fbpx
News

ಮಾಂಗಲ್ಯಂ ತಂತುನಾನೇನಾ – ಶಾಸ್ತ್ರಗಳು ಏನು ಹೇಳುತ್ತವೆ ?

ಮಾನವ ಜನ್ಮ ದೊಡ್ಡದು ಇದನ್ನು ಹಾಳು ಮಾಡಬೇಡಿ ಹುಚ್ಚಪ್ಪಗಳಿರಾ ಎಂದು ದಾಸವರೇಣ್ಯರು ಹೇಳಿದ್ದಾರೆ. ಹುಟ್ಟಿದಾಗಿನಿಂದ ಹಿಡಿದು ಸಾಯುವವರೆಗೆ ನೆಡೆಸುವ ಎಲ್ಲಾ ಕಾರ್ಯಗಳಲ್ಲೂ ದೇವರ ಸಮೀಪಕ್ಕೆ ಹೋಗುವಂತಹ ಕಾರ್ಯ ಮಾಡಬೇಕೆಂದು ಎಲ್ಲಾ ಧರ್ಮಗಳು ಹೇಳುತ್ತವೆ. ಮಗು ಹುಟ್ಟಿದಾಗಿನಿಂದ ಹಿಡಿದು ದೊಡ್ಡವರಾಗಿ ವಿವಾಹವಾಗುವವರೆಗೂ ಕಾಲಕಾಲಕ್ಕೆ ಮಾಡುವ ಕೆಲವೊಂದು ವೈದೀಕ ಪದ್ಧತಿಯ ವಿಧಿ-ವಿಧಾನಗಳನ್ನು “ಸಂಸ್ಕಾರ”ವೆಂದು ಕರೆಯುತ್ತಾರೆ. ಈ ಸಂಸ್ಕಾರಗಳು ಅವರಿಗೆ ಸಾತ್ವಿಕರಾಗಿ ಬದುಕುವಂತೆ ಮಾಡಲು ಸಹಾಯ ಮಾಡುತ್ತದೆ. ಮನುಷ್ಯನ ಹುಟ್ಟಿನಿಂದ ಮದುವೆಯವರೆಗೆ ಜೀವನ ಸಮಯದಲ್ಲಿ ಮಾಡುವ ವೈದೀಕ ಪದ್ಧತಿಯ “ಹದಿನಾರು” ರೀತಿಯ ಸಂಸ್ಕಾರಗಳಿವೆ. ಆದರೆ ಈಗ ಸದ್ಯಕ್ಕೆ ಆಚರಣೆಯಲ್ಲಿರುವುದು ಉಪನಯನ,ವಿವಾಹ ವಿಧಿ, ಹಾಗೂ ಸಮಾವರ್ತನ ಮಾತ್ರ. ಇವುಗಳಲ್ಲಿ ವಿವಾಹ ಸಂಸ್ಕಾರಕ್ಕೆ ಪ್ರಮುಖ ಪಾತ್ರವಿದ್ದು ಇದಕ್ಕೆ ಶೇಕಡಾ ಅರವತ್ತರಷ್ಟು ಮಹತ್ವವಿದೆ. ವೈದೀಕ ಪದ್ಧತಿಯಂತೆ ನಡೆಯುವ ವಿವಾಹದಲ್ಲಿ ಅದು ಪ್ರಮುಖವಾಗಿ, ಹಿಂದೂಗಳ ವಿವಾಹದಲ್ಲಿ ನಡೆಯುವ ಶಾಸ್ತ್ರ ಹಾಗೂ ಒಂದೊಂದು ಮಂತ್ರಕ್ಕೂ ಸಹ ನಮ್ಮ ವೇದ, ಉಪನಿಷತ್ತು, ಪುರಾಣ, ನೀತಿ ಸಂಹಿತೆಗಳಲ್ಲಿ ವಿವಾಹಕ್ಕೊಂದು ಮಹತ್ತರ ಸ್ಥಾನವಿದೆ.

ವೈದೀಕ ಪದ್ಧತಿಯ ವಿವಾಹವು ಜೀವನದ ಅವಿಭಾಜ್ಯ ಅಂಗವಾಗಿದೆ. ಧರ್ಮದ ಹಲವು ಮೂಲಭೂತ ಅಂಶಗಳನ್ನು ಅದು ಸಮೀಕರಿಸಿಕೊಂಡಿದೆ. ಆದರೆ ಇಂದಿನ ಯಾಂತ್ರಿಕ ಆಧುನಿಕ ಯುಗದಲ್ಲಿ ವಿವಾಹ ಸಂಸ್ಕಾರವಾಗಿ ಉಳಿಯದೇ ಅದೊಂದು ಪ್ರತಿಷ್ಠೆಯನ್ನು ತೋರುವ ಕುಟುಂಬದ ಸಮಾರಂಭವಾಗಿ ಮಾರ್ಪಟ್ಟಿದೆ. ಈ ವಿವಾಹ ಸಮಾರಂಭಗಳಲ್ಲಿ ಪಾಶ್ಚಿಮಾತ್ಯ ಸಂಸ್ಕøತಿಯ ನೆರಳು ಬೀಳುತ್ತಿರುವುದು ವಿಪರ್ಯಾಸದ ಸಂಗತಿ. ಹಿಂದೂಗಳು ವಿವಾಹ ಸಂಸ್ಕಾರದ ಮಹತ್ವವನ್ನು ಅರಿತುಕೊಳ್ಳುವುದು ಒಳ್ಳೆಯದು. ಇಂದಿನ ವಿವಾಹ ವಿಧಿ-ವಿಧಾನಗಳನ್ನು ನೋಡಿದರೆ ವಿವಾಹ ಸಂಸ್ಕಾರದ ಪಾವಿತ್ರ್ಯವೂ ನಷ್ಟವಾಗುತ್ತಿದೆಯೇನೋ ಎಂದು ಭಾಸವಾಗುತ್ತದೆ. ನಮ್ಮ ವೇದ, ಉಪನಿಷತ್ತು, ಪುರಾಣ, ನೀತಿ ಸಂಹಿತೆಗಳಲ್ಲಿ ವಿವಾಹಕ್ಕೆ ಇರುವ ಅರ್ಥಪೂರ್ಣ ಆಶಯಗಳನ್ನು ಹಾಗೂ ವಿವಾಹದ ಮಹತ್ತರ ಸ್ಥಾನವನ್ನು ತಿಳಿಸುವ ಪ್ರಯತ್ನವಿದು. ಜೀವನದಲ್ಲಿ ನಡೆಯುವ ಸಂಸ್ಕಾರಗಳಲ್ಲಿ ದೊಡ್ಡ ಸಂಸ್ಕಾರ ವಿವಾಹದ್ದು ಹಾಗೂ ಅದು ಜೀವಕ್ಕೆ ಜನ್ಮ ಕೊಡುವ ದೊಡ್ಡ ಹಾಗೂ ಜೀವನದ ಕೊನೆಯ ಸಂಸ್ಕಾರವಾಗಿರುತ್ತದೆ. ಇದರಿಂದ ಉತ್ಪತ್ತಿಯಾದ ಹೊಸ ಜೀವದ ಮೇಲೆ ಮತ್ತೆ ಸಂಸ್ಕಾರಗಳು ಪ್ರಾರಂಭವಾಗುತ್ತದೆ.

ನಮ್ಮ ಸಮಾಜದಲ್ಲಿ ಪ್ರಚಲಿತವಿರುವ, ಮೇಲ್ನೋಟಕ್ಕೆ ಕಾಣುವ ವಿವಾಹ ಎಂದರೆ ವಧುವನ್ನು ತಂದೆಯ ಮನೆಯಿಂದ ನೆರೆದ ಕುಟುಂಬದ ಸದಸ್ಯರ ಸಮ್ಮುಖದಲ್ಲಿ ಪಾಣಿಗ್ರಹಣ ಮಾಡಿಸಿ ಗಂಡನ ಮನೆಗೆ ಕಳಿಸುವುದೆ ಆಗಿದೆ. ಆದರೆ ವೇದಗಳ ಪ್ರಕಾರ ವಿವಾಹ ಎಂದರೆ ವಿಷ್ಣುರೂಪಿ ಪತಿ ಮತ್ತು ಲಕ್ಷ್ಮೀರೂಪಿ ಪತ್ನಿಯ ಸಂಗಮ ತತ್ವವಾಗಿದೆ.

“ಯದೇತದ್ಧೃದಯಂ ತವ ತದಸ್ತು ಹೃದಯಂ ಮಮ”

ಯದಿದಂ ಹೃದಯಂ ಮಮ ತದಸ್ತು ಹೃದಯಂ ತವ (ಮಂತ್ರ-ಬ್ರಾಹ್ಮಣ 1.3.9)

ನಿನ್ನ ಹೃದಯವು ನನ್ನ್ನ ಹೃದಯದಂತೆ ಮಿಡಿಯಲಿ, ನನ್ನ ಹೃದಯವು ಹೇಗೆ ನಿನ್ನ ಹೃದಯದಂತೆ ಮಿಡಿಯುತ್ತದೋ ಹಾಗೆ… ಎಂದು ಇಡೀ ವಿವಾಹದ ಸಾರವನ್ನು ಮಂತ್ರ ಬ್ರಾಹ್ಮಣದಲ್ಲಿ ವಿವರಿಸಿದ್ದಾರೆ. ವಿವಾಹದ ಪ್ರಾಮುಖ್ಯತೆಯನ್ನು ಸಾರುವ ಅನೇಕ ವಿಧಿ-ವಿಧಾನಗಳು, ಮಂತ್ರಬ್ರಾಹ್ಮಣ, ವಿವಾಹ ವಿಧಿ, ಋಗ್ವೇದ-ಸಂಹಿತೆ, ಸಾಮಮಂತ್ರ ಬ್ರಾಹ್ಮಣ ಮತ್ತು ಅಥರ್ವ ಸಂಹಿತೆಯಲ್ಲಿ ವಿವರಿಸಲಾಗಿದೆ. ಆದರಿಂದ ಆಯ್ದ ವಿವಾಹ ವಿಧಿಯಲ್ಲಿ ನಡೆಯುವ ಪ್ರತಿಯೊಂದು ಹಂತದಲ್ಲೂ ಬರುವ ಆಚರಣೆಯ ಅರ್ಥವನ್ನು ತಿಳಿಸಬೇಕೆಂಬುದು ಈ ಲೇಖನದ ಉದ್ದೇಶ. ವಿವಾಹವನ್ನು ಸಮಾರಂಭವಾಗಿ ಆಚರಿಸದೇ ಸಂಸ್ಕಾರವಾಗಿ ಆಚರಿಸಲಿ ಎಂಬ ಆಶಯ.

ವಿವಾಹ ಸಂಸ್ಕಾರ ಪ್ರಾರಂಭವಾಗುವುದೇ ದೇವರ ಕಾರ್ಯ ಅಥವಾ ದೇವರ ಸಮಾರಾಧನೆಯಿಂದ ವರ ವಧುವಿನ ಮನೆಯವರು ತಮ್ಮ-ತಮ್ಮ ಮನೆಗಳಲ್ಲಿ ವಿವಾಹಕ್ಕೆ ನಾಲ್ಕು ದಿನ ಮುಂಚಿತವಾಗಿ ತಮ್ಮ ಕುಲ ದೇವರ ಪೂಜೆಯನ್ನು ನೆರವೇರಿಸುತ್ತಾರೆ. ವೈಧಿಕ ವಿಧಿ-ವಿಧಾನಗಳಲ್ಲಿ ನಂಬಿಕೆ ಹೊಂದಿರುವ ವ್ಯಕ್ತಿಗಳು ಉಪನಯನವಾಗಲಿ ಅಥವಾ ವಿವಾಹ ಸಂಸ್ಕಾರಕ್ಕೆ ಮುನ್ನ ತಮ್ಮ ಕುಲದೇವರನ್ನು ಆರಾಧಿಸಿ ಆ ಸರ್ವಾಂತರ್ಯಾಮಿಯ ಆಶೀರ್ವಾದ ಬೇಡುತ್ತಾರೆ. ಈ ಮೂಲಕ ವಿವಾಹ ಸಂಸ್ಕಾರಕ್ಕೆ ನಾಂದಿ ಹಾಡುತ್ತಾರೆ.

ವಿವಾಹ ಸಂಸ್ಕಾರ ಆರಂಭವಾಗುವುದೇ ಬೀಗರನ್ನು ಅಂದರೆ, ವರನ ಕಡೆಯವರನ್ನು ವಿವಾಹ ನಡೆಯುವ ಜಾಗಕ್ಕೆ ಬರಮಾಡಿಕೊಳ್ಳುವುದರಿಂದ. ಹಿಂದೆ ಸಾಮಾನ್ಯವಾಗಿ ವರನ ಕಡೆಯವರು ಬೇರೆ ಊರುಗಳಿಂದ ಬರುತ್ತಿದ್ದರು. ಆದರೆ ವಧು ವರ ಈಗ ಒಂದೇ ಊರಿನವರಾಗಿದ್ದರೂ ಸಹ ಸಂಪ್ರದಾಯದಂತೆ ವರನನ್ನು ಛತ್ರಕ್ಕೆ ಬಂದಾಗ ಎದುರುಗೊಳ್ಳುವ ಪದ್ಧತಿ ಇದೆ. ದೂರದ ಊರಿನಿಂದ ಬಂದ ಕಾರಣ ಪ್ರಯಾಣದ ಆಯಾಸವನ್ನು ನೀಗಿಸಲು ವರನ ಕಡೆಯವರು ಕಾಲು ತೊಳೆದು ಹಾಲು ಅಥವಾ ತಂಪಾದ ಷರಬತ್ತನ್ನು ಕೊಟ್ಟು ಉಭಯ ಕುಶಲೋಪರಿ ವಿಚಾರಿಸಿ ಕಲ್ಯಾಣ ಮಂಟಪದ ಒಳಗೆ ಬರಮಾಡಿಕೊಳ್ಳುವುದು ವಾಡಿಕೆ ವರನ ಕಡೆಯವರು ಸ್ವಲ್ಪ ಸುಧಾರಿಸಿಕೊಂಡ ನಂತರ ಫಲಹಾರವಾದ ಮೇಲೆ ಪ್ರಾರಂಭವಾಗುವುದೇ ವರಪೂಜೆ.

ಸಾಮಾನ್ಯವಾಗಿ ವಿಘ್ನ ನಿವಾರಕನಾದ ಗಣೇಶನ ಪೂಜೆಯನ್ನು ಪ್ರಾರಂಭಿಸಿ ವಿವಾಹ ವಿಧಿ-ವಿಧಾನಗಳನ್ನು ನಿರ್ವಿಘ್ನವಾಗಿ ನೆಡೆಯಲಿ ಎಂದು ಗಣೇಶನನ್ನು ಪೂಜಿಸಿ ಪ್ರಾರ್ಥಿಸಿ ಕಾರ್ಯಕ್ರಮವನ್ನು ಪ್ರಾರಂಭಿಸುತ್ತಾರೆ.

ನರನೇ ವರ; ನಾರಾಯಣನವನೇ ಬ್ರಹ್ಮಚರ್ಯ
ತೇಜೋನಿಧಿಯು ಜ್ಞಾನ-ಮಾನಗಳ ಮಧುರ
ಸಂಗಮವು ಜಗವನು ನಡೆಸುವ ನವನಿಧಿಯು
ಮಧುಪರ್ಕ ಸತ್ಕಾರವಿಟ್ಟು ಸ್ವಾಗತಿಸುವುದು – (ವಿವಾಹ ವಿಧಿ)

ವರ್ಚಸ್ಸಿನಿಂದ ಮದುವೆಗೆ ಬರುವ ವರ ನಾರಾಯಣನ ಸ್ವರೂಪ, ಹೀಗೆ ಬರುವ ವರನಿಗೆ ಅಘ್ರ್ಯಪಾದ್ಯ, ಆಚಮನ, ಆಸನ ಮತ್ತು ನಿವೇದನಗಳ ಮೂಲಕ ಪಾದ, ಹಸ್ತ, ಮುಖ, ದೇಹ ಹಾಗೂ ಉದರಗಳಲ್ಲಿರುವ ಅಗ್ನಿಯನ್ನು ಉಪಶಮನಗೊಳಿಸಿ ದೇವರ ಸ್ವರೂಪಿಯಾದ ವರನನ್ನು ಪೂಜಿಸುವುದೇ ವರಪೂಜೆ. ಇದು ಸತ್ಯವಾಗಿ ಶ್ರೀಮನ್ನಾರಾಯಣನ ಪೂಜೆ ಸ್ನಾತಕನಿಗೆ ಸಮಾಜ ಸಲ್ಲಿಸುವ ಸನ್ಮಾನ, ವರನಿಗೆ ಮಾಡುವ ಮರ್ಯಾದೆ. ಇದು ವರನಿಗೆ ಮಾಡುವ ಸಂಸ್ಕಾರಕ್ಕಷ್ಟೇ ಸೀಮಿತವಾಗಿಲ್ಲ. ವರನ ಕಡೆಯಿಂದಲೂ ಸಹ ವಧುವನ್ನು ಹಸೆಮಣೆಗೆ ಕರೆಸಿ ಸ್ತ್ರೀ ಪ್ರತೀಕವಾದ ಬಳೆ ತೊಡಿಸಿ, ಕಾಡಿಗೆ ಹಚ್ಚಿ, ಹೂ ಮೂಡಿಸಿ, ಸೀರೆಯನ್ನು ಕೊಡುವ ಮೂಲಕ ಲಕ್ಷ್ಮೀರೂಪಿ ವಧುವಿಗೂ ಮಹತ್ವ ನೀಡುವುದು ವಾಡಿಕೆಯಲ್ಲಿದೆ. ಈ ಶಾಸ್ತ್ರಗಳು ಮುಗಿದ ನಂತರ ಬಂದವರಿಗೆಲ್ಲ ಸಿಹಿಯೂಟ ಮಾಡಿಸುವ ಮೂಲಕ ಮದುವೆಯ ಹಿಂದಿನ ದಿನ ನಡೆಯುವ ಕಾರ್ಯಕ್ಕೆ ತೆರೆಬೀಳುತ್ತದೆ.

ಮರುದಿನ ಅಂದರೆ ಮೂಹೂರ್ತದ ದಿನ ನಿತ್ಯ ಕರ್ಮಗಳೆಲ್ಲ ಮುಗಿದ ಮೇಲೆ ಮದುವೆಯ ವಿಧಿ-ವಿಧಾನಗಳು ಪ್ರಾರಂಭವಾಗುತ್ತದೆ. ಇವುಗಳಲ್ಲಿ ಮೊದಲನೆಯ ಕಾರ್ಯವೇ ಜೀರಿಗೆ ಬೆಲ್ಲ. ಇದು ಗಂಡು ಹೆಣ್ಣು ಪರಸ್ಪರ ನೋಡುವ ಮೊದಲನೆಯ ನೋಟ. ಹಿಂದೆಲ್ಲಾ ಹಿರಿಯರೇ ಸೇರಿ ಮದುವೆ ನಿಶ್ಚಯಿಸಿಬಿಡುತ್ತಿದ್ದು ಹಾಗಾಗಿ ಪರಸ್ಪರ ವಧುವರರು ಒಬ್ಬರನೊಬ್ಬರು ನೋಡುತ್ತಿದ್ದದ್ದು ಜೀರಿಗೆ ಬೆಲ್ಲದ ಸಮಯದಲ್ಲೆ ಸಾಲಂಕೃತಗೊಂಡ ವಧುವರರನ್ನು ಎದುರು ಬದುರು, ಚರಿಗೆಯ ಮೇಲೆ ನಿಲ್ಲಿಸಿ ಮಧ್ಯ ಅಂತರಪಟ ಹಿಡಿದು ಮಂತ್ರ ಘೋಷದ ನಂತರ ಅಂತರಪಟ ಸರಿಸಿದ ನಂತರ ವಧುವರರು ಒಬ್ಬರ ತಲೆಯ ಮೇಲೋಬ್ಬರು ಜೀರಿಗೆ ಬೆಲ್ಲವನ್ನು ಸುರಿಯುವುದು ಪದ್ಧತಿ.

ಮೊದಲನೋಟವಿದು ಮುದದ ಕೂಟವಿದು
ಮದುವೆಯೆಂಬ ಮಾಧುರ್ಯದಾಟವಿದು
ಜಾರುತಿರಲು ಜೀರಿಗೆಯ ಬೆಲ್ಲ
ಮನಸೋಲುತಿರುವನಲ್ಲ ಮಧುಹೀರುವನಲ್ಲ
ಇಬ್ಬರ ನಡುವಣ ಪರದೆಯು ಸರಿಯಲು
ಹಬ್ಬದ ಸಂಭ್ರಮಸಿದ್ದ
ವೀಕ್ಷಣವಿದು ಶುದ್ದ
ಎಂದು ಜೀರಿಗೆ ಬೆಲ್ಲದ ಸಮಯವನ್ನು ಸುಂದರವಾಗಿ ವಿವರಿಸಿದ್ದಾರೆ.

ಸಕಲ ದೇವತೆಗಳು ನಮ್ಮಿಬ್ಬರನ್ನು ಸೇರಿಸಲಿ, ವರುಣ, ವಾಯುಗಳು ನಮ್ಮನ್ನು ಕೂಡಿಸಲಿ, ವಾಗ್ದೇವತೆಯ ಸದುಪದೇಶದಿಂದ ನಮ್ಮಿಬ್ಬರಲ್ಲಿ ಏಕತಾನತೆ ಭಾವನೆ ತುಂಬಲಿ. ವಧುವೇ ನಿನ್ನ ನೋಟ ಶುದ್ದವಾಗಿರಲಿ, ಯಾವಾಗಲೂ ನನ್ನ ಸಹಧರ್ಮಿಣಿಯಾಗಿ, ಪುಣ್ಯದ ಕೆಲಸಗಳನ್ನು ಮಾಡುತ್ತಾ ಮನೆಯಲ್ಲಿರುವ ದನಕರುಗಳಾದಿಯಾಗಿ ಹಿರಿಯರ ಆರೈಕೆ ಮಾಡುತ್ತಾ ಸಾದ್ವಿಸತಿಯೆನಿಸು. ನಿನ್ನ ಬಯಕೆಗಳೆಲ್ಲ ಇಡೇರಲಿ ನಮಗೆಲ್ಲ ಶುಭನೀಡು. ಹೇ ಇಂದ್ರ ಈ ಮಂಗಳಾಂಗಿಯು ಹತ್ತು ಮಕ್ಕಳ ತಾಯಿಯಾಗಿ ನನ್ನನ್ನು ಹನ್ನೊಂದನೆಯ ಮಗುವಿನಂತೆ ನೋಡಿಕೊಳ್ಳಲಿ – ಋಗ್ವೇದ ಸಂಹಿತೆ 10-85-44
ಎಂದು ಋಗ್ವೇದ ಸಂಹಿತೆಯಲ್ಲಿ ಜೀರಿಗೆ ಬೆಲ್ಲದ ಮೊದಲನೋಟದಲ್ಲಿ ವರನ ಮನದಾಕಾಂಕ್ಷೆಯನ್ನು ಸುಂದರವಾಗಿ ವಿವರಿಸಿದ್ದಾರೆ.
ಜೀರಿಗೆ ಬೆಲ್ಲದ ನಂತರ ನಡೆಯುವ ವಿವಾಹ ವಿಧಿಯೇ ಪರಸ್ಪರ ಹೂಮಾಲೆ ಬದಲಾಯಿಸುವುದು ವಧುವರರಿಬ್ಬರು ಎದುರು ಬದುರು ನಿಂತು ಪರಸ್ಪರ ಹೂಮಾಲೆಯನ್ನು ಬದಲಾಯಿಸಿಕೊಳ್ಳುತ್ತಾರೆ. ಇದನ್ನು “ಸಂಬಂಧ ಮಾಲೆ” ಎಂದು ಕರೆಯುತ್ತಾರೆ. ಹರುಷದಿಂದ ವಧುವರರಿಬ್ಬರು ಪರಸ್ಪರ ಮಾಲೆ ಬದಲಾಯಿಸಿ ಇಬ್ಬರೊಬ್ಬರಾಗುವ ಕ್ಷಣ ಇದನ್ನು ಸಾಮಮಂತ್ರ ಬ್ರಾಹ್ಮಣದಲ್ಲಿ ಸೊಗಸಾಗಿ ವಿವರಿಸಿದ್ದಾನೆ.

ಬಯಕೆಯ ಸೂತ್ರಕ್ಕೆ ಕನಸಿನ ಹೂಗಳ
ಪವಣಿಸಿ ಕಟ್ಟುವ ಮಾಲೆ
ಮುಂದಿನ ಬಾಳಿಗೆ ಮಂಗಳ ಮೂಡಿಸೆ
ಸೂಡುವ ಸೊಗಸಿನ ಮಾಲೆ
ಇದೇ ಸಂಬಂಧ ಮಾಲೆ
ಇದೇ ಅನುಬಂಧ ಮಾಲೆ
ಒಬ್ಬರಿಗೊಬ್ಬರು ತಲೆಯನು ತಗ್ಗಿಸಿ
ಹಬ್ಬವಾಗಿ ಹರುಷಿಪ ವೇಳೆ
ಇಬ್ಬರೊಬ್ಬರಾಗುವ ಲೀಲೆ! – (ಸಾಮಮಂತ್ರ ಬ್ರಾಹ್ಮಣ 1.2.20.)

ನಮ್ಮ ವೈವಾಹಿಕ ವ್ರತದಲ್ಲಿ ನಿನ್ನ ಸಹಯೋಗವಿರಲಿ ನನ್ನ ವ್ರತದಲ್ಲಿ ನಿನ್ನ ಹೃದಯವು ನಿಲ್ಲಲ್ಲಿ ನಮ್ಮಿಬ್ಬರ ಮನವು ಪರಸ್ಪರ ಸ್ಪಂದಿಸಲಿ ಇಬ್ಬರು ಮನದ ಮಾತು ಒಂದೇ ಆಗಿರಲಿ ಎಂದು ಸಂಬಂಧ ಮಾಲೆಯ ಸಂದರ್ಭದಲ್ಲಿ ವರನಮನದಾಳದ ಮಾತ್ನು ಸುಂದರವಾಗಿ ವಿವರಿಸಿದ್ದಾನೆ.
ಸಂಬಂಧ ಮಾಲೆಯ ನಂತರ ನಡೆಯುವುದೇ ಕನ್ಯಾದಾನ ಅಥವಾ ಪಾಣಿಗ್ರಹಣ.

ಇಂದೀವರ ರುಚಿರಾಮಂ
ಕೆ0ದಾವರೆಯಂದಮಿರ್ಪ ಸೀತೆಯ ಕರಮಂ ||
ಸ್ಪಂದಿಸಿ ಪಿಡಿದೊಡನೆಯೆ ತಾ –
ನಂದದೆ ಕಯ್ಗೊಳ್ಪನೋಟವದು ಸೌಭಾಗ್ಯಂ ||
ತಂದೆ ತಾಯ್ ಬಳ್ಳಿಬಿಟ್ಟೊಂದು ಮಂದಾರ
ಸುಂದರಾಂಗನ ಕರವ ಸೇರೆ ಸಂಸಾರ
ಇನಿಯನೊಪ್ಪಿಗೆಯಲ್ಲಿ ಮನದೊಳಪ್ಪುಗೆಯಲ್ಲಿ
ಮೈ ಮರೆಯಲಾಗಲೇ ಮಧುರಾನುಭೂತಿ – (ಋಗ್ವೇದ ಸಂಹಿತೆ 10-85-23)

ಎಂದು ಕನ್ಯಾದಾನದ ಸಂದರ್ಭವನ್ನು ಎಷ್ಟು ಸುಂದರವಾಗಿ ವರ್ಣಿಸಿದ್ದಾನೆ. ಐದು ಬೆರಳುಗಳ ಸಮೇತ ವಧುವಿನ ಅಂಗೈಯನ್ನು ವರನು ತನ್ನ ಕೈಯಲ್ಲಿ ಹಿಡಿಯುವುದನ್ನು “ಪಾಣಿಗ್ರಹಣ” ಎನ್ನುತ್ತಾರೆ. ಪಾಣಿಗ್ರಹಣದ ಸಂದರ್ಭದಲ್ಲಿ ವಧುವರರ ಕೈಮೇಲೆ ತೆಂಗಿನ ಕಾಯಿಯನ್ನು ಇಟ್ಟು ಅದರ ಮೇಲೆ ಲಕ್ಷ್ಮೀನಾರಾಯಣ ನಿಲ್ಲಿಸಿ ವಧುವಿನ ಮನೆಯ ಕಡೆಯ ಹಿರಿಯರೆಲ್ಲಾ ಕನ್ಯೆಯನ್ನು ವರನಿಗೆ ಒಪ್ಪಿಸುತ್ತಾರೆ. ಇಲ್ಲಿ ವಧುವರರು ಸಹ ಲಕ್ಷ್ಮೀನಾರಾಯಣರ ಸ್ವರೂಪವೇ ಈ ಸಮಯದಲ್ಲಿ ಧರ್ಮ, ಅರ್ಥ ಮತ್ತು ಕಾಮದಲ್ಲಿ ಪತ್ನಿಯನ್ನು ಪತಿಯ ಮೀರಿನಡೆಯಬಾರದೆಂದು ವಧುವಿನ ತಂದೆ ವರನನ್ನು ಪ್ರಾರ್ಥಿಸಿದಾಗ ವರನು ಅಂತೆಯೇ ಆಗಲಿ ಎಂದು ಪ್ರಮಾಣ ಮಾಡುತ್ತಾನೆ. ಧರ್ಮೇಚ, ಅರ್ಥೇಚ, ಕಾಮೇಚ, ನಾತಿಚರಾಮಿ ಎಂದು ಪ್ರತಿಜ್ಞೆ ಮಾಡುತ್ತಾನೆ. ಪಾಣಿಗ್ರಹಣದ ಸಮಯದಲ್ಲಿ ಮುಂದಿನ ಅರ್ಥವಿರುವ ಮಂತ್ರವನ್ನು ಹೇಳುತ್ತಾರೆ. ಎಲೈ ವಧುವೆ, ನೀನು ನನ್ನನ್ನು ನಿನ್ನ ಪತಿ ಎಂದು ಸ್ವೀಕರಿಸುತ್ತಿರುವೆ ಹೀಗೆಯೆ ನಮ್ಮ ದಾಂಪತ್ಯದಲ್ಲಿ ನೀನು ನನ್ನ ಜೊತೆಯಲ್ಲಿದ್ದು ವೃದ್ಧಾವಸ್ಥೆಯನ್ನು ತಲುಪಲಿರುವೆ. ಇದರಿಂದ ನಿನಗೆ ಸೌಭಾಗ್ಯ ಪ್ರಾಪ್ತಿಯಾಗುವುದರಿಂದ ನಿನ್ನನ್ನು ನಾನು ಗೃಹಸ್ಥಾಶ್ರಮಕ್ಕೆ ಕರೆದೊಯ್ಯುತ್ತಿರುವೆ ಭಗ, ಆರ್ಯಾಮಾ, ಸವಿತಾ ಮತ್ತು ಪೂಷಾ ಈ ನಾಲ್ಕು ದೇವತೆಗಳು ಗೃಹಸ್ಥಾಶ್ರಮದಲ್ಲಿ ಜೊತೆಯಾಗಿದ್ದು ಗೃಹಸ್ಥಾಶ್ರಮದ ಎಲ್ಲಾ ಕರ್ತವ್ಯಗಳನ್ನು ನಡೆಸಬೇಕೆಂದು ನಿನ್ನನ್ನು ನನಗೆ ಒಪ್ಪಿಸುತ್ತಿದ್ದಾರೆ ಎಂದು ಹೇಳುತ್ತಾ ವರನು ಪಾಣಿಗ್ರಹಣದ ಸಮಯದಲ್ಲಿ ವಧುವಿನ ಕೈ ಹಿಡಿಯುತ್ತಾನೆ.
ಪಾಣಿಗ್ರಹಣದ ನಂತರ ನಡೆಯುವ ಕಾರ್ಯಕ್ರಮವೇ ಮಾಂಗಲ್ಯಧಾರಣೆ ಇದನ್ನು ಸಂಸ್ಕøತದಲ್ಲಿ “ಮಾಂಗಲ್ಯತಂತೂ” ಎಂದು ಕರೆಯುತ್ತಾರೆ. ಹಿಂದೂಗಳ ವಿವಾಹವಿಧಿಯಲ್ಲಿ ಇದು ಮುಖ್ಯವಾದ ಘಟ್ಟ. ಮಾಂಗಲ್ಯತಂತು ಎಂದರೆ ಎರಡು ಎಳೆಗಳ ಅರಿಶಿನದಲ್ಲಿ ಅದ್ದಿದ ದಾರದಲ್ಲಿ ಕಪ್ಪು ಮಣಿಗಳನ್ನು ಪೋಣಿಸಿರುತ್ತಾರೆ. ಮಧ್ಯಭಾಗದಲ್ಲಿ ನಾಲ್ಕು ಚಿಕ್ಕ ಮಣಿಗಳು ಹಾಗೂ ಎರಡು ಚಿಕ್ಕ ತಾಳಿಯಿರುತ್ತದೆ. ಇಲ್ಲಿ ಎರಡು ದಾರಗಳು ಪತಿಪತ್ನಿಯರ ಬಂಧನವನ್ನು ಸೂಚಿಸುತ್ತದೆ ಎರಡು ತಾಳಿಗಳೆಂದರೆ ಗಂಡ ಹೆಂಡತಿಯರು ನಾಲ್ಕು ಕಪ್ಪು ಮಣಿಗಳೆಂದರೆ ಧರ್ಮ, ಅರ್ಥ, ಕಾಮ, ಮೊಕ್ಷ ಎಂಬ ಚತುರ್ವಿಧ ಪುರುಷಾರ್ಥಗಳಾಗಿದೆ. ದಾಂಪತ್ಯದಲ್ಲಿ ಅಚಲ ನಿಷ್ಠೆ ಹೊಂದುವ ಸಂಕೇತವಾಗಿ ವಧುವು ಒಂದು ಕಲ್ಲಿನ ಮೇಲೆ ಅಡಿ ಇರಿಸುತ್ತಾಳೆ ಇದಾದ ನಂತರ ಮಾಂಗಲ್ಯಧಾರಣೆ ಕಾರ್ಯ ನಡೆಯುತ್ತದೆ. ಕಲ್ಲಿನ ಮೇಲೆ ವಧುವು ಕಾಲಿಡುವ ಉದ್ದೇಶವನ್ನು ಪಾರಸ್ಕರ ಗ್ರಹ್ಯಸೂತ್ರ 1-3-1ರಲ್ಲಿ ಹೀಗೆ ವಿವರಿಸಿದ್ದಾನೆ.
“ಹೇ ಸತಿಯೇ ನೀನು ಕಲ್ಲನ್ನು ಮೆಟ್ಟಿನಿಲ್ಲು ಈ ಕಲ್ಲಿನಂತೆಯೇ ಜೀವನದಲ್ಲಿ ನೀನು ದೃಢವಾಗಿ ನಿಲ್ಲಬೇಕು. ವೈವಾಹಿಕ ಜೀವನದಲ್ಲಿ ಎಷ್ಟೆ ಕಷ್ಟಕಾರ್ಪಣ್ಯಗಳು ಬಂದರು ಈ ಕಲ್ಲಿನ ಹಾಗೆ ಅಲ್ಲಾಡದೇ ನಿಂತು ನನ್ನ ಬಾಳನ್ನು ತುಂಬುವಂತವಳಾಗು” ಎಂಬುದು ಕಲ್ಲನ್ನು ಮೆಟ್ಟಿನಿಲ್ಲುವ ಉದ್ದೇಶ.
ವರನ ಕಡೆಯ ಸುಮಂಗಲಿಯರು ವಧುವರರನ್ನು ಪೂರ್ವಾಭಿಮುಖವಾಗಿ ಕುಳ್ಳರಿಸುತ್ತಾರೆ ವಧುವಿಗೆ ಅಷ್ಟಪುತ್ರಿ ಎಂಬ ಹೆಸರಿನ ಎರಡು ಹಳದಿ ಬಣ್ಣದ ವಸ್ತ್ರಗಲನ್ನು ಮತ್ತು ರವಿಕೆ ಹಾಗೂ ಕಪ್ಪು ಮಣಿಗಳ ಮಾಂಗಲ್ಯವನ್ನು ಕೊಡುತ್ತಾರೆ. ಅಷ್ಪಪುತ್ರಿಗಳ ಪೈಕಿ ಒಂದನ್ನು ಉಟ್ಟುಕೊಂಡು, ಒಂದನ್ನು ಅಂಗವಸ್ತ್ರವೆಂದು ಹೊದ್ದುಕೊಳ್ಳಬೇಕು ರವಿಕೆಯನ್ನು ಹಾಕಿಕೊಳ್ಳಬೇಕು ನಂತರ ಅರಿಶಿನದಾರದಲ್ಲಿ ಕಟ್ಟಿದ್ದ ಮಾಂಗಲ್ಯವನ್ನು ತಟ್ಟೆಯಲ್ಲಿಟ್ಟು ಎಲ್ಲರಿಗೂ ಅಂದರೆ ನೆರೆದಿರುವ ಗುರುಹಿರಿಯರಿಗೆ ಮುಟ್ಟಿಸಿ ಇವರ ಸಂಬಂಧ ಗಟ್ಟಿಯಾಗಿರಬೇಕೆಂಬ ಆಶೀರ್ವಾದದೊಡನೆ ವರನು ಮಾಂಗಲ್ಯವನ್ನು ಕನ್ಯೆಯ ಕೊರಳಿಗೆ ಕಟ್ಟುತ್ತಾನೆ. ಮೂರುಗಂಟನ್ನು ಹಾಕಿ ನಂತರ ಅದನ್ನು ಪೂಜೆ ಮಾಡುವುದು ವಾಡಿಕೆ.ಮಾಂಗಲ್ಯ ಕಟ್ಟುವಾಗ “ಮಾಂಗಲ್ಯಂತಂತೂ ನಾನೇನ , ಮಮ ಜೀವನ ಹೇತುನಾ;ಕಂಠೆಭದ್ರಾಮಿ ಶುಭಗೇ ತ್ವಂ ಜೀವ ಶರದಸ್ತಮಂ”

ಸತ್ಯದ ಗಂಟನ್ನು ಹಾಕಿ ನನ್ನ ಹೃದಯ ಮನಗಳನ್ನು ಕಟ್ಟುತ್ತಲಿದ್ದೇನೆ. ನನ್ನ ಹೃದಯವು ನಿನ್ನದಾಗಲಿ, ನಿನ್ನ ಹೃದಯವು ನನ್ನದಾಗಲಿ, ಹಾಗೂ ನಾವಿಬ್ಬರೂ ನೂರು ವರ್ಷಗಳ ಕಾಲ ಒಟ್ಟಿಗೆ ಬಾಳೋಣ- (ಸಾಮಮಂತ್ರ ಬ್ರಾಹ್ಮಣ 1, 2, 20)
ಎಂದು ಸಾಮಮಂತ್ರ ಬ್ರಾಹ್ಮಣದಲ್ಲಿ ಮಾಂಗಲ್ಯಧಾರಣೆಯ ಸಂದರ್ಭವನ್ನು ಸೊಗಸಾಗಿ ವಿವರಿಸಿದ್ದಾನೆ. ಇಲ್ಲಿ ಮಾಂಗಲ್ಯ ಧರಿಸುವ ವಧುವು ದಾಸ್ಯದ ಸಂಕೇತವಲ್ಲ. ವರನ ಭಾದ್ಯತೆಯ ಸಂಕೇತ ರಕ್ಷೆ ಹಾಗೂ ದೀಕ್ಷೆಗಳ ಸಂಕೇತ. ವರ ತನ್ನ ಬಾಳಿಗೆ ದೃಢತೆಯನ್ನು ತುಂಬಿಕೊಳ್ಳುವುದಕ್ಕೋಸ್ಕರ, ವಧುವಿನ ಜೀವನಕ್ಕೆ ಶಾಶ್ವತತೆಯನ್ನು ಹಾಗೂ ನೂರು ಶರತ್ಕಾಲ ಆಕೆಗೆ ಸುಂದರ ಜೀವನವನ್ನು ನೀಡುವ ಭರವಸೆಯ ಸಂಕೇತವೇ ಮಾಂಗಲ್ಯಧಾರಣೆ. ಇಲ್ಲಿ ವರ ವಧುವಿಗೆ ಮಾಂಗಲ್ಯ, ಕಟ್ಟುವುದು ಎಂದರೆ ಇಬ್ಬರು ಪರಸ್ಪರ ಜೀವನವೆಂಬ ಸಾಧನೆಯ ಬಂಧನದಲ್ಲಿ ಸಿಲುಕಿಸುವುದು ಎಂದರ್ಥ. ನಾರಾಯಣ ಸ್ವರೂಪಿ ವರ ಹಾಗೂ ಶಕ್ತಿ ಸ್ವರೂಪಿ ವಧು ಒಟ್ಟಿಗೆ ಸೇರಿ ಸಮಾಜದಲ್ಲಿ ಆದಷ್ಟೂ ಧರ್ಮ ಕಾರ್ಯ ಮಾಡುವುದು ಎಂದು ಇದರ ಭಾವಾರ್ಥವಾಗಿದೆ. ಹಿಂದೂ ಧರ್ಮದಲ್ಲಿ ಪ್ರತಿಯೊಂದು ವಿಷಯವನ್ನು ಸಮುಷ್ಟಿ ಕಾರ್ಯದ ಮಹತ್ವವನ್ನು ಅರಿತುಕೊಂಡೆ ಹೇಳಲಾಗಿದೆ.
ಮಾಂಗಲ್ಯಧಾರಣೆಯ ನಂತರದ ಕಾರ್ಯವೇ ಸಪ್ತಪದಿ ತುಳಿಯುವುದು ವಿವಾಹ ವಿಧಿಗಳಲ್ಲಿ ಮಾಂಗಲ್ಯಧಾರಣೆಯ ನಂತರದ ಸ್ಥಾನ ಸಪ್ತಪದಿಗಿದೆ. ವಧುವರರು ಜೊತೆಯಾಗಿ ಏಳು ಹೆಜ್ಜೆಗಳನಿಟ್ಟು ಅಗ್ನಿಗೆ ನಾಲ್ಕು ಪ್ರದಕ್ಷಿಣೆ ಹಾಕಿ ಜೀವನವನ್ನು ಒಟ್ಟಾಗಿಯೇ ಸವೆಸುವ ಪ್ರತಿಜ್ಞೆ ಮಾಡುವ ವಿಧಿಯಿದು ಆಧುನಿಕ ವೈದೀಕ ನಿಯಮಗಳಲ್ಲಿ ಈ ಸಪ್ತಪದಿಗೆ ವಿಶೇಷ ಸ್ಥಾನ. ಈ ವಿಧಿಯ ಅರ್ಥವೇನೆಂದರೆ ಎರಡು ಜೀವಗಳು ಹಿಂದಿನ 7 ಜೀವನಗಳ ಸಂಸ್ಕಾರಗಳನ್ನು ಮರೆತು, ಪರಸ್ಪರರಿಗೆ ಪೂರಕವಾಗಿದ್ದು ವೈವಾಹಿಕ ಜೀವನವನ್ನು ಪ್ರಾರಂಭಿಸುವುದು.
“ಪ್ರಾಹ್ರಃ ಸಪ್ತಪದಂ ಮೈತ್ಯಂ ಬುಧಾಃ ತತಾÐರ್ಥ ದರ್ಶಿನಃ”
ಎಂದರೆ ಗಂಡು ಹೆಣ್ಣು ಜೊತೆಯಾಗಿ ಏಳು ಹೆಜ್ಜೆಗಳನ್ನು ನಡೆಯುವುದರಿಂದ ಸ್ನೇಹವಾಗುತ್ತದೆ ಎಂಬುದು ಈ ಶ್ಲೋಕದ ಅರ್ಥ. ವರವಧುವಿನ ಕೈ ಹಿಡಿದು ಹೋಮದ ಉತ್ತರ ದಿಕ್ಕಿನಲ್ಲಿ ನಿರ್ಮಿಸಿದ ಅಕ್ಕಿಯ ಏಳುರಾಶಿಗಳ ಮೇಲೆ ವಧುವನ್ನು ನಡೆಸಿಕೊಂಡು ಹೋಗಬೇಕು ಇದಕ್ಕೆ ಸಪ್ತಪದಿ ಎನ್ನುತ್ತಾರೆ. ಗಂಡು ಹೆಣ್ಣು ಪರಸ್ಪರ ಹೆಜ್ಜೆ ಹಾಕುವಾಗ ಪುರೋಹಿತರು ಪ್ರತಿಯೊಂದು ಹೆಜ್ಜೆಇಡುವಾಗ ಮಂತ್ರ ಹೇಳುತ್ತಾರೆ. ವಧುವರರು ಪರಸ್ಪರ ಹೆಜ್ಜೆಹಾಕುತ್ತಾ ವೈವಾಹಿಕ ಜೀವನದಲ್ಲಿರುವ ತಮ್ಮ ಹೊಣೆಗಾರಿಕೆಯನ್ನು ಈ ಕೆಳಗಿನಂತೆ ಉಚ್ಚರಿಸುತ್ತಾರೆ.
ವರ: ನಾವಿಬ್ಬರು ಜೊತೆಯಾಗಿ ಏಳು ಹೆಜ್ಜೆಗಳನ್ನಿಡೋಣ
ವಧು: ನೀನು ದುಡಿದು ಸಂಪತ್ತು, ಮುಖ್ಯ ಆಹಾರದಾನ್ಯಗಳನ್ನು ನನ್ನ ವಶಕ್ಕೆ ಒಪ್ಪಿಸುತ್ತೀಯ ಹಾಗೂ ನನ್ನ ಬಗ್ಗೆ ಗೌರವ ಪ್ರೀತ್ಯಾಧಾರಗಳನ್ನು ವ್ಯಕ್ತಪಡಿಸುತ್ತೀಯ.
ವರ: ಹಾಗೆಯೇ ಆಗಲಿ, ನಮ್ಮ ಮೊದಲ ಹೆಜ್ಜೆಯನ್ನು ಜೀವನಾಗತ್ಯವಸ್ತುಗಳು ಮತ್ತು ಆಹಾರಕ್ಕೆ ಮೀಸಲಿಡೋಣ.
ವಧು: ನಿನ್ನ ಕುಟುಂಬ ಹಾಗೂ ಮನೆಯ ಕ್ಷೇಮದ ಹೊಣೆ ನನ್ನದು, ನಿನ್ನೊಂದಿಗೆ ಎಂದೆಂದೂ ಸರಸ ಸಂಭಾಷಣೆ ನಡೆಸುತ್ತಾ ಸುಖ-ದುಃಖದಲ್ಲಿ ಸಮಭಾಗಿಯಾಗಿರುತ್ತೇನೆ. ಎನ್ನುತ್ತಾಳೆ.
ವರ: ಹಾಗೆಯೇ ಆಗಲಿ ನಾವು ಈಗ ಸತ್ವ ಹಾಗೂ ಶಕ್ತಿಶಾಲಿಗಳಾಗುವ ದಿಕ್ಕಿನಲ್ಲಿ ಎರಡನೇ ಹೆಜ್ಜೆ ಇಡೋಣ.
ವಧು: ನನ್ನ ರೂಪ ಶೃಂಗಾರಗಳೇನಿದ್ದರೂ ನಿನಗೆ ಮೀಸಲು ಕಾಯ, ವಾಚ ಮನಸಾ ನನ್ನ ಸಹಯೋಗ ನಿನ್ನೊಬ್ಬನೊಂದಿಗೆ.
ವರ: ಹಾಗೆಯೇ ಆಗಲಿ, ಜೀವನದ ಸುಖ, ಸಮೃದ್ಧಿಗಳಿಗೋಸ್ಕರ ಈ ಮೂರನೇಯ ಹೆಜ್ಜೆ ಮೀಸಲಾಗಿರಲಿ.
ವಧು: ಸುಗಂಧಭರಿತ ಪತ್ರಪುಷ್ಪಗಳಿಂದ ನಿನ್ನನ್ನು ಸಿಂಗರಿಸುತ್ತೇನೆ.
ವರ: ಹಾಗೆಯೇ ಆಗಲಿ, ಜೀವನದ ಸುಖ ಮತ್ತು ಸಮೃದ್ಧಿ ನೆಮ್ಮದಿಯತ್ತ ಈ ಹೆಜ್ಜೆ ಸಾಗಲಿ.
ವಧು: ನಿನ್ನ ಸುಖ, ದುಃಖಗಳಲ್ಲಿ ನಾನು ಸಮಭಾಗಿ, ನಿನ್ನ ಇಚ್ಛೆಯರಿತು ನಡೆಯುವುದೇ ನನ್ನ ಕರ್ತವ್ಯ.
ವರ: ಹಾಗೆಯೇ ಆಗಲಿ, ಸಂತಾನ ಭಾಗ್ಯದತ್ತ ಈ ಐದನೇ ಹೆಜ್ಜೆ ಇಡೋಣ.
ವಧು: ನೀನೆಲ್ಲೋ ನಾನಲ್ಲೇ, ಪರಸ್ಪರ ನಾವಿಬ್ಬರು ಅತಿಕ್ರಮಣ ಮಾಡಬಾರದು ಧಾರ್ಮಿಕ ವಿಧಿಗಳಲ್ಲಿ, ಧರ್ಮ ಕಾರ್ಯಗಳಲ್ಲಿ ಐಹಿಕ ಹಾಗೂ ಭಾವೋದಿಪ್ತ ಬಯಕೆಗಳಲ್ಲಿ ನಾನು ನಿನ್ನ ಸಹಯೋಗಿ.
ವರ: ಹಾಗೆಯೇ ಆಗಲಿ, ವರ್ಷವಿಡಿ ಇರುವ ಆರು ಋತುಗಳಿಗಾಗಿ ಈ ಆರನೇ ಹೆಜ್ಜೆ ಇಡೋಣ.
ವಧು: ಸಕಲ ದೇವಾದಿ ದೇವತೆಗಳನ್ನು ನಮ್ಮ ಆತ್ಮಾಕಾಂಕ್ಷೆಗಳ ಅರಿವಿದೆ ಹಾಗಾಗಿ ನಾವು ಈ ಸಂಕಲ್ಪಗಳನ್ನು ಸತ್ಯವಾಗಿಸುವ ನಿಟ್ಟಿನಲ್ಲಿ ನಮ್ಮ ವೈವಾಹಿಕ ಜೀವನವನ್ನು ಸವೆಸೋಣ.
ವರ: ಹಾಗೆಯೇ ಆಗಲಿ, ಜೀವನದ ಸಾಂಗತ್ಯದ ಕುರುಹಾಗಿ ಏಳನೇಯ ಹೆಜ್ಜೆ ಇಡೋಣ ನಮ್ಮ ಮಕ್ಕಳು ಆಯುಷ್ಯವಂತರಾಗಿರಲಿ.
ಎಂದು ಮಂತ್ರದ ಏಳನೇಯ ಹೆಜ್ಜೆಯೊಂದಿಗೆ ಸಪ್ತಪದಿ ಕಾರ್ಯ ಮುಗಿಯುತ್ತದೆ. ಸಪ್ತಪದಿಯ ನಂತರ ಸುಧೀರ್ಘ ಸಾಂಗತ್ಯದ ಸಂಕೇತವಾಗಿ ಪತ್ನಿಯ ಜೊತೆ ನಿಕಟ ಸಂಪರ್ಕ ಹೊಂದಿರುವ “ಅನುರಾಧ ನಕ್ಷತ್ರದತ್ತ” ವಧುವರರು ದೃಷ್ಟಿ ಹರಿಸುತ್ತಾರೆ.
ಇದಾದ ನಂತರ ನಡೆಯುವ ಇನ್ನೊಂದು ಮುಖ್ಯವಾದ ಕಾರ್ಯವೆಂದರೆ ಲಾಜಾ ಹೋಮ ಲಾಜಾ” ಎಂದರೆ ಅರಳು. ಇದು ಅರಳಿನ ಹೋಮ. ಅರಳು ಇದು ಅರಳಿರುವ ಯೋನಿಯ ಸಂಕೇತವಾಗಿದೆ. ಅಂದರೆ ಹಿಂದೆ ಮದುವೆಯ ನಂತರ ವಂಶಾಭಿವೃದ್ಧಿಗಾಗಿ ಅನೇಕ ಮಕ್ಕಳನ್ನು ಪಡೆಯುವುದು ಸಹ ಒಂದು ಉದ್ದೇಶವಾಗಿತ್ತು ಅಂದರೆ ಲಾಜಾ ಹೋಮವು ಬಹು ಪ್ರಸವತೆಯ ಸಂಕೇತವಾಗಿದೆ. ಇಲ್ಲಿ ವರವಧುವನ್ನು ನಿಲ್ಲಿಸಿ ಅವಳ ಕೈಯನ್ನು ತೊಳೆದು ಕೈಯನ್ನು ಬೊಗಸೆಯಂತೆ ಮಾಡಲು ಹೇಳಿ, ವರ ಅದರಲ್ಲಿ 1 ಚಮಚ ತುಪ್ಪವನ್ನು ಹಾಕುತ್ತಾನೆ. ನಂತರ ವಧುವಿನ ಸಹೋದರ ಎರಡು ಮುಷ್ಟಿಯಷ್ಟು ಅರಳನ್ನು ವಧುವಿನ ಬೊಗಸೆಯಲ್ಲಿ ಹಾಕುವ ಮೂಲಕ ವಧುವಿನ ಸಹೋದರ ವಿವಾಹಕ್ಕೆ ಸಮ್ಮತಿ ನೀಡುತ್ತಾನೆ. ವರನು ಮೊರದಲ್ಲಿನ ಮತ್ತು ಬೊಗಸೆಯಲ್ಲಿರುವ ಭತ್ತದರಳಿನ ಮೇಲೆ ಸ್ವಲ್ಪ ತುಪ್ಪವನ್ನು ಹಾಕುತ್ತಾನೆ. ಇಲ್ಲಿ ವಧುವು ಅರಳನ್ನು ಅಗ್ನಿಗೆ ಅರ್ಪಿಸುವ ಉದ್ದೇಶ ಇಷ್ಟೆ. ಕನ್ಯೆ “ಆರ್ಯಾಮ” ಎಂಬ ಹೆಸರಿನ ಅಗ್ನಿದೇವ ನನ್ನ ಪೂಜಿಸಿರುತ್ತಾಳೆ. ಆ ಅಗ್ನಿ ದೇವನು ಈ ಕನ್ಯೆಯನ್ನು ಪಿತೃಗೃಹದ ಪಾಶದಿಂದ ಬಿಡಿಸಲಿ ಹಾಗೂ ಪತಿಯ ಪಾಶದಿಂದ ಬಿಡಿಸದಿರಲಿ ಎಂದು ಹೇಳುವ ಮೂಲಕ ಎರಡು ಕೈಗಳಿಂದ ವಧುವಿನ ಬೊಗಸೆಯಿಂದ ಎಲ್ಲ ಭತ್ತದರಳನ್ನು ಅಗ್ನಿಗೆ ಅರ್ಪಿಸುತ್ತಾರೆ. ಅನಂತರ ವಧುವರರು ಹೋಮಪಾತ್ರೆ ಕಳಶ ಮತ್ತು ಅಗ್ನಿಗೆ ಪ್ರದಕ್ಷಿಣೆ ಹಾಕುತ್ತಾರೆ.
ಇದಾದ ನಂತರದ ಮುಂದಿನ ಕಾರ್ಯಕ್ರಮವೇ ಮದುವೆಗೆ ಸಾಕ್ಷಿಯಾಗಿ ಆಗಮಿಸಿದ ಗುರುಹಿರಿಯರ ಆಶೀರ್ವಾದ ಪಡೆಯುವುದು ಇದನ್ನು “ಹಿರಿಯರ ಹರಕೆ” ಎಂದು ಕರೆಯುತ್ತಾರೆ. ಈ ಸಮಯದಲ್ಲಿ ಅಚಲ ನಿಷ್ಠೆಯ ಸಂಕೇತವಾಗಿ ವರನು ವಧುವಿನ ಹೃದಯ ಭಾಗದ ಮೇಲೆ ಕೈಯಿಟ್ಟು ಗುರುಹಿರಿಯರು ಸಭಿಕರನ್ನು ಉದ್ದೇಶಿಸಿ ಈ ವಧು ಸಕಲ ಸದ್ಗುಣ ಸಂಪನ್ನ್ನೆ ನೀವೆಲ್ಲರೂ ಅವಳತ್ತ ನೋಡಿ, ಅವಳನ್ನು ಆಶೀರ್ವದಿಸಿ ನಮ್ಮ ಗೃಹಕ್ಕೆ ನೀವು ಪದೆ ಪದೆ ಆಗಮಿಸಿ ಎಂದು ಹಿರಿಯರಿಗೆ ನಮಸ್ಕರಿಸುವುದು ಪದ್ಧತಿ. ವಿವಾಹದ ನಂತರ ಎರಡು ಜೀವಗಳು ಗೃಹಸ್ಥಾಶ್ರಮಕ್ಕೆ ಕಾಲಿಡುತ್ತವೆ. ಇಲ್ಲಿ ಪರಸ್ಪರರಿಗೆ ಪೂರಕವಾಗಿದ್ದು ಸಂಸಾರಸಾಗರದಲ್ಲಿನ ಕರ್ಮ ಮಾಡುವುದು ಮತ್ತು ಅದಕ್ಕಾಗಿ ಹಿರಿಯರಿಂದ ಆಶೀರ್ವಾದ ಪಡೆಯುವುದೇ ಅತ್ಯಂತ ಮಹತ್ವದ್ದಾಗಿದೆ. ವಿವಾಹದ ನಂತರ ಸಾಮಾನ್ಯವಾಗಿ ದೊಡ್ಡವರಿಗೆ ನಮಸ್ಕಾರ ಮಾಡುವಾಗ ಪತಿಪತ್ನಿ ಜೊತೆಯಾಗಿ ನಮಸ್ಕರಿಸಬೇಕು. ಹೀಗೆ ಮಾಡಿದರೆ ಬ್ರಹ್ಮಾಂಡದಲ್ಲಿನ ವಿಷ್ಣು ಲಕ್ಷ್ಮೀರೂಪಿ ಲಹರಿಗಳು ಕಾರ್ಯನಿರತವಾಗಿ ಜೀವನದಲ್ಲಿ ಹೊಂದಿಕೊಳ್ಳುವ ಭಾವನೆ ವೃದ್ಧಿಯಾಗುತ್ತದೆ. ಇದರಿಂದ ಗೃಹಸ್ಥಾಶ್ರಮದಲ್ಲಿನ ಕರ್ಮಗಳು ಪರಿಪೂರ್ಣವಾಗಿ ಅವು ಯೋಗ್ಯ ಫಲವನ್ನು ನೀಡುತ್ತದೆ ಅಲ್ಲದೇ ಕೊಡುಕೊಳ್ಳುವಿಕೆಯ ಲೆಕ್ಕಚಾರವು ಅತ್ಯಂತ ಕಡಿಮೆ ಪ್ರಮಾಣದಲ್ಲಿ ನಿರ್ಮಾಣವಾಗುತ್ತದೆ. ಆದ್ದರಿಂದ ವಿವಾಹದ ನಂತರ ಪತಿಪತ್ನಿಯರು ಪ್ರತಿಯೊಂದು ಕರ್ಮಕ್ಕೂ ಪೂರಕವಾಗಿದ್ದು ನಮಸ್ಕಾರದಂತಹ ಕೃತಿಯಿಂದಲೂ ಪರಸ್ಪರರಿಗೆ ಅನುಮೋದನೆಯನ್ನು ನೀಡುವುದಾಗಿರುತ್ತದೆ.
ಇದಾದ ನಂತರ ನಡೆಯುವ ಕಾರ್ಯವೇ ವಧು, ವರನ ಮನೆ ಪ್ರವೇಶ ಅಂದರೆ “ಗೃಹಪ್ರವೇಶ” ಮಾಡುವುದು
“ಹೇ ವಧುವೇ” ಸೂರ್ಯನು ನಿನ್ನ ಕೈ ಹಿಡಿದು ಪತಿಗೃಹಕ್ಕೆ ಕರೆದೊಯ್ಯಲಿ
ಅಶ್ವಿನಿ ದೇವತೆಗಳು ರಥವನ್ನು ಸಜ್ಜಾಗಿಸಲಿ, ನೀನು ಪತಿಗೃಹದ ಸ್ವಾಮಿನಿಯಾಗು
ಅಲ್ಲಿಯ ಜನರೆಲ್ಲರ ಮನಗಳನ್ನು ನಿನ್ನ ನಡೆ ನುಡಿಗಳಿಂದ ಗೆಲ್ಲು – (ಋಗ್ವೇದ ಸಂಹಿತೆ 10-85-96)
ಎಂದು ಗಂಡನ ಮನೆಗೆ ಕಳಿಸುವಾಗ ವಧುವಿನ ಕಡೆಯ ಹಿರಿಯರು ವಧುವಿಗೆ ಗಂಡನ ಮನೆಯಲ್ಲಿ ಹೇಗಿರಬೇಕೆಂದು ಹೇಳುವ ಕಿವಿಮಾತನ್ನು ಋಗ್ವೇದ ಸಂಹಿತೆಯಲ್ಲಿ ಸುಂದರವಾಗಿ ವಿವರಿಸಿದ್ದಾರೆ.
ವಧುವಿನ ಮನೆಯವರು ವಧುವನ್ನು ವರನ ಮನೆಗೆ ಕಳಿಸುವ ಪದ್ಧತಿ ವಧುವನ್ನು ಮನೆ ತುಂಬಿಸುವ ಸಮಯದಲ್ಲಿ ವಧು ಬಲಗಾಲನ್ನು ಮೊದಲಿಟ್ಟು ಒಳಗೆ ಬರಬೇಕು ಹೀಗೆ ಬರುವಾಗ 1 ಸೇರಿನಲ್ಲಿ ಅಕ್ಕಿ ಅದರ ಮೇಲೆ ಬೆಲ್ಲದ ಅಚ್ಚನ್ನು ಇಡುತ್ತಾರೆ. ಇಲ್ಲಿ ಅಕ್ಕಿ ಸಮೃದ್ಧಿಯ ಸಂಕೇತ. ಇದನ್ನು ಬಲಗಾಲಿನಲ್ಲಿ ಒದ್ದು ವಧು ಮನೆ ಪ್ರವೇಶಿಸುತ್ತಾಳೆ. ಗಂಡನ ಮನೆ ಪ್ರವೇಶಿಸುವ ವಧುವಿಗೆ ಗಂಡನಿಗೆ ಹೇಗೆ ನಡೆದುಕೊಳ್ಳಬೇಕೆಂದು ಕನ್ಯೆಯ ಮನೆಯ ಹಿರಿಯರು ಕಿವಿಮಾತು ಹೇಳುತ್ತಾರೆ. ಗಂಡನ ಮನೆಯಲ್ಲಿ ಉತ್ತಮ ನಡೆತೆಯವಳಾಗಿರು ಮಾವನಿಂದ ಅತ್ತೆಯಿಂದ ಶೋಭೆಯೆನಿಸಿಕೋ. ಅತ್ತೆ, ಮಾವ, ನಾದಿನಿ, ಮೈದುನರೊಂದಿಗೆ ಹೊಂದಿಕೊಂಡು ಜೀವನ ನಡೆಸುವಂತವಳಾಗು. ಎಲ್ಲರೂ ನಿನ್ನನ್ನು ಹೊಗಳುವ ಹಾಗೆ ನಡೆದುಕೋ. ಭಾಗ್ಯಲಕ್ಷ್ಮೀಯಾಗಿ ದಾನ್ಯಲಕ್ಷ್ಮೀಯಾಗಿ ಈ ವಧು ನಿಮ್ಮ ಮನೆ ತುಂಬಲು ಬರುವ ಗೃಹಲಕ್ಷ್ಮೀ ಈ ಸುಮಂಗಲಿ ಕನ್ಯೆಯನ್ನು ಸೋಜಿ ಸೌಭಾಗ್ಯವಿತ್ತು ಮನೆ ತುಂಬಿಸಿಕೊಳ್ಳಿರಿ ಎಂದು ವಧುವಿನ ಮನೆಯವರು ವಧುವನ್ನು ವರನ ಮನೆಯವರಿಗೊಪ್ಪಿಸುವುದೇ “ಗೃಹಪ್ರವೇಶ”
ಹೀಗೆ ವಧುವರರು ಒಬ್ಬರಿಗೊಬ್ಬರು ಸಾದನೆಯಲ್ಲಿ ಪೂರಕವಾಗಿರಲೆಂದು ಶಾಸ್ತ್ರೋಕ್ತವಾಗಿ ವಿವಾಹ ಸಂಸ್ಕಾರವನ್ನು ಮಾಡುತ್ತಾರೆ.

ದ್ಯೌಃ ಶಾಂತಿಃ ಅಂತರಿಕ್ಷಂ ಶಾಂತಿಃ
ಪ್ರಥಿವೀ ಶಾಂತಿರಾಪಃ ಶಾಂತಿಃ
ಔಷದಯಃ ಶಾಂತಿಃ ವನಸ್ಪತಿಯಃ ಶಾಂತಿಃ
ವಿಶ್ವದೇವಾಃ ಶಾಂತಿಃ
ಬ್ರಹ್ಮ ಶಾಂತಿಃ ಸರ್ವರಿ ಶಾಂತಿಃ
ಶಾಂತಿರೇವ ಶಾಂತಿಃ
ಓಂ ಶಾಂತಿಃ ಶಾಂತಿಃ ಶಾಂತಿಃ

ಎಂಬ ವೇದ ಘೋಷ ಹಾಗೂ ಶಾಂತಿಮಂತ್ರದೊಂದಿಗೆ ಶಾಸ್ತ್ರೋಕ್ತವಾದ ವೈದೀಕ ವಿವಾಹ ವಿಧಿಗಳು ಪೂರ್ಣವಾಗುತ್ತದೆ.
ಹಿಂದೂ ಧರ್ಮಶಾಸ್ತ್ರಗಳಲ್ಲಿ ಐದು ರೀತಿಯ ಆಚಾರಗಳಿವೆ. ವಿವಾಹ ವಿಧಿಯ ಆಚರಣೆಗಳು ಕಾಲಕ್ಕೆ ಹಾಗೂ ಜನರು ವಾಸಿಸುವ ಸ್ಥಳ ಪ್ರದೇಶಕ್ಕನುಸಾರವಗಿ ಬದಲಾವಣೆಯಾಗುತ್ತದೆ. ವಂಶಪಾರಂಪರ್ಯವಾಗಿ ಬಂದ ಪದ್ಧತಿಗನುಸಾರವಾಗಿ ವಿವಾಹ ಸಂಸ್ಕಾರದ ಕೆಲವು ವಿಧಿಗಳು ಹಿಂದೆ ಮುಂದೆ ಆಗುವುದುಂಟು. “ಅನ್ಹೀಕಸಾರ” ಎಂಬ ಗ್ರಂಥದಲ್ಲಿ ಶಾಸ್ತ್ರಚಾರ, ಕುಲಾಚಾರ, ದೇಶಾಚಾರ, ಗ್ರಾಮಾಚಾರ ಹಾಗೂ ರೂಢಾಚಾರಗಳ ಪೈಕಿ “ಶಾಸ್ತ್ರಾಚಾರ” ಧರ್ಮವೇ ಶ್ರೇಷ್ಟವಾಗಿದೆ ಎಂದು ಹೇಳಿದೆ. ಶಾಸ್ತ್ರಗಳಲ್ಲಿ ಹೇಳಿದ ಆಚರಣೆಗಳನ್ನು ಮಾಡುವುದರಿಂದ “ಆದ್ಯಾತ್ಮಿಕ” ಲಾಭವು ಹೆಚ್ಚಾಗಿ ಪ್ರಾಪ್ತಿಯಾಗುತ್ತದೆ. ಶಾಸ್ತ್ರಾಚಾರದ ಪ್ರಕಾರ ವಿವಾಹ ವಿಧಿಯಲ್ಲಿ ಅನುಸರಿಸಬೇಕಾದ ಹಾಗೂ ಅನುಸರಿಸಬಾರದ ಪದ್ಧತಿಯನ್ನು ಕೆಳಗೆ ಕೊಡಲಾಗಿದೆ.

  • ವರ ಧೋತಿ-ಶಲ್ಯ ವಧು ಒಂಬತ್ತು ಮೊಳದ ಸೀರೆಯನ್ನು ಉಡಬೇಕೆ ಹೊರತು ವರಪ್ಯಾಂಟ್ ಶರ್ಟ್ ಮತ್ತು ವಧು ಸೀರೆ ಉಡಬಾರದು.
  •  ಕರಿಮಣಿ, ಮಂಗಳಸೂತ್ರ ಹಾಗೂ ಅರಿಸಿನದ ಬೇರನ್ನು ಕನ್ಯಾದಾನದ ವಿಧಿಯ ನಂತರ ಕಟ್ಟಬೇಕೆ ಹೊರತು ಮೂಹೂರ್ತದ ಸಮಯದಲ್ಲಿ ಕಟ್ಟಬಾರದು.
  •  ವರ ಹಾಕಿಕೊಂಡ ಮುಂದಾಸು ಅಥವಾ ಪೇಟವನ್ನು ಗೃಹಪ್ರವೇಶ ಹೋಮದ ನಂತರವೇ ತೆಗೆದಿಡಬೇಕೆ ಹೊರತು ಮೂಹೂರ್ತದ ನಂತರ ತೆಗೆದು ಮತ್ತೆ ಮುಂದಿನ ವಿವಾಹ ವಿಧಿಯ ಸಮಯದಲ್ಲಿ ತೊಡಬಾರದು.
  •  ಕನ್ಯಾದಾನ ವಿಧಿಯನ್ನು ವಿವಾಹ ಮೂಹೂರ್ತದ ನಂತರ ಆರಂಭಿಸಬೇಕೇ ಹಾಗೂ ಕನ್ಯಾಧಾನ ಮಾಡುವಾಗ ಮೊದಲು ವಧುವಿನ ಕೈ, ಅದರ ಮೇಲೆ ವರನ ಕೈ, ಅನಂತರ ಕನ್ಯಾದಾನ ಮಾಡುವವರ ಕೈಯನ್ನು ಇಡಬೇಕು.
  •  ಕನ್ಯಾದಾನದ ನಂತರ ವಧುವರರು ಪರಸ್ಪರ ಹಾರ ಬದಲಾಯಿಸಬೇಕೆ ಹೊರತು ವಿವಾಹ ಮೂಹೂರ್ತದ ನಂತರ ಹಾಕಬಾರದು ಶಾರೀರಿಕ ಸಂಬಂಧವನ್ನು ಗರ್ಭದಾನದ ಸಂಸ್ಕಾರವನ್ನು ಮಾಡಿದ ಮೇಲೆ ನಡೆಸಬೇಕೆ ಹೊರತು ವಿವಾಹದ ರಾತ್ರಿಯೇ ಇಡಬಾರದು.
  •  ವಧುವರರು ಪರಸ್ಪರ ಪುಷ್ಪಗುಚ್ಚವನ್ನು ಕೊಡಬಾರದು. ಇದು ಪಾಶ್ಚತ್ಯರ ಪದ್ಧತಿಯಾಗಿದೆ.

ಬ್ರಾಹ್ಮಣ ಹಾಗೂ ವೈಶ್ಯ ಸಂಪ್ರದಾಯದಲ್ಲಿ ಜೀರಿಗೆ ಬೆಲ್ಲದ ಕಾರ್ಯಕ್ರಮಕ್ಕಿಂತ ಮುಂಚೆ ಕಾಶಿಯಾತ್ರೆಯನ್ನು ಆಚರಿಸುವ ಪದ್ಧತಿಯಿದೆ. ಇದೊಂದು ರೀತಿಯ ನಾಟಕೀಯ ಪ್ರಸಂಗವಾಗಿದ್ದು ಕಾಶೀಯಾತ್ರೆಗೆ ಹೋಗುವೆನೆಂದು ಹೊರಟುನಿಂತ ವರನಿಗೆ ವಧುವಿನ ತಂದೆ ತಾಯಿ ಕಾಲು ತೊಳೆದು ಈಗಲೇ ಒಬ್ಬನೇ ಕಾಶಿಯಾತ್ರೆಗೆ ಹೋಗಬಾರದೆಂದು, ಮದುವೆಯ ನಂತರ ನಾನೇ ನಿಮ್ಮಿಬ್ಬರನ್ನು ಕಾಶೀಯಾತ್ರೆಗೆ ಕಳಿಸುವೆನೆಂದು ಹೇಳಿದಾಗ ವರ ಹಾಗೆಯೇ ಆಗಲಿ ಎಂದು ಮದುವೆಗೆ ಒಪ್ಪಿಕೊಳ್ಳುವ ಸಂಪ್ರದಾಯ ಇಲ್ಲಿ ಕಾಶೀಯಾತ್ರೆಯ ಸಂದರ್ಭದಲ್ಲಿ ವರನಿಗೆ ಚತ್ರ ಚಾಮರಗಳನ್ನು ಅರ್ಪಿಸಿ ಬೆಳ್ಳಿಯ ಉಡುಗೊರೆಯನ್ನು ಕೊಟ್ಟು ವರನನ್ನು ಮದುವೆ ಮಂಟಪಕ್ಕೆ ಕರೆತರುವ ಸನ್ನಿವೇಶವನ್ನು ಆಚರಿಸಿ ವಧುವರನ ಮನೆಯವರು ಸಂಭ್ರಮಿಸುತ್ತಾರೆ. ಇದಾದ ನಂತರ ಜೀರಿಗೆ ಬೆಲ್ಲದ ವಿಧಿಯಿಂದ ವಿವಾಹ ಸಂಸ್ಕಾರಗಳು ಆರಂಭವಾಗುತ್ತದೆ.
ಅಲ್ಲದೆ ವಧುವರರು ಮೊದಲಬಾರಿ ಒಟ್ಟಿಗೆ ಊಟಕ್ಕೆ ಕುಳಿತುಕೊಳ್ಳುವುದನ್ನು “ಭೂಮದೂಟ” ಎಂದು ಕರೆಯುತ್ತಾರೆ. ಇಲ್ಲಿ ಐದು ಬಾಳೆ ಎಲೆಗಳನ್ನು ಒಟ್ಟಿಗೆ ಜೋಡಿಸಿ ಅದರ ಸುತ್ತಲೂ ಸುಂದರ ಬಣ್ಣಬಣ್ಣದ ರಂಗೋಲಿಗಳನ್ನು ಹಾಕಿ ಎಲೆಯ ತುಂಬಾ ಭೂರಿಬೋಜನವನ್ನು ಪಂಚಭಕ್ಷ್ಯ ಪರಮಾನ್ನಗಳನ್ನು ಬಡಿಸಿ ವಧುವರರನ್ನು ಒಟ್ಟಿಗೆ ಕೂಡಿಸಿ, ವಧುವರರು ಊಟಮಾಡುವುದನ್ನು ನೋಡಿ ಸಂಭ್ರಮಿಸುತ್ತಾರೆ.
ಹಿಂದಿನವರು ನಡೆಸಿಕೊಂಡು ಬಂದ ಕೆಲ ವಿಧಿ ವಿಧಾನಗಳು ಸಂಪ್ರದಾಯಗಳಿಗೆ ಅದರದೇ ಆದ ಅರ್ಥವಿದೆ. ಧಾರ್ಮಿಕ ವೈದೀಕ ಪದ್ಧತಿಯಂತೆ ನಡೆದ ವಿವಾಹಗಳು ಶಾಶ್ವತವಾಗಿ ನಿಲ್ಲುತ್ತದೆ ಎಂದು ಹಿಂದಿನವರು ನಂಬಿದ್ದರು. ಅದು ಎಲ್ಲ ಕಾಲಕ್ಕೂ ಪ್ರಸ್ತುತ. ವೈದೀಕ ಪದ್ಧತಿಯ ಆಚಾರಗಳು ಮೂಲಭೂತ ಅಂಶಗಳನ್ನು ಸಮೀಕರಿಸಿಕೊಂಡಿರುತ್ತದೆ. ಆದ್ದರಿಂದ ಹಿಂದೂ ಧರ್ಮದ ಆಚರಣೆಗಳಲ್ಲಿ ಪ್ರತಿಯೊಂದು ವಿಷಯವನ್ನು ಸಮುಷ್ಟಿಕಾರ್ಯದ ಮಹತ್ವವನ್ನು ಅರಿತುಕೊಂಡೆ ಹೇಳಲಾಗಿದೆ.
ಧಾರ್ಮಿಕ ಪದ್ಧತಿಯಂತೆ ವಿವಾಹವನ್ನು ಆಚರಿಸುವುದಿದ್ದರೆ, ದೇವಸ್ಥಾನದಲ್ಲಿ ಅಥವಾ ದೇವರ ಸಾನಿಧ್ಯದಲ್ಲಿ ಆಚರಿಸಿದರೆ ವಧುವರರಿಗೆ ದೇವಸ್ಥಾನದ ಚೈತನ್ಯಲಾಭವು ಸಿಗುತ್ತದೆ. ಅಲ್ಲದೇ ವಿವಾಹದ ಸಾತ್ವಿಕಥೆಯೂ ಉಳಿಯುತ್ತದೆ.

ಪ್ರಕಾಶ್ ಕೆ ನಾಡಿಗ್.ಶಿವಮೊಗ್ಗ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top