fbpx
Karnataka

ಕೊನೆಯೇ ಇಲ್ಲದ ಕಾವೇರಿ ದುರಂತ!

ಒಂದಂತೂ ಸತ್ಯ. ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಸರ್ಕಾರ ಜನತೆಯ ಮುಂದೆ ಹೇಳುವುದೇ ಒಂದು. ಸುಪ್ರೀಂ ಕೋರ್ಟ್ ಮುಂದೆ ವಕೀಲರ ಮೂಲಕ ಮಂಡಿಸುವ ವಾದವೇ ಮತ್ತೊಂದು. ಜೈಲು ಸೇರಿದರೂ ಪರವಾಗಿಲ್ಲ. ಕಾವೇರಿ ನೀರು ಬಿಡೋದಿಲ್ಲ ಎಂದು ಸರ್ಕಾರ ಸುಪ್ರೀಂ ಕೋರ್ಟ್ ಮುಂದೆ ಹೇಳೋದಿಲ್ಲ.

ಕೊನೆಯೇ ಇಲ್ಲದ ಕಾವೇರಿ ದುರಂತ!

ತಮಿಳುನಾಡಿಗೆ ಕಾವೇರಿ ನೀರು ಬಿಡಲು ಸುಪ್ರೀಂ ಕೋರ್ಟ್ ಆದೇಶಿಸಿದೆ. ದುರ್ಭಿಕ್ಷೆಯಲ್ಲೂ ನೀರು ಬಿಡಬೇಕಾದ ಗತ್ಯಂತರ ಸ್ಥಿತಿ ಕರ್ನಾಟಕದ್ದು..!

ವಾರದ ಹಿಂದೆ ಸುಪ್ರೀಂ ಕೋರ್ಟ್ `ಬದುಕಿ -ಬದುಕಲು ಬಿಡಿ` ಎಂದು ಹೇಳಿದಾಗಲೇ ಇದರ ಒಳಾರ್ಥವೇನೆಂಬುದು ಗೊತ್ತಾಗಿತ್ತು. ಅದೇನೆ ಇರಲಿ. ತಮಿಳುನಾಡು ಮಾತ್ರ ತನ್ನ ಹಿತಾಸಕ್ತಿ ಕಾಪಾಡಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಕಾವೇರಿ ನ್ಯಾಯಾಧಿಕರಣದ ಅಂತಿಮ ತೀರ್ಪು ಹೊರಬಿದ್ದು ಒಂಬತ್ತು ವರ್ಷಗಳಾಗಿವೆ. ಆದರೆ ನದಿ ನೀರಿನ ಸಮಸ್ಯೆಯಂತೂ ಜ್ವಲಂತವಾಗಿಯೇ ಇದೆ.

ಕಾವೇರಿ ಕಣಿವೆಯಲ್ಲಿ ನದಿ ಪಾತ್ರದ ಮೇಲಿರುವ ಕರ್ನಾಟಕದ ಜಲಾಶಯಗಳಲ್ಲಿ ಕಡಿಮೆ ನೀರಿದ್ದಾಗ ಅಥವಾ ಬತ್ತಿದಾಗ ಯಾವ ಸೂತ್ರ ಪಾಲಿಸಬೇಕು? ನೀರಿನ ಸಂಕಷ್ಟ ಸೂತ್ರದ ಅರ್ಥ ವ್ಯಾಪ್ತಿ ಮತ್ತು ಅನುಷ್ಠಾನ ಏನು ಮತ್ತು ಹೇಗೆ? ಇದರ ಬಗ್ಗೆ ನ್ಯಾಯಾಧಿಕರಣದ ಅಂತಿಮ ತೀರ್ಪಿನಲ್ಲಿ ಸ್ಪಷ್ಟತೆ ಇಲ್ಲ.

ಕರ್ನಾಟಕ, ತಮಿಳುನಾಡು, ಕೇರಳ ಹಾಗೂ ಪುದುಚ್ಚೆರಿ ರಾಜ್ಯಗಳು ಸಂಕಷ್ಟವನ್ನು ಸಮಾನವಾಗಿ ಹಂಚಿಕೊಳ್ಳಿ ಎಂದಷ್ಟೇ ಹೇಳಿರುವ ನ್ಯಾಯ ಮಂಡಳಿ, ಈ ದಿಶೆಯಲ್ಲಿ ದೀರ್ಘ ಪ್ರಮಾಣದ ತೀರ್ಪು ನೀಡಿಲ್ಲ. ಸಮಸ್ಯೆ ಇಂದು ಸಂಕೀರ್ಣವಾಗಲು ಇದು ಪ್ರಮುಖ ಕಾರಣ.

ಕೃಷ್ಣರಾಜಸಾಗರ, ಕಬಿನಿ, ಹೇಮಾವತಿ ಹಾಗೂ ಹಾರಂಗಿ ಜಲಾಶಯಗಳಲ್ಲಿ ಅತ್ಯಲ್ಪ ಪ್ರಮಾಣದಲ್ಲಿ ನೀರು ಸಂಗ್ರಹವಾದರೆ ತಮಿಳುನಾಡಿಗೆ ಎಷ್ಟು ಪ್ರಮಾಣದಲ್ಲಿ ನೀರು ಹಂಚಿಕೆಯಾಗಬೇಕು? ಮಳೆ ಕಡಿಮೆಯಿದ್ದಾಗ ನ್ಯಾಯಾಧಿಕರಣ ನೀಡಿದ ತೀರ್ಪನ್ನು ನೂರಕ್ಕೆ ನೂರರಷ್ಟು ಜಾರಿಗೊಳಿಸುವುದು ಹೇಗೆ? ಈ ಗಂಭೀರ ಸಂಗತಿಗಳು ನ್ಯಾಯಾಧಿಕರಣದ ಮುಂದೆಯಾಗಲಿ, ಸುಪ್ರೀಂ ಕೋರ್ಟ್ ಮುಂದೆ ಆಗಲಿ ಪರಿಣಾಮಕಾರಿ ಮಂಡನೆ ಆಗಿಲ್ಲ.

ತಮಿಳುನಾಡಿನ ಕಾವೇರಿ ಕಣಿವೆಯಲ್ಲಿ ಬೆಳೆ ಒಣಗಿದೆ ನಿಜ. ಅದರೆ ಈ ಬೆಳೆಗೆ ನೀರು ಬೇಕೆಂದು ತಮಿಳುನಾಡು ರಚ್ಚೆ ಹಿಡಿದಾದರೂ ದಕ್ಕಿಸಿಕೊಳ್ಳುತ್ತದೆ ! ಆದರೆ ಹಳೇ ಮೈಸೂರಿನ ಬಹುತೇಕ ಜಿಲ್ಲೆಗಳಲ್ಲಿ ಜಲಕ್ಷಾಮವಿದ್ದು, ಈ ಜನರಿಗೆ ಕುಡಿಯಲು ನೀರೇ ಇಲ್ಲ ಎಂದರೂ ಕರ್ನಾಟಕದ ವಾದಕ್ಕೆ ಸುಪ್ರೀಂ ಕೋರ್ಟ್ ಮುಂದೆ ಮಾನ್ಯತೆ ದೊರಕುವುದಿಲ್ಲ.

ಇದು ದೌರ್ಭಾಗ್ಯ. ಆದರೆ ಓರ್ವ ಮನುಷ್ಯನ ಬಾಯಾರಿಕೆ ನೀಗುವುದು ಮುಖ್ಯವೋ ಅಥವಾ ಬೆಳೆದು ನಿಂತಿರುವ ಬೆಳೆಗೆ ನೀರುಣಿಸುವುದು ಮುಖ್ಯವೋ? ಈ ಎರಡರಲ್ಲಿ ಮೊದಲ ಆದ್ಯತೆ ಯಾವುದಕ್ಕೆ? ಈ ಬಗ್ಗೆಯೂ ಸುಪ್ರೀಂ ಕೋರ್ಟ್ ಇಂದು ಸ್ಪಷ್ಟ ಆದೇಶ ನೀಡುವ ಅಗತ್ಯವಿದೆ. ಇನ್ನೂ ಆದೇಶ ನೀಡುವ ಮುನ್ನವೇ ನ್ಯಾಯವಾದಿ ನಾರಿಮನ್ ಇಂತಿಷ್ಟು ನೀರು ಬಿಡಲು ಕರ್ನಾಟಕ ಸಿದ್ಧವಿದೆ ಎಂದು ಹೇಳಿಬಿಟ್ಟರು! ಅಂದರೆ ಈ ಹೇಳಿಕೆಯನ್ನು ನಾರಿಮನ್ ಸರ್ಕಾರದ ಒಪ್ಪಿಗೆ ಪಡೆದು ಹೇಳಿದ್ದೋ ಅಥವಾ ತಾವೇ ನ್ಯಾಯಪೀಠದ ಮುಂದೆ ಘೋಷಿಸಿದ್ದೋ?

ಒಂದಂತೂ ಸತ್ಯ. ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಸರ್ಕಾರ ಜನತೆಯ ಮುಂದೆ ಹೇಳುವುದೇ ಒಂದು. ಸುಪ್ರೀಂ ಕೋರ್ಟ್ ಮುಂದೆ ವಕೀಲರ ಮೂಲಕ ಮಂಡಿಸುವ ವಾದವೇ ಮತ್ತೊಂದು. ಜೈಲು ಸೇರಿದರೂ ಪರವಾಗಿಲ್ಲ. ಕಾವೇರಿ ನೀರು ಬಿಡೋದಿಲ್ಲ ಎಂದು ಸರ್ಕಾರ ಸುಪ್ರೀಂ ಕೋರ್ಟ್ ಮುಂದೆ ಹೇಳೋದಿಲ್ಲ. ಪ್ರಾಯಶಃ ಜಯಲಲಿತ ಅಥವಾ ಮಮತಾ ಬ್ಯಾನರ್ಜಿ, ಸಿದ್ದರಾಮಯ್ಯ ಅವರ ಜಾಗದಲ್ಲಿದಿದ್ದರೆ ಜೈಲಿಗೆ ಹೋಗಲೂ ಇವರು ಹಿಂದು – ಮುಂದು ನೋಡುತ್ತಿರಲಿಲ್ಲ…!

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top