fbpx
Awareness

40 ದಿನಗಳ ಕಾಲ ಒಬ್ಬನೇ ಬಾವಿ ತೋಡಿ ‘ನೀರು ಸಾಧಕ’ನಾದ ತಾಂಜೆ

ಪರರ ಮನೆಗೆ ನೀರು ತರಲು ಹೋದ ಪತ್ನಿಗೆ ಅವಮಾನ ಮಾಡಿದರೆಂದು ಒಬ್ಬಂಟಿಯಾಗಿ ಬಾವಿ ತೋಡಿದ ಗಂಡ

ಮಹಾರಾಷ್ಟ್ರ: ಮೌಂಟೇನ್‍ಮೇನ್ ಎಂದೇ ಕರೆಯಲ್ಪಡುವ ದಶರಥ್ ಮಾಂಜಿಯ ಕಥೆಯನ್ನು ನೀವು ಕೇಳಿರಬಹುದು. ಕುಗ್ರಾಮಕ್ಕೆ ಸರಿಯಾದ ರಸ್ತೆಯಿಲ್ಲದೆ ಬೆಟ್ಟದ ಮೇಲಿನಿಂದ ಕಾಲು ಜಾರಿ ಬಿದ್ದ ತನ್ನ ಪತ್ನಿಯನ್ನು ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ಕರೆದೊಯ್ಯಲಾಗದೆ ಆಕೆಯನ್ನು ಕಳೆದುಕೊಂಡ ಮಾಂಜಿಯ ಕಥೆ. ಆಕೆಯ ನೆನಪಲ್ಲೇ ಮರುಗುತ್ತಿದ್ದ ಮಾಂಜಿ ಮುಂದೊಂದು ದಿನ ಇಡೀ ಬೆಟ್ಟವನ್ನೇ ಅಗೆಯಲು ತೀರ್ಮಾನಿಸುತ್ತಾನೆ. ಹೀಗೆ 22 ವರ್ಷಗಳ ಕಾಲ ಬೆಟ್ಟವೊಂದನ್ನು ಅಗೆದು ಆ ಊರಿಗೆ ರಸ್ತೆಯೊಂದನ್ನು ನಿರ್ಮಾಣ ಮಾಡುತ್ತಾನೆ. ಇದೀಗ ಮಾಂಜಿಯಂತೆಯೇ ಮಹಾರಾಷ್ಟ್ರದ ಬಾಪೂರಾವ್ ತಾಂಜೆ ಎಂಬಾತ ಪರರ ಮನೆಗೆ ನೀರು ತರಲು ಹೋದ ಪತ್ನಿಗೆ ಆ ಮನೆಯವರು ನೀರು ನಿರಾಕರಿಸಿ ಅವಮಾನ ಮಾಡಿದರೆಂದು ತನ್ನ ಮನೆಯ ಬಳಿ ಒಬ್ಬನೇ ಬಾವಿ ತೋಡಿ ನೀರು ಸಾಧಕನಾಗಿದ್ದಾನೆ.

1

ಮಹಾರಾಷ್ಟ್ರದ ವಾಶಿಂ ಜಿಲ್ಲೆಯ ಕಲಂಬೇಶ್ವರ್ ಗ್ರಾಮದ ದಲಿತ, ದಿನಗೂಲಿ ಕೆಲಸದ ತಾಂಜೆ ಒಬ್ಬಂಟಿಯಾಗಿ ಬಾವಿ ತೋಡಿದ್ದಾನೆ. ದಿನದಲ್ಲಿ 6 ಗಂಟೆಗಳ ಬಾವಿ ತೋಡುತ್ತಿದ್ದ ಈತನಿಗೆ 40 ದಿನಗಳ ನಂತರ ನೀರು ಸಿಕ್ಕಿದೆ. ಗ್ರಾಮದಲ್ಲಿನ ದಲಿತರೆಲ್ಲರೂ ಬೇರೊಂದು ಮನೆಯ ಬಾವಿಯಿಂದ ನೀರು ತರಬೇಕಾಗಿತ್ತು. ತಾಂಜೆಯ ಪತ್ನಿ ಸಂಗೀತ ನೀರು ತರಲು ಹೋದಾಗ ಆ ಮನೆಯವರು ಈಕೆಗೆ ನೀರು ನೀಡಲು ನಿರಾಕರಿಸಿ ಅವಮಾನ ಮಾಡಿದ್ದಾರೆ. ಸಂಗೀತ ಮನೆಗೆ ಬಂದು ನನ್ನಲ್ಲಿ ಈ ವಿಷಯವನ್ನು ಹೇಳಿದಾಗ ನಾನು ಅವಮಾನದಿಂದ ಅತ್ತು ಬಿಟ್ಟೆ. ನಾವು ಬಡವರು ಮತ್ತು ದಲಿತರಾಗಿರುವ ಕಾರಣವೇ ಅವರು ನಮ್ಮನ್ನು ಅವಮಾನಿಸಿದ್ದರು. ಅದು ಮಾರ್ಚ್ ತಿಂಗಳಾಗಿತ್ತು. ಆಗಲೇ ಇನ್ನು ಮುಂದೆ ನಾವು ಯಾರ ಬಳಿಯೂ ನೀರು ಕೇಳಲು ಹೋಗಬಾರದು ಎಂದು ತೀರ್ಮಾನಿಸಿದೆ. ನಾನು ಮಾಲೇಂಗಾವ್‍ಗೆ ಹೋಗಿ ಬಾವಿ ತೋಡಲು ಬೇಕಾದ ವಸ್ತುಗಳನ್ನೆಲ್ಲಾ ಖರೀದಿಸಿ ಬಾವಿ ತೋಡಲು ಶುರು ಮಾಡಿದೆ.

2

ಈ ಊರಿನಲ್ಲಿರುವ ದಲಿತರ ಗ್ರಾಮದಲ್ಲಿ ನೀರು ಬತ್ತಿ ಹೋಗಿದ್ದು, ಅದಕ್ಕಾಗಿ ಇತರ ಜಾತಿಯವರ ಮನೆಯಿಂದ ನೀರು ತರಬೇಕಾಗಿ ಬರುತ್ತಿತ್ತು. ಇತರ ಜಾತಿಯವರು ನಾವು ದಲಿತರು ಮತ್ತು ಬಡವರು ಎಂದು ಅವಮಾನ ಮಾಡುತ್ತಾರೆ ಅಂತಾರೆ ತಾಂಜೆ.

3

ಬಾವಿ ತೋಡಲು ನಾಲ್ಕೈದು ಜನರ ಸಹಾಯ ಬೇಕಾಗುತ್ತದೆ. ಆದರೆ ತಾಂಜೆ ಒಬ್ಬನೇ ಈ ಕಾರ್ಯವನ್ನು ಮಾಡಿದ್ದಾನೆ. ಮೊದ ಮೊದಲಿಗೆ  ತಾಂಜೆಗೇನೋ ಹುಚ್ಚು ಎಂದು ಜನರು ನಕ್ಕಿದ್ದರು. ಆತನ ಪತ್ನಿ ಕೂಡಾ ಸಹಾಯಕ್ಕೆ ಬರಲಿಲ್ಲ. ಆದರೆ  40 ದಿನಗಳ ನಂತರ ಬಾವಿಯಲ್ಲಿ ನೀರು ಸಿಕ್ಕಿತು. ಅಲ್ಲಿ ನೀರಿನ ಮೂಲ ಇದೆ ಎಂದು ಹೇಗೆ ತಿಳಿಯಿತು ? ಎಂದು ಕೇಳಿದರೆ ನಾನು ದೇವರಲ್ಲಿ ಪ್ರಾರ್ಥನೆ ಮಾಡಿ ಬಾವಿ ತೋಡಲು ಆರಂಭಿಸಿದ್ದೆ.

ನೀರು ಸಿಕ್ಕಿದ್ದು ತುಂಬಾ ಖುಷಿಯಾಗಿದೆ. ಈಗ ನನ್ನ ಗ್ರಾಮದವರು ನೀರನ್ನು ಅರಸಿ ಬೇರೆ ಕಡೆ ಹೋಗಬೇಕಾಗಿಲ್ಲ. ದಲಿತರು ಇನ್ನೊಂದು ಜಾತಿಯವರ ಮನೆಗೆ ಹೋಗಿ ನೀರಿಗಾಗಿ ಬೇಡಬೇಕಾಗಿಲ್ಲ ಅನ್ನುವ ತಾಂಜೆ ಬಿಎ ಅಂತಿಮ ವರ್ಷದವರೆಗೆ ಕಲಿತಿದ್ದಾರೆ.

ತನ್ನ ಪತಿಯನ್ನು ಬಾವಿ ತೋಡಲು ಹೊರಟಾಗ ಆತನನ್ನು ವ್ಯಂಗ್ಯವಾಡಿರುವ ಬಗ್ಗೆ ಬೇಸರ ವ್ಯಕ್ತ ಪಡಿಸಿದ ಪತ್ನಿ ಸಂಗೀತ, ನಾನು ಆತನಿಗೆ ಸಹಾಯ ಮಾಡಲೇ ಇಲ್ಲ. ಈಗ ಕುಟುಂಬದ ಎಲ್ಲ ಸದಸ್ಯರು ಮತ್ತು ಊರಿನವರು ಸಹಾಯ ನೀಡುತ್ತಿದ್ದಾರೆ. ಈಗಾಗಲೇ 15 ಅಡಿ ಆಳವಿದ್ದು, ಇನ್ನು 5 ಅಡಿ ತೋಡಬೇಕಿದೆ. 6 ಅಡಿ ಅಗಲವಿರುವ ಈ ಬಾವಿಯನ್ನು 8 ಅಡಿಯಷ್ಟು ಅಗಲೀಕರಣ ಮಾಡಬೇಕಿದೆ. ಇದಕ್ಕೆಲ್ಲಾ ಊರವರು ಸಹಾಯ ಮಾಡುತ್ತಾರೆ ಎಂಬ ನಿರೀಕ್ಷೆಯಿದೆ ಎಂದಿದ್ದಾರೆ.

ತಾಂಜೆ ಅವರ ಕೆಲಸವನ್ನು ಮರಾಠಿ ವಾಹಿನಿಯೊಂದು ಪ್ರಸಾರ ಮಾಡಿದ ನಂತರ ಈತನಿಗೆ ಪ್ರಶಂಸೆಗಳ ಸುರಿಮಳೆಯಾಗುತ್ತಿದೆ. ಗ್ರಾಮದ ಸರಪಂಚ್ ತಾಂಜೆಯನ್ನು ಭೇಟಿ ಮಾಡಿ ಬೆನ್ನು ತಟ್ಟಿದ್ದು, ಮಾಲೇಗಾಂವ್ ನ ತಹಶೀಲ್ದಾರ್ ಬಂದು ಹೂಗುಚ್ಛ ನೀಡಿ ಈತನನ್ನು ಪ್ರಶಂಸಿಸಿದ್ದಾರೆ.

ಬಾಲಿವುಡ್ ನಟ ನಾನಾ ಪಾಟೇಕರ್ ಕೂಡಾ ಈತನಿಗೆ ಫೆÇೀನಾಯಿಸಿ, ಶೀಘ್ರದಲ್ಲೇ ಭೇಟಿಯಾಗುವುದಾಗಿ ಹೇಳಿದ್ದಾರೆ. ವಾಶಿಂನ ಸಾಮಾಜಿಕ ಕಾರ್ಯಕರ್ತರೊಬ್ಬರು ಈತನಿಗೆ ರು. 5000 ಬಹುಮಾನವನ್ನೂ ನೀಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top