fbpx
god

ಮಾಂಗಿ ತುಂಗಿ ಜೈನರ ಪವಿತ್ರ ಸಿದ್ಧಕ್ಷೇತ್ರ

ಜೈನರ ಪವಿತ್ರ ಸಿದ್ಧಕ್ಷೇತ್ರಗಳಲ್ಲಿ ಮಾಂಗಿ ತುಂಗಿ ಸಿದ್ಧ ಕ್ಷೇತ್ರವೂ ತನ್ನದೇ ಆದ ಹಿರಿಮೆಯನ್ನು ಹೊಂದಿದೆ. ಮಾಂಗಿ ಮತ್ತು ತುಂಗಿ ಎಂಬ ಎರಡು ಹಳ್ಳಿಗಳ ಮದ್ಯೆ ಇರುವ ಈ ಪರ್ವತವನ್ನು ಅದೇ ಹಳ್ಳಿಗಳ ಹೆಸರಿನಿಂದ ಕರೆಯಲಾಗುತ್ತದೆ. ಹಿಂದಿನಿಂದಲೂ ರಾಮ, ಸುಗ್ರೀವ , ಬಲರಾಮಆದಿಯಾಗಿ ಅನೇಕ ಭವ್ಯಾತ್ಮಗಳು ಮೋಕ್ಷವನ್ನು ಪಡೆದ ಪವಿತ್ರ ಸ್ತಳವಾಗಿದೆ. ದಕ್ಷಿಣದ ಸಮ್ಮೇದ ಶಿಖರ ಎನ್ನುತ್ತಾರೆ.

1958fcf5-04e9-4179-857d-35c8eb186710 feb7a695-193d-452d-aa31-59a2b1e995d3
ಇಂದಿನಿಂದ ಸುಮಾರು 7ಲಕ್ಷ ವರ್ಷಗಳಷ್ಟು ಹಿಂದೆ, 20ನೆ ತೀರ್ಥಂಕರ ಭಗವಾನ್ ಮುನಿಸುವ್ರತ ಸ್ವಾಮಿಯ ತೀರ್ಥ ಕಾಲದಲ್ಲಿ, ಆಗಿನ ಬಲಭದ್ರನಾಗಿ ಮರ್ಯಾದ ಪುರುಷೋತ್ತಮ ಶ್ರೀ ರಾಮಚಂದ್ರನು, ಪಾವನ ತೀರ್ಥ ಕ್ಷೇತ್ರವಾದ ಅಯೋದ್ಯೆಯಲ್ಲಿ ಜನ್ಮ ತಳೆದು, ಸಂಸಾರದಲ್ಲಿ ಆದರ್ಶವನ್ನು ಉಪಸ್ತಿತಿಗೊಳಿಸಿ, 1000ವರ್ಷಗಳ ತನ್ನ ಆಯುವಿನ ಅಂತಿಮ ಸಮಯದಲ್ಲಿ ದಿಗಂಬರ ಮುನಿದೀಕ್ಷೆ ಧಾರಣೆ ಮಾಡಿ ವಿಹಾರವನ್ನು ಮಾಡುತ್ತಾ , ದಕ್ಷಿಣ ಮಧ್ಯ ಭಾರತದಲ್ಲಿರುವ ತುಂಗಿಗಿರಿಯಲ್ಲಿ ಕಠಿಣ ತಪಸ್ಸನ್ನು ಮಾಡಿ ತನ್ನ ಆತ್ಮದ ಶಾಶ್ವತ ನೆಲೆ , “ಮೋಕ್ಷ” ವನ್ನು ಪಡೆದು ಸಿದ್ದಾತ್ಮನಾಗುತ್ತಾನೆ.ಅವನ ಜೊತೆಗೆ ಹನುಮಂತ , ಸುಗ್ರೀವ , ಸುಡೀಲ, ಗವ , ಗವಾಕ್ಷ , ನೀಲ, ಮಹಾನೀಲ ಮೊದಲಾದವರು ದಿಗಂಬರ ಮುನಿದೀಕ್ಷೆ ಧಾರಣೆ ಮಾಡಿ ಈ ಪರ್ವತದಲ್ಲಿ ಮೋಕ್ಷವನ್ನು ಪಡೆಯುತ್ತಾರೆ.ಸೀತೆ ಕೂಡ ಇದೆ ಪರ್ವತದಲ್ಲಿ ಆರ್ಯಿಕೆ ದೀಕ್ಷೆ ಪಡೆದು ತಪಸ್ಸನ್ನಾಚರಿಸುತ್ತಾಳೆ. ಹಾಗೆಯೇ ಶ್ರೀ ರಾಮನ ಸೇನಾಪತಿ ಕ್ರುತಂತ್ವಕ್ರನು ಮುನಿ ದೀಕ್ಷೆ ಪಡೆಯುತ್ತಾನೆ.ಇಂದಿಗೂ ತುಂಗಿ ಗಿರಿ ಪರ್ವತದಲ್ಲಿ ಇವರೆಲ್ಲರ ಜಿನಬಿಂಬಗಳಿವೆ.

0d808a0c-34ff-4531-b551-bab51ff24fef 4928a4b3-253e-473a-81f6-c5b3a68545c4
ಹಾಗೆಯೇ 22 ನೆಯ ತೀರ್ಥಂಕರ ಭಗವಾನ್ ನೇಮಿನಾಥ ಸ್ವಾಮಿಯ ತೀರ್ಥಕಾಲದಲ್ಲಿ ಆಗಿನ ಬಲಭದ್ರನಾಗಿದ್ದ ಬಲರಾಮ ಹಾಗು ನಾರಾಯಣನಾಗಿದ್ದ ಶ್ರೀಕೃಷ್ಣ ತಮ್ಮ ಅಂತಿಮ ದಿನಗಳನ್ನು ಈ ಪರ್ವತದಲ್ಲಿ ಕಳೆದರು.ಕೃಷ್ಣನು ಈ ಮಾಂಗಿ ಗಿರಿ ಪರ್ವತದಲ್ಲಿ ಪ್ರಾಣವನ್ನು ಬಿಟ್ಟಾಗ, ಬಲರಾಮನು ಜೀವನದ ನಿಸ್ಸಾರತೆಯನ್ನು ಅರಿತು ದಿಗಂಬರ ದೀಕ್ಷೆ ಸ್ವೀಕರಿಸಿ 5 ನೆ ಸ್ವರ್ಗಕ್ಕೆ ಹೋಗುತ್ತಾನೆ.ಕಾಮದೇವನಾಗಿದ್ದ ಬಲರಾಮನು ತಪಸ್ಸನಾಚರಿಸುವ ಸಂಧರ್ಭದಲ್ಲಿ ಆಹಾರಕ್ಕೆಂದು ಹೊರಟಾಗ ಸ್ರೀಯರು ಅವನಿಂದ ಆಕರ್ಷಿತರಾಗುತ್ತಿದ್ದರು. ಇದನ್ನರಿತ ಬಲರಾಮನು ಬೆನ್ನು ತಿರುಗಿಸಿ ಕುಳಿತು ತಪಸ್ಸನ್ನು ಮಾಡುತ್ತಾನೆ. ಈಗಲೂ ಅಲ್ಲಿ ಇದರ ದ್ಯೋತಕವಾಗಿ ಬೆನ್ನು ಮಾಡಿ ಕುಳಿತಿರುವ ಬಿಂಬವಿದೆ.ಹಾಗೆಯೇ ಕೃಷ್ಣನ ಸಮಾಧಿಯೂ ,ಕೃಷ್ಣ ಕುಂಡವೂ ಇದೆ. ಅಷ್ಟೇ ಅಲ್ಲದೆ 99 ಕೋಟಿ ಮುನಿಗಳು ಮೋಕ್ಷ ಪಡೆದ ಪವಿತ್ರ ಕ್ಷೇತ್ರವಾಗಿದೆ.

2830fc20-d249-483a-a535-3d3f9dbafbe8 63022ed1-fa37-4d5c-a446-0a007e53421c
ಸಮುದ್ರ ಮಟ್ಟದಿಂದ 4500 ಅಡಿಗಳಷ್ಟು ಎತ್ತರವಿರುವ ಈ ಪರ್ವತದಲ್ಲಿ ಸಾವಿರಾರು ವರ್ಷಗಳ ಹಿಂದಿನ ಕಲ್ಲಿನಿಂದ ಕೆತ್ತಿದ ಜಿನಬಿಂಬಗಳು ಹಾಗು ಶಾಸನ ದೇವತೆಗಳ ಶಿಲ್ಪಗಳಿವೆ.ಈ ಪರ್ವತವನ್ನು ಏರಬೇಕಾದರೆ 3500 ಕ್ಕಿಂತಲೂ ಅಧಿಕ ಮೆಟ್ಟಿಲುಗಳನ್ನು ಹತ್ತಬೇಕಾಗುತ್ತದೆ. ಹಾಗೆಯೇ ಪರ್ವತದ ಬುಡದಲ್ಲಿಯೂ ಅನೇಕ ಬಸದಿಗಳಿವೆ. ಇವುಗಳಿಗೆಲ್ಲ ಗರಿ ಎಂಬಂತೆ ಗಣನೀ ಆರ್ಯಿಕ ೧೦೫ ಜ್ನಾನಮತಿ ಮಾತಾಜಿಯವರ ಪ್ರೇರಣೆಯಿಂದ, ಜಗತ್ತಿಗೆ ಅಸಿ,ಮಸಿ,ಕೃಷಿ,ವಿದ್ಯೆ, ವಾಣಿಜ್ಯ,ಶಿಲ್ಪ ಕಲಿಸಿಕೊಟ್ಟ ವರ್ತಮಾನದ ಪ್ರಥಮ ತೀರ್ಥಂಕರರಾದ ಭಗವಾನ್ ಆದಿನಾಥ ಸ್ವಾಮಿಯ ,ವಿಶ್ವದಲ್ಲೇ ಅತೀ ಉನ್ನತ , 108 ಅಡಿ ಎತ್ತರವುಳ್ಳ ಏಕಶಿಲಾ ಜಿನಬಿಂಬವನ್ನು ಪ್ರತಿಷ್ಟಾಪಿಸಲಾಗಿದೆ. ಪುರಾತನವಾದ ಶ್ರವಣಬೆಳಗೊಳದ ಬಾಹುಬಲಿಯ ಬಿಂಬವು 57 ಅಡಿ ಎತ್ತರವಾದರೆ ಇದು ಅದಕ್ಕಿಂತ ದ್ವಿಗುಣವಾಗಿದೆ. . ಈ ಸಿದ್ಧ ಕ್ಷೇತ್ರವು ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಸಟಾಣ ತಾಲೂಕಿನಲ್ಲಿದೆ. ನಾಸಿಕ್ ನಿಂದ 120 ಕಿ.ಮೀ.,ಮನ್ಮಾಡ್ ನಿಂದ ೧೦೦ ಕಿಮೀ.. ಮಾಲೆಗಾವ್ ನಿಂದ 60 ಕಿ.ಮೀ. ಸಟಾಣ ದಿಂದ 30 ಕಿ.ಮೀ. ದೂರದಲ್ಲಿದೆ.
🙏🙏🙏

 

36d0bf2d-98af-4b78-9857-9875b2fba675 23f6225d-d03d-4fca-b591-017a5a4d4631

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top