fbpx
Editor's Pick

ಟಿವಿ ಜ್ಯೋತಿಷ್ಯ ಕಾರ್ಯಕ್ರಮಗಳಿಗೆ ಬೇಕಿದೆ ಕಡಿವಾಣ

ಯಾವುದೋ ಒಂದು ಹಿಂದಿ ಚಲನಚಿತ್ರದಲ್ಲಿ ನೋಡಿದ ದೃಶ್ಯ ಅದೇನೆಂದರೆ ಜ್ಯೋತಿಷಿಯೊಬ್ಬನಿಗೆ ಗನ್ ಹಿಡಿದ ನಾಯಕನೊಬ್ಬ ಕೇಳುತ್ತಾನೆ ಹೇಳು ಈಗ ನೀನು ಬದುಕುತ್ತೀಯೊ ಅಥವಾ ಸಾಯುತ್ತೀಯ ಎಂದು ಭವಿಷ್ಯ ಹೇಳೆಂದು ನೀನು ಸಾಯುತ್ತೆಯೆಂದು ಭವಿಷ್ಯ ಹೇಳಿದರೆ ನಿನ್ನನ್ನು ಶೂಟ್ ಮಾಡುವುದಿಲ್ಲ ಬದುಕುತ್ತೀನೆಂದು ಭವಿಷ್ಯ ಹೇಳಿದರೆ ಶೂಟ್ ಮಾಡಿಬಿಡುತ್ತೇನೆ. ಆಗ ನೀನು ಹೇಳಿದ ಭವಿಷ್ಯ ಸುಳ್ಳಾಗುತ್ತದೆ

87cd3dcb3fdd8d5b393a8ab9d86ace11

ಎನ್ನುತ್ತಾನೆ!  ಇದು ಉದಾಹರಣೆಗಾಗಿ ತೆಗೆದುಕೊಂಡ ನಿದರ್ಶನವಾದರೂ ಇದರಲ್ಲಿ ಅರ್ಥ ಇದೆ. ಈಗ ಆಗಿರುವುದು ಅದೇ ಖ್ಯಾತ ಜ್ಯೋತಿಷಿಗಳೆಂದು ಹೇಳಿಕೊಂಡ ಕೆಲವು ಜ್ಯೋತಿಷಿಗಳು ದೂರದರ್ಶನ ಮಾಧ್ಯಮದ ಮೂಲಕ ಜನಸಮಾನ್ಯರ ದಿಕ್ಕು ತಪ್ಪಿಸುತ್ತಿದ್ದಾರೆ. ತಮ್ಮ ಜೇಬು ತುಂಬಿಸಿಕೊಳ್ಳುತ್ತಿದ್ದಾರೆ. ಪ್ರತಿದಿನ ಬೆಳಗ್ಗೆ ಯಾವುದೇ ಚಾನಲ್ ಹಾಕಿ! ಈ ಜ್ಯೋತಿಷ್ಯ ನೇರಪ್ರಸಾರ ಕಾರ್ಯಕ್ರಮ ಪ್ರಸಾರವಾಗುತ್ತಿರುತ್ತದೆ.

ಈ ಟಿವಿ ಜ್ಯೋತಿಷ್ಯ ಕಾರ್ಯಕ್ರಮದಲ್ಲಿ ಪ್ರಪಂಚದಲ್ಲಿ ಜನರಿಗೆ ಒಳ್ಳೆದಾಗೋ ಯಾವ ವಿಚಾರದ ಬಗ್ಗೆಯೂ ಚರ್ಚೆ ಇಲ್ಲ ಎಲ್ಲರೂ ಹೆಚ್ಚಾಗಿ ಪ್ರಸ್ತಾಪಿಸುತ್ತಿರುವುದು ಪ್ರಳಯದ ವಿಷಯನೇ! ಅದ್ಯಾವ ಮಹಾಶಯ ಈ ಪ್ರಳಯದ ವಿಷಯವನ್ನು ಮೊದಲು ಹೇಳಿದನೋ ಏನೋ ಇದರ ಪ್ರಸ್ತಾಪವಿಲ್ಲದೇ ಈ ಜ್ಯೋತಿಷ್ಯ ಕಾರ್ಯಕ್ರಮ ಮುಗಿಯುವುದೇ ಇಲ್ಲ! ಪ್ರಳಯದ ಬಗ್ಗೆ ಜನರಿಗೆ ಭಯ ಹುಟ್ಟಿಸದೇ ಇದ್ರೆ ಆ ಕಾರ್ಯಕ್ರಮ ಹೇಗೆ ವಿಶೇಷವಾಗುತ್ತದೆ ಹೇಳಿ? ಜನಸಾಮಾನ್ಯರ ಕೆಲವು ಸಮಸ್ಯೆಗಳು ಅನಿವಾರ್ಯವಾಗಿ ಕೆಲವು ಜ್ಯೋತಿಷಿಗಳ ಮೊರೆ ಹೋಗುವಂತೆ ಮಾಡುತ್ತಿದೆ ಎಂದರೆ ತಪ್ಪೇನಿಲ್ಲ ಪ್ರಳಯ ಆಗೇ ಬಿಡುತ್ತೇ ಹೀಗೆ ಆಗುತ್ತೆ, ಹಾಗೆ ಆಗುತ್ತೆ ಎಂದು ವದರುತ್ತಿರುವ ಯಾವೊಬ್ಬ ಜ್ಯೋತಿಷಿಯಾದರೂ ಕಳೆದ ತಿಂಗಳು ಜಪಾನ್‍ನಲ್ಲಿ ಆದ ಭೂಕಂಪ ಸುನಾಮಿಯ ಬಗ್ಗೆ ಯಾಕೆ ಹೇಳಲಿಲ್ಲ ಪ್ರಾಪಂಚಿಕ ಜ್ಞಾನವೆಲ್ಲಾ ನಮಗೆ ಇದೆ ಎಂದು ಜ್ಯೋತಿಷಿಗಳ ಸೋಗು ಹಾಕಿಕೊಂಡು ಟಿವಿಯಲ್ಲಿ ‘ಟಿವಿಯಿಂದ’ ಕುಳಿತು ಭವಿಷ್ಯ ಹೇಳುವ ಇವರಿಗೇಕೆ ಜಪಾನಲ್ಲಾದ ಸುನಾಮಿ ಭೂಕಂಪದ ಬಗ್ಗೆ ಹೇಳಲಾಗಲಿಲ್ಲ ಇಂಥಹ ಜ್ಯೋತಿಷ್ಯ ಕಾರ್ಯಕ್ರಮಗಳನ್ನು ಮಾಡುತ್ತಾ ಟಿವಿಗಳು ತಮ್ಮ ಟಿ.ಆರ್.ಪಿ ಯನ್ನು ಹೆಚ್ಚಿಸಿಕೊಳ್ಳುತ್ತಿದೆಯಂದರೆ ತಪ್ಪೇನಿಲ್ಲ!

2012ಕ್ಕೆ ಪ್ರಳಯ ಆಗುತ್ತದೋ ಇಲ್ಲವೋ ಆ ದೇವನೇ ಬಲ್ಲ ಆದರೆ ಈ ಟಿವಿ ಜ್ಯೋತಿಷಿಗಳು ಅದು ಹೇಗೆ ಜ್ಯೋತಿಷ್ಯವನ್ನು ನಂಬುವ ಮುಗ್ಧ ಜನಸಮೂಹವನ್ನು ನಂಬಿಸಿಬಿಟ್ಟಿದ್ದಾರೆಂದರೆ ಈ ಮುಗ್ಧ ಜನರು ಈ ಜ್ಯೋತಿಷಿಗಳು ಏನೂ ಹೇಳಿದರೂ ಮಾಡುತ್ತಾರೆ. ಅದ್ಯಾವುದೋ ದೇವಸ್ಥಾನದಲ್ಲಿ ದೀಪ ಹಚ್ಚಿದರೆ ಭೂಕಂಪ ಆಗಲ್ಲ ಎಂದಿದ್ದೆ ತಡ ಎಲ್ಲರೂ ಆ ದೇವಸ್ಥಾನಕ್ಕೆ ದೌಡಾಯಿಸಿದ್ದೆ!!. ಮನೆಯೊಳಗಿಂದ ಒಂದು ಚಂಬು ನೀರು ತಂದು ಮನೆ ಮುಂದೆ ಹಾಕಿ ಎಂದು ಅದ್ಯಾರೋ ಬೃಹತ್ ಬ್ರಹ್ಮಾಂಡದ ಜ್ಯೋತಿಷಿ ಹೇಳಿದ್ದೇ ತಡ ಸಮ್ಮೋಹನಕ್ಕೊಳರಾದವರಂತೆ ಒಂದು ಚಂಬು ನೀರು ಚೆಲ್ಲಿದವರೆ ಹೆಚ್ಚು.ನೀರು ಚೆಲ್ಲಿದ ಮೇಲೆ ರಂಗೋಲಿ ಹಾಕಿ ಎಂದು ಹೇಳಬಾರದಿತ್ತೆ ಜ್ಯೋತಿಷಿಗಳೇ? ಎಲ್ಲರ ಮನೆಯೂ ರಂಗೋಲಿಯಿಂದ ಕಂಗೊಳಿಸುತ್ತಿತ್ತು ಮೈತುಂಬ, ಹಣೆತುಂಬ, ವಿಭೂತಿ ಬಳಿದುಕೊಂಡು ಕೈಲೊಂದು ಶೂಲ ಹಿಡಿದುಕೊಂಡು ಶ್ರೀ ಸುಬ್ರಹ್ಮಣ್ಯ ಸ್ವಾಮಿಯನ್ನು ನಾಚಿಸುವ ಹಾಗೆ ಫೇಮಸ್ಸು ಕೊಟ್ಕೊಂಡು ಟಿವಿಯಲ್ಲಿ ಟಿವಿಯಿಂದ ಮಾತನಾಡುತ್ತಿದ್ದರೆ ಎಂಥವರು ಈತ ಹೇಳಿದ್ದೆಲ್ಲ ಸತ್ಯ ಎಂದು ನಂಬಬೇಕು ಕಲ್ಕತ್ತಾ ಮುಳುಗಿಹೋಗಿಬಿಡುತ್ತದಂತೆ, ದೆಲ್ಲಿ ಸರ್ವನಾಶವಗುತ್ತಂತೆ ಹಾಗೆ, ಹೀಗೆ ಭಾರತದಲ್ಲಿ 35 ಕೋಟಿ ಜನ ಮಾತ್ರ ಉಳಿತಾರಂತೆ ಅಂತೆ ಕಂತೆ ಎಂದು ಹೇಳುವುದಕ್ಕೆ ಏನಾದರೂ ಬಲವಾದ ಸಾಕ್ಷ್ಯಾಧಾರಗಳು ಇಂದೆಯೇ ನರೇಂದ್ರಬಾಬುರವರೆ?ಗುರುಸ್ಥಾನದಲ್ಲಿ ಕುಳಿತಿರುವ ಇಂಥಹ ಜ್ಯೋತಿಷಿಗಳು ಜನಸಾಮಾನ್ಯರ ಮನದಲ್ಲಿರುವ ಭಯವನ್ನು ನಿವಾರಿಸಬೇಕೆ ಹೊರತು ಭಯವನ್ನು ಹುಟ್ಟಿಸಬಾರದು ಅಷ್ಟೇ ಅಲ್ಲ ಗುರುಸ್ಥಾನದಲ್ಲಿ ಕುಳಿತಿರುವವರಿಗೆ ವಾಕ್ ಶುದ್ಧಿಯೂ ಅಷ್ಟೇ ಮುಖ್ಯ ಬೀಡಿ, ಸಿಗರೇಟ್ ಸೇದುವ ಪಾಪ್ ಮುಂಡೇವಾ ಕುಡಿಯುವ ದರಿದ್ರ ಮುಂಡೇವಾ ನೀವೆಲ್ಲಾ ನೆಗದ್ ಬಿದ್ ಹೋಗ್ತೀರಾ! ಗುರುಸ್ಥಾನದಲ್ಲಿ ಕುಳಿತವರಿಗೆ ಇಂಥಹ ಮಾತುಗಳು ಶೋಭೆ ತರುತ್ತದೆಯೇ?

ಸಾಂಸಾರಿಕ ಕಷ್ಟದಲ್ಲಿ ಸಿಲುಕಿಕೊಂಡ ನೊಂದ ಜೀವಗಳು ಇಂಥಹ ‘ಖ್ಯಾತ’ ಜ್ಯೋತಿಷಿಗಳ ಮೊರೆ ಹೋಗುತ್ತಿರುವುದು ವಿಷಾದಕರ ಸಂಗತಿ ಇನ್ನೂ ಭೂಮಿಗೆ ಬಂದು 15-20 ದಿನವಾಗಿರದ ಕಂದಮ್ಮಗಳ ಭವಿಷ್ಯ ಕೇಳುವವರ ಸಂಖ್ಯೆಗೇನೂ ಕಡಿಮೆಯಿಲ್ಲ ಕೆಲವರ ಸಮಸ್ಯೆ ಕಾಕತಾಳೀಯವಾಗಿ ಪರಿಹಾರವಾಗಿ ಮೂಢನಂಬಿಕೆಯಂಬ ಭೂತ ಹೆಮ್ಮರವಾಗಿ ಬೆಳೆಯುತ್ತಾ ಇಂಥಹ ಖ್ಯಾತ ಜ್ಯೋತಿಷಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.ಎಲ್ಲಿ ಯಾವ ದೇವಸ್ಥಾನಕ್ಕೆ ಜನ ಜಾಸ್ತಿ ಹೋಗುತ್ತಾರೊ ಅಂಥಹ ದೇವಸ್ಥಾನದಲ್ಲಿ ದೇವರ ಸಾನಿಧ್ಯ ಇರುವುದಿಲ್ಲ ಎಂದು ಯಾವ ಆಧಾರದ ಮೇಲೆ ಹೇಳುತ್ತಾರೋ ಈ ಜ್ಯೋತಿಷಿಗಳು? ಏನೊ ಮಹಿಮೆ ಇರುವ ಕಾರಣಾದಿಂದಲೆ ತಾನೆ ತಿರುಪತಿಗೆ ಪ್ರತಿದಿನ ಜನಸಾಗರ ಹರಿದು ಬರುವುದು. ಜನ ಜಾಸ್ತಿ ಬಂದರೆ ನನಗೆ ಡಿಸ್ಟರ್ಬ್ ಆಗುತ್ತೆ ಹಾಗಾಗಿ ನಾನು ಅಲ್ಲಿರುವುದಿಲ್ಲ ಎಂದು ದೇವರೇನಾದರೂ ಇವರಿಗೆ ಹೇಳಿದ್ದರೆ?

ಯುಗಾದಿ ಹಬ್ಬದ ಮಾರನೆ ದಿನ ಮಂಗಳವಾರ ಹೆಣ್ಣು ಮಗು ಹುಟ್ಟಿದರೆ ಅದಕ್ಕೆ ಮುಂದಿನ ಮೂರು ತಿಂಗಳಲ್ಲಿ ಮೆಳ್ಳಗಣ್ಣು ಆಗುತ್ತದೆ ಗಂಡು ಮಗು ಹುಟ್ಟಿದರೆ ಮುಂದಿನ ಮೂರು ತಿಂಗಳಲ್ಲಿ ಕೈ ಮುರಿದುಕೊಳ್ಳುತ್ತದೆ ಎಂದು ಕರಾರುವಾಕ್ಕಾಗಿ ಹೇಳುವ ಸಚ್ಚಿದಾನಂದ ಬಾಬುರವರೇ ಇತ್ತೀಚೆಗೆ ಟಿವಿ ಚಾನಲ್ ವೊಂದರಲ್ಲಿ ಸತ್ಯಸಾಯಿಬಾಬರವರ ಮರುಜನ್ಮವಾಗುತ್ತದಾ ಎಂಬ ವೀಕ್ಷಕರ ಪ್ರಶ್ನೆಗೆ ಆದರೂ ಆಗಬಹುದು !! ಆಗದೇನೂ ಇರಬಹುದು!! ಎಂದು ಅಡ್ಡಗೋಡೆಯ ಮೇಲಿ ದೀಪವಿಟ್ಟ ಹಾಗೆ ಜ್ಯೋತಿಷ್ಯ ಹೇಳಿದಿರಲ್ಲಾ ಸ್ವಾಮಿ ಇದೆಂಥಹ ಭವಿಷ್ಯ ನಿಮ್ಮದು? ಪ್ರತಿ ಭಾನುವಾರ ಅಷ್ಟು ನಿಖರವಾಗಿ ಜ್ಯೋತಿಷ್ಯ ಹೇಳುವ ನಿಮಗೆ ಬಾಬಾರವರ ಪುನರ್ಜನ್ಮದ ಬಗ್ಗೆ ಗೊತ್ತಿಲ್ಲವೆಂದರೆ?! ಕೆಲವೊಂದು ಚಾನಲ್ ಗಳಲ್ಲಿ ಬರುವ ಸಂಖ್ಯಾ ಜ್ಯೋತಿಷಿಗಳು ಯಾರಾದರೂ ಮದುವೆಯಾದ ದಿನಾಂಕ 7 ಎಂದು ಹೇಳಿದರೆ. ಏಳಾ ಅಷ್ಟೆ ಬಿಡಿ ನಿಮ್ಮ ಲೈಫು ಚಿತ್ರಾನ್ನ ಎಂದು ವಿಚಿತ್ರವಾಗಿ ಭವಿಷ್ಯ ಹೇಳುವ ಸಂಖ್ಯಾ ಜ್ಯೋತಿಷಿಗಳಿಗೇನೂ ಕಡಿಮೆಯಿಲ್ಲ!

ನನ್ನ ಮುಸ್ಲಿಂ ಸ್ನೇಹಿತನೊಬ್ಬನ ಜಾತಕವನ್ನು ಸುಮ್ಮನೆ ಹೀಗೆ ಬರೆಸಿದ್ದೆವು ಅವನ ಹಾಗೂ ನನ್ನ ಇನ್ನೊಬ್ಬ ಹಿಂದೂ ಗೆಳೆಯನ ರಾಶಿ, ನಕ್ಷತ್ರ, ದಶಾಬುಕ್ತಿ ಎಲ್ಲವು ಒಂದೇ ಇತ್ತು ಆದರೆ ನನ್ನ ಹಿಂದೂ ಸ್ನೇಹಿತನಿಗೆ ಒಂದರ ಮೇಲೊಂದು ತೊಂದರೆ 28 ವರ್ಷವಾದರೂ ಮದುವೆ ಆಗಿಲ್ಲ! ಆದರೆ ಮುಸ್ಲಿಂ ಗೆಳೆಯನಿಗೆ ಯಾವುದೇ ತೊಂದರೆ ಇಲ್ಲ ಮದುವೆ ಮಾಡಿಕೊಂಡು ಆರಾಂ ಇದ್ದ! ಆಗ ನನಗನಿಸಿದ್ದು ಈ ಗ್ರಹಗಳು ಬರಿ ಹಿಂದುಗಳನ್ನು ಮಾತ್ರ ಕಾಡುತ್ತದೆ0ಯೇ ಎಂದು ಈ ರೀತಿಯ ಉದಾಹರಣೆಗಳನ್ನು ಹುಡುಕುತ್ತಾ ಹೋದರೆ ಬೇಕಾದಷ್ಟು ಸಿಗುತ್ತದೆ ನಿನ್ನೆ ಮೊನ್ನೆಯವರೆಗೂ ಎಲ್ಲೋ ಇದ್ದ ಜ್ಯೋತಿಷಿಗಳು ಈ ಟಿವಿ ಚಾನಲ್ ಗಳು ಬೆಳೆದ ಹಾಗೆ ಬೆಳೆಯುತ್ತಿದ್ದಾರೆ.

ನಿಮ್ಮ ಪಾಪ ಪರಿಹಾರಕ್ಕೆ ಕ್ಷಮಿಸಿ ಸಮಸ್ಯೆಯ ಪರಿಹಾರಕ್ಕೆ ಜ್ಯೋತಿಷಿಗಳ ಮನೆ ಬಾಗಿಲಿಗೆ ಹೋಗುವುದು ಬೇಡ ಬೆಳಗ್ಗೆ ಕಾಫಿ ಹೀರುತ್ತಾ ಟಿವಿ ಚಾನಲ್ ಆನ್ ಮಾಡಿದರೆ ಸಾಕು ಜ್ಯೋತಿಷಿಗಳೆ ನಿಮ್ಮ ಮನೆಯಲ್ಲಿ ಹಾಜರ್. ಅದೃಷ್ಟವಿದ್ದು ಕಾಲ್ ಸಿಕ್ಕಿದರೆ 1 ರೂ ನಲ್ಲೇ ನಿಮ್ಮ ಸಮಸ್ಯೆಗೆ ಪರಿಹಾರ! ನಿಜವಾಗ್ಲೂ ಈ ಠೀವಿಯವರು ಈ ಖ್ಯಾತ ಜ್ಯೋತಿಷಿಗಳನ್ನು ಕರೆಸಿ ಕಾರ್ಯಕ್ರಮ ಮಾಡುತ್ತಾರೋ? ಅಥವಾ ಈ ಜ್ಯೋತಿಷಿಗಳೇ ದುಡ್ಡು ಕೊಟ್ಟು ಕಾರ್ಯಕ್ರಮ ಮಾಡಿಸಿಕೊಳ್ಳುತ್ತಾರೋ ದೇವರೆ ಬಲ್ಲ! ಏಕೆಂದರೆ ಕಾರ್ಯಕ್ರಮದ ಕೊನೆಗೆ ಇವರ ದೂರವಾಣಿ ಸಂಖ್ಯೆ ಹೇಳುತ್ತಾರೆ. ಇವರ ಬಳಿ ಅಪಾಯಿಂಟ್‍ಮೆಂಟ್ ಬೇಕಿದ್ದರೆ ತಿಂಗಳುಗಟ್ಟಲೇ ಕಾಯಬೇಕು ಎಷ್ಟೇ ಆದರು ಖ್ಯಾತ ಜ್ಯೋತಿಷಿಗಳಲ್ಲವೇ? ಇಲ್ಲಿ ನಿಮಗೆ ಸಮಸ್ಯೆ ತುಂಬಾನೆ ಇದ್ದು ನಾಳೆನೆ ಕಾಣ್ಬೇಕು ಅಂದರೆ ಫೀಜೂ ಅಷ್ಟೆ! ಇರುತ್ತದೆ ಗೊತ್ತೆ? ಏನೇ ಆಗಲಿ ದಿನದಿಂದ ದಿನಕ್ಕೆ ಈ ಟಿವಿ ಜ್ಯೋತಿಷಿಗಳ ಮೂಲಕ ಜನ ಮೌಡ್ಯರಾಗುತ್ತಿರುವುದು ವಿಪರ್ಯಾಸದ ಸಂಗತಿ ಯಾವುದು ಸರಿ ಯಾವುದು ತಪ್ಪು ಎಂದು ಯೋಚಿಸುವಷ್ಟು ಶಕ್ತಿ ಜನಸಾಮಾನ್ಯರಾಗಿದೆ. ಕಷ್ಟಗಳು ಬರುವುದು ಸಹಜ ಸಮಸ್ಯೆಗೆ ಪರಿಹಾರ ಇದ್ದೇ ಇರುತ್ತದೆ. ಆದರೆ ಮೂಢ ದಾರಿಯಲ್ಲಿ ಅಲ್ಲ ಎಂಬುದನ್ನು ನಾವು ಮೊದಲು ಅರಿತುಕೊಂಡರೆ ಖ್ಯಾತ ಜ್ಯೋತಿಷಿಗಳ ಅಗತ್ಯವೇ ಇರುವುದಿಲ್ಲ್! ಮೌಢ್ಯವನ್ನು ನಂಬುವವರಿರುವ ತನಕ ನಂಬಿಸುವವರ ಸಂಖ್ಯೆಯೂ ಬೆಳೆಯುತ್ತಲೇ ಇರುತ್ತದೆ ನಂಬಿಕೆ ಇರಲಿ ಆದರೆ ಮೂಢ ನಂಬಿಕೆ ಖಂಡಿತಾ ಬೇಡ ಇಂದಿನ ಠೀವಿ ಚಾನಲ್ ಗಳಿಗೆ ಕಾರ್ಯಕ್ರಮ ಮಾಡಲು ಬೇಕಾದಷ್ಟು ವಿಷಯಗಳಿವೆ ಅದರೆ ಉತ್ತಮ ಸಮಾಜಕ್ಕಾಗಿ ನೇರ ದಿಟ್ಟ ನಿರಂತರವಾಗಿ ಕೆಲಸ ಮಾಡದೇ ಮೌಢ್ಯವನ್ನು ಬೆಳಸುವ ಸಾಧನವಾಗುತ್ತಿರುವುದು ವಿಪರ್ಯಾಸದ ಸಂಗತಿ ಈಗ ಟಿವಿ ಚಾನಲ್‍ಗಳ ಸ್ವಲ್ಪ ಸಮಯ ಜ್ಯೋತಿಷ್ಯ ಕಾರ್ಯಕ್ರಮಕ್ಕೆ ಮೀಸಲಾಗಿದೆ. ಆದರೆ ಮುಂದೊಂದು ದಿನ ಜ್ಯೋತಿಷ್ಯಕ್ಕಾಗಿಯೇ 24/7 ಚಾನಲ್‍ಗಳು ಪ್ರಾರಂಭವಾದರೆ ಆಶ್ಚರ್ಯಪಡಬೇಕಾಗಿಲ್ಲ! ಜ್ಯೋತಿಷ್ಯ ನಂಬಿಕೆಯಾಗಿ ಉಳಿಯಲಿ, ಮೂಢನಂಬಿಕೆಯಾಗುವುದು ಬೇಡ.

ಪ್ರಕಾಶ್.ಕೆ.ನಾಡಿಗ್. ಶಿವಮೊಗ್ಗ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top