fbpx
Karnataka

ಗಣೇಶನಿಗೆ ಮೋದಕ ಪ್ರಿಯ ಎಂದು ಏಕೇ ಕರೆಯುತ್ತಾರೆ ಗೋತ್ತೆ?

ಮೋದಕದ ನೈವೇದ್ಯವಿಲ್ಲದೆ ಗಣೇಶನ ಹಬ್ಬಕ್ಕೆ ಪರಿಪೂರ್ಣತೆ ಬರದು. ಕೊಬ್ಬರಿ ಮತ್ತು ಬೆಲ್ಲದ ಸಿಹಿ ಹೂರಣ ಮತ್ತು ಅಕ್ಕಿ ಅಥವಾ ಮೈದಾದಿಂದ ರಚಿಸಲ್ಪಟ್ಟ ಹೊರ ಹೊದಿಕೆ ಇದರ ವೈಶಿಷ್ಟ್ಯ. ಮೋದಕವೇ ಯಾಕೆ ಗಣೇಶನಿಗೆ ಪ್ರಿಯ ಎನ್ನುವುದಕ್ಕೂ ಒಂದು ಪೌರಾಣಿಕ ಕತೆಯಿದೆ. ಪ್ರತಿಸಲ ಗಣೇಶನ ಹುಟ್ಟುಹಬ್ಬ ಬಂದಾಗಲೆಲ್ಲ ಪಾರ್ವತಿ ಮೋದಕವನ್ನೇ ಬಡಿಸುತ್ತಿದ್ದಳು ಎಂಬುದನ್ನು ‘ಪದ್ಮಪುರಾಣ’ದಲ್ಲಿ ಉಲ್ಲೇಖಿಸಲಾಗಿದೆ.

ನಮ್ಮ ಭಾರತೀಯ ಪರಂಪರೆಯಲ್ಲಿ ಎಲ್ಲಕ್ಕಿಂತಲೂ, ಎಲ್ಲರಿಗಿಂತಲೂ ಮೊದಲ ಪೂಜೆ ಸ್ವೀಕರಿಸುವವನು ವಿಘ್ನ ನಿವಾರಕನಾದ ವಿಘ್ನೇಶ್ವರನು.   ಗಣಪತಿ, ಬೆನಕ, ಮೋದಕಪ್ರಿಯ, ಲಂಬೋಧರ ಎಂಬ ಅನೇಕ ಹೆಸರುಗಳಿಂದ ಕರೆಯಲ್ಪಡುವವನು.  ಗಣೇಶ ನಮ್ಮ ಭಾರತದಲ್ಲಿ ಮಾತ್ರವೇ ಅಲ್ಲದೇ ಇಡೀ ಪ್ರಪಂಚದಲ್ಲೇ ಪ್ರಸಿದ್ಧನಾದವನು.  ಪಾರ್ವತಿ ಪುತ್ರನಾಗಿ ಉದ್ಭವಿಸಿದವನು.  ತಾಯಿ ಪಾರ್ವತಿ ಬಾಗಿಲಿನಲ್ಲಿ ಕಾವಲಿಗೆ ನಿಲ್ಲಿಸಿದ್ದಳು ಎಂದು ಪುರಾಣ ಕಥೆಗಳಲ್ಲಿ ತಿಳಿಸಲ್ಪಟ್ಟಿದೆ.  ಅದರ ಅರ್ಥ ಗಣೇಶ ನಮ್ಮನ್ನು ಕಾಪಾಡುವವನು, ರಕ್ಷಿಸುವವನು, ನಮ್ಮೆಲ್ಲಾ ಕಷ್ಟಗಳನ್ನೂ ನಿವಾರಿಸುವವನು ಎಂದಾಗುತ್ತದೆ.  ಗಣಪತಿ ಅತೀ ಬುದ್ಧಿಶಾಲಿ ಮತ್ತು ಸೂಕ್ಷ್ಮ ತರಂಗಗಳನ್ನು ಸೃಷ್ಟಿಸುವವನು.  ಆನೆಗಳು ವಾತಾವರಣದಲ್ಲಿರುವ ಅತೀ ಸೂಕ್ಷ್ಮವಾದ ಶಬ್ದ  ತರಂಗಗಳನ್ನು ಗ್ರಹಿಸಬಲ್ಲದು.  ಮುಂದಾಗುವ ಅಪಾಯದ ಸೂಚನೆಯನ್ನು ಬೇರೆಲ್ಲಾ ಪ್ರಾಣಿಗಳಿಗಿಂತಲೂ ಮೊದಲೇ ಗ್ರಹಿಸುವ ಶಕ್ತಿಯುಳ್ಳದ್ದು.  ಆನೆಯ ಮೊಗದವನಾದ ಗಣೇಶ ಕೂಡ ಹೀಗೆ ಮುಂಬರುವ ನಮ್ಮೆಲ್ಲಾ ಅಪಾಯಗಳನ್ನೂ ಗ್ರಹಿಸಿ ನಮ್ಮನ್ನು ಪೊರೆಯುವನೆಂಬ ನಂಬಿಕೆ ನಮ್ಮಲ್ಲಿ ತುಂಬಾ ಆಳವಾಗಿ ನೆಲೆಸಿದೆ.

ಒಮ್ಮೆ ದೇವಾನುದೇವತೆಗಳು ಶಿವ- ಪಾರ್ವತಿ ಅವರ ಮನೆಗೆ ಭೇಟಿ ನೀಡುತ್ತಾರೆ. ಬಂದ ಅತಿಥಿಗಳನ್ನು ಸಂತೃಪ್ತಿಪಡಿಸಲು ನಾನಾ ಅಡುಗೆಗಳು ತಯಾರುಗೊಳ್ಳುತ್ತವೆ. ದೇವತೆಗಳ ತಟ್ಟೆಗೆ ಮೊದಲು ಬೀಳುವ ಸಿಹಿಯೇ ಮೋದಕ. ಅದರ ವಿಶಿಷ್ಟ ರುಚಿ, ಪರಿಮಳ ಎಲ್ಲರಲ್ಲೂ ಮೋಡಿ ಮಾಡುತ್ತದೆ. ಇದನ್ನು ಸೇವಿಸಿದವರು ಬುದ್ಧಿಶಾಲಿಯೂ, ಶಕ್ತಿವಂತರೂ ಆಗುತ್ತಾರೆ ಎಂಬುದು ಪಾರ್ವತಿಯ ನಂಬಿಕೆ.

ಗಣಪತಿ ಬಹಳ ಬುದ್ಧಿಶಾಲಿ, ಶಕ್ತಿವಂತನಾಗಲೂ ಇದೇ ಮೋದಕವೇ ಕಾರಣವೆಂದು ನಂಬಲಾಗಿದೆ.

ಪಾರ್ವತಿ ತನ್ನ ಮಕ್ಕಳ ಭಕ್ತಿ, ಶ್ರದ್ಧೆ ಪರೀಕ್ಷೆಗಾಗಿಯೂ ಬಳಸಿಕೊಳ್ಳುವುದು ಇದೇ ಮೋದಕವನ್ನೇ. ಒಂದೇ ಒಂದು ಮೋದಕವನ್ನು ಸಿದ್ಧಪಡಿಸಿ, ಅದನ್ನು ಗಣೇಶ ಮತ್ತು ಸುಬ್ರಮಣ್ಯ ಇಬ್ಬರಲ್ಲಿ ಯಾರಿಗೆ ಕೊಡುವುದು ಎಂಬ ಗೊಂದಲ ಪಾರ್ವತಿಗೆ. ಕೊನೆಗೆ ಮಕ್ಕಳಿಬ್ಬರನ್ನು ಕರೆದು ‘ನಿಮ್ಮಿಬ್ಬರಲ್ಲಿ ಯಾರಲ್ಲಿ ನಿಜವಾದ ಶ್ರದ್ಧೆ, ಭಕ್ತಿ ಇದೆಯೆಂದು ಸಾಧಿಸಿ ತೋರಿಸುವಿರೋ ಅವರಿಗೆ ಮೋದಕ ಸಿಗುತ್ತದೆ’ ಎಂದು ಹೇಳುತ್ತಾಳೆ.

ತಕ್ಷಣ ಸುಬ್ರಮಣ್ಯ ಶ್ರದ್ಧೆ ಮತ್ತು ಭಕ್ತಿಯ ಹುಡುಕಾಟಕ್ಕಾಗಿ ತನ್ನ ವಾಹನ ಏರಿ ಅಧ್ಯಾತ್ಮ ಮತ್ತು ಭಕ್ತಿ ಕ್ಷೇತ್ರಗಳನ್ನು ಹುಡುಕುತ್ತಾ ಹೊರಡುತ್ತಾನೆ. ಆದರೆ ಗಣೇಶ ಮಾತ್ರ ಶಿವ- ಪಾರ್ವತಿಯರ ಹತ್ತಿರವೇ ಇದ್ದುಬಿಡುತ್ತಾನೆ. ‘ತಂದೆ ತಾಯಿಯನ್ನು ಭಕ್ತಿಯಿಂದ, ಪ್ರೀತಿಯಿಂದ ಕಾಣುವುದಕ್ಕಿಂತ ಹೆಚ್ಚಿನ ಶ್ರದ್ಧೆ, ಭಕ್ತಿ ಯಾವುದೇ ಪವಿತ್ರ ಸ್ಥಳಗಳನ್ನು ಭೇಟಿ ಮಾಡುವುದರಿಂದ ಸಿಗುವುದಿಲ್ಲ’ ಎಂದು ಹೇಳುತ್ತಾನೆ. ಈ ಮಾತುಗಳಿಂದ ಪ್ರಭಾವಿತಳಾದ ಪಾರ್ವತಿ ಮೋದಕವನ್ನು ಗಣೇಶನಿಗೇ ನೀಡುತ್ತಾಳೆ. ಅಂದಿನಿಂದ ಗಣೇಶ ಹಬ್ಬಕ್ಕೆ ಮೋದಕ ನೈವೇದ್ಯ ಮಾಡುವುದು ಚಾಲ್ತಿಗೆ ಬಂತು.

ಇಂದು ಬೇರೆಲ್ಲ ರಾಜ್ಯಗಳಿಗಿಂತ ಮಹಾರಾಷ್ಟ್ರದಲ್ಲಿ ಮೋದಕ ಬಲುಜನಪ್ರಿಯ. ಮರಾಠಿಗರು ಮೋದಕವನ್ನು ಕರಿಯದೆ, ಆವಿಯಲ್ಲಿ ಬೇಯಿಸುತ್ತಾರೆ. ಸೌತೇಕಾಯಿ, ಹಣ್ಣುಗಳು, ಮೂಂಗ್ ದಾಲ್ ಬಳಸಿಯೂ ಮೋದಕ ತಯಾರಿಸುವ ರೂಢಿ ಉತ್ತರ ಭಾರತದಲ್ಲಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top