fbpx
god

ಪುರಿ ಜಗನ್ನಾಥ ರಥಯಾತ್ರೆ

ಪೂರ್ವ ಭಾರತದ ಒಡಿಸ್ಸಾ ರಾಜ್ಯದ ಒಂದು ಸುಂದರ ನಗರವೇ ಪುರಿ. ಇದು ಒಡಿಸ್ಸಾದ ರಾಜಧಾನಿ ಭುವನೇಶ್ವರದಿಂದ ಸುಮಾರು 60 ಕಿ. ಮೀ ಅಂತರದಲ್ಲಿದೆ. ಈ ನಗರವನ್ನು ಜನಪ್ರಿಯಗೊಳಿಸಿರುವ ಇಲ್ಲಿನ ಪ್ರಸಿದ್ಧ ದೇವಾಲಯ ಜಗನ್ನಾಥ ಮಂದಿರ. ಈ ಮಂದಿರದಿಂದಾಗಿ ಈ ನಗರಕ್ಕೆ ಜಗನ್ನಾಥಪುರಿ ಎಂದು ಕರೆಯಲಾಗುತ್ತದೆ. ಇಷ್ಟೇ ಅಲ್ಲದೇ ಈ ಪಟ್ಟಣಕ್ಕೆ ಪುರುಷೋತ್ತಮ ಪುರಿ, ಪುರುಷೋತ್ತಮ ಕ್ಷೇತ್ರ, ಪುರುಷೋತ್ತಮ ಧಾಮ, ನೀಲಛಾಯೆ, ನೀಲಾದ್ರಿ, ಶ್ರೀಕ್ಷೇತ್ರ ಮತ್ತು ಶಂಖಕ್ಷೇತ್ರ ಎಂತೆಲ್ಲಾ ಹೆಸರಿನಿಂದ ಕರೆಯಲಾಗುತ್ತದೆ. ಈ ಪಾವನ ಪುಣ್ಯ ಕ್ಷೇತ್ರವು ಭಗವಾನ್ ಜಗನ್ನಾಥನ ಪವಿತ್ರ ಭೂಮಿಯೆಂದು ಪರಿಗಣಿಸಲಾಗಿದೆ. ರಾಧೆ, ದುರ್ಗೆ, ಲಕ್ಷ್ಮೀ, ಪಾರ್ವತಿ, ಸತಿ ಮತ್ತು ಶಕ್ತಿ ದೇವತೆಗಳೆಲ್ಲರೂ ಕೃಷ್ಣನೊಂದಿಗೆ ಇರುವ ಭಾರತದ ಏಕೈಕ ಪುರಿ ಜಗನ್ನಾಥ ರಥಯಾತ್ರೆ ಮಂದಿರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

© ರಥಯಾತ್ರೆ

ರಥಯಾತ್ರೆ

ಬಂಗಾಳಕೊಲ್ಲಿಯ ಸಮುದ್ರದ ಅಂಚಿನಲ್ಲಿರುವ ಜಗನ್ನಾಥ ಮಂದಿರವು ಸಾವಿರ ವರ್ಷಗಳಷ್ಟು ಪುರಾತನವಾಗಿದೆ. ಇದನ್ನು ಆದಿಗುರು ಶಂಕರಾಚಾರ್ಯರು ಸ್ಥಾಪಿಸಿದ್ದಾರೆ. ನಾಲ್ಕು ಭವ್ಯವಾದ ದ್ವಾರದೊಂದಿಗೆ ಈ ಜಗನ್ನಾಥ ಮಂದಿರ ಪೂರ್ವಕ್ಕೆ ಮುಖಮಾಡಿದೆ. ಇವಿಷ್ಟೇ ಅಲ್ಲದೇ ಜಗನ್ನಾಥ ಮಂದಿರದ ಸುತ್ತಮುತ್ತಲೂ 30 ವಿವಿಧ ದೇವಾಲಯಗಳು ಸುತ್ತುವರಿದಿವೆ. ಇನ್ನು ಮುಕ್ತಿ ಮಂಟಪದ ಪಶ್ಚಿಮ ದಿಕ್ಕಿನಲ್ಲಿರುವ ನರಸಿಂಹ ದೇವಾಲಯವನ್ನು ಜಗನ್ನಾಥ ದೇವಾಲಯ ನಿರ್ಮಾಣದ ಮುಂಚಿತವಾಗಿಯೇ ನಿರ್ಮಿಸಲಾಗಿದೆ ಎಂದು ಹೇಳಲಾಗುತ್ತಿದೆ. ಮುಖ್ಯದ್ವಾರದಿಂದ ಒಳಪ್ರವೇಶಿಸಿದಾಗ ನಮಗೆ ಕಾಣುವುದು ಒಂದು ಭವ್ಯವಾದ ಆಯತಾಕಾರದ ಮಂದಿರ. ಈ ಮಂದಿರದ ವಾಸ್ತುಶಿಲ್ಪ ಒಡಿಸ್ಸಾದ ಇನ್ನಿತರ ದೇವಸ್ಥಾನಗಳಂತೆ ಅತ್ಯಂತ ಕಲಾತ್ಮಕವಾಗಿದೆ.

ಮುಖ್ಯ ದೇವಾಲಯ 214 ಅಡಿ ಎತ್ತರವಾಗಿ ಭವ್ಯ ಪಿರಮಿಡ್ ಆಕಾರದಲ್ಲಿದೆ ಮತ್ತು 10.7 ಎಕರೆ ಪ್ರದೇಶದ ವಿಸ್ತೀರ್ಣವನ್ನು ಒಳಗೊಂಡಿದೆ. ಅಲ್ಲದೇ ಈ ದೇವಾಲಯದ ಸಂಕೀರ್ಣ ಆಯತಾಕಾರದ ಗೋಡೆಯನ್ನು ಒಳಗೊಂಡಿದೆ. ಈ ಮಂದಿರದ ಮುಂದೆ 10 ಅಡಿ ಎತ್ತರದ ಒಂದು ಅರುಣ ಸ್ತಂಭವನ್ನು ನಿಲ್ಲಿಸಲಾಗಿದೆ. ಸುಂದರವಾಗಿ ಕುಸುರಿ ಕೆಲಸ ಮಾಡಿದ ಉದ್ದವಾದ ಸ್ತಂಭದ ಮೇಲೆ ಅರುಣ ಕುಳಿತಿರುವಂತೆ ಕೆತ್ತನೆ ಮಾಡಲಾಗಿದೆ. ಈ ಅರುಣ ಸ್ತಂಭವು ಮೊದಲು ಕೋನಾರ್ಕ್ ಸೂರ್ಯದೇವಾಲಯದಲ್ಲಿತ್ತು ಎಂಬುದಕ್ಕೆ ಪುರಾವೆಗಳಿವೆ. ಈ ಸ್ತಂಭವನ್ನು ನಂತರ ಜಗನ್ನಾಥ ಮಂದಿರದ ಮುಂದೆ ಅಳವಡಿಸಲಾಗಿದೆ.

© ದೇವಸ್ಥಾನದ ಮೇಲೆ ಅಷ್ಟಧಾತುವಿನಿಂದ ಕೂಡಿದ ಒಂದು ಚಕ್ರ

ದೇವಸ್ಥಾನದ ಮೇಲೆ ಅಷ್ಟಧಾತುವಿನಿಂದ ಕೂಡಿದ ಒಂದು ಚಕ್ರ

ಇನ್ನು ಜಗನ್ನಾಥ ಮಂದಿರದ ಎಡಭಾಗದಲ್ಲಿ ದೊಡ್ಡದಾದ ಅಡುಗೆ ಕೋಣೆಯನ್ನು ನಿರ್ಮಿಸಲಾಗಿದೆ. ದೇವಸ್ಥಾನಕ್ಕೆ ಬರುವ ಭಕ್ತಾದಿಗಳಿಗೆ ಊಟದ ವ್ಯವಸ್ಥೆ ಕೂಡ ಇದೆ. ಈ ಅಡುಗೆಮನೆಯ ಒಂದು ವಿಶೇಷತೆಯೇನೆಂದರೆ 2 ಲಕ್ಷ ಭಕ್ತಾದಿಗಳು ಇಲ್ಲಿ ಬಂದರೂ ಅವರಿಗೆ ಬರೀ ಒಂದರಿಂದ ಎರಡು ಗಂಟೆಯಲ್ಲಿ ಊಟವನ್ನು ಒದಗಿಸುವ ವ್ಯವಸ್ಥೆ ಇಲ್ಲಿದೆ. ಇದು ಇಡೀ ವಿಶ್ವದಲ್ಲಿಯೇ ದೊಡ್ಡದಾದ ಅಡುಗೆಮನೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. 36 ಬೇರೆ ಬೇರೆ ಸಂಪ್ರದಾಯವನ್ನು ಹೊಂದಿದ ಸಮುದಾಯವನ್ನೊಳಗೊಂಡ ಈ ದೇವಾಲಯಕ್ಕೆ 6000 ಪುರೋಹಿತರುಗಳಿದ್ದಾರೆ. ಈ ದೇವಸ್ಥಾನದ ಮೇಲೆ ಅಷ್ಟಧಾತುವಿನಿಂದ ಕೂಡಿದ ಒಂದು ಚಕ್ರವನ್ನು ಅಳವಡಿಸಲಾಗಿದೆ. ಇದಕ್ಕೆ ನೀಲಚಕ್ರ ಎಂತಲೂ ಕರೆಯಲಾಗುತ್ತದೆ. ಈ ಚಕ್ರದ ಮೇಲೆ ಪ್ರತಿದಿನ ಬೇರೆ ಬೇರೆ ಬಣ್ಣದ ಧ್ವಜವನ್ನು ಕಟ್ಟಲಾಗುತ್ತದೆ. ಪ್ರತಿ ಏಕಾದಶಿಯಂದು ಒಂದು ದೀಪ ಹಚ್ಚಿ ಈ ಚಕ್ರದ ಬಳಿ ಗೋಡೆಗೆ ಅಂಟಿಸಿ ಇಡಲಾಗುತ್ತದೆ.

puri-chariot

ಪ್ರತಿವರ್ಷ ಆಷಾಢ ಮಾಸದಲ್ಲಿ ಒಡಿಸ್ಸಾದಲ್ಲಿ ಪುರಿ ಜಗನ್ನಾಥ ರಥಯಾತ್ರೆ ಉತ್ಸವವನ್ನು ತುಂಬಾ ಸಡಗರ ಮತ್ತು ಸಂಭ್ರಮದಿಂದ ಆಚರಿಸಲಾಗುತ್ತದೆ. ಇಲ್ಲಿ ನಡೆಯುವ ರಥೋತ್ಸವದಲ್ಲಿ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡು ಇಡೀ ರಥ ಬೀದಿ ಭಕ್ತಾದಿಗಳಿಂದ ತುಂಬಿ ಹೋಗಿರುತ್ತದೆ. ಈ ರಥಯಾತ್ರೆಯು ಪುರಿ ಜಗನ್ನಾಥ ದೇವಾಲಯದಿಂದ ಪ್ರಾರಂಭವಾಗಿ ಅಲ್ಲಿಂದ 2 ಕಿ.ಮೀ ಅಂತರದಲ್ಲಿರುವ ಶ್ರೀ ಗುಂಡಿಚಾ ದೇವಾಲಯದಲ್ಲಿ ಕೊನೆಗೊಳ್ಳುವುದು. ಪ್ರತಿವರ್ಷ 45.6 ಅಡಿ ಎತ್ತರದ ಈ ಎಲ್ಲ ರಥಗಳನ್ನು ಹೊಸದಾಗಿಯೇ ತಯಾರಿಸಲಾಗುತ್ತದೆ. ಇಷ್ಟೆ ಅಲ್ಲದೇ ರಥದಲ್ಲಿ ಕುಳ್ಳಿರಿಸುವ ದೇವತೆಗಳನ್ನು ಮರದಲ್ಲಿ ತಯಾರಿಸಲಾಗಿರುತ್ತದೆ. ಇವುಗಳನ್ನೂ ಕೂಡ ಎಲ್ಲ ವಿಧಿ ವಿಧಾನಗಳಂತೆ ಪ್ರತಿ 12 ವರ್ಷಕ್ಕೊಮ್ಮೆ ಬದಲಾಯಿಸಲಾಗುತ್ತದೆ. ಈ ವರ್ಷ ಆದಿ ಅಂತ್ಯವಿಲ್ಲದ ದೇವರಿಗೂ ಪುನರ್ಜನ್ಮ ಎಂದೇ ಹೇಳಬೇಕು. ಇದನ್ನು `ನಬ ಕಲೇಬರ್ ರಥಯಾತ್ರಾ’ ಎನ್ನುತ್ತಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top