fbpx
Karnataka

ಭಾರತ ಬಂದ್ ಇಂದು: ಬಸ್, ಆಟೋ ಇಲ್ಲ

ಬೆಂಗಳೂರು: ಹಲವು ಬೇಡಿಕೆಗಳನ್ನು ಮುಂದಿಟ್ಟು ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಶುಕ್ರವಾರ ದೇಶಾದ್ಯಂತ ಅಖಿಲ ಭಾರತ ಸಾರ್ವತ್ರಿಕ ಮುಷ್ಕರಕ್ಕೆ ಕರೆ ನೀಡಿದ್ದು, ಬಸ್, ಆಟೋ, ಟ್ಯಾಕ್ಸಿ ಸೇವೆ ಸ್ಥಗಿತವಾಗಲಿದೆ.

ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ಹಾಗೂ ಸಾರಿಗೆ ವಿರೋಧಿ ನೀತಿಯನ್ನು ವಿರೋಧಿಸಿ ಸಾರಿಗೆ ಹಾಗೂ ವಾಣಿಜ್ಯ ವಹಿವಾಟು ಬೆಳಗ್ಗೆ 6ರಿಂದ ಸಂಜೆ 6ರವರೆಗೆ ಬಂದ್ ಆಗಲಿದ್ದು, ಇದರಿಂದಾಗಿ ರಾಜ್ಯದೆಲ್ಲೆಡೆ ಜನಜೀವನ ಅಸ್ತವ್ಯಸ್ತವಾಗಲಿದೆ.

ಮುಷ್ಕರಕ್ಕೆ ಐಎನ್‍ಟಿಯುಸಿ, ಎಐಟಿಯುಸಿ, ಸಿಐಟಿಯು ಸೇರಿದಂತೆ ಹಲವು ಕಾರ್ಮಿಕ ಸಂಘಟನೆಗಳು ಬಂದ್‍ಗೆ ಬೆಂಬಲ ನೀಡಿವೆ. ಬಿಎಂಟಿಸಿ, ಕೆಎಎಸ್‍ಆರ್‍ಟಿಸಿ ಬಸ್‍ಗಳು ನಾಳೆ ರಸ್ತೆಗಿಳಿಯುವ ಸಾಧ್ಯತೆ ಇಲ್ಲ. ಮುಷ್ಕರಕ್ಕೆ ಬಿಎಂಟಿಸಿ, ಕೆಎಸ್‍ಆರ್‍ಟಿಸಿ, ವಾಯವ್ಯ ಸಾರಿಗೆ, ಈಶಾನ್ಯ ಸಾರಿಗೆ ನೌಕರರು ಬೆಂಬಲ ಸೂಚಿಸಿರುವುದರಿಂದ ಶುಕ್ರವಾರ ಸಂಜೆವರೆಗೂ ಸಂಚಾರ ವ್ಯವಸ್ಥೆಯಲ್ಲಿ ಏರುಪೇರಾಗಲಿದೆ.

ಬೆಂಬಲ:

ಕೇಂದ್ರ ಸರ್ಕಾರದ ಜನವಿರೋಧಿ, ಕಾರ್ಮಿಕ ವಿರೋಧಿ ನೀತಿ ಧೋರಣೆಯ ವಿರುದ್ಧ ವಿಮೆ, ರಕ್ಷಣೆ ದೂರ ಸಂಪರ್ಕ, ಕೇಂದ್ರ, ರಾಜ್ಯ ಸರ್ಕಾರಗಳ ನಾನಾ ನೌಕರ ಒಕ್ಕೂಟಗಳು ಸೇರಿದಂತೆ ಕೇಂದ್ರೀಯ ಕಾರ್ಮಿಕ ಸಂಘಟನೆಗಳು, ಸಾರಿಗೆ ಒಕ್ಕೂಟಗಳು, ಆಟೋ ಮತ್ತು ಟ್ಯಾಕ್ಸಿ ಒಕ್ಕೂಟಗಳು ಸೇರಿದಂತೆ ಹಲವು ಸಂಘಟನೆಗಳು 12 ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಸಾರ್ವತ್ರಿಕ ಮುಷ್ಕರಕ್ಕ ಕರೆ ನೀಡಿವೆ. ಸಾರಿಗೆ ನೀತಿಯಿಂದಾಗಿ ಸಣ್ಣ ತಪ್ಪು ಮಾಡಿದರೂ ದೊಡ್ಡ ಶಿಕ್ಷೆಯಾಗುವಂತಾಗಲಿದೆ. ಈ ಹಿನ್ನೆಲೆಯಲ್ಲಿ ಈಗ ಜಾರಿಗೆ ತಂದಿರುವ ಮಸೂದೆಯನ್ನು ವಾಪಸ್ ತೆಗೆದುಕೊಳ್ಳಬೇಕು ಎಂದು ಚಾಲಕರು ಆಗ್ರಹಿಸಿದ್ದಾರೆ.

ಕೇಂದ್ರದ ನಿರ್ಧಾರಕ್ಕೆ ಆಕ್ರೋಶ

ಕೃಷಿಯೇತರ ಕೌಶಲ್ಯ ಕಾರ್ಮಿಕರ ಕನಿಷ್ಠ ದಿನಗೂಲಿಯನ್ನು 246 ರೂ. ನಿಂದ 350 ರೂ.ಗೆ ಹೆಚ್ಚಳ ಹಾಗು ಕೇಂದ್ರ ಸರ್ಕಾರಿ ನೌಕರರಿಗೆ 2 ವರ್ಷದ ಬೋನಸ್ ಪರಿಷ್ಕರಣೆ ಮಾಡಲು ಕೇಂದ್ರ ಸರ್ಕಾರ ಸಮ್ಮತಿಸಿದ್ದರೂ ಕಾರ್ಮಿಕ ಸಂಘಟನೆಗಳು ತಮ್ಮ ನಿಲುವುನಿಂದ ಹಿಂದೆ ಸರಿಯದೆ ಕಾರ್ಮಿಕ ವಿರೋಧಿ ಧೋರಣೆ ಹಾಗೂ ಸಾರಿಗೆ ವಿರೋಧಿ ನೀತಿಯನ್ನು ವಾಪಸ್ ಪಡೆಯುವಂತೆ ಒತ್ತಾಯಿಸಿ ಮುಷ್ಕರ ನಡೆಸುವ ಮೂಲಕ ಕೇಂದ್ರ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ನಿರ್ಧರಿಸಿವೆ.

ರೈಲು, ನಮ್ಮ ಮೆಟ್ರೋ ಸಂಚಾರ

ಬಿಎಂಟಿಸಿ, ಕೆಎಸ್‍ಆರ್‍ಟಿಸಿ ಸೇವೆ ಸ್ಥಗಿತವಾಗಲಿದ್ದು, ಇದರಿಂದ ಪ್ರಯಾಣಿಕರು ಪರದಾಡಬೇಕಾಗುತ್ತದೆ. ಆದರೆ, ದೂರದ ಪ್ರಯಾಣಕ್ಕೆ ಅನುಕೂಲವಾಗಲು ರೈಲು ಪ್ರಯಾಣ ಇರುತ್ತದೆ. ಬೆಂಗಳೂರು ನಗರದಲ್ಲಿ ಮೆಟ್ರೋ ರೈಲಿನ ಸಂಚಾರ ಇರುವುದರಿಂದ ಕೆಲ ಭಾಗದ ಪ್ರಯಾಣಿಕರಿಗೆ ಅನುಕೂಲವಾಗಲಿದೆ.
ಹೋಟೆಲ್‍ಗಳು, ಶಾಲೆ, ಬಂಕ್‍ಗಳ ಸೇವೆ

ಭಾರತ ಬಂದ್‍ಗೆ ಹೋಟೆಲ್‍ಗಳ ಮಾಲೀಕರು ಬೆಂಬಲ ನೀಡಿಲ್ಲ. ಎಂದಿನಂತೆ ಕಾರ್ಯ ನಿರ್ವಹಿಸುವುದಾಗಿ ಹೇಳಿದ್ದಾರೆ. ಹಾಗೆಯೇ ಖಾಸಗಿ ಶಾಲಾ, ಕಾಲೇಜುಗಳು ಆಡಳಿತ ಮಂಡಳಿ ಕೂಡಾ ಬಂದ್‍ಗೆ ಬೆಂಬಲ ನೀಡಿಲ್ಲ. ಆದರೆ, ಶಾಲಾ ವಾಹನ ಚಾಲಕರು ಬಂದ್‍ಗೆ ಬೆಂಬಲ ನೀಡಿರುವುದರಿಂದ ತಮ್ಮ ಮಕ್ಕಳನ್ನು ಸ್ವಂತ ವಾಹನದಲ್ಲಿ ಕರೆತರುವಂತೆ ಖಾಸಗಿ ಶಾಲಾ ಆಡಳಿತ ಮಂಡಳಿ ಪೋಷಕರಿಗೆ ಎಸ್‍ಎಂಎಸ್ ಸಂದೇಶ ರವಾನಿಸಿದೆ. ಇನ್ನು ಪೆಟ್ರೋಲ್ ಬಂಕ್‍ಗಳ ಸೇವೆ ಎಂದಿನಂತೆ ಇರಲಿದೆ ಎಂದು ಬಂಕ್‍ಗಳ ಮಾಲೀಕರ ಸಂಘ ತಿಳಿಸಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top