಅನುಷ್ಠಾನಗೊಳಿಸಲಾಗುವುದು. ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಆಯ್ದ ಕೆರೆಗಳಿಗೆ ಹೆಬ್ಬಾಳ ಕಣಿವೆತಿಂದ ಹರಿಯುವ ಕೊಳಚೆ ನೀರನ್ನು ಸಂಸ್ಕರಿಸಿ ತುಂಬಿಸುವ 883.54 ಕೋಟಿ ರೂ ವೆಚ್ಚದ ಏತ ನೀರಾವರಿ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಇದರಿಂದ ಅಂತರ್ಜಲ ಮಟ್ಟವು ಅಭಿವೃದ್ಧಿ ಹೊಂದುವುದರೊಂದಿಗೆ ಜಲಮೂಲಗಳ ಲಭ್ಯತೆಗೆ ಅನುಕೂಲಕರವಾಗುತ್ತದೆ.

ರಾಜ್ಯದ ಪಶ್ಚಿಮ ವಾಹಿನಿ ಯೋಜನೆಯ ಪ್ರಸ್ತಾವನೆಯು ಪರಿಶೀಲನಾ ಹಂತದಲ್ಲಿದೆ. ಈ ಯೋಜನೆಯಡಿಯಲ್ಲಿ ಉತ್ತರ ಕನ್ನಡ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಕಿಂಡಿ ಆಣೆಕಟ್ಟುಗಳನ್ನು ನಿರ್ಮಾಣ ಮಾಡುವುದು ಮತ್ತು ಉಪ್ಪು ನೀರಿನ ತಡೆಗೊಡೆ ನಿರ್ಮಾಣ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು.

ರಾಜ್ಯದ ಪ್ರತಿಯೊಬ್ಬ ಪ್ರಜೆಗೂ ಅಗತ್ಯ ಶುದ್ಧ ಕುಡಿಯುವ ನೀರು ಒದಗಿಸುವುದು ಸರ್ಕಾರದ ಉದ್ದೇಶವಾಗಿದೆ. ಇದಕ್ಕಾಗಿ ನಮ್ಮ ಸರ್ಕಾರ ಎಲ್ಲಾ ಗ್ರಾಮಗಳಿಗೂ ಶುದ್ಧ ಕುಡಿಯುವ ನೀರು ಘಟಕಗಳ ಸ್ಥಾಪಿಸುವ ಕ್ರಾಂತಿಕಾರಕ ಯೋಜನೆಯನ್ನು ಅನುಷ್ಠಾನಕ್ಕೆ ತಂದಿದೆ.

ಶುದ್ಧ ಕುಡಿಯುವ ನೀರನ್ನು ಗ್ರಾಮೀಣ ಜನರಿಗೆ ತಲುಪಿಸಲು ಕಳೆದ ಮೂರು ವರ್ಷಗಳಲ್ಲಿ 6260 ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಲಾಗಿದೆ. ಮುಂದಿನ ಎರಡು ವರ್ಷಗಳಲ್ಲಿ ಹೆಚ್ಚುವರಿಯಾಗಿ 5,000 ಶುದ್ಧ ಕುಡಿಯುವ ನೀರಿನ ಘಟಕಗಳ ಸ್ಥಾಪನೆಗೆ ಅಗತ್ಯ ಕ್ರಮ ವಹಿಸಲಾಗುವುದು.

ರಾಜ್ಯದ ಗ್ರಾಮೀಣ ಪ್ರದೇಶದ 60,220 ಜನವಸತಿಗಳಲ್ಲಿನ 401.10 ಲಕ್ಷ ಜನರಿಗೆ ಶುದ್ಧ ಕುಡಿಯುವ ನೀರು ಒದಗಿಸಲು ಕಳೆದ ಮೂರು ವರ್ಷಗಳಲ್ಲಿ 9189 ಕಿರು ನೀರು ಸರಬರಾಜು ಯೋಜನೆ, 6994 ಸಂಖ್ಯೆ ಕೊಳವೆ ನೀರು ಸರಬರಾಜು ಯೋಜನೆಗಳನ್ನು ಪೂರ್ಣಗೊಳಿಸಲಾಗಿದೆ.

ಶಾಶ್ವತ ಶುಧ್ಧ ಕುಡಿಯುವ ನೀರು ಒದಗಿಸಲು 118 ಬಹು ಗ್ರಾಮ ಕುಡಿಯುವ ನೀರು ಯೋಜನೆಗಳನ್ನು ಪೂರ್ಣಗೊಳಿಸಿ 21.45 ಲಕ್ಷ ಜನಸಂಖ್ಯೆಗೆ ಶುದ್ಧ ಕುಡಿಯುವ ನೀರನ್ನು ಒದಗಿಸಲಾಗಿದೆ. ಮುಂದಿನ ಎರಡು ವರ್ಷಗಳಲ್ಲಿ 150 ಬಹು ಗ್ರಾಮ ಕುಡಿಯುವ ನೀರು ಯೋಜನೆಗಳನ್ನು ಪೂರ್ಣಗೊಳಿಸಿ 40 ಲಕ್ಷ ಜನಸಂಖ್ಯೆಗೆ ಶಾಶ್ವತ ಶುದ್ಧ ಕುಡಿಯುವ ನೀರು ಒದಗಿಸಲಾಗುವುದು.

ಮನೆಗೊಂದು ಶೌಚಾಲಯ ರಾಜ್ಯ ಸರ್ಕಾರದ ಧ್ಯೇಯವಾಗಿದ್ದು, ಕಳೆದ ಮೂರು ವರ್ಷಗಳಲ್ಲಿ ಸುಮಾರು 21 ಲಕ್ಷ ವೈಯಕ್ತಿಕ ಗೃಹ ಶೌಚಾಲಯಗಳನ್ನು ನಿರ್ಮಾಣ ಮಾಡಲಾಗಿದೆ. ಮುಂದಿನ ಎರಡು ವರ್ಷಗಳಲ್ಲಿ 21 ಲಕ್ಷಕ್ಕೂ ಹೆಚ್ಚು ವೈಯಕ್ತಿಕ ಗೃಹ ಶೌಚಾಲಯಗಳನ್ನು ನಿರ್ಮಾಣಗೊಳಿಸಲಾಗುವುದು. ಅಕ್ಟೋಬರ್ 2, 2018 ರ ವೇಳೆಗೆ ರಾಜ್ಯದ ಗ್ರಾಮೀಣ ಪ್ರದೇಶವನ್ನು ಸಂಪೂರ್ಣ ಬಯಲು ಬಹಿರ್ದೆಸೆ ಮುಕ್ತ ಮಾಡುವ ಗುರಿಗೆ ಸರ್ಕಾರ ಕಟಿಬದ್ಧವಾಗಿದೆ.

ಪ್ರಸಕ್ತ ಸಾಲಿನಲ್ಲಿ ಪಂಚಾಯತ್-100 ಯೋಜನೆಯಡಿ ರಾಜ್ಯದ ಆಯ್ದ 2000 ಗ್ರಾಮ ಪಂಚಾಯಿತಿಗಳಲ್ಲಿ ಬಾಪೂಜಿ ಸೇವಾ ಕೇಂದ್ರಗಳನ್ನು ಸ್ಥಾಪಿಸಿ ಗ್ರಾಮೀಣ ಜನರಿಗೆ ದಿನನಿತ್ಯ ಅಗತ್ಯವಿರುವ 100 ಸೇವೆಗಳನ್ನು ಗ್ರಾಮ ಪಂಚಾಯತ್ ಮಟ್ಟದಲ್ಲಿಯೇ ಒದಗಿಸಲು ಕ್ರಮ ಕೈಗೊಳ್ಳಲಾಗಿದೆ. ಹಂತ ಹಂತವಾಗಿ ಉಳಿದ ಗ್ರಾಮ ಪಂಚಾಯತ್‍ಗಳಿಗೂ ಈ ಸೇವೆಗಳನ್ನು ವಿಸ್ತರಿಸಲು ಅಗತ್ಯ ಕ್ರಮವಹಿಸಲಾಗಿದೆ.

ಸಂವಿಧಾನ ಶಿಲ್ಪಿ ಡಾ ಬಿ. ಆರ್. ಅಂಬೇಡ್ಕರ್ ಅವರ 125 ನೇ ಜನ್ಮ ದಿನಾಚರಣೆಯ ಸಂಸ್ಮರಣೆಯಲ್ಲಿ ವರ್ಷವಿಡೀ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ನಮ್ಮ ಸರ್ಕಾರದ ಪ್ರಮುಖ ಯೋಜನೆಗಳಿಗೆ ಭಾರತ ರತ್ನ ಡಾ ಅಂಬೇಡ್ಕರ್ ಅವರ ಚಿಂತನೆಗಳು ಹಾಗೂ ಆಶಯಗಳೇ ಸ್ಫೂರ್ತಿಯಾಗಿವೆ. ಈ ಹಿನ್ನೆಲೆಯಲ್ಲಿ ಡಾ ಅಂಬೇಡ್ಕರ್ ಅವರ ವಿಚಾರಧಾರೆ ಕುರಿತ ಅಂತಾರಾಷ್ಟ್ರೀಯ ಮಟ್ಟದ ವಿಚಾರಣ ಸಂಕಿರಣವನ್ನು ಅರ್ಥಪೂರ್ಣವಾಗಿ ಆಚರಿಸಲು ಉದ್ದೇಶಿಸಲಾಗಿದೆ.

ಅವಕಾಶ ವಂಚಿತ ಸಮುದಾಯಗಳಿಗೆ ಸಂಪತ್ತು ಮತ್ತು ಅವಕಾಶಗಳಲ್ಲಿ ಸಮಪಾಲು ನೀಡುವ ಉದ್ದೇಶದಿಂದ ಕರ್ನಾಟಕ ಅನುಸೂಚಿತ ಜಾತಿಗಳ ಉಪಯೋಜನೆ ಮತ್ತು ಬುಡಕಟ್ಟು ಉಪಯೋಜನೆ ಕಾಯಿದೆ 2013 ರ ಜಾರಿ ನಮ್ಮ ಸರ್ಕಾರದ ಸಾಧನೆಯ ಪ್ರಮುಖ ಮೈಲಿಗಲ್ಲು.

ಈ ಕಾಯ್ದೆಯಿಂದಾಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಕಾರ್ಯಕ್ರಮಗಳಿಗಾಗಿ ಖರ್ಚು ಮಾಡುವ ಹಣ ದುಪ್ಪಟ್ಟಾಗಿದೆ. 2013-14 ರ ಬಜೆಟ್‍ನಲ್ಲಿ 8616 ಕೋಟಿ ರೂ. ನಿಗದಿಯಾಗಿದ್ದರೆ 2014-15 ನೇ ಸಾಲಿನಲ್ಲಿ ಇದು 15,834 ಕೋಟಿ ರೂಪಾಯಿಯಾಗಿತ್ತು. 2015-16 ನೇ ಸಾಲಿಗಾಗಿ 16,356 ಕೋಟಿ ರೂ ಗಳನ್ನು ಬಜೆಟ್‍ನಲ್ಲಿ ನಿಗದಿ ಮಾಡಿದೆ. ಒಟ್ಟಾರೆಯಾಗಿ ಕಳೆದ ಮೂರು ವರ್ಷಗಳಲ್ಲಿ ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪ ಯೋಜನೆಗಳಡಿ ಎಲ್ಲಾ ಅಭಿವೃದ್ಧಿ ಇಲಾಖೆಗಳಿಗೆ 40,800 ಕೋಟಿ ರೂ. ಗಳನ್ನು ಸರ್ಕಾರ ಒದಗಿಸಿದೆ.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗಾಗಿ ಕಳೆದ ಮೂರು ವರ್ಷಗಳಲ್ಲಿ 145 ವಸತಿ ಶಾಲೆಗಳನ್ನು ಮತ್ತು 100 ಹಾಸ್ಟೆಲ್‍ಗಳನ್ನು ತೆರೆಯಲಾಗಿದೆ. ಇದರಿಂದಾಗಿ 35 ಸಾವಿರ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತಿದೆ.

ಭೂ ಒಡೆತನ ಯೋಜನೆಯಡಿ 2261 ಎಕರೆ ಜಮೀನನ್ನು ಖರೀದಿಸಿ ಕೊಡಲಾಗಿದೆ. ಕಳೆದ 3 ವರ್ಷಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ 24 ಲಕ್ಷ ಮೆಟ್ರಿಕ್ ಪೂರ್ವ ವಿದ್ಯಾರ್ಥಿಗಳಿಗೆ 225 ಕೋಟಿ ರೂ. ಶಿಷ್ಯವೇತನ ನೀಡಲಾಗಿದೆ.

ರಾಜ್ಯದ ಅಭಿವೃದ್ಧಿ ಮತ್ತು ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳ ಜನಾಂಗದವರ ಒಳಿತಿಗಾಗಿ ಕೊಡುಗೆ ನೀಡಿದ ದಲಿತ ಮುಖಂಡರಾದ ದಿವಂಗತ ಬಿ. ರಾಚಯ್ಯ, ಎನ್. ರಾಚಯ್ಯ, ಬಿ. ಬಸವಲಿಂಗಪ್ಪ ಇವರುಗಳ ಹೆಸರಿನಲ್ಲಿ ಸ್ಮಾರಕಗಳನ್ನು ಮೂರು ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುವುದು. ಕೊಪ್ಪಳದ ಬಹದ್ದೂರ್ ಬಂಡಿ ಕ್ಷೇತ್ರದ ಅಭಿವೃದ್ಧಿಯೂ ಸೇರಿದಂತೆ ಬಂಜಾರ ಸಮುದಾಯದ ಸಮಗ್ರ ಅಭಿವೃದ್ಧಿಗಾಗಿ 75 ಕೋಟಿ ರೂ.ಗಳನ್ನು ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮಕ್ಕೆ ನೀಡಲಾಗಿದೆ.

ವಿದ್ಯಾಸಿರಿ ಯೋಜನೆಯ ಫಲಾನುಭವಿಗಳ ಸಂಖ್ಯೆ ಈ ವರ್ಷ ಒಂದು ಲಕ್ಷ ದಾಟಲಿದೆ. ಮುಂದಿನ ಎರಡು ವರ್ಷಗಳಲ್ಲಿ ಬಾಡಿಗೆ ಕಟ್ಟಡಗಳಲ್ಲಿರುವ 100 ವಿದ್ಯಾರ್ಥಿನಿಲಯಗಳಿಗೆ ಸ್ವಂತ ಕಟ್ಟಡ ನಿರ್ಮಿಸಲು ಯೋಜಿಸಲಾಗಿದೆ.

ಡಿ. ದೇವರಾಜ ಅರಸು ಅವರ ಜನ್ಮ ಶತಮಾನೋತ್ಸವದ ಅಂಗವಾಗಿ ‘ಡಿ. ದೇವರಾಜ ಅರಸು’ ಅವರ ಹೆಸರಿನಲ್ಲಿ 100 ಸಂಖ್ಯಾಬಲದ 100 ಮೆಟ್ರಿಕ್ ನಂತರದ ಬಾಲಕಿಯರ ವಸತಿನಿಲಯಗಳನ್ನು ಪ್ರಾರಂಭಿಸಲು ಚಾಲನೆ ನೀಡಲಾಗಿದೆ.

ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಉನ್ನತ ವ್ಯಾಸಂಗ ಮಾಡಲು ಇಚ್ಛಿಸಿದ 95 ವಿದ್ಯಾರ್ಥಿಗಳಿಗೆ ತಲಾ 10 ಲಕ್ಷ ರೂ.ಗಳಂತೆ ‘ಡಿ. ದೇವರಾಜ ಅರಸು ವಿದೇಶಿ ವ್ಯಾಸಂಗ ವೇತನ’ ನೀಡಿದೆ.

ಅಲ್ಪಸಂಖ್ಯಾತ ಸಮುದಾಯದವರ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡುವ ಸರ್ಕಾರ ಮೆಟ್ರಿಕ್ ಪೂರ್ವ, ಮೆಟ್ರಿಕ್ ನಂತರ ಮತ್ತು ಮೆರಿಟ್-ಕಂ-ಮೀನ್ಸ್ ಶಿಷ್ಯವೇತನ, ಶುಲ್ಕ ಮರುಪಾವತಿ ಯೋಜನೆ ಮತ್ತು ಕೇಂದ್ರ ಸರ್ಕಾರದ ವಿದ್ಯಾರ್ಥಿಏತನ ಯೋಜನೆಗಳ ವ್ಯಾಪ್ತಿಯಲ್ಲಿ ಬಾರದ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರವು ನೀಡುತ್ತಿರುವ ಶಿಷ್ಯವೇತನ ಪಡೆಯುತ್ತಿರುವವರೂ ಸೇರಿದಂತೆ 32 ಲಕ್ಷ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ 600 ಕೋಟಿ ರೂ. ಶಿಷ್ಯವೇತನವನ್ನು ಸರ್ಕಾರ ಕಳೆದ ಮೂರು ವರ್ಷಗಳಲ್ಲಿ ವಿತರಿಸಿದೆ.

ವಿದೇಶದಲ್ಲಿ ಉನ್ನತ ವ್ಯಾಸಂಗ ಪಡೆಯುವ ವಿದ್ಯಾರ್ಥಿಗಳಿಗೆ ಶಿಷ್ಯವೇತನ 10 ಲಕ್ಷ ರೂ. ಗಳಿಂದ 20 ಲಕ್ಷ ರೂ. ಗಳಿಗೆ ಹೆಚ್ಚಿಸಲಾಗಿದೆ. ಈವರೆಗೆ ಸುಮಾರು 360 ವಿದ್ಯಾರ್ಥಿಗಳು ಇದರ ಪ್ರಯೋಜನವನ್ನು ಪಡೆದು ಕೊಂಡಿದ್ದಾರೆ.

ವಿಶ್ವದಲ್ಲೇ ವೇಗವಾಗಿ ಬೆಳೆಯುತ್ತಿರುವ ಬೆಂಗಳೂರು ಅವಕಾಶಗಳ ತವರೂರು. ಈ ಹಿನ್ನೆಲೆಯಲ್ಲಿ ಬೆಂಗಳೂರು ಅಭಿವೃದ್ಧಿಗೆ ನಮ್ಮ ಸರ್ಕಾರ ಆದ್ಯತೆ ನೀಡಿದೆ. ನಮ್ಮ ಮೆಟ್ರೋದ ಮೊದಲ ಹಂತದ ಎಲ್ಲಾ ಕಾಮಗಾರಿಗಳೂ ಇದೇ ವರ್ಷದ ನವೆಂಬರ್ ವೇಳೆಗೆ ಪೂರ್ಣಗೊಳ್ಳಲಿವೆ.

ಬೆಂಗಳೂರಿನಲ್ಲಿ ಸ್ವಂತ ಮನೆ ಹೊಂದಬೇಕು ಎಂಬ ಹಲವರ ಕನಸು ನನಸು ಮಾಡಲು  ಮುಂದಾಗಿರುವ ನಮ್ಮ ಸರ್ಕಾರ ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ಮೊದಲನೇ ಹಂತದಲ್ಲಿ 5000 ನಿವೇಶನಗಳನ್ನು ಹಂಚಿಕೆ ಮಾಡುವ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ. ಅಂತೆಯೇ, ಎರಡನೇ ಹಂತದಲ್ಲೂ 5000 ನಿವೇಶನಗಳನ್ನು ಹಂಚಿಕೆ ಮಾಡಲಾಗುವುದು.

ಹೊರವರ್ತುಲ ರಸ್ತೆಯ ಸಂಚಾರವನ್ನು ಸುಗಮಗೊಳಿಸಿ ಉತ್ತಮ ಸಂಪರ್ಕ ಕಲ್ಪಿಸಲು ಬಸವೇಶ್ವರ ವೃತ್ತದಿಂದ ಹೆಬ್ಬಾಳ ವೃತ್ತದವರೆಗೆ 1350 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಎಲಿವೇಟೆಡ್ ಕಾರಿಡಾರ್ ನಿರ್ಮಾಣ ಹಾಗೂ ಅಲಿಸ್ಡಾದಿಂದ ಬಿ. ಇ. ಎಲ್ ವೃತ್ತದವರೆಗೆ 191.45 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಎಲಿವೇಟೆಡ್ ಕಾರಿಡಾರ್ ನಿರ್ಮಾಣ ಮಾಡಲು ಯೋಜಿಸಲಾಗಿದೆ.

ಒತ್ತುವರಿ ಸೃಷ್ಟಿಸಿರುವ ಸಮಸ್ಯೆಗಳಿಂದಾಗಿ ನಗರದ ಜನ ಮಳೆಗೆ ಭೀತಿ ಪಡುವಂತಾಗಿದೆ. ನಗರದ ಹಿತದೃಷ್ಠಿಯಿಂದ ಕೆರೆ ಹಾಗೂ ರಾಜಕಾಲುವೆಗಳಲ್ಲಿ ಅಕ್ರಮವಾಗಿ ನಿರ್ಮಿಸಿರುವ ಅನಧಿಕೃತ ಕಟ್ಟಡಗಳನ್ನು ತೆರವುಗೊಳಿಸುವಲ್ಲಿ ದಿಟ್ಟ ಕ್ರಮ ಜರುಗಿಸಲಾಗಿದೆ. ಇಂತಹ ಅಕ್ರಮಗಳಲ್ಲಿ ಭಾಗಿಯಾಗಿರುವ ನಿರ್ಮಾಣಗಾರರೂ ಹಾಗೂ ಅವರಿಗೆ ಸಹಕರಿಸಿರುವ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ತೆಗೆದು ಕೊಳ್ಳಲಾಗುತ್ತಿದೆ.

ಬೆಂಗಳೂರು ನಗರ ಜಿಲ್ಲೆಯಲ್ಲಿ ನಮ್ಮ ಸರ್ಕಾರದ ಅವಧಿಯಲ್ಲಿ 52,000 ಕೋಟಿ ರೂ ಮೌಲ್ಯದ 4950 ಎಕರೆ ಭೂಮಿಯನ್ನು ಒತ್ತುವರಿದಾರರಿಂದ ತೆರವುಗೊಳಿಸಿ ಸರ್ಕಾರದ ವಶಕ್ಕೆ ಪಡೆಯಲಾಗಿದೆ.

ಬೆಂಗಳೂರು ನಗರದ ಮೂಲಭೂತ ಸೌಕರ್ಯ ಅಭಿವೃದ್ಧಿಗೆ ಕಳೆದ ಎರಡು ವರ್ಷಗಳಲ್ಲಿ ಮುಖ್ಯಮಂತ್ರಿಗಳ ನಗರೋತ್ಥಾನ ಯೋಜನೆ ಅಡಿಯಲ್ಲಿ ನಗರಾಭಿವೃದ್ಧಿಗಾಗಿ ಒಟ್ಟು 2000 ಕೋಟಿ ರೂ. ಅನುದಾನ ನೀಡಿದೆ. ನಗರಾದ್ಯಂತ 574 ಕಾಮಗಾರಿಗಳು ಅನುಷ್ಠಾನಗೊಳ್ಳುತ್ತಿವೆ.

ಹೊರವರ್ತುಲ ರಸ್ತೆಯ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ ಗ್ರೇಡ್ ಸೆಪರೇಟರ್ ಕಾಮಗಾರಿ ಮತ್ತು ಓಕಳಿಪುರಂ ಜಂಕ್ಷನ್‍ನಿಂದ ಫೌಂಟೆನ್ ವೃತ್ತದವರೆಗೆ ಅಷ್ಟ-ಪಥದ ಕಾರಿಡಾರ್ ಯೋಜನೆಗಳು ಅನುಷ್ಠಾನ ಈ ಯೋಜನೆಯಲ್ಲಿ ಸೇರಿದೆ.

ಬೃಹತ್ ಬೆಂಗಳೂರು ಮಹಾನರ ಪಾಲಿಕೆ ವ್ಯಾಪ್ತಿಯಲ್ಲಿ ಉತ್ತರ-ದಕ್ಷಿಣ ಮತ್ತು ಪೂರ್ವ-ಪಶ್ಚಿಮ ಎಲಿವೇಟೆಡ್ ಕಾರಿಡಾರ್ ಯೋಜನೆ ಅನುಷ್ಠಾನಕ್ಕೆ ಸರಕಾರವು ಬದ್ಧವಾಗಿದೆ. ಅಲ್ಲದೆ ಮಿನರ್ವ ವೃತ್ತದಿಂದ ಹಡ್ಸ್‍ನ್ ವೃತ್ತದವರೆಗೆ ಉಕ್ಕಿನ ಮೇಲುಸೇತುವೆ ನಿರ್ಮಾಣ ಯೋಜನೆಗೆ ಈಗಾಗಲೇ ಟೆಂಡರ್ ಆಹ್ವಾನಿಸಲಾಗಿದೆ. ನಗರದ ಆಯ್ದ ಪ್ರಮುಖ ರಸ್ತೆಗಳನ್ನು 800 ಕೋಟಿ ರೂಪಾಯಿ ವೆಚ್ಚದಲ್ಲಿ ವೈಟ್ ಟಾಪಿಂಗ್‍ಗೆ ಪರಿವರ್ತಿಸಲಾಗುವುದು.

ಬೆಂಗಳೂರು ನಗರದ ವ್ಯಾಪ್ತಿಯಲ್ಲಿ ಕೆರೆಗಳ ಪುನಶ್ಚೇತನ ಮತ್ತು ಅಭಿವೃದ್ಧಿಗಾಗಿ 156 ಕೋಟಿ ರೂ ಹಾಗೂ ಪಾಲಿಕೆ ವ್ಯಾಪ್ತಿಯ ಬೃಹತ್ ನೀರುಗಾಲುವೆಗಳ ಅಭಿವೃದ್ಧಿಗಾಗಿ 800 ಕೋಟಿ ರೂ ವೆಚ್ಚದಲ್ಲಿ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲಾಗುವುದು.

ಬೆಂಗಳೂರು ನಗರದಲ್ಲಿ ಪ್ರತಿನಿತ್ಯ ಸುಮಾರು 3500 ಮೆಟ್ರಿಕ್ ಟನ್‍ಗಳಷ್ಟು ಘನತ್ಯಾಜ್ಯ ಸೃಷ್ಟಿಯಾಗುತ್ತಿದೆ. ಈ ತ್ಯಾಜ್ಯ ಸಂಸ್ಕರಣೆ ಮತ್ತು ವಿಲೇವಾರಿಗಾಗಿ ಅತ್ಯಾಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವ ಅಗತ್ಯವಿದೆ. ಇದಕ್ಕಾಗಿ ಪ್ರಸಕ್ತ ಸಾಲಿನಲ್ಲಿ 300 ಕೋಟಿ ರೂ ಹಾಗೂ ಮುಂದಿನ ಸಾಲಿನಲ್ಲಿ 300 ಕೋಟಿ ರೂ ಅನುದಾನ ನೀಡಲಾಗುವುದು.

ಬೆಂಗಳೂರು ಮಹಾನಗರ ಕಳೆದ ಒಂದು ದಶಕದಲ್ಲಿ ತೀವ್ರತರ ಬೆಳವಣಿಗೆ ಕಂಡಿದೆ. ಮಹಾನಗರಕ್ಕೆ ಸೇರ್ಪಡೆಯಾಗಿರುವ 110 ಗ್ರಾಮಗಳಿಗೆ ಪ್ರತಿದಿನ 775 ದಶಲಕ್ಷ ಲೀಟರ್ ಕುಡಿಯುವ ನೀರು ಪೂರೈಸುವ ಕಾವೇರಿ ಐದನೇ ಹಂತದ ಯೋಜನೆಯನ್ನು ಜಾರಿಗೊಳಿಸಲು 5018 ಕೋಟಿ  ರೂ. ವಿಸ್ತೃತ ಯೋಜನಾ ವರದಿ ಸಿದ್ದಪಡಿಲಾಗಿದೆ.

ನಮ್ಮ ಮೆಟ್ರೋ ಮೂರನೇ ಹಂತದ ಯೋಜನೆಯನ್ನು ರೂಪಿಸುವ ಕಾರ್ಯ ಪ್ರಾರಂಭವಾಗಿರುವುದನ್ನು ತಿಳಿಸಲು ಹರ್ಷಿಸುತ್ತೇನೆ. ಕೇಂದ್ರ ರೇಷ್ಮೆ ಮಂಡಳಿ ಜಂಕ್ಷನ್‍ನಿಂದ ಕೃಷ್ಣರಾಜಪುರದ ವರೆಗೆ ಹಾಗೂ ನಾಗವಾರದಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದವರೆಗೆ ಮಾರ್ಗ ನಿರ್ಮಿಸಲು ಉದ್ದೇಶಿಸಲಾಗಿದೆ.

ಹೈದರಾಬಾದ್ ಕರ್ನಾಟಕ ಪ್ರದೇಶಕ್ಕೆ ಸಂವಿಧಾನದ ಪರಿಚ್ಛೇಧ 371 ಜೆ ಅನ್ವಯ ವಿಶೇಷ ಸ್ಥಾನಮಾನ ದೊರಕಿಸಿಕೊಡುವಲ್ಲಿ ನಮ್ಮ ಸರ್ಕಾರದ ಪಾತ್ರ ಸ್ಮರಣಾರ್ಹ. ಈ ಪ್ರದೇಶಕ್ಕೆ ಸಂವಿಧಾನಬದ್ಧವಾಗಿ ದೊರಕಿಸಿಕೊಡಬೇಕಾದ ಎಲ್ಲಾ ಸೌಲಭ್ಯಗಳನ್ನೂ ಕಲ್ಪಿಸುವಲ್ಲಿ ನಮ್ಮ ಸರ್ಕಾರ ಸ್ಪಂದಿಸುತ್ತಿದೆ. ಮುಂದಿನ ದಿನಗಳಲ್ಲಿ ಈ ಪ್ರದೇಶದಲ್ಲಿ ಅಭಿವೃದ್ಧಿ ಕಾಮಗಾರಿಗಳ ವೇಗ ಮತ್ತಷ್ಟು ಚುರುಕಾಗಲಿದೆ ಎಂಬುದು ನನ್ನ ವಿಶ್ವಾಸ.

ಸರ್ಕಾರದ ಯೋಜನೆಗಳು ಹಾಗೂ ಕಾರ್ಯಕ್ರಮಗಳನ್ನು ಜನತೆಗೆ ತಲುಪಿಸುವಲ್ಲಿ ಮಹತ್ತರ ಪಾತ್ರ ನಿರ್ವಹಿಸುತ್ತಿರುವ ರಾಜ್ಯ ಸರ್ಕಾರಿ ನೌಕರರ ಬಗ್ಗೆ ನಮ್ಮ ಸರ್ಕಾರಕ್ಕೆ  ಸಹಜ ಕಾಳಜಿ ಇದೆ. ಸರ್ಕಾರಿ ನೌಕರರ ನೈಜ ಬೇಡಿಕೆಗಳನ್ನು ನಮ್ಮ ಸರ್ಕಾರವು ಸಹಾನುಭೂತಿಯಿಂದ ಪರಿಗಣಿಸಲಿದೆ.

ಸಮಾಜದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಪೊಲೀಸರಿಗೆ ನಾವೆಲ್ಲರೂ ಕೃತಜ್ಞರು. ಅವರ ಸೇವೆಗೆ ಬೆಲೆ ಕಟ್ಟಲಾಗದು. ಪೊಲೀಸರ ಸಮಸ್ಯೆಗಳ ಅರಿವು ಕೂಡಾ ಸರ್ಕಾರಕ್ಕಿದೆ. ಅವರು ಮೇಲಿನ ಕೆಲಸದ ಒತ್ತಡವನ್ನು ಕಡಿಮೆ ಮಾಡುವುದು ನಮ್ಮ ಆದ್ಯತೆಗಳಲ್ಲೊಂದು.

ಇನ್ನೆರಡು ವರ್ಷಗಳಲ್ಲಿ 15,000 ಪೊಲೀಸ್ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಲು ಸರ್ಕಾರ ನಿರ್ಧರಿಸಿದೆ. ಕಳೆದ ಮೂರು ವರ್ಷಗಳಲ್ಲಿ 364 ಸಬ್ ಇನ್ಸ್‍ಪೆಕ್ಟರ್‍ಗಳ ನೇಮಕಾತಿಯಾಗಿದೆ. ಅಲ್ಲದೆ, 215 ಸಬ್ ಇನ್ಸ್‍ಪೆಕ್ಟರ್‍ಗಳು ತರಬೇತಿಯಲ್ಲಿದ್ದಾರೆ. ಜೊತೆಗೆ, 7,642 ಪೊಲೀಸ್ ಕಾನ್ಸ್‍ಟೇಬಲ್‍ಗಳ ನೇಮಕಗೊಂಡಿದ್ದಾರೆ. 6,389 ಕಾನ್ಸ್‍ಟೇಬಲ್‍ಗಳ ನೇಮಕಾತಿ ಪ್ರಕ್ರಿಯೆ ಪ್ರಗತಿಯಲ್ಲಿದೆ. ಎಲ್ಲಾ ನೇಮಕಾತಿ ಪ್ರಕ್ರಿಯೆಗಳು ಪೂರ್ಣಗೊಂಡಾಗ ಕೆಳಸ್ಥರದ ಪೊಲೀಸರ ಮೇಲಿನ ಒತ್ತಡ ಸಂಪೂರ್ಣ ಕಡಿಮೆಯಾಗಲಿದೆ.

ಇತರೆ ರಾಜ್ಯಗಳಿಗೆ ಹೋಲಿಕೆ ಮಾಡಿದಲ್ಲಿ ರಾಜ್ಯ ಪೊಲೀಸ್ ಸಿಬ್ಬಂದಿಗೆ ವೇತನ ಕಡಿಮೆ ಇದೆ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ. ಕೆಲವು ರಾಜ್ಯಗಳಲ್ಲಿ ವೇತನ ಪರಿಷ್ಕರಣೆಯಾಗಿದೆ. ನಮ್ಮ ರಾಜ್ಯದಲ್ಲಿ ವೇತನ ಪರಿಷ್ಕರಣಾ ಹಂತದಲ್ಲಿದೆ. ಪರಿಷ್ಕರಣೆಯ ಸಂದರ್ಭದಲ್ಲಿ ಎಲ್ಲಾ ತಾರತಮ್ಯಗಳನ್ನು ನಿವಾರಣೆ ಮಾಡಲಾಗುವುದು.

ಪೊಲೀಸ್ ಸಿಬ್ಬಂದಿಗೆ ಉತ್ತಮ ವಸತಿ ಸೌಲಭ್ಯ ಕಲ್ಪಿಸಲು ತಲಾ 15 ಲಕ್ಷ ರೂ ವೆಚ್ಚದಲ್ಲಿ ರಾಜ್ಯ ಸರ್ಕಾರ ಈವರೆಗೆ 659 ಕೋಟಿ ರೂ ವೆಚ್ಚದಲ್ಲಿ 4,316 ಮನೆಗಳನ್ನು ನಿರ್ಮಿಸಿದೆ. ಒಟ್ಟು 11,000 ಮನೆಗಳನ್ನು ನಿರ್ಮಿಸಲು 1,818 ಕೋಟಿ ರೂ. ಅನುದಾನ ನೀಡಲಾಗಿದೆ. ಮುಂದಿನ ಹತ್ತು ತಿಂಗಳಲ್ಲಿ ಪೊಲೀಸರ ಮನೆಗಳ ನಿರ್ಮಾಣ ಪೂರ್ಣಗೊಳ್ಳಲಿದೆ.

ಭಾರತ ಹಾಗೂ ಪಾಕಿಸ್ತಾನ ಗಡಿಯ ಸಿಯಾಚಿನ್ ಪ್ರದೇಶದಲ್ಲಿ ವೀರಮರಣವನ್ನಪ್ಪಿ ಹುತಾತ್ಮರಾದ ಕುಟುಂಬಗಳಿಗೆ ವೀರ ಯೋಧರ ಪಾರ್ಥಿವ ಶರೀರದ ಸಮ್ಮುಖದಲ್ಲೇ ನಮ್ಮ ಸರ್ಕಾರ ಪರಿಹಾರದ ಚೆಕ್‍ಗಳನ್ನು ವಿತರಿಸಿ ಯೋಧರ ಬಗ್ಗೆ ಗೌರವವನ್ನು ಪ್ರದರ್ಶಿಸಿದೆ.

ಕರ್ನಾಟಕದ ಮಹಾ ಜನತೆಯಾದ ತಾವು ಮೂರು ವರ್ಷಗಳ ಹಿಂದೆ ನಮ್ಮನ್ನು ಹರಸಿ ತಮಗೆ ಸೇವೆ ಸಲ್ಲಿಸುವ ಜವಾಬ್ದಾರಿಯನ್ನು ನಮ್ಮ ಹೆಗಲ ಮೇಲೆ ಹೊರಿಸಿದ್ದೀರಿ. ತಮ್ಮ ನಿರೀಕ್ಷೆಯ ಭಾರ ದೊಡ್ಡದು.ಈ ನಿರೀಕ್ಷೆ ಹುಸಿಯಾಗದ ರೀತಿಯಲ್ಲಿ ಕಾರ್ಯನಿರ್ವಹಿಸಿ ತಾವಿಟ್ಟಿರುವ ಭರವಸೆಯನ್ನು ಉಳಿಸಿಕೊಳ್ಳಬೇಕೆಂಬುದು ನಮ್ಮ ಸರ್ಕಾರದ ಸಂಕಲ್ಪ. ನಮ್ಮದು ನುಡಿದಂತೆ ನಡೆವ ಸರ್ಕಾರ ಎಂಬ ಹೆಗ್ಗಳಿಕೆ ನಿಮ್ಮಿಂದಲೇ ಪ್ರಾಪ್ತಿಯಾದುದು. ಬಡತನದ ವಿರುದ್ಧ ಸಮರ ಸಾರಿದ್ದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ “ಬಡತನ ಎನ್ನುವುದು ಹಿಂಸೆಯ ಅತ್ಯಂತ ಕೆಟ್ಟರೂಪ” ಎಂದಿದ್ದರು.

ಮೊದಲ ದಿನದಿಂದಲೇ ಬಡತನದ ವಿರುದ್ಧದ ಸಮರ ಸಾರಿರುವ ನಮ್ಮ ಸರ್ಕಾರ ಈ ಬದ್ಧತೆಯನ್ನು ಸ್ವಾತಂತ್ರ್ಯೋತ್ಸವದ ಶುಭ ದಿನವಾದ ಇಂದು ದೃಢೀಕರಿಸುತ್ತದೆ ಎಂಬುದನ್ನು ಪುನರುಚ್ಛರಿಸುತ್ತಾ, ತಮ್ಮೆಲ್ಲರಿಗೂ ಮತ್ತೊಮ್ಮೆ ಸ್ವಾತಂತ್ರ್ಯೋತ್ಸವದ ಶುಭಾಶಯಗಳನ್ನು ತಿಳಿಸುತ್ತಾ, ನನ್ನ ಮಾತುಗಳನ್ನು ಮುಗಿಸುತ್ತೇನೆ.

ಜೈ ಹಿಂದ್ – ಜೈ ಕರ್ನಾಟಕ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top