fbpx
Karnataka

ಕನ್ನಡ ರಾಜ್ಯೋತ್ಸವ

ನವೆಂಬರ್ 1. ಕನ್ನಡಿಗರ ಪಾಲಿಗೆ ಪರಮಪವಿತ್ರ ದಿನ. ಕನ್ನಡ ರಾಜ್ಯೋದಯದ ಸುದಿನ. ಚದುರಿ ಹಂಚಿಹೋಗಿದ್ದ ಕನ್ನಡ ನಾಡು ಒಗ್ಗೂಡಿ ಏಕೀಕರಣದ ಕಹಳೆ ಊದಿದ ದಿನ. 1956ರ ನವೆಂಬರ್ ಒಂದು ದಕ್ಷಿಣ ಭಾರತದಲ್ಲಿನ ಕನ್ನಡ ಮಾತನಾಡುವ ಪ್ರಾಂತ್ಯಗಳೆಲ್ಲವೂ ಸೇರಿ ರಾಜ್ಯ ಸ್ಥಾಪನೆಯಾದ ಅಮೃತಘಳಿಗೆ. ಕರ್ನಾಟಕ ಏಕೀಕರಣದ ಕನಸು ನನಸಾದ ಅವಿಸ್ಮರಣೀಯ ಕ್ಷಣ. `ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ’ ಎಂಬ ಉದ್ಘೋಷ ನಾಡಿನ ಉದ್ದಗಲಕ್ಕೂ ಮೊಳಗಿದ ದಿನ. ಇದು ಕನ್ನಡಿಗರ ಪಾಲಿಗೆ ಹಬ್ಬ. ಉತ್ಸವದ ಸಡಗರ, ಸಂಭ್ರಮದ ಹೊನಲು ಹರಿಯುವುದು ಸಹಜ. ಹಾಗಾಗಿ ರಾಜ್ಯೋದಯದ ದಿನ ರಾಜ್ಯೋತ್ಸವವೆಂದೇ ಜನಜನಿತ.

dis-rajya-utsav

ಗೋದಾವರಿಯಿಂದ ಕಾವೇರಿಯವರೆಗೆ ಹಬ್ಬಿದ್ದ ಕನ್ನಡ ನಾಡಿನ ಹಲವು ಭಾಗಗಳು ಅನ್ಯ ರಾಜ್ಯಗಳ ಪಾಲಾಗಿವೆ. ಗಡಿವಿವಾದಗಳು ಆರು ದಶಕಗಳಾಗುತ್ತಾ ಬಂದಿದ್ದರೂ ಇನ್ನೂ ಬಗೆಹರಿದಿಲ್ಲ. ಅದಕ್ಕೂ ಮಿಗಿಲಾಗಿ ಕನ್ನಡ ಭಾಷಾ ಬಳಕೆ ವ್ಯಾಪಕವಾಗಿಲ್ಲವೆಂಬುದು ಅತ್ಯಂತ ನೋವಿನ ಸಂಗತಿ.

ದಕ್ಷಿಣ ಭಾರತದ ದ್ರಾವಿಡ ಭಾಷೆಗಳಲ್ಲಿ ಕನ್ನಡ ಪುರಾತನ ಭಾಷೆ. ಸುಮಾರು ಎರಡು ಸಾವಿರ ವರ್ಷಗಳಿಗೂ ಮಿಗಿಲಾದ ಇತಿಹಾಸ ಈ ಭಾಷೆಗಿದೆ. ಕನ್ನಡ ಭಾಷೆಗಿರುವಷ್ಟು ಲಯ, ಮಾತುಗಾರಿಕೆ, ಸುಶ್ರಾವ್ಯತೆ ಮತ್ತು ಸೊಗಸು ಬೇರ್ಯಾವ ಭಾಷೆಗೂ ಇಲ್ಲ. ಸಾಹಿತ್ಯ ಕ್ಷೇತ್ರದ ಅಪೂರ್ವ ಸಾಧನೆಗೆ ಕೊಡಮಾಡುವ ಅತ್ಯುನ್ನತ ಜ್ಞಾನಪೀಠ ಪ್ರಶಸ್ತಿಯನ್ನು ಎಂಟು ಬಾರಿ ಮುಡಿಗೇರಿಸಿಕೊಂಡ ಹೆಗ್ಗಳಿಕೆ ಕನ್ನಡದ್ದು. ಆದಿಕವಿ ಪಂಪನಿಂದ ಹಿಡಿದು ಈವರೆಗೆ ಸಾವಿರಾರು ಲೇಖಕರು ಕನ್ನಡ ಭಾಷೆಯನ್ನು ಬೆಳಗಿದ್ದಾರೆ. ರಾಷ್ಟ್ರಕವಿ ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ, ವರಕವಿ ದತ್ತಾತ್ರೇಯ ರಾಮಚಂದ್ರ ಬೇಂದ್ರೆ, ಕಡಲತಡಿಯ ಭಾರ್ಗವ ಶಿವರಾಮಕಾರಂತ, ವಿ.ಕೃ ಗೋಕಾಕ್, ಕನ್ನಡದ ಆಸ್ತಿ ಮಾಸ್ತಿ ವೆಂಕಟೇಶ್ ಅಯ್ಯಂಗಾರ್, ಬಿ.ಎಂ.ಶ್ರೀ, ಪ್ರೊ. ಯು.ಆರ್.ಅನಂತಮೂರ್ತಿ, ಜಿ.ಎಸ್.ಶಿವರುದ್ರಪ್ಪ, ಪೂರ್ಣಚಂದ್ರ ತೇಜಸ್ವಿ, ಪಿ.ಲಂಕೇಶ್, ಗಿರೀಶ್ ಕಾರ್ನಡ್, ಚಂದ್ರಶೇಖರ ಕಂಬಾರ. ಒಬ್ಬರೇ ಇಬ್ಬರೇ ಎಲ್ಲರೂ ಕನ್ನಡಮ್ಮ ಭುವನೇಶ್ವರಿಯ ವರಪುತ್ರರು. ಕನ್ನಡ ಭಾಷೆ ಮತ್ತು ಕನ್ನಡ ನಾಡಿಗೆ ಘನತೆ ತಂದುಕೊಟ್ಟ ಮಹಾಮಹಿಮರು.

e6f278e306c16664694a875abcb711f4

ಇಂತಹ ಐತಿಹಾಸಿಕ ಹಿನ್ನೆಲೆ-ಸಾಧನೆಯ ಗರಿಮೆಯುಳ್ಳ ಕನ್ನಡ ಭಾಷೆ ಇಂದು ಜಗತ್ತಿನಲ್ಲಿ ಅಳಿವಿನ ಅಂಚಿನಲ್ಲಿರುವ ಭಾಷೆಗಳಲ್ಲಿ ಒಂದೆಂಬುದು ನಿಜಕ್ಕೂ ಅಘಾತಕಾರಿ ವಿಷಯ. `ಮಳೆ ಬಿದ್ದರೆ ನಾಡಿಗೆ ಕ್ಷೇಮ, ಮಕ್ಕಳು ಉಂಡರೆ ಮನೆಗೆ ಒಳ್ಳೆಯದು’ ಎಂಬ ಹಳ್ಳಿಗಾಧೆವೊಂದಿದೆ. ಅಂತೆಯೇ ಯಾವುದೇ ಭಾಷೆ ಬಳಕೆಯಾದಾಗ ಮಾತ್ರ ಹೆಚ್ಚು ಪ್ರಚಲಿತ ಮತ್ತು ಪ್ರಜ್ವಲ್ಯಮಾನ್ಯವಾಗುತ್ತದೆ. ಬಳಕೆಯ ಪ್ರಮಾಣ ಕಡಿಮೆಯಾದಂಗೆಲ್ಲಾ ಭಾಷೆ ಕ್ಷೀಣಿಸುವುದು ನಿಶ್ಚಿತ. ಕನ್ನಡವೂ ಈ ಮಾತಿಗೆ ಹೊರತಲ್ಲ. ಕನ್ನಡ ಆಡಳಿತ ಭಾಷೆಯಾಗಿ ಸಂಪೂರ್ಣವಾಗಿ ಅನುಷ್ಠಾನಗೊಂಡಿಲ್ಲವೆಂಬ ಮಾತು ನಿಜ. ಅದಕ್ಕಿಂತಲೂ ಜನಸಾಮಾನ್ಯರ ನಿತ್ಯದ ಭಾಷೆಯಾಗಿಯೂ ಕನ್ನಡ ಸಮರ್ಪಕವಾಗಿ ಬಳಕೆಯಾಗುತ್ತಿಲ್ಲದಿರುವುದು ಕಟುವಾಸ್ತವ. ಅದರಲ್ಲೂ ನಾಡಿನ ಭವ್ಯಭವಿಷ್ಯ ಮತ್ತು ಪ್ರಜೆಗಳೆನಿಸಿದ ಹೊಸ ತಲೆಮಾರಿನ ಮಕ್ಕಳು ದಿನೇ ದಿನೇ ಕನ್ನಡ ಭಾಷೆಯನ್ನು ಮರೆಯುತ್ತಿರುವುದು ದುರಂತ.

ಭಾಷಾಭಿಮಾನವಿರಲಿ

images

ಜಗತ್ತು `ತಾಳೇಗರಿ’ಯ ಯುಗದಿಂದ `ಕಂಪ್ಯೂಟರ್’ ಯುಗಕ್ಕೆ ಸ್ಥಿತ್ಯಂತರಗೊಂಡಿರುವ ಈ ದಿನಗಳಲ್ಲಿ ಕಲಿಕೆಗೆ ಹತ್ತಾರು ಭಾಷೆ-ನೂರೆಂಟು ಮಾರ್ಗ ಉಂಟು. ಎಲ್ಲವೂ ಜ್ಞಾನದ ಪ್ರಮಾಣ ಹೆಚ್ಚಿಸುವ ರಹದಾರಿಗಳು. ಹೊರಜಗತ್ತಿನೊಂದಿಗೆ ಸಂವಹನ ನಡೆಸಲು ಆಂಗ್ಲ ಭಾಷೆಯ ಅವಶ್ಯಕತೆಯಿರುವುದು ಅವಶ್ಯ. ಹಾಗಂತ ಕೇವಲ ಇಂಗ್ಲೀಷ್‍ನಿಂದಲೇ ಎಲ್ಲಾ ಜ್ಞಾನವನ್ನು ಪಡೆಯಬಹುದೆಂಬುದು ಅಪ್ಪಟ ಸುಳ್ಳು. ವಿಶ್ವದ ಅನೇಕ ಭಾಷಾ ತಜ್ಞರು ನಡೆಸಿರುವ ಸಮೀಕ್ಷೆಯ ಪ್ರಕಾರ `ಮಾತೃಭಾಷೆ’ ಯ ಮೂಲಕ ಕಲಿತ ವಿದ್ಯೆ ಶಾಶ್ವತವಾಗಿ ಮನಸ್ಸಿನಲ್ಲಿ ಉಳಿಯುತ್ತದೆ. ಗ್ರಹಿಕೆ ಗರಿಷ್ಠ ಪ್ರಮಾಣದಲ್ಲಾಗುವುದು ಮಾತೃಭಾಷೆಯ ಕಲಿಕೆಯಿಂದಲೇ. ಈ ಸತ್ಯವನ್ನು ಇಂದಿನ ಮಕ್ಕಳಾಗಲಿ, ಪೋಷಕರಾಗಲಿ ಅರಿಯದೆ ಪರಭಾಷಾ ವ್ಯಾಮೋಹದಲ್ಲಿ `ಅಂಧ’ ರಾಗಿರುವುದು ವಿಪರ್ಯಾಸ.

ಪರಭಾಷಾ ಒಲವು ಸಲ್ಲ

ಪರಭಾಷೆಯ ಬಗ್ಗೆ ಸೆಳೆತ ಸಹಜವೇ. ಆದರದು ವ್ಯಾಮೋಹದ ಅತಿರೇಕಕ್ಕೆ ಹೋಗಬಾರದು. ಅಮ್ಮನು ಕಲಿಸುವ ತೊದಲುನುಡಿಯ ಭಾಷೆಯೇ ಶ್ರೇಷ್ಠವೆಂಬುದು ಸಾರ್ವಕಾಲಿಕ ಸತ್ಯ. ಮನೆಯೇ ಮಂತ್ರಾಲಯ, ಮನಸ್ಸೇ ದೇವಾಲಯ. ಮನೆಯೇ ಮೊದಲ ಪಾಠಶಾಲೆ, ತಾಯಿಯೇ ಮೊದಲ ಗುರು. ಆ ಗುರುವಿನಿಂದ ಕಲಿತ ವಿದ್ಯೆ-ಭಾಷೆ-ಸಂಸ್ಕಾರ, ನಡವಳಿಕೆಗಳು ಎಂದಿಗೂ ಶ್ರೇಷ್ಠ. ಹೆತ್ತುಹೊತ್ತು ಸಾಕಿ ಸಲುಹುವ ಅಮ್ಮನ ಮಮಕಾರಕ್ಕೆ ಸಮನಾದುದು ಬೇರುಂಟೆ? ಅಂತೆಯೇ ಮಾತೃಭಾಷೆಗೆ ಸರಿಸಾಟಿಯಾದದ್ದು ಮತ್ತೊಂದಿಲ್ಲ.

ನಮ್ಮ ತಾಯಿ, ತಾಯ್ನಾಡು ಮತ್ತು ತಾಯಿಭಾಷೆಯ ಬಗೆಗಿನ ಅಭಿಮಾನ ಶಾಶ್ವತವಾಗಿರಬೇಕು. ಈ ಮೂರು ಬದುಕಿನ ಜಪ, ಮನಸ್ಸಿನ ಮಂತ್ರವಾಗಿರಬೇಕು. ನಮ್ಮೂರು, ನಮ್ಮಮ್ಮ, ನಮ್ಮಭಾಷೆ ಮತ್ತು ನಮ್ಮತನ ಉಳಿದರೆ ಮಾತ್ರ ನಾವು ಉಳಿಯಲು ಸಾಧ್ಯ. ಇಲ್ಲವಾದರೆ `ಎಲ್ಲಾ ಮಾಯ ಈಗ ನಾವೂ ಮಾಯ’ ಎಂಬಂತಾಗುವುದು ಶತಸಿದ್ಧ.

ಹೆತ್ತಮ್ಮನನ್ನು ಹಸಿವಿನಲ್ಲಿಟ್ಟು ಮತ್ತೊಬ್ಬರ ಅಮ್ಮನಿಗೆ ಮೃಷ್ಠಾನ್ನ ತಿನ್ನಿಸುವುದು ಹೆತ್ತೊಡಲಿಗೆ ಮಾಡುವ ಅಪಚಾರ. ಅಂತಹ ಅಪಚಾರಕ್ಕೆ ಮಕ್ಕಳು ಮುಂದಾಗಬಾರದು. ಈ ಜ್ಞಾನಯುಗದಲ್ಲಿ ಜ್ಞಾನ ಅತ್ಯವಶ್ಯ. ಹೆಚ್ಚು ಹೆಚ್ಚು ಭಾಷೆ ಕಲಿತಷ್ಟೂ ಒಳ್ಳೆಯದು. ಹಾಗಂತ ಮಾತೃಭಾಷೆಯನ್ನು ಮರೆಯಬೇಕೆಂದೇನಿಲ್ಲ. ಜ್ಞಾನದ ಭಾಷೆ ಹತ್ತಾರಾದರೂ ಆಡುಭಾಷೆ, ಮನೆ ಭಾಷೆ ಮತ್ತು ಮನದ ಭಾಷೆ ಕನ್ನಡವೇ ಆಗಿರಬೇಕು. ಭಾಷಾಭಿಮಾನ, ಮಾತೃಪ್ರೇಮ `ಬದುಕು-ಭಾವ’ ವಾಗಿರಬೇಕು. ಸಿಬಿಎಸ್ಸಿ, ಐಸಿಎಸ್ಸಿ ಶಿಕ್ಷಣ ಪದ್ಧತಿಯಲ್ಲಿ ಓದುವ ಮಕ್ಕಳು ಮನೆಯಲ್ಲಾದರೂ ಕನ್ನಡ ಪತ್ರಿಕೆ, ಕನ್ನಡ ಪುಸ್ತಕ ಓದಬೇಕು. ಕನ್ನಡದ ಹಾಡುಗಳನ್ನು ಕೇಳುವ, ಕನ್ನಡದ ಚಿತ್ರಗಳು, ಕನ್ನಡ ವಾಹಿನಿಗಳನ್ನು ನೋಡುವ, ಪರಭಾಷಿಕರ ಜೊತೆಗೆ ಕನ್ನಡದಲ್ಲೇ ವ್ಯವಹರಿಸುವ, ಅನ್ಯಭಾಷಿಕರಿಗೆ ಕನ್ನಡ ಕಲಿಸುವ, ಕನ್ನಡದಲ್ಲೇ ಸಹಿಮಾಡುವ, ಕನ್ನಡದಲ್ಲೇ ಮಾತನಾಡುವಂತಹ ಪರಿಪಾಠಗಳನ್ನು ಹೊಸ ಪೀಳಿಗೆಯ ಕನ್ನಡದ ಮಕ್ಕಳು ರೂಢಿ ಮಾಡಿಕೊಳ್ಳಬೇಕು.

`ಮಮ್ಮಿ, ಡ್ಯಾಡಿ, ಅಂಕಲ್, ಆಂಟಿ’ ಎಂಬಂತಹ ನಮ್ಮ ಸಂಸ್ಕøತಿಗೆ ಒಗ್ಗದ, ಆತ್ಮೀಯವೆನಿಸದ `ಕರೆಪದ’ ಗಳನ್ನು ಬದಿಗಿಟ್ಟು ಅಮ್ಮ, ಅಪ್ಪ, ಅಣ್ಣ, ಅಕ್ಕ, ಚಿಕ್ಕಮ್ಮ, ಚಿಕ್ಕಪ್ಪ ಮುಂತಾದ ಭಾವನಾತ್ಮಕ ಸೆಳೆತ ಹೆಚ್ಚಿಸುವ `ನಲ್ನುಡಿ’ ಗಳನ್ನು ಮಕ್ಕಳು ಆಡಬೇಕು. ಅನ್ಯ ಭಾಷೆಗಳನ್ನು ಕಲಿಯಲು ಹರಸಾಹಸ ಪಡುವ ಬದಲು `ಸುಲಿದ ಬಾಳೆಹಣ್ಣಿನಂತೆ’ ಸರಳವೂ, ಸುಂದರವೂ ಆದ ಕನ್ನಡ ಭಾಷೆಯನ್ನು ಹೆಚ್ಚು ಹೆಚ್ಚು ಬಳಸಬೇಕು. ಪೋಷಕರು ಪರಭಾಷೆ-ಪರಸಂಸ್ಕøತಿಯ ವ್ಯಾಮೋಹಕ್ಕೆ ಒಳಗಾಗದೆ ಹೊಸ ತಲೆಮಾರಿಗೆ ಸವಿಜೇನಿನ ಕನ್ನಡದ ಮಹತ್ವ ತಿಳಿಸಬೇಕು, ಕನ್ನಡ ಕಲಿಸಬೇಕು. ಮಕ್ಕಳಲ್ಲಿ ಕನ್ನಡಾಭಿಮಾನ ಉಕ್ಕಿಸುವ ಮೊದಲು ಸ್ವತಃ ತಾವು ಭಾಷಾಭಿಮಾನ ಬೆಳಸಿಕೊಳ್ಳಬೇಕು. `ಕನ್ನಡವೇ ಸತ್ಯ, ಕನ್ನಡವೇ ನಿತ್ಯ’ ಎಂಬ ಮಂತ್ರ ಪಠಿಸಬೇಕು. ಏನೂ ಅರಿಯದ ಕಂದಮ್ಮಗಳ ಮನದಲ್ಲಿ `ಪರಕೀಯ’ ಭಾವ ತರುವ ಪರಭಾಷೆಯ ಪದಪುಂಜಗಳನ್ನು ಬಲವಂತವಾಗಿ ತುಂಬುವ ಬದಲು ಅಚ್ಚ ಕನ್ನಡದ ಸಿರಿಸಂಪದದ ಛಾಪೊತ್ತಬೇಕು. ಆಗ ಮಾತ್ರ ಭಾಷೆ ಉಳಿಯಲು ಸಾಧ್ಯ. ಚಿಣ್ಣರು-ಪೋಷಕರು ಕನ್ನಡ ಭಾಷೆ ಉಳಿಸುವ-ಬೆಳೆಸುವ ದೃಢಸಂಕಲ್ಪ ಮಾಡಬೇಕು. ಕನ್ನಡ ಉಳಿಯಲಿ, ಕನ್ನಡ ಗೆಲ್ಲಲಿ.

ಜೈ ಕರ್ನಾಟಕ ಮಾತೇ….

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top