fbpx
Editor's Pick

ಸಂತೋಷದ ಬೆನ್ನೇರಿ..!

ಪ್ರಪಂಚದ ಪ್ರತಿಯೊಬ್ಬರೂ ಹುಡುವುದೇ ಸಂತೋಷ. ಆದರೆ, ಜೀವನವಿಡೀ ಜನರು ಸಂತೋಷದ ಬೆನ್ನೇರುತ್ತಲೇ ಇರುತ್ತಾರೆ. ಆದರೆ ಅವರಿಗೆ ಸಂತೋಷ ಸಿಗುವುದೇ ಇಲ್ಲ. ಸಂತೋಷ ಸಿಗುತ್ತದೆ. ಆದರೆ ಅದು ಕ್ಷಣಿಕವಾಗಿರುತ್ತದೆ. ಎರಡು ಗಂಟೆಗಳವರೆಗೆ, ಎರಡು ದಿನಗಳವರೆಗಿದ್ದು ಮಾಯವಾಗಿ ಬಿಡುತ್ತದೆ. ಆದರೆ ಆತ್ಮವು ಸದಾ ಶಾಶ್ವತವಾಗಿ ಉಳಿಯುವ ಸಂತೋಷಕ್ಕಾಗಿ, ಕಹಿಯಾಗಿಬಿಡದ ಸಂತೋಷಕ್ಕಾಗಿ ಹುಡುಕುತ್ತಿರುತ್ತದೆ.

100-Best-Life-Status-for-Whatsapp-in-English-03

ಒಬ್ಬಾತ ತನ್ನ ಮನೆಯ ಬೀಗದ ಕೈಗಳನ್ನು ಕಳೆದುಕೊಂಡು, ಅದನ್ನು ತನ್ನ ಮನೆಯ ಎದುರು ಇದ್ದ ಬೀದಿ ದೀಪಗಳ ಬಳಿ ಹುಡುಕುತ್ತಿದ್ದ. ಬೇರೆಯವರೂ ಬಂದು ಬೀಗದ ಕೈಗಳನ್ನು ಹುಡುಕುವ ಯತ್ನವನ್ನು ಮಾಡಿದರು. ಅವರಲ್ಲಿ ಒಬ್ಬನು, “ನಿನ್ನ ಬೀಗದ ಕೈಗಳನ್ನು ಎಲ್ಲಿ ಕಳೆದುಕೊಂಡೆ?” ಎಂದು ಕೇಳಿದಾಗ, “ನನ್ನ ಮನೆಯೊಳಗೆ ಕಳೆದುಕೊಂಡೆ” ಎಂದು ಈತ ಉತ್ತರಿಸಿದ. “ಮನೆಯೊಳಗೆ ಕಳೆದುಕೊಂಡದ್ದನ್ನು ಹೊರಗೇಕೆ ಹುಡುಕುತ್ತಿರುವೆ?” ಎಂದು ಎಲ್ಲರೂ ಕೇಳಿದಾಗ,

“ಇಲ್ಲಿ ಬೆಳಕಿರುವುದರಿಂದ” ಎಂದನಾತ!

ಜಗತ್ತಿನಲ್ಲಿ ಎಲ್ಲರೊಡನೆಯೂ ಇದೇ ಆಗುತ್ತಿದೆ. ನಮ್ಮೆಲ್ಲರೊಳಗೂ ಅಪಾರವಾದ ಸಂತೋಷವಿದ್ದರೂ ಹೊರಗೆ ಎಲ್ಲೋ ಸಂತೋಷಕ್ಕಾಗಿ ಹುಡುಕುತ್ತಿದ್ದೇವೆ. ನಾವು ಮಕ್ಕಳಾಗಿದ್ದಾಗ ಕಿರುಚಿ, ಆಡಿ, ಸಂತೋಷವಾಗಿರುತ್ತಿದ್ದೆವು. ಪ್ರತಿಯೊಂದು ಮಗುವೂ ಸಂತೋಷದ ಬುತ್ತಿಯಲ್ಲದೆ ಬೇರೇನೂ ಅಲ್ಲ. ಆದರೆ ಬೆಳೆಯುತ್ತಾ ಹೋದಂತೆ ಆ ಸಂತೋಷವನ್ನು ಕಳೆದುಕೊಳ್ಳುತ್ತೇವೆ. ಒಂದು ಮಗುವು ದಿನಕ್ಕೆ 400 ಸಲ ನಕ್ಕರೆ, ಹದಿಹರೆಯದಲ್ಲಿ 17 ಸಲ ಮಾತ್ರ ನಗುತ್ತಾರೆ. ದೊಡ್ಡವರಾದ ಮೇಲೆ ಯಾವಾಗಲೋ ಒಮ್ಮೆ, ಯಾರಾದರೂ ನಕ್ಕಾಗ ಮಾತ್ರ ನಗುತ್ತಾರೆ. ಇದೆಲ್ಲವನ್ನೂ ಹೇಗೆ ತಿರುಗುಮುರುಗಾಗಿ ಮಾಡುವುದು ಎನ್ನುವುದೇ ಪ್ರಶ್ನೆ. ನಾವು ಜನಿಸಿದಾಗ ಇದ್ದ ಆ ಮುಗುಳ್ನಗೆಯನ್ನು, ಮುಗ್ಧತೆಯನ್ನು ಮತ್ತೆ ಹೇಗೆ ತರುವುದು?

ನಾವು ಮಗುವಿನಂತೆ ಇರದೆ, ಇರಲು ತಡೆಯುವ ಮೂರು ವಿಷಯಗಳೆಂದರೆ. (1) ಪೂರ್ವಾಗ್ರಹಗಳು (2) ಅನಿಶ್ಚಿತತೆ (3) ಒತ್ತಡ. ಈ ಮೂರರಿಂದ ಬಿಡುಗಡೆಯನ್ನು ಹೊಂದಬೇಕು.

images

ಉಸಿರಿನ ಸಹಾಯದಿಂದ ಒತ್ತಡವನ್ನು ನಿವಾರಿಸಿಕೊಳ್ಳಬಹುದು. ಒತ್ತಡವೆಂದರೆ ಮಾಡಬೇಕಾಗಿರುವುದು ಬಹಳಷ್ಟಿರುತ್ತದೆ. ಆದರೆ ಸಮಯ ಮತ್ತು ಶಕ್ತಿಯಿರುವುದಿಲ್ಲ. ಅನೇಕ ರೀತಿಯ ಉಸಿರಾಟದ ಪ್ರಕ್ರಿಯೆಗಳಿಂದ ವಿಶ್ರಾಂತಿಯನ್ನು ಪಡೆದು ಬಹಳ ಶಕ್ತಿಯನ್ನು ಮರಳಿ ಪಡೆಯಬಹುದು.

ಮಾಡಬೇಕಾಗಿರುವುದರ ಪಟ್ಟಿಯನ್ನು ಅಥವಾ ಅವಶ್ಯಕತೆಗಳನ್ನು ಕಡಿಮೆ ಮಾಡಿಕೊಳ್ಳಬೇಕು. ಇದು ಸಾಧ್ಯವಿಲ್ಲವಾದ್ದರಿಂದ ಶಕ್ತಿಯ ಮಟ್ಟವನ್ನು ವ್ಯಾಯಾಮಗಳಿಂದ, ಪ್ರಾಣಾಯಾಮ, ಧ್ಯಾನ, ಯೋಗದಿಂದ ಹೆಚ್ಚಿಸಿಕೊಳ್ಳಬೇಕು. ಪ್ರಜ್ಞಾಪೂರ್ವಕವಾಗಿ ಧ್ಯಾನದಲ್ಲಿ 15-20 ನಿಮಿಷಗಳವರೆಗೆ ಆಳವಾಗಿ ವಿಶ್ರಮಿಸಿದರೆ ಅದು 6 ರಿಂದ 8 ಗಂಟೆಗಳ ನಿದ್ದೆಗೆ ಸಮಾನ. ಈ ರೀತಿಯ ವಿಶ್ರಾಂತಿಯಿಂದ ಉನ್ನತ ಶಕ್ತಿಯ ಮಟ್ಟಗಳು ಲಭ್ಯವಾಗುತ್ತದೆ. ಇದನ್ನೇ ಧ್ಯಾನ ಎನ್ನುತ್ತಾರೆ. ಧ್ಯಾನವೆಂದರೆ ಕುಳಿತು ಏನನ್ನೋ ಆಲೋಚಿಸುವುದಲ್ಲ, ಆಲೋಚನೆಗಳ ಮೂಲಕ್ಕೆ ಹೋಗುವುದು. ಆದ್ದರಿಂದ, ಒತ್ತಡವನ್ನು ಕಡಿಮೆ ಮಾಡುವುದು ಅಥವಾ ನಿವಾರಿಸುವುದು ಮೊದಲನೆಯ ವಿಷಯ. ನಿದ್ದೆಯಿಂದ ಸಿಗುವ ವಿಶ್ರಾಂತಿಯು ಮಂಕುತನವನ್ನುಂಟು ಮಾಡುವ ವಿಶ್ರಾಂತಿ. ಧ್ಯಾನವೆಂದರೆ ಪ್ರಜ್ಞಾಪೂರ್ವಕವಾದ ವಿಶ್ರಾಂತಿ. ಎರಡನೆಯ ವಿಷಯವೆಂದರೆ ಪೂರ್ವಾಗ್ರಹಗಳಿಂದ ಮುಕ್ತರಾಗುವುದು, ಅನೇಕ ರೀತಿಯ ಪೂರ್ವಾಗ್ರಹಗಳಿವೆ. ತಲೆಮಾರುಗಳ ನಡುವೆ ಪೂರ್ವಾಗ್ರಹವಿರುತ್ತದೆ.

ಯುವಕರು ಹಿರಿಯರೊಂದಿಗೆ ತಮ್ಮ ಹೃದಯವನ್ನು ಬಿಚ್ಚಿ ವಿಷಯಗಳನ್ನು ಹಂಚಿಕೊಳ್ಳುವುದಿಲ್ಲ. ಇದು ಜಗತ್ತಿನ ಎಲ್ಲಾ ಭಾಗಗಳಲ್ಲೂ ಕಾಣಬಹುದು. ಯುವಕರು ಹಿರಿಯರೊಂದಿಗೆ ಅಥವಾ ತಮಗಿಂತಲೂ ಕಿರಿಯರಾದವರೊಂದಿಗೆ ಬೆರೆಯುವುದಿಲ್ಲ. ವರ್ಗಗಳ ಬಗ್ಗೆ, ಲಿಂಗಗಳ ಬಗ್ಗೆ, ಧರ್ಮದ ಬಗ್ಗೆ, ಸಂಸ್ಕೃತಿ, ಭಾಷೆ, ಇತ್ಯಾದಿಯ ಬಗ್ಗೆ ಪೂರ್ವಾಗ್ರಹಗಳಿರುತ್ತವೆ. ಜ್ಞಾನವೆಂದರೆ ಪೂರ್ವಾಗ್ರಹಗಳನ್ನು ಮೀರಿ, ಇಡೀ ಜಗತ್ತನ್ನು ಒಂದೇ ಕುಟುಂಬದಂತೆ ಕಾಣುವುದು. ಇಡೀ ಜಗತ್ತನ್ನು ಒಂದೇ ಕುಟುಂಬದಂತೆ ಕಂಡಾಗ ಜಗತ್ತಿನಲ್ಲಿ ಅಪರಾಧಗಳಿರುವುದಿಲ್ಲ, ಯುದ್ಧಗಳಿರುವುದಿಲ್ಲ. ಇಂದಿನ ದಿನಗಳಲ್ಲಿ ಬಹಳ ಜನರ ಹತ್ಯೆಯಾಗುತ್ತಿದೆ, ಹಿಂಸೆ ಹೆಚ್ಚುತ್ತಿದೆ. ಇದೆಲ್ಲವೂ ನಡೆಯುತ್ತಿರುವುದು ವಿಶಾಲ ದೃಷ್ಟಿಕೋನದ, ಜ್ಞಾನದ ಅಭಾವದಿಂದಾಗಿ. ಮೂರನೆಯದ್ದು ಅನಿಶ್ಚಿತತೆ. “ಓ, ನನಗೆಂದು ಯಾರೂ ಇಲ್ಲ. ನನ್ನನ್ನು ಯಾರು ನೋಡಿಕೊಳ್ಳುತ್ತಾರೆ?” ಎಂಬ ಚಿಂತೆ ಸಾಮಾನ್ಯವಾಗಿರುತ್ತದೆ. ನಿಮ್ಮ ಜೀವನವನ್ನೇ ಹಿಂದಿರುಗಿ ಒಮ್ಮೆ ನೋಡಿಕೊಳ್ಳಿ. ಆ ಕಾಲವೆಲ್ಲವೂ ಹೊರಟುಹೋಗಿ ಇಂದಿನ ದಿನ ನೀವೆಷ್ಟು ಪರಿಪೂರ್ಣವಾಗಿದ್ದೀರಿ ನೋಡಿ! ಗತದಲ್ಲಿ ಅನಿಶ್ಚಿತತೆಯಿಂದ ನೀವು ಕಳೆದ ಕ್ಷಣಗಳೆಲ್ಲವೂ ವ್ಯರ್ಥ ಎಂದು ನಿಮಗನಿಸುವುದಿಲ್ಲವೆ? ಎಷ್ಟು ಸಲ ಅನಿಶ್ಚಿತತೆಯಿಂದ ಇದ್ದೀರಿ ಎಂಬುದನ್ನು ಎಣಿಸಿಕೊಂಡು ನೋಡಿ. ಎಷ್ಟು ದಿನಗಳನ್ನು ದುಃಖದಿಂದ ಕಳೆದಿರಿ? ಅದೆಲ್ಲವೂ ವ್ಯರ್ಥವಾದ ಸಮಯ ಮತ್ತು ಶಕ್ತಿಯೂ ವೃಥಾ ಕಳೆದುಹೋದುದಲ್ಲದೆ ನಿಮ್ಮ ದೇಹದಲ್ಲಿ ವಿಷಕಾರಿ ಪದಾರ್ಥಗಳೂ ಸೃಷ್ಟಿಯಾದವು. ಅನಿಶ್ಚಿತತೆಯಿಂದ ಆರೋಗ್ಯವೂ ಹದಗೆಡುತ್ತದೆ. ಈ ಜಗತ್ತಿನಲ್ಲಿ ಒಳ್ಳೆಯ ಜನರೂ ಇದ್ದಾರೆ. ಅವರು ಸದಾ ನಿಮ್ಮ ಸಹಾಯಕ್ಕೆ ಬಂದು ನಿಲ್ಲುತ್ತಾರೆ. ನಿಮಗೆ ಮಾರ್ಗದರ್ಶನ ನೀಡಿ ನಿಮಗೆ ಸಹಾಯ ಮಾಡುವ ಒಂದು ಉನ್ನತ ಶಕ್ತಿಯಿದೆಯೆಂದು ನಿಶ್ಚಯವಾಗಿ ತಿಳಿದುಕೊಳ್ಳಿ. ಈ ತಿಳಿವಳಿಕೆಯಿಂದ, ಜ್ಞಾನದಿಂದ ನಿಮ್ಮ ಅನಿಶ್ಚಿತತೆಯಿಂದ ಹೊರಬನ್ನಿ. ಒತ್ತಡದಿಂದ, ಅನಿಶ್ಚಿತತೆಯಿಂದ, ಪೂರ್ವಾಗ್ರಹದಿಂದ ಹೊರಬಂದಾಗ ಮಗುವಿನಂತೆ ಸಂತೋಷವಾಗಿ ನಲಿಯಬಹುದು. ಈ ಸಂತೋಷವು ನಿಮ್ಮಲ್ಲಿ ಆಗಲೇ ಇದೆ. ಅದನ್ನು ಆವರಿಸಿಕೊಂಡಿದ್ದ ಮೂರು ಪರದೆಗಳನ್ನು ತೆಗೆದೊಡನೆಯೇ ಸಹಜವಾಗಿಯೇ ಸಂತೋಷವು ಪ್ರಕಾಶಿಸುತ್ತದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top