fbpx
News

ಭೂಪಿಂದರ್ ವಿರುದ್ಧ ಭೂಚಕ್ರ

ನವದೆಹಲಿ ಗುರುಗಾಂವ್ ಜಿಲ್ಲೆಯ ಭೂಸ್ವಾಧೀನದಲ್ಲಿ ನಡೆದಿರುವ ಅಕ್ರಮ ವ್ಯವಹಾರಕ್ಕೆ ಸಂಬಂಧಿಸಿದಂತೆ ಹರಿಯಾಣದ ಮಾಜಿ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ ಮತ್ತವರ ಸಂಡಿಗರ ಕಟ್ಟಡಗಳ ಮೇಲೆ ಸಿಬಿಐ ತನಿಖಾಧಿಕಾರಿಗಳು ಶನಿವಾರ ದಾಳಿ ನಡೆಸಿದ್ದಾರೆ. ರೋಹ್ಟಕ್, ಗುರುಗಾಂವ್, ಚಂಡೀಗಡ ಹಾಗೂ ದೆಹಲಿ ಸೇರಿದಂತೆ 20 ಕಡೆಗಳಲ್ಲಿ ದಾಳಿ ನಡೆದಿದೆ. ಹೂಡರವರಲ್ಲದೆ, ಅವರ ಇಬ್ಬರು ಮಾಜಿ ಖಾಸಗಿ ಕಾರ್ಯದರ್ಶಿಗಳು ಹಾಗೂ ಓರ್ವ ಕಾರ್ಯನಿರತ ಐಎಎಸ್ ಅಧಿಕಾರಿಗೆ ಸೇರಿದ ಕಟ್ಟಡಗಳಲ್ಲಿ ಸಿಬಿಐಯ ವಿವಿಧ ತಂಡಗಳು ಶೋಧ ನಡೆಸಿವೆ. ಜೊತೆಗೆ ಕೆಲವು ಖಾಸಗಿ ಕಂಪನಿಗಳಲ್ಲೂ ತನಿಖಾಧಿಕಾರಿಗಳು ಜಾಲಾಡಿದ್ದಾರೆ.

ಖಾಸಗಿ ಕಂಪನಿಗಳು ಮತ್ತು ಅವುಗಳ ಉಪಘಟಕಗಳು ರಾಜ್ಯ ಸರ್ಕಾರದ ಕೆಲವು ಅಧಿಕಾರಿಗಳ ಜೊತೆ ಶಾಮೀಲಾಗಿ ಗುರುಗಾಂವ್‍ನ ಮನೆಸಾರ್, ನೌರಂಗಪುರ ಹಾಗೂ ಲಾಕ್ ನೌಲ್ ಎಂಬಲ್ಲಿರುವ ಸುಮಾರು 400 ಎಕ್ರೆಯಷ್ಟು ವಿಸ್ತಾರದ ಬೆಲೆಬಾಳುವ ಭೂಮಿಯನ್ನು ಕಬಳಿಸುವುದರೊಂದಿಗೆ ಸರ್ಕಾರಕ್ಕೆ 1500 ಕೋಟಿ ರೂ. ವಂಚಿಸಿದ್ದವು. ಈ ಸಂಬಂಧ ಸಿಬಿಐ ಕಳೆದ ವರ್ಷದ ಸೆಪ್ಟಂಬರನಲ್ಲೇ ಸಿಬಿಐ ತನಿಖೆ ಆರಂಭಿಸಿದೆ. ಪ್ರಕರಣದ ಹಿನ್ನೆಲೆ ಏನು? ಮನೆಸಾರ್, ನೌರಂಗಪುರ ಹಾಗೂ ಲಾಖ್‍ನೌಲಾ ಭಾಗದ ಕಟ್ಟಡ ನಿರ್ಮಾಣಕಾರರು 1600 ಕೋಟಿ ರೂ ಬೆಲೆಬಾಳುವ ಭೂಮಿಯನ್ನು ಕೇವಲ 100 ಕೋಟಿ ರೂ.ಗೆ ಖರೀದಿಸಿದ್ದರು.

ಈ ಗ್ರಾಮಗಳಲ್ಲಿ ಮಾದರಿ ಕೈಗಾರಿಕಾ ಪಟ್ಟಣ ರಚಿಸುವುದಕ್ಕಾಗಿ 912 ಎಕ್ರೆ ಭೂಮಿ ಸ್ವಾಧೀನಕ್ಕೆ ಹೂಡಾ ನೇತೃತ್ವದ ಹರಿಯಾಣ ಸರ್ಕಾರ ಭೂಸ್ವಾಧೀನ ಕಾಯ್ದೆಯಡಿ ಅಧಿಸೂಚನೆ ಹೊರಡಿಸಿತ್ತು. ಆಗ ರಾಜ್ಯಸರ್ಕಾರ ಭೂಸ್ವಾಧೀನ ಮಾಡಿಕೊಳ್ಳುವ ಭೀತಿಯಿಂದ ಗುರುಗಾಂವ್ ಮತ್ತು ಸುತ್ತಮುತ್ತಲ ಗ್ರಾಮಗಳ ರೈತರು ಈ ಕಟ್ಟಡ ನಿರ್ಮಾಣಕಾರರಿಗೆ 2004-07ರ ಅವಧಿಯಲ್ಲಿ ಜುಜುಬಿ ಬೆಲೆಗೆ ತಮ್ಮ ಭೂಮಿಯನ್ನು ಮಾರಿದ್ದರು. ಇದನ್ನು ಅನುಸರಿಸಿ ಕಟ್ಟಡ ನಿರ್ಮಾಣಕಾರರಿಗೆ ಭೂಮಿ ಖರೀದಿಸುವುದಕ್ಕೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಕೈಗಾರಿಕಾ ನಿರ್ದೇಶನಾಲಯದ ನಿರ್ದೇಶಕರು 2007ರ ಆಗಸ್ಟ್ 24ರಂದು ಆದೇಶವನ್ನೂ ಹೊರಡಿಸಿದ್ದರು. ಆದರೆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದರು. ಕಳೆದ ವರ್ಷ ರಾಜ್ಯಸರ್ಕಾರದ ಕೋರಿಕೆ ಮೇರೆಗೆ ಸಿಬಿಐ ತನಿಖಾ ಸಂಸ್ಥೆ ಈ ಪ್ರಕರಣವನ್ನು ವಹಿಸಿಕೊಂಡಿತ್ತು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top