fbpx
Awareness

30 ವರ್ಷಗಳಿಂದ ಜನರಿಗೆ ಕುಡಿಯುವ ನೀರು ಒದಗಿಸುವ ಕಾಯಕದಲ್ಲಿ ತೊಡಗಿರುವ ರೈತ!

ಬಲಸೋರ್(ಒಡಿಶಾ): ಒಂದು ಸಮಯದಲ್ಲಿ ಒಡಿಶಾ ಸರ್ಕಾರ ರಾಜ್ಯದ ಜನರಿಗೆ ಕುಡಿಯುವ ನೀರು ಪೂರೈಸಲು ಸಾಧ್ಯವಾಗದಿದ್ದ ಸಂದರ್ಭದಲ್ಲಿ 80ರ ವಯೋವೃದ್ಧ ಬದ್ರಾಕ್ ಜಿಲ್ಲೆಯ ಬೋಂತ್-ಅಗರ್ಪದಾ ರಸ್ತೆಯಲ್ಲಿ ಪ್ರಯಾಣಿಸುವ ನಾಗರಿಕರಿಗೆ ಸುಮಾರು ಮೂವತ್ತು ವರ್ಷಗಳಿಂದ ಉಚಿತವಾಗಿ ಕುಡಿಯುವ ನೀರು ಪೂರೈಸುತ್ತಿದ್ದಾರೆ.

ಒಡಿಶಾದ ಬದ್ರಾಕ್ ಜಿಲ್ಲೆಯ ಗಬಾರ್ಪುರ್ ಗ್ರಾಮದ ರೈತ ನಟಬಾರ್ ನಾಯಕ್, ಜನರ ಸೇವೆ ಮಾಡುವ ಕಾಯಕದಲ್ಲಿ ಖುಷಿ ಕಂಡುಕೊಂಡಿದ್ದಾರೆ ಎನ್ನುತ್ತಾರೆ ಗ್ರಾಮಸ್ಥರು.

ರಸ್ತೆಯಲ್ಲಿ ಓಡಾಡುವ ಪ್ರಯಾಣಿಕರಿಗೆ ದಾಹ ತಣಿಸಿಕೊಳ್ಳಲು ಬೇಸಿಗೆ ಕಾಲದಲ್ಲಿ ಏಪ್ರಿಲ್ ನಿಂದ ಜೂನ್ ವರೆಗೆ ರಸ್ತೆ ಬದಿ ನೀರು ಇಟ್ಟುಕೊಂಡು ನಾಯಕ್ ಕುಳಿತುಕೊಳ್ಳುತ್ತಾರೆ.

ಸಾಮಾನ್ಯ ದಿನಗಳಲ್ಲಿ ನಾಯಕ್ ಬೆಳಗ್ಗೆ 7 ಗಂಟೆಗೆ ತಮ್ಮ ದಿನಚರಿ ಆರಂಭಿಸಿದರೆ ಹತ್ತಿರದ ಬೋರ್ ವೆಲ್ ನಿಂದ ಮಣ್ಣಿನ ಮಡಕೆಯಲ್ಲಿ ನೀರು ತುಂಬಿಸಿಕೊಳ್ಳುತ್ತಾರೆ. ನಂತರ ಸಕಿಪತನ ಚ್ಚಕ್ ಎಂಬಲ್ಲಿ ದೊಡ್ಡ ಆಲದ ಮರದ ಕೆಳಗೆ ಕುಳಿತು ದಾರಿಯಲ್ಲಿ ಬರುವ, ಹೋಗುವವರಿಗೆ ಕುಡಿಯುವ ನೀರು ಪೂರೈಸುತ್ತಾರೆ.

ವಿಷು ಸಂಕ್ರಾಂತಿ ದಿನವಾದ ಏಪ್ರಿಲ್ 14ರಿಂದ ಕುಡಿಯುವ ನೀರು ಪೂರೈಸಲು ಆರಂಭಿಸಿದ್ದು ಮುಂದಿನ 3 ತಿಂಗಳು ಇರುತ್ತೇನೆ. ಬೀದಿ ಪ್ರಾಣಿಗಳಿಗಾಗಿ ಪ್ರತ್ಯೇಕ ನೀರಿನ ಮಡಕೆಯನ್ನು ಸಹ ಇಡುತ್ತೇನೆ ಎಂದು ನಾಯಕ್ ಹೇಳುತ್ತಾರೆ.

ಪಾನಿ ಮೌಸಾ ಎಂದು ವಿಶೇಷವಾಗಿ ಕರೆಯಲ್ಪಡುವ ನಾಯಕ್ ವಿಶೇಷ ಸಂದರ್ಭಗಳಲ್ಲಿ  ನಿಂಬೆಹಣ್ಣಿನ ಶರಬತ್ತು, ಧಾನ್ಯಗಳಿಂದ ಮಾಡಿದ ಚತುವಾವನ್ನು ನೀರಿನ ಜೊತೆಗೆ ಪೂರೈಸುತ್ತಾರೆ.

ನಾಯಕ್ ಅವರು ಮಹಿಮಾ ಧರ್ಮದ ಅನುಯಾಯಿ. ಸ್ವಲ್ಪ ಅನಾರೋಗ್ಯ ಕಾಡುತ್ತಿದೆ. ಈ ಇಳಿವಯಸ್ಸಿನಲ್ಲಿ ಕೆಲಸ ಮಾಡುವುದು ಸಾಕು ಮನೆಯಲ್ಲಿ ಸುಮ್ಮನೆ ಕುಳಿತುಕೊಳ್ಳಿ ಎಂದು ಮಗ-ಸೊಸೆ ಹೇಳಿದರೂ ಕೇಳುತ್ತಿಲ್ಲವಂತೆ. ನನ್ನ ಅನಾರೋಗ್ಯ ಸಮಯಗಳಲ್ಲಿಯೂ ನಾನು ಹೋಗಿ ನೀರು ಪೂರೈಸಿದ್ದೇನೆ. ಇದು ನನ್ನ ಸ್ವಂತ ನಿರ್ಧಾರ. ಜನರ ಸೇವೆ ಮಾಡಿದರೆ ದೇವರ ಸೇವೆ ಮಾಡಿದಂತೆ ಎಂದು ನಂಬುತ್ತೇನೆ ಎನ್ನುತ್ತಾರೆ ನಾಯಕ್.

ಬೊಂತ್- ಅಗರ್ಪಾದ ಮಾರ್ಗದಲ್ಲಿ ಹೋಗುವವರು ಒಮ್ಮೆ ನಾಯಕ್ ರತ್ತ ಮುಖ ಮಾಡಿ ಕಿರುನಗೆ ಬೀರದೆ ಹೋಗುವುದಿಲ್ಲ. ನಾನು ನನ್ನ ಬಾಲ್ಯದಿಂದಲೇ ಅವರನ್ನು ನೋಡುತ್ತಿದ್ದೇನೆ. ಅವರೊಬ್ಬ ನಿಜವಾದ ನಾಯಕ. ಸರ್ಕಾರ ಮತ್ತು ಸರ್ಕಾರೇತರ ಸಂಘಟನೆಗಳು ಅವರನ್ನು ನೋಡಿ ಕಲಿಯಬೇಕು ಮತ್ತು ಅವರನ್ನು ಗುರುತಿಸಿ ಸನ್ಮಾನಿಸಬೇಕು ಎನ್ನುತ್ತಾರೆ ಸ್ಥಳೀಯ ನಿವಾಸಿ ತಪಸ್ ಸುತರ್.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top