fbpx
god

ನೋಡಬನ್ನಿ ಮಂಗಳಮ್ಮನ ಶರನ್ನ‌ವರಾತ್ರಿ ವೈಭವ ॐ

ಓಂ ಜಯದೇವಿ ನಮಸ್ತುಭ್ಯಂ ಜಯ ಭಕ್ತ ವರಪ್ರಸದೇ |
ಜಯಶಂಕರ ವಾಮಾಂಗಿ | ಮಂಗಳೇ ಸರ್ವ ಮಂಗಳೇ || 

( ಸಂಕಲ್ಪಪೂರ್ಣ ನಿಷ್ಕಲ್ಮಶ ಭಕ್ತಿಯೊಂದಿಗೆ ಪ್ರಾರ್ಥಿಸುವಲ್ಲಿ ,ಪ್ರಸನ್ನಳಾಗಿ ಸಕಲ ಸನ್ಮಂಗಳ ವರಗಳನ್ನು ಶೀಘ್ರ ಮಾತ್ರದಲ್ಲೇ ಕರುಣೆಸಿ ಸದ್ಭಕ್ತರ ಪಾಲಿಗೆ ಜಯ ಪ್ರದಳಾಗಿರುವ , ಶಿವನ ಹೃದಯದ ವಾಮಭಾಗದಲ್ಲಿ ಸದಾನೆಲೆಸಿರುವ ಸರ್ವಮಂಗಳೆಯೇ ನಿನಗೆ ನಮಸ್ಕಾರಗಳು….)

devi

ವಿಜಯದಶಮಿಯ ಸಹಿತ ಈ ಬಾರಿ ಹನ್ನೆರಡು ದಿನಗಳ ಪರ್ಯಂತ ಬಹು ವಿಜೃಂಭಣೆಯಿಂದ ನಡೆಯುವ
ಶ್ರೀ ಮಂಗಳಾದೇವಿಯ ಶರನ್ನವರಾತ್ರಿ ಮಹೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದೆ…
ಇನ್ನೇನು ! ಕೆಲವೇ ಗಂಟೆಗಳ ಸಮಯವು ಕಳೆಯುತ್ತಲೇ ಆಶ್ವಯುಜ ಮಾಸಕ್ಕೆ, ನಮ್ಮ ನಾಡ ಹಬ್ಬ ದಸರೆ ಶರನ್ನವರಾತ್ರಿಯ ಸಂಭ್ರಮ ಮಂಗಳೂರಿನಾದ್ಯಂತ ಆವರಿಸಲಿದೆ. ನಮ್ಮೂರ ಮಂಗಳಾಂಬಿಕೆಯ ನವರಾತ್ರಿ ವೈಭವದ ಸಂಪೂರ್ಣ ಹಿನ್ನೆಲೆಯೇ ಸಾಹಿತ್ಯಪೂರ್ಣವಾದ ಈ ಪ್ರಸ್ತುತ ಲೇಖನ ✍.

ದಕ್ಷಿಣ ಕನ್ನಡದ ನೇತ್ರಾವತಿ ಹಾಗು ಫಲ್ಗುಣೆ ನದಿಗಳಿಂದ ಸುತ್ತುವರಿದು ಅವುಗಳೆರಡರ ಸಂಗಮ ಸ್ಥಳದಲ್ಲಿ ಭೋರ್ಗರೆವ ಕಡಲಿಗೆದುರಾಗಿ ಸಹ್ಯಾದ್ರಿಯ ತಪ್ಪಲಲ್ಲಿ ಮೈಚಾಚಿರುವ , ಸುವಿಶಾಲವಾದ ಭೂ ಭಾಗವೇ ಭಾರ್ಗವ ರಾಮರಿಂದ ಸೃಷ್ಟಿಸಲೊಳ್ಪಟ ಸಿದ್ಧಿಕ್ಷೇತ್ರ ಮಂಗಳೆಯ ನಗರಿ “ಮಂಗಳಾಪುರ”.

ನೇತ್ರಾವತಿ ಹರಿಯುವಿಕೆಯ ಪಾತ್ರದುದ್ದಕ್ಕೂ ಸದಾಕಾಲ ವನರಾಶಿಯ ಅಚ್ಚಹಸಿರು ಮೈದುಂಬಿ ಸುಭೀಕ್ಷೆ, ಶಾಂತಿ ನೆಲೆಯೂರಿದ ನಮ್ಮ ಮಂಗಳೂರು ಇಂದು #ಸ್ಮಾರ್ಟ್_ಸಿಟಿ ‘ ಎಂಬ ಅಭಿಧಾನದೊಂದಿಗೆ ಸ್ವರ್ಗ ಸದೃಶವಾಗಿ ಬೆಳೆದು ನಿಂತಿರುವುದು ಇಲ್ಲಿನ ಅಧಿದೇವತೆ ಶ್ರೀ ಮಂಗಳಾದೇವಿ ಅಮ್ಮನ ಕೃಪೆಯಿಂದ. ಸದಾಕಾಲ ಆಕೆಯ ಮಡಿಲಿನಲ್ಲಿ ಸುಂದರ ಬಾಳನ್ನು ನಡೆಸುತ್ತಿರುವ ನಮಗೆಲ್ಲರಿಗೂ ಸನ್ಮಂಗಳ ದಾಯಿನಿಯಾಗಿ ವಾತ್ಸಲ್ಯದಿಂದ ಅನುಗ್ರಹಿಸಿ, ಮೆರೆಯತಕ್ಕಂತಹ ತಾಯಿ ಮಂಗಳಾಂಬಿಕೆಗೆ ನಾಳಿನಿಂದ ಶರನ್ನವರಾತ್ರಿಯ ಸಂಭ್ರಮ.

ಇದು ನವರಾತ್ರಿಯ ಉತ್ಸವದ ಸಮಯ. ಬಿಂಬ ರೂಪಿಣೆಯು ತನ್ನ ನವಶಕ್ತಿಯ ವಿವಿಧ ರೂಪಗಳಲ್ಲಿ ಆವಿರ್ಭವಿಸಿ, ಅಲಂಕಾರದ ಮುಖೇನ ಪ್ರಕಟಳಾಗುವ ಪುಣ್ಯಕಾಲ..ಸಮಸ್ತ ಚರಾಚರ ಜೀವರಾಶಿಯೂ ಉಲ್ಲಸಿತವಾಗಿರುವ ಶರತ್ಕಾಲ ಇದುವೇ ಸರ್ವಮಂಗಳೆಯ ಆರಾಧನೆಗೆ ಪ್ರಶಸ್ತವಾದ ಶರನ್ನವರಾತ್ರಿಯ ಪರ್ವಕಾಲ. ಶರದ್ರುತುವಿನ ಆಶ್ವಯುಜಮಾಸದ ಶುಕ್ಲಪಕ್ಷದ ಪ್ರಥಮದಿಂದ ಆರಂಭಿಸಿ ನವಮಿಯ ವರೆಗಿನ ಕಾಲವೇ ‘ನವರಾತ್ರಿ’. ದುರ್ಗಾ ಸಪ್ತಶತಿ ಯಲ್ಲಿನ “ಶರತ್ಕಾಲೆ ಮಹಾಪೂಜ ಕೃಯತೇಯಾಚ ವಾರ್ಷಿಕಿ” ಎಂಬ ಸಂಸ್ಕೃತದ ದುರ್ಗಾ ವಚನದಂತೆ ಶರನ್ನವರಾತ್ರಿಯ ಆರಾಧನೆ ಆಕೆಗೆ ಅತ್ಯಂತ ಪ್ರಿಯಾತೀತವಾದುದು. ಹೆಸರೇ ಸೂಚಿಸುವಂತೆ ನವರಾತ್ರಿಎಂಬ ಪದದ ತಾತ್ಪರ್ಯ ‘ಒಂಭತ್ತು ರಾತ್ರಿಗಳು’ ಇಲ್ಲಿ ರಾತ್ರಿಯೆಂದರೆ ‘ಕತ್ತಲು, ತಮಸ್ಸು’ ಎಂಬುವುದು ಅರ್ಥವಲ್ಲ, ಹೊರತಾಗಿ ಅಂಧಕಾರವನ್ನು ತೊಡೆದು, ಸುಜ್ಞಾನದ ಉಜ್ವಲ ಪ್ರಭೆಯನ್ನು ಪ್ರಜ್ವಲಿಸುವ ದುರ್ಗೆ ಎಂದರ್ಥ.

ಐತಿಹಾಸಿಕವಾಗಿ ವರ್ಷಂಪ್ರತಿ ನಡೆದು ಬಂದಿರುವಂತೆ ಈ ಬಾರಿಯ ನವರಾತ್ರಿ ಮಹೋತ್ಸವವು ನಾಳಿನ ಪಾಡ್ಯದಿಂದ ಆರಂಭಗೊಂಡು ಮುಂದಿನ ಏಕಾದಶಿಯವರೆಗೂ ಅತ್ಯಂತ ಅದ್ಧೂರಿಯಿಂದ ನಡೆಯಲಿದೆ. ಈ ನವ ಸುದಿನಗಳಲ್ಲೂ ಮಾತೆಯ ಪೂಜಾ-ವಿಧಿವಿಧಾನಗಳು, ಧಾರ್ಮಿಕ ಹಾಗೂ ಸಾಂಸ್ಕೃತಿಕ ಸಭಾ ಕಾರ್ಯಕ್ರಮಗಳು ಅತ್ಯುನ್ನತ ರೀತಿಯಲ್ಲಿ ನಡೆಯಲಿರುವುದು.

ವಿಶೇಷವೇನೆಂದರೆ ಕಳೆದ ಬಾರಿಯಂತೆ ಈ ಬಾರಿಯೂ ನವರಾತ್ರಿ ಮಹೋತ್ಸವಕ್ಕೆ ಒಂದು ದಿನವೂ ಹೆಚ್ಚಾಗಿ ಬಂದಿದೆ. ಕಾರಣ ಒಂದು ಹೆಚ್ಚಿನ ‘ಪಾಡ್ಯ ತಿಥಿಯ ವೃದ್ಧಿ’. ಪಾಡ್ಯ ತಿಥಿಯು ವೃದ್ಧಿಯಾಗಿರುವುದು ನವರಾತ್ರಿ ಉತ್ಸವದ ವಿಜಯದಶಮಿಯು ಹನ್ನೊಂದು ದಿನಕ್ಕೆ ವಿಸ್ತರಣೆಯಾಗಲು ಪ್ರಮುಖ ಕಾರಣ. ಹೀಗಾಗಿ ಅಕ್ಟೋಬರ 2 ಹಾಗೂ 3’ರಂದು ಪಾಡ್ಯ ದ್ವಿತೀಯ ಬಂದಿರುವುದರಿಂದ ಎರಡೂ ದಿನಗಳನ್ನು ಒಂದೇ ದಿನಗಳೆಂದು ಪರಿಗಣಿಸಲಾಗಿದೆ. ಇದರೊಂದಿಗೆ ನವರಾತ್ರಿಯ ಸಿರಿಸೊಬಗು ಏಕಾದಶಿಯನ್ನೂ ಸೇರಿಸಿ ಒಟ್ಟು ಹನ್ನೆರಡು ದಿನಗಳ ಪರ್ಯಂತ ಮೂಡಿಬರಲಿದೆ…😄

ಈ ಬಾರಿಯ ಪಂಚಾಗದನ್ವಯ ದುರ್ಮುಖೀ ನಾಮಸಂವತ್ಸರದ ಆಶ್ವಯುಜ ಮಾಸದ ಪಾಡ್ಯದ ಶನಿವಾರದಿಂದ ಮೊದಲ್ಗೊಂಡು ಮುಂದಿನ ಏಕಾದಶಿಯ ಬುಧವಾರದ ವರೆಗೆ ನಡೆಯಲಿಡದೆ. ದೇವಾಲಯದ ಸಂಪೂರ್ಣ ದೇವಿಯ ಆವಾಸ ಸ್ಥಾನ ನವವಧುವಿನಂತೆ ತೋರಬರಲಿದ್ದು ವಿವಿಧ ವಿನ್ಯಾಸದ ಪ್ರಜ್ವಲಿಸುವ ವಿದ್ಯುದ್ದೀಪಗಳ ಸರಮಾಲೆಯಿಂದ ಸಂಪೂರ್ಣ ದೇವಳವೇ ಜಾಜ್ವಾಲಮಾನವಾಗಿ ಬೆಳಗತ್ತದೆ. ಇಂತೆ ಪೂರ್ತಿ ಕಣ್ಣು ಕೋರೈಸುವಂತಹ ವಿದ್ಯುದ್ದೀಪಾಲಂಕಾರದೊಂದಿಗೆ ಝಗಮಗಿಸುತ್ತಿರುವ, ವಿಭಿನ್ನ ತರು-ಪುಷ್ಪಲತೆಗಳ ಕೂಡಣ ಸಿಯೂಳಾದಿಗಳ ತೋರಣದ ಮೂಲಕ ಶೃಂಗಾಲಂಕೃತಗೊಂಡಿರುವ ತಾಯಿಯ ಸನ್ನಿದ್ಧಿ. ಗರ್ಭಗುಡಿಯಲ್ಲಿ ಶಿವಶಕ್ತಿ ಬಿಂಬ(ಲಿಂಗ) ಸ್ವರೂಪಿಣಯಾದ ಶ್ರಿ ದೇವಿಯು ಚತುರ್ಭುಜೆಯಾಗಿ, ಸರ್ವಾಭರಣ ಪರಿಶೋಭಿತಳಾಗಿ ಸರ್ವಾಯುಧ ಧಾರಿಣಿಯಾಗಿ…ಅಭಯಹಸ್ತ-ಸರ್ವ ವರಪ್ರದ ಮುದ್ರಾ ಹಸ್ತೆಯಾಗಿ ,ಸಿಂಹಾಸನಸ್ಥಿತೆಯಾಗಿ ವಿರಾಜಮಾನಳಾಗುವ ನಮ್ಮ ಪ್ರೀತಿಯ ಮಂಗಳಾಂಬಿಕೆಯನ್ನು ನೋಡುವುದೇಯೊಂದು ಚೆಂದ😜

ನವರಾತ್ರಿಯ ಪುಣ್ಯಕಾಲದಲ್ಲಿ ಮಂಗಳಾಂಭೆಯು ಬಹುಬೇಗ ಪ್ರಸನ್ನಳಾಗುವಳು. ‘ತ್ರಾಸಬದ್ಧ ವೇದಮಂತ್ರ ಸ್ತೊತ್ರಾದಿಗಳನ್ನು ಪಠಿಸಿಯಾಗಲೀ ,ಸ್ವರ್ಣಧನಕನಕಾದಿ ಕೊಡುಗೆಯ ಆಡಂಬರಗಳಿಗಾಗಲೀ, ಪುಷ್ಪ ರಾಶಿಗಳ ಅರ್ಪಣೆಗಾಗಲೀ ‘ ಇವುಗಳಿಗೆಲ್ಲಕ್ಕಿಂತ ಮೇಲ್ಪಟ್ಟ ಅಂತರಂಗದ ಭಕ್ತಿಯೊಂದಿಗೆ ಪ್ರಾರ್ಥಿಸಿಕೊಂಡಾಗ , ಆ ಭಕ್ತಿಯ ಮೊರೆಗೆ ಓಗೊಟ್ಟು ಒಲಿದು ಉತ್ತರೋತ್ತರ ಅಭಿವೃದ್ಧಿಯನ್ನ ಶಾಶ್ವತವಾಗಿರುವಂತೆ ಅನುಗ್ರಹಿಸಿ ಸಲಹುವ ತಾಯಿಯು ತನ್ನ ಅರಸಿ ಬಂದ ಸರ್ವರನ್ನೂ ಹರಸಿ ಸಕಲ ಸಿದ್ಧಿ-ಶುಭಫಲಾದಿಗಳನ್ನು ಕರುಣಿಸುವಳು. ಇದರಲ್ಲಿ ಎರಡು ಮಾತಿಲ್ಲ…☺

ನವರಾತ್ರಿಯ ಸಂದರ್ಭದಲ್ಲಿ ಒಂಭತ್ತು ತಿಥಿಗಳಂದು ನವಶಕ್ತಿ ಸ್ವರೂಪಗಳಲ್ಲಿ ಶ್ರೀ ದೇವಿಯನ್ನು ವಿಪ್ರವೃಂದದವರು ಅತ್ಯಂತ ನಯನ ಮನೋಹರಕರವಾಗಿ ಅಲಂಕರಿಸುವ ಸಂಪ್ರದಾಯ ದೇವಳದಲ್ಲಿ ಕಂಡುಬರುತ್ತದೆ. ಇದೊಂದು ನಮ್ಮೆಲ್ಲರ ಪಾಲಿಗೆ ಪ್ರಾಪ್ತವಾಗುವ ಉಪಮಾತೀತ ದೃಶ್ಯ. ದೇವಿಯ ಅಲಂಕಾರವನ್ನು ಕಣ್ತುಂಬಿಕೊಳ್ಳುವ ಅಪೂರ್ವ ಕ್ಷಣ. ದೇವಿಯ ಪ್ರತಿಯೊಂದು ಅಲಂಕಾರಕ್ಕೂ ತನ್ನದೇಯಾದ ವೈಶಿಷ್ಟ್ಯವಿದೆ. ವರ್ಣ ವೈಭವವಿದೆ. ಅಲಂಕಾರದೊಂದಿಗೆ ಮಂಗಳೆಯ ಲೀಲೆಯನ್ನು ಕಾಣಲು, ಕಂಡು ಅನುಭವಿಸಲು ಹೊರಗಣ್ಣು ಮಾತ್ರಸಾಲದು, ‘ಭಕ್ತಿ’ಯೆಂಬ ಒಳಗಣ್ಣೂ ಕೂಡ. ಅರ್ಥಾತ್ ದೇವಿಯ ವೈಭವವನ್ನ ಪರಿವೀಕ್ಷಿಸಿ ಹರ್ಷಿಸುವ ಮನೋಭಾವವೂ ಕೂಡ. ಸಾಮಾನ್ಯವಾಗಿಯಿಲ್ಲಿ ‘ಮಂಗಳಾದೇವಿಯ’ ಅಲಂಕಾರವೇ ಪ್ರಧಾನ. ಆದರೆ ನವರಾತ್ರಿಯಂದು ಅಮವಾಸ್ಯೆಯ ಮಾರನೇ ದಿನ, ಎಂದರೆ ನಾಳಿನ ಪಾಡ್ಯದಿಂದ ಆರಂಭಿಸಿ ನವಮಿಯವರೆಗೆ ದಿನಕ್ಕೊಂದರಂತೆ ದೇವಿಯ ಅಂಶಗಳನ್ನು ಪೂಜಿಸಲಾಗುತ್ತದೆ. ನವರಾತ್ರಿಯಲ್ಲಿ ಕಲ್ಪೋಕ್ತವಾಗಿ ದೇವಿಯನ್ನು ಪೂಜಿಸಲ್ಪಡುವ ನವದುರ್ಗಾ ಪೂಜಾಕಲ್ಪದಲ್ಲಿ ಈ ಶ್ಲೋಕವಿದೆ.

ಓಂ ದುರ್ಗಾ ತ್ವಾರ್ಯಾ ಭಗವತೀ ಕುಮಾರೀ ಅಂಬಿಕಾ ತಥಾ । ಮಹಿಷೋನ್ಮರ್ದಿನೀ ಚೈವ ಚಂಡಿಕಾ ಚ ಸರಸ್ವತೀ । ವಾಗೀಶ್ವರೀತಿ ಕ್ರಮಶಃ ಪ್ರೋಕ್ತಾಸ್ತದ್ದಿನದೇವತಾಃ ॥

ಹೀಗೆ ಮಂತ್ರ ವಿಧಾನಗಳನ್ನು ಒಳಗೊಂಡಿರುವ “ಕಲ್ಪೋಕ್ತದಲ್ಲಿ” ಉಲ್ಲೇಖಿತ ವಾಗಿರುವಂತೆ ಮಂಗಳಮ್ಮನನ್ನು ನವರಾತ್ರಿಯ ದಿನಕ್ಕೊಂದರಂತೆ ‘ದುರ್ಗ’ ‘ಆರ್ಯಾ’ ‘ಭಗವತಿ’ ‘ಕೌಮಾರಿ’ ‘ಅಂಬಿಕೆ’ ‘ಮಹಿಷ ಮರ್ದಿನಿ’ ‘ಚಂಡಿಕೆ’ ‘ಸರಸ್ವತಿ’ ‘ವಾಗೀಶ್ವರಿ’ ಎಂಬಂತೆ ವಿವಿಧ ಮಾತೃಶಕ್ತಿ ಸ್ವರೂಪಗಳಲ್ಲಿ ಸಕಲ ಪೂಜಾ ಕೈಂಕರ್ಯಗಳೊಡನೆ ಆರಾಧಿಸಲಾಗುವುದು. 😌

ಪ್ರಥಮದಿನದ ಪಾಡ್ಯದಂದು ದುರ್ಗತಿಗಳನ್ನುಪರಿಹರಿಸುವ ‘ದುರ್ಗೆಯಾಗಿ ,ದ್ವಿತೀಯ ದಿನವಾದ ಬಿದಿಗೆಯಂದು ಪ್ರಜಾ ಜನಾದಿಗಳನ್ನು ಸಲಹುವ ‘ಆರ್ಯಾದೇವಿ’ಯಾಗಿ, ತೃತೀಯದ ತದಿಗೆಯಂದು ಭವ-ಭಯಗಳನ್ನು ದೂರೀಕರಿಸುವ ‘ಭಗವತಿಯಾಗಿ, ಚತುರ್ಥಿಯಂದು ಸ್ವಯಂವರಕ್ಕೆ ಸಜ್ಜಾದ ಲೋಕೋತ್ತರ ಸುಂದರಿಯಾದ ‘ಕೌಮಾರಿಯಾಗಿ, ಲಲಿತಾ ಪಂಚಮಿಯಂದು ಅರಣ್ಯ ವಾಸಿನಿಯಾದ ವಿಷ್ಣುಪತ್ನಿ ‘ಅಂಬಿಕೆಯಾಗಿ, ಷಷ್ಟಿಯಂದು ದುಷ್ಟಶಿಕ್ಷಿಣಿಯೂ-ಶಿಷ್ಟರಕ್ಷಿಣಿಯೂ ಆದ ‘ಮಹಿಷ ಮರ್ದಿನಿಯಾಗಿ, ಸಪ್ತಮಿಯಂದು ಅತ್ಯಂತ ಭೀಭತ್ಸ ಭಯಂಕರಿಯೂಕರಾಳ ರೌದ್ರ್ಯೆಯಾದ ‘ಚಂಡಿಕೆಯಾಗಿ, ದುರ್ಗಾಷ್ಟಮಿಯಂದು ವಿದ್ಯಾಪಾಣಿ ‘ಸರಸ್ವತಿಯಾಗಿ, ಮಹಾನವಮಿಯಂದು ವಾಗ್ದೇವಿಯಾದ ‘ವಾಗೀಶ್ವರಿಯಾಗಿ, …..ಹೀಗೆ ನವ ದಿನಗಳಂದು ಸರ್ವಾಲಂಕೃತ ಸ್ವಭೂಷಿತಳಾಗಿ ರಾರಾಜಿಸುವ ಮಂಗಳಿಯ ನವರಾತ್ರ್ಯಾಲಂಕಾರದ ಸಿರಿಸೊಬಗು ಮಾತಿಗೆ ನಿಲುಕದಂತಹದು.. ಇದನ್ನ ಕನ್ನಡ ಭಾಷಾಸಾಹಿತ್ಯದ ಯಾವುದೇ ಪದಪುಂಜಗಳಿಂದ ಉದ್ಗರಿಸಲಾಗಲೀ, ಬಣ್ಣಿಸಲಾಗಲೀ ಸಾಧ್ಯವಿಲ್ಲ. ಹೀಗೆ ನವರಾತ್ರಿಯ ವಿಜಯದ ದಿನವಾದ ವಿಜಯದಶಿಯಂದು ಎಳೆ ಹಸಿರು ತೆನೆಪೈರಿನ ಚಿಗುರನ್ನ ಅಭಯಹಸ್ತದಲ್ಲಿ ಧರಿಸಿ ‘ಅನ್ನಪೂರ್ಣೇಶ್ವರಿ’ ಎಂಬ ಅಭಿಧಾನದೊಡನೆ ಅಭಿವಂದ್ಯಳಾಗಿ ತನ್ನ ಪ್ರಧಾನ ಅಲಂಕಾರದಲ್ಲಿ ^ ಶ್ರೀ ಮಂಗಳಾದೇವಿಯಾಗಿ ವಿಜೃಂಭಿಸುವಳು..👏🏻

ರಾತ್ರಿಯ ಉತ್ಸವ ಕಾಲದಲ್ಲಿ ಪ್ರತಿದಿನ ‘ಪಾಲಕಿ ಉತ್ಸವ’ವು ದೇವಳದ ರಾಜಾಂಗಣದಲ್ಲಿ ದೇವಿಯ ಉತ್ಸವ ಮೂರ್ತಿಯನ್ನು ರಜತ ಹಾಗು ಮರದ ಪಾಲಕಿಯಲ್ಲಿಟ್ಟು ಸರ್ವವಾದ್ಯಾದಿಗಳ ಸಮೇತ ಮೂರು ಸುತ್ತು ಬಲಿಯೊಂದಿಗೆ ಭಕ್ತಾಧಿಗಳ ಸಮ್ಮುಖದಲ್ಲಿ ನಡೆಯಲಿದೆ.

ಮುಂದೆ ಆರನೇ ದಿನದ ‘ಮೂಲಾನಕ್ಷತ್ರದ ‘ಆರಂಭದ ದಿನಾಂಕ 7ರ ಶುಕ್ರವಾರದ ಷಷ್ಟಿಯಂದು ಮೂಲಾನಕ್ಷತ್ರವು ವಿಶೇಷವಾಗಿದ್ದು ಅಂದಿನಿಂದ ರಾತ್ರಿ ಉತ್ಸವಾದಿಳು ಮೊದಲ್ಗೊಳ್ಳುವುದು. ರಾತ್ರಿ ಮಹಾಪೂಜೆ ಜರುಗಿದ ತರುವಾಯ ‘ಬಲಿ ಉತ್ಸವ’ದ ಆರಂಭದ ವಾತಾವರಣ ಉನ್ಮತ್ತವಾಗಿರುವಂತೆ ಕಂಡುಬರುತ್ತದೆ.

ದೇವಸ್ಥಾನದ ಒಳ ಹಾಗು ಹೊರ ಪ್ರಾಕಾರದಲ್ಲಿ ದೈವೀಶಕ್ತಿ ಜಾಗೃತವಾಗಲು ಬಲಿ ಉತ್ಸವವನ್ನು ನಡೆಸುತ್ತಾರೆ. ಆದರಿಂದ ರಾತ್ರಿ ಉತ್ಸವಾದ ಬಲಿ ಉತ್ಸವಕ್ಕೆ ವಿಶೇಷ ಪ್ರಾಶಸ್ತ್ಯವಿದೆ.

ಭೇರಿತಾಢನ ಪೂರ್ವಃತ್ಯಾತ್ ಉತ್ತಮೋ ಮಧ್ಯಮೋ ಧಮಃ

ಎಂಬಂತೆ ಬಲಿ ಉತ್ಸವವು ಆರಂಭಗೊಳ್ಳುವುದು ಭೇರಿತಾಂಡವ ದೊಂದಿಗೆ. ಭೇರಿವಾದನವು ದೇವತೆಗಳಿಗೆ ಸ್ವಾಗತ ಕೋರುವುದು ಎಂಬ ನಂಬಿಕೆ. ಹೀಗಾಗಿ ಮೊದಲನೇ ಸುತ್ತು ಶುರುವಾಗುವುದು ಭೇರೀವಾದನದ ಮೂಲಕ.
ಬಳಿಕ ಶಾಸ್ತ್ರೀಯ ರೀತಿಯ ಪಂಚವಾದ್ಯಗಳ ಮೂಲಕ ಎರಡನೆಯ ಸುತ್ತು ಆರಂಭಗೊಳ್ಳುತ್ತದೆ. ಪಂಚವಾದ್ಯಗಳು ಎಂದರೆ “ಕೋಲಿನಿಂದ ಹೊಡೆಯುವಂತಹ ಚಂಡೆ, ನಗಾರಿಗಳು. ಕೈಯಿಂದ ಬಾರಿಸುವಂತಹ ಮೃದಂಗಾದಿ ಢಕ್ಕೆಗಳು..ಬೆರಳ ತುದಿಯಿಂದ ಬಾರಿಸುವಂತಹ ವೀಣೆ (ಹಾರ್ಮೋನಿಯಂ)ಗಳ ಕೂಡಿ, ಎರಡು ತಾಳಗಳ ಧ್ವನಿಗೆ ಒಗ್ಗೂಡಿ ಬಾಯಿಯಿಂದ ನುಡಿಸುವ ಶಹನಾಯಿಯ ನಾದಸ್ವರಕ್ಕೆ ತಕ್ಕಂತೆ ಈ ಪಂಚವಾದ್ಯಗಳು ಮಾರ್ದನಿಸಿದಾಗ ಲಯಬದ್ಧ ಬಲಿ ಸಂಗೀತನಾದದ ಅನುರಣಿಸುವ ಧ್ವನಿಗೆ ತಕ್ಕಂತೆ ‘ಮೂರ್ತಿಭಟ್ಟರು’… ‘ರಜತ ಪ್ರಭಾವಳಿಯೊಂದಿಗೆ ಸಂಪೂರ್ಣ ಸ್ವರ್ಣ ಕವಚ ಖಚಿತವಾಗಿರುವ ,ಹಿಂಬದಿಯ ಬಲಹಸ್ತದಲ್ಲಿ ತ್ರಿಶೂಲ ಹಾಗೂ ವಾಮ ಹಸ್ತದಲ್ಲಿ ಪರಶು ಧರೆಯಾಗಿ, ಅಭಯ-ವರ ಮುದ್ರೆ ಹಸ್ತಗಳೊಡನೆ ಗಳೊಡನೆ ಚತುರ್ಭುಜಯುತವಾದ ಸುಂದರವಾದ ಪುಟ್ಟ ದೇವಿಯ ಉತ್ಸವ ಮೂರ್ತಿಯನ್ನು ಶಿರದಲ್ಲಿರಿಸಿ ಶಾಸ್ತ್ರೀಯನೃತ್ಯ ಪ್ರಕಾರದಂತೆ ಬಲಿಗೆ ಮುಂದಾಗುವ ಸನ್ನಿವೇಶ ನಮ್ಮೆಲ್ಲರಿಗೆ ತನ್ಮಯತೆಯ ಆನಂದವನ್ನುಂಟು ಮಾಡುತ್ತದೆ. ಎರಡೂ ಬದಿಯ ದೀವಟಿಕೆಗಳ ಬೆಳಕಿನಲ್ಲಿ, ತನ್ನ ಭಕ್ತರ ಸಂಗಡ, ತನ್ನ ದೇವಾಲಯದಲ್ಲಿ ತಾಯಿಯು ರಾಜಗಾಂಭೀರ್ಯದಿಂದ ಪಂಚವಾದ್ಯಗಳ ಸವಿನಾದಕ್ಕೆ ತಕ್ಕಂತೆ ಬಲಿ ಉತ್ಸವದ ಸೇವೆಯಿಂದ ಸಂಪ್ರೀತಳಾಗಿ, ಸಾರ್ಥಕತೆಯ ಧನ್ಯತಾಭಾವವನ್ನು ಭಕ್ತಾದಿಗಳಿಗೆ ಕರುಣಿಸುವಳು. ಇಂತೆ ವಸಂತ ಪೂಜೆಯೊಂದಿಗೆ ಬಲಿಉತ್ಸವವು ಸಂಪನ್ನಗೊಳ್ಳುವುದು.

ಇದೇ ಮೂಲಾನಕ್ಷತ್ರದಂದು ಸರಸ್ವತೀ ಸ್ಥಾಪನೆಯೊಂದಿಗೆ, ದೇವಳದ ಚಂದ್ರಶಾಲೆ (ಹೊರ ಗರ್ಭಗೃಹ)ಯಲ್ಲಿ ಅರ್ಚಿಸಲಾಗುತ್ತದೆ.ಹಾಗೂ ಶ್ರವಣಾ ನಕ್ಷತ್ರದಂದು ಉತ್ತರಾಪೂಜೆಯೊಂದಿಗೆ ದಶಮಿದಿನ ವಿಸರ್ಜಿಸಲಾಗುತ್ತದೆ.

ಇನ್ನು ನವರಾತ್ರಿ ಸಂದರ್ಭದ ಮಹಾಪೂಜೆಯು ಇನ್ನೂ ಆನಂದದಾಯಕ. ಮಂಗಳಾಂಬಿಕೆಯನ್ನು ಕಾಣಲು ವಿಶೇಷ ತವಕ, ಅಭಿಲಾಷೆಯಿಂದ ಊರುಪರವೂರುಗಳಿಂದ ಆಗಮಿಸುವ ಸಹಸ್ರಾರು ಭಕ್ತರ ನಡುವೆ ಸರ್ವಾಲಂಕೃತಳಾಗಿ ಭಕ್ತರ ‘ಹೃದಯ ಸಿಂಹಾಸನ’ದಲ್ಲಿ ನೆಲೆಸಿರುವಳೋ ಎಂಬಂತೆ ಗರ್ಭಗೃಹದಲ್ಲಿ ಸಿಂಹವಾಹಿನಿಯಾಗಿರುವ ಮಂಗಳಾಪುರದೊಡತಿಯ ಬಳಿ ಸರ್ವರೂ ಶರಣಾಗತರಾಗಿ ತಮ್ಮ ನಲ್ಬಯಕೆಗಳನ್ನು ನಿವೇದಿಸಿಕೊಳ್ಳುವ ಕ್ಷಣ…
ಅದು ಮಹಾಪೂಜೆಯ ಸಂದರ್ಭ.
ಮಹಾ ಮಂಗಳಾರತಿಯ ಸುವರ್ಣ ಸದೃಶ ಬೆಳಕಿನ ಕಾಂತಿಯಲಿ ಪ್ರಜ್ವಲಿಸುವ ಶ್ರೀ ದೇವಿ. ಪೂಜಾ ಸಂದರ್ಭದಲ್ಲಿ ಮೊಳಗುವ ಘಂಟಾನಾದ, ಸರ್ವ ವಾಧ್ಯಫೋಷಾದಿಗಳ ನಿನಾದಕ್ಕೆ ದೇವಿಯನ್ನು ಕಂಡು ಪರಾಕಾಷ್ಟೆಯೊಂದಿಗೆ ಪುಳಕಿತರಾಗಿ, ಕಣ್ಗಳಲ್ಲಿ ಜಿನುಗಲ್ಪಡುವ ಆನಂದಭಾಷ್ಪದ ಕಂಬನಿ. ತಾಯಿಯ ಆರತಿಯನ್ನ ನೋಡುವುದೇಯೊಂದು ಪುಣ್ಯ..ಸ್ವೀಕರಿಸಿಸುವುದು ಮಗದಷ್ಟು ಪುಣ್ಯ. ಒಂದು ಕ್ಷಣ ಆರತಿಯನ್ನು ಸ್ವೀಕರಿಸಿಕೊಂಡರೂ ಆತ್ಮಾನಂದವನ್ನು ತಂದು ಕೊಡುವ “ಸರ್ವಾಂಗ ಸುಂದರಿಯ ಅಂಗೋಪಾಂಗಗಳಿಗೆ “ಎತ್ತಿದ ಆರತಿಯ ಮೂಲಚೇತನ ಜ್ಯೋತಿ ನಮ್ಮ ಜೀವನದ ಕತ್ತಲೆಯನ್ನು ಹೋಗಲಾಡಿಸಿ, ತನು-ಮನ ಭಾವಗಳಿಗೆ ಆತ್ಮಾನಂದವನ್ನ ಪ್ರಸಾದಿಸಬಲ್ಲ ಸರ್ವಶ್ರೇಷ್ಟ ಆರತಿ. ಹೀಗೆ ಪ್ರತಿದಿನ ಉತ್ಸವದ ಸಮಯದಲ್ಲಿ ಅಪರಾಹ್ನ 1’ಗಂಟೆಗೆ ಹಾಗೂ ರಾತ್ರಿ 10.30ರ ಸುಮಾರಿಗೆ ಮಹಾಪೂಜೆ ಜರುಗಲಿದೆ .

ಮುಂದೆ ಬರುವುದೇ ಒಂಭತ್ತನೇಯ ದಿನವಾದ ಮಹಾನವಮಿ. ಅಂದು ಬೆಳಗ್ಗೆ ಚಂಡಿಕಾಯಾಗವು ದೇವಳದಲ್ಲಿ ನಡೆಯಲಿದ್ದು, ರಾತ್ರಿ ದೇವಿಗೆ ‘ದೊಡ್ಡರಂಗಪೂಜೆ’ ಹಾಗು ಹೊರಪ್ರಾಕಾರದಲ್ಲಿ ಸಣ್ಣ ಭಂಡಿಯುತ್ಸವವೂ ನಡೆಯಲಿರುವುದು. ತದನಂತರ ಮಾರನೇಯದಿನ ಬರುವ ನವರಾತ್ರಿಯ ಬಹುದೊಡ್ಡ ಸಂಭ್ರಮದ ದಿನ ‘ವಿಜಯದಶಮಿ’.
ಅಂದು ಮಂಗಳಮ್ಮನಿಗೆ ಮಹಾರಥೋತ್ಸವ. ಈ ದಿನದ ಮಗದೊಂದು ವಿಶೇಷವೇನೆಂದರೆ ಮಂಗಳಾದೇವಿ ಸುಗ್ರಾಮದ ಸುತ್ತಮುತ್ತಲಿನ ಪ್ರದೇಶದ ನಿವಾಸಿಗಳಿಗೆ ‘ಹೊಸ ಅಕ್ಕಿ ಊಟ’ ಅಥವ ‘ನವ ಭೋಜನ’. ಅಂದು ಪ್ರಾತಃಕಾಲ ತೆನೆ (ಹಸಿರು ಅಕ್ಕಿಯ ಪೈರು)ತರುವ ಉತ್ಸವವಿದ್ದು, ಅದನ್ನು ಪಲ್ಲಕ್ಕಿಯಲ್ಲಿಟ್ಟು ಪೂಜಿಸಿ ,ಆ ಬಳಿಕ ತೆನೆಗಳನ್ನು ದೇವಿಯ ಚರಣಾರವಿಂದದಲ್ಲಿಟ್ಟು ಪೂಜೆಗೊಳಿಸಿದ ತರುವಾಯ ಭಕ್ತರೆಲ್ಲರೂ ಅವುಗಳನ್ನು ತಮ್ಮ ಮನೆಗೆ ತೆಗೆದುಕೊಂಡು ಹೋಗಿ ಮನೆತುಂಬಿಸುವ ರೂಢಿ ಇಂದಿಗೂ ನಡೆದುಕೊಂಡು ಬಂದಿದೆ. ಅಲ್ಲದೆ ಅದೇ ದಿನದಂದು ದೇವಳದಲ್ಲಿ ‘ವಿದ್ಯಾರಂಭವೂ’ ನಡೆಯಲಿದೆ. ಮಂಗಳೆ ಜ್ಞಾನದಾಯಿಕೆ….ಈಕೆಯ ಸನ್ನಿಧಾನದಲ್ಲಿ ವಿದ್ಯಾರಂಭವನ್ನು ನಡೆಸುವುದರಿಂದ ಮಕ್ಕಳಿಗೆ ವಿದ್ಯೆಯು ಬಹುಬೇಗ ಕರತಲಾಮಲಕವಾಗಿ ಶ್ರೇಯಸ್ಸು ಪ್ರಾಪ್ತವಾಗುವುದೆಂಬ ಉದ್ದೇಶದಿಂದ ಅಕ್ಷರಾಭ್ಯಾಸವನ್ನು ಮಾಡಿಸುತ್ತಾರೆ. ಅಲ್ಪದೆ ಅಂದು ತುಲಾಭಾರ ಸೇವೆಯೂ ನಡೆಯಲಿದೆ.

ನಂತರ ಅಪರಾಹ್ನ ಮಹಾಪೂಜೆಯ ಬಳಿಕ ಬಲಿಹೊರಟು, ರಥಬಲಿಯೊಂದಿಗೆ ದೇವಿಯ ದಶಮಿದಿನದ ರಥಾರೋಹಣವಾಗುವುದು. ರಾತ್ರೆ ಸುಮಾರು 9’ಗಂಟೆಗೆ ರಥೋತ್ಸವವು ನಡೆಯಲಿದ್ದು , ರಥಾರೂಢಳಾಗುವ ನಲ್ಮೆಯ ತಾಯಿಯನ್ನ ಭಕ್ತಿಭಾವದಲ್ಲಿ ಕಂಡು ಶರಣೆನುವ ಆ ಸಂದರ್ಭವು ಮಾತಿಗೆ ನಿಲುಕದು… ಮಹಾನವಮಿ ಕಟ್ಟೆಯ ವರೆಗೂ ರಥ ಬೀದಿಯಲ್ಲಿ ತುಂಬಿರುವ ಜನಸಾಗರ ನಾನಾರೀತಿಯ ಸ್ತಬ್ದಚಿತ್ರಗಳು, ಹುಲಿಮೃಗಾದಿ ದಸರಾ ವೇಷಗಳೊಂದಿಗೆ , ವಿಭಿನ್ನ ಚಂಡೆ-ಜಾಗಟೆ ಸ್ವರವಾದ್ಯಾದಿ ಗಳೊಂದಿಗೆ ಸಾಗುವ ವೈಭವೋಪೇತವಾದ ಮೆರವಣಿಗೆಯಲ್ಲಿ ಲಕ್ಷಾಂತರಮಂದಿ ಸದ್ಭಕ್ತರು ತೇರನ್ನೆಳೆದು, ಮಂಗಳೆಯ ಭಕ್ತಿಯಲಿ ಮಿಂದೆದ್ದು ಧನ್ಯರಾಗುತ್ತಾರೆ.

ಇದೇ ಸಂದರ್ಭದಲ್ಲಿ ದೇವಳಕ್ಕೆ ಸಂಬಂಧಪಟ್ಟಿರುವ , ದೇವಿಯ ‘ಶಮೀಕಟ್ಟೆಯಲ್ಲಿ’ ಶಮೀವೃಕ್ಷದ ಪೂಜೆಯೂ ನಡೆಯುತ್ತದೆ. ಕನ್ನಡದಲ್ಲಿ ‘ಬನ್ನಿಮರ’ಯೆಂದು ಕರೆಯಲ್ಪಡುವ ಶಮೀವೃಕ್ಷವು ನಿತ್ಯಹರಿದ್ವರ್ಣ ವೃಕ್ಷ.
ಇದರ ಎಲೆಗಳು ದ್ವಿಮುಖ ಸಂಯೋಜನೆ ಹೊಂದಿದ್ದು, ಅತ್ತ ದೊಡ್ಡದಾಗಿಯು ಬೆಳೆಯದ-ಇತ್ತ ಕುಬ್ಜವಾಗಿಯೂ ಇರದ ಶಮೀವೃಕ್ಷವು ಎಷ್ಟೇ ವರ್ಷಗಳು ಸಂದರೂ ಒಂದೇ ರೀತಿಯಲ್ಲಿ ಕಂಡುಬರುವುದು ಇದರ ವಿಶೇಷ.
ಪುರಾಣದಲ್ಲಿ ವಿಜಯದಶಮಿಯಂದು ಶಮೀವೃಕ್ಷದ ಪೂಜೆಯು ಉಲ್ಲೇಖವಿರುವುದು ಒಂದು ಕಾರಣವಾದರೆ, ಪ್ರಚಲಿತವಿರುವ ಮತ್ತೊಂದು ನಂಬಿಕೆಯ ಪ್ರಕಾರ ಇತಿಹಾಸದಲ್ಲಿ ‘ಪ್ರೇಮಲಾದೇವಿ’ಎಂಬ ನಾಮಾಂಕಿತಳಾಗಿದ್ದ ದೇವಿಯು ಒಂದೊಮ್ಮೆ ಈ ಮರದ ನೆರಳಿನಲ್ಲಿ ಆಸಿನಳಾಗಿದ್ದಳೆಂಬ ನಂಬಿಕೆ. ಇದಕ್ಕೆ ಪೂರಕವೆಂಬಂತೆ ಇಂದಿಗೂ ಶಮೀ ವೃಕ್ಷದ ಬುಡದ ಶಮೀ ಪೀಠದಲ್ಲಿ ವರ್ಷಕ್ಕೆ ಮೂರು ಬಾರಿಯಂತೆ ಪೂಜೆ ಪುನಸ್ಕಾರಗಳು ನಡೆಯುತ್ತದೆ. ಅದರಲ್ಲೂ ವಿಶೇಷವಾಗಿ ದಿಂಢಿನ ದಿನ ದೇವಿಯ ಉತ್ಸವ ಮೂರ್ತಿಯನ್ನ ಶಮೀ ಪೀಠದಲ್ಲಿಟ್ಟು ಪೂಜಿಸಲಾಗುತ್ತದೆ.
ಹೀಗೆ ವಾರ್ಷಿಕ ಜಾತ್ರಾ ಮಹೋತ್ಸವದ, ಹರಕೆಯ ರಥೋತ್ಸವದ(ಇದ್ದಲ್ಲಿ ಮಾತ್ರ) , ದಿಂಢಿನ ಲಕ್ಷದೀಪೋತ್ಸವದ ಹಾಗೂ ವಿಜಯದಶಮಿಯ ಸಂದರ್ಭಗಳಲ್ಲಿ ಶಮೀಪೂಜೆ ನಡೆಯುತ್ತದೆ

ಅಮಂಗಲಾನಾಂ ಶಮನೀಂ ಶಮನೀಂ ದುಷ್ಕೃತ್ಯಚ | ದುಃಖಹ ಪ್ರಣಾಶಿನೀಂ ದಾನ್ಯಂ ಪ್ರಪದ್ಯೇಹಂ ಶಮೀಂ ಶುಭಮ್|

ಎಂಬ ಮಂತ್ರದೊಂದಿಗೆ ಬನ್ನಿಮರಕ್ಕೆ ಪೂಜೆಯನ್ನು ಸಲ್ಲಿಸಿ, ವೃಕ್ಷದೆಲೆಗಳನ್ನು ಕಿತ್ತು , ತಾಯಿಯ ಕುಂಕುಮ ಪ್ರಸಾದದೊಡನೆ ಪರಸ್ಪರ ವಿನಿಯೋಗ ಮಾಡಿ, ಶಮೀಎಲೆಗಳನ್ನು ಸರ್ವರಿಗೂ ನೀಡಲಾಗುತ್ತದೆ.
ದೊರೆತ ಈ ಪ್ರಸಾದರೂಪಿ ಎಲೆಗಳನ್ನು ತಿಜೋರಿಯಲ್ಲಿಟ್ಟಲ್ಲಿ, ವ್ಯವಹಾರಗಳಲ್ಲಿ ಬಳಸಿದ್ದಲ್ಲಿ ಸರ್ವಸಂಪದಗಳೂ ವೃದ್ಧಿಸುವುದೆಂಬ ನಂಬಿಕೆ. ಮುಂದೆ ರಥವು ಮರಳಿಬಂದು , ಬಲಿ ಉತ್ಸವವು ನಡೆದ ಬಳಿಕ ಮಹಾಪೂಜೆಯೊಂದಿಗೆ ದಶಮಿಯ ದಿನವೂ ಸಂಪನ್ನವಾಗುತ್ತದೆ.

ಮರುದಿನ ಏಕಾದಶಿಯಂದು ಮಂಗಳಾಂಭೆಗೆ ಅವಭೃತೋತ್ಸವದ ಸಂಭ್ರಮ. ನವರಾತ್ರಿಯ ಅಂತಿಮದಿನದ  ಅವಿಸ್ಮರಣೇಯ ದಿನವೆಂದೇ ಹೇಳಬಹುದು. ನಮ್ಮ ಆಡುಮಾತಿನಲ್ಲಿ ‘ಜಳಕ’ಎಂದೇ ಕರೆಯಲ್ಪಡುವ ಶ್ರೀ ದೇವಿಯ ಅವಭೃತ ಮಂಗಳ ಸ್ನಾನವು ನಡೆಯುವುದು ‘ನೇತ್ರಾವತಿ ಹಾಗೂ ಫಲ್ಗುಣೀ’ ನದಿಗಳೆರಡರ ಸಂಗಮ ತೀರದಲ್ಲಿ. ಅಂದಿನ ಬುಧವಾರ ರಾತ್ರಿ ಬಲಿ ಹೊರಟು, ದೇವಿಗೆ ವಸಂತ ಮಂಟಪದಲ್ಲಿ ಅಷ್ಟಾವಧಾನ ಸೇವೆಯೊಂದಿಗೆ ,ಅವಭೃತದ ಪೂರ್ವಭಾವಿಯಾಗಿ ಓಕುಳಿಯಂತೆ ತುಸು ಕುಂಕುಮದ ನೀರಿನ ಹನಿಗಳ ಸಂಪ್ರೋಕ್ಷಣೆ ಯಾಗುತ್ತದೆ. ಶೃಂಗಾರಗೊಂಡ ವಸಂತ ಮಂಟಪದಲ್ಲಿ ಅವಭೃತಕ್ಕೆ ಹೊರಟ ದೇವಿ ಮಂಗಳಾಪುರದ ಮಹಾರಾಣೆಯಂತೆ ಕಂಡುಬರುವಳು. 💫

ದೇವ ದೇವೋತ್ತಮೆ ದೇವತಾ ಸಾರ್ವಭೌಮೆ ಅಖಿಲಾಂಡ ಕೋಟಿ ಬೃಹ್ಮಾಂಡ ನಾಯಕೆ ಜಯ ಮಂಗಳೇ ಎಂದು ಸರ್ವಮಂಗಳೆಗೆ ರಾಣಿಯಂತೆ ಹೊಗಳುತ್ತಾ, “ಋಗ್ವೇದಾದಿ ಚತುರ್ವೇದಗಳು, ವೇದಸೂಕ್ತ ಶಾಂತಿಮಂತ್ರಗಳು, ಪುರಾಣಾದಿಗಳು, ಅಷ್ಟಕಗಳು, ಂಸ್ಕೃತ ಹಾಗೂ ಕನ್ನಡ ಸಾಹಿತ್ಯದ ವರ್ಣಮಾಲೆಗಳು, ಪಾಂಚಜನ್ಯ(ಶಂಕಾನಾದ), ಸಂಗೀತ, ಸರ್ವ ವಾದ್ಯಗಳ ಮಂಗಳ ವಾದನಾ”ದಿ ಗಳೆಂಬ ಅಷ್ಟಾವಧಾನ ಸೇವೆಯನ್ನು ದೇವಿಗೆ ಅರ್ಪಿಸಿ , ಉತ್ಸವ ಮೂರ್ತಿಯನ್ನು ಸಣ್ಣ ಭಂಡಿಯಲ್ಲಿರಿಸಿ ನೇತ್ರಾವತಿ-ಫಲ್ಗುಣೀ ನದಿಗಳ ಸಂಗಮತೀರದಲ್ಲಿ , ವೈಭವದಿಂದ ಎಳೆದೊಯ್ಯಲಾಗುತ್ತದೆ.

ನಮ್ಮ ಮಂಗಳೂರು ನಗರವು ಬೆಳೆದು ನಿಂತಿರುವುದು ನಮ್ಮ ಜೀವನದಿಯಾದ ನೇತ್ರಾವತಿಯ ಕೃಪೆಯಿಂದ. ಇದರೊಂದಿಗೆ ಫಲ್ಗುಣಿಯೂ ಹರಿದು ಬಂದು ಸಂಗಮವಾಗಿ ಶರಧಿಯನ್ನು ಸೇರುವ ಸಂಗಮ ತೀರದಲ್ಲಿ ಮಂಗಳೆಯು ಮಂಗಳ ಸ್ನಾನಗೈದು ಸಂಭ್ರಮಿತಳಾಗುವ ಆ ರಸನಿಮಿಷವನ್ನು ಕಂಡರೆ ಅದೇನೋ ಪುಳಕ.
ದೇವಿಯು ನದಿಯು ಒಡಲಿನಲ್ಲಿ ಜಳಕಗೈದೊಡೆ ಮೈಮನಸ್ಸಿನ ತುಂಬೆಲ್ಲಾ ಆ ನೇತ್ರೆಯ ಸಲಿಲ ಧಾರೆಯಂತೆಯೇ ಹರಿಯುವ ಅನಿರ್ವಚನೀಯವಾದ ಆನಂದ.
ಆ ನದಿಯಂತೆ ಮಂಗಳಾಂಭೆಯೂ ಭಕ್ತಿ,ಪ್ರೀತಿಯಿಂದ ಪ್ರಾರ್ಥಿಸಿದರೆ ಬೇಡಿದನ್ನು ನೀಡುವ ಕಾರುಣ್ಯವಲ್ಲರಿ……😄
ಅವಭೃತವು ಜರುಗಿ ಹಿಂದಿರುಗಿ ಬಂದ ಬಳಿಕ, ಬಲಿ ನಡೆದು ಸಂಪೂರ್ಣ ನವರಾತ್ರಿಯ ನವದಿನಗಳ ಸೇವೆಯನ್ನು ಸಂತೋಷದಿಂದ ಸ್ವೀಕರಿಸಿ ಗರ್ಭಗೃಹವನ್ನು ಸೇರುವಲ್ಲಿ, ಮಹಾಪೂಜೆಯೊಡನೆ ದೇವಿಯ ಅವಭೃತೋತ್ಸವವು ಮುಕ್ತಾಯಗೊಳ್ಳುತ್ತದೆ. ಇದರ ಮಾರನೇ ದಿನವಾದ ದ್ವಾದಶಿಯಂದು ಅಪರಾಹ್ನ ಮಹಾಪೂಜೆಯ ನಂತರ, ಅರ್ಚಕರಿಂದ ‘ಮಂತ್ರಾಕ್ಷತೆ’ಯ ಪ್ರಸಾದವನ್ನು ಸ್ವೀಕರಿಸಿ ‘ಸಂಪ್ರೋಕ್ಷಣೆ’ಯೊಂದಿಗೆ ^ ಶ್ರೀ ಮಂಗಳಾದೇವಿ ಅಮ್ಮನವರ ಶರನ್ನವರಾತ್ರಿ ಮಹೋತ್ಸವವು ಸಂಪನ್ನಗೊಳ್ಳುವುದು.

ತಾಯಿಯ ನವರಾತ್ರಿ ವೈಭವವು ಮಾತಿಗೆ ನಿಲುಕದಂತಹದು… ಕನ್ನಡ ಸಾಹಿತ್ಯದ ಮಾತಿನಲ್ಲಿ ವರ್ಣಿಸುವುದು ಅಪೂರ್ಣವೇ ಆದೀತು. ಆಕೆಯ ವೈಭವ ಸಗ್ಗದ ಸಿರಿ. ಮಾತೆಯ ಉತ್ಸವದಲ್ಲಿ ಪಾಲ್ಗೊಂಡು ಪುನೀತರಾಗೋಣ. ಹೃದಯಪೂರ್ವಕ ಭಕ್ತಿಯೊಂದಿಗೆ ಅಮ್ಮಾ ಎಂದು ನಮಿಸಿದಲ್ಲಿ ಬರುವ ಮಂಗಳಾಂಬಿಕೆಯು ನಮ್ಮೆಲ್ಲರ ಕಷ್ಟ ಕಾರ್ಪಣ್ಯಾದಿ ಬವಣೆಗಳನ್ನು ಪರಿಹರಿಸಿ ,ಸುಖ ಶಾಂತಿ ನೆಮ್ಮದಿಯನ್ನ ಕರುಣಿಸಲಿ. ನಮ್ಮಬದುಕು ಗೆಲುವಾಗಲಿ. ನವರಾತ್ರಿಯು ಲೋಕದೆಲ್ಲೆಡೆ ಮಂಗಳಪ್ರದ ಬೆಳಕನ್ನು ತಂದು, ಲೋಕಮಾತೆ ಮಂಗಳಾದೇವಿಯು😘 ಸನ್ಮಂಗಳವನ್ನುಂಟು ಮಾಡಲಿ.

#ಶುಭಮಸ್ತು.

Credits : G Harish Pai

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top