ತಮಿಳುನಾಡು ಮೂಲದ ಶ್ರೀನಿವಾಸ ರಾಮಾನುಜಂ ಭಾರತ ಕಂಡ ಅದ್ಭುತ ಗಣಿತಶಾಸ್ತ್ರಜ್ಞರಲ್ಲಿ ಒಬ್ಬರು. ವಿಜ್ಞಾನ ಹಾಗೂ ವಿಶೇಷವಾಗಿ ಗಣಿತದಲ್ಲಿ ಮಹಾಮೇಧಾವಿ. ತಮಿಳುನಾಡಿನ ಈರೋಡಿನಲ್ಲಿ 1887 ಡಿಸೆಂಬರ್ 22ರಂದು ಸಂಪ್ರದಾಯಸ್ಥ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರು. ಗಣಿತದಲ್ಲಿ ಯಾವುದೇ ರೀತಿಯ ವಿಶೇಷ ತರಬೇತಿಯೂ ಇರಲಿಲ್ಲ. ಆದರೂ ಸಹ ಗಣಿತದಲ್ಲಿ ಅವರಿಗಿದ್ದ ಜನ್ಮತಃ ಬುದ್ಧಿಮತ್ತೆಯಿಂದ ಗಣಿತ ಕ್ಷೇತ್ರಕ್ಕೆ ಅಸಾಧಾರಣ ಕೊಡುಗೆ ನೀಡಿದ್ದಾರೆ.
ಗಣಿತಶಾಸ್ತ್ರೀಯ ವಿಶ್ಲೇಷಣೆ, ಸಂಖ್ಯಾ ಸಿದ್ಧಾಂತ, ಅನಂತಸರಣಿ ಮತ್ತು ಕ್ರಮಬದ್ಧ ಭಿನ್ನರಾಶಿ ವಿಭಾಗಕ್ಕೆ ಇವರು ನೀಡಿರುವ ಕೊಡುಗೆ ಅಪಾರ. ಬಾಲ್ಯದಿಂದಲೂ ಶಾಂತ ಮತ್ತು ಆಲೋಚನಾಸಕ್ತ ಸ್ವಭಾವದವರಾಗಿದ್ದರು. ತಾಯಿಯಿಂದ ದೇವರನಾಮ, ಭಕ್ತಿಗೀತೆಗಳನ್ನು ಕಲಿತು ಆಧ್ಯಾತ್ಮಿಕ ವಿಷಯಗಳಲ್ಲಿ ಆಸಕ್ತಿ ಹೊಂದಿದ್ದರು. ಐದನೇ ವಯಸ್ಸಿಗೆ ಶಾಲೆಗೆ ಸೇರಿದ ಅವರಿಗೆ ಕಲಿಕೆಯಲ್ಲಿ ಆಸಕ್ತಿ, ಕುತೂಹಲವಿತ್ತು. ಮೆಟ್ರಿಕ್ಯುಲೇಷನ್‍ನಲ್ಲಿ ಉನ್ನತ ಶ್ರೇಣಿ ಪಡೆದರು. ರಾಮಾನುಜಮ್ ಎಫ್.ಎ.ತರಗತಿಗಳಿಗೆ ಸೇರಿದಾಗ ಗಣಿತದಲ್ಲಿ ಆಸಕ್ತಿ ಹೆಚ್ಚಾಯಿತು. ಅನಾರೋಗ್ಯದ ಕಾರಣ ಓದುವುದನ್ನು ಬಿಟ್ಟರೂ ಗಣಿತ ಅಭ್ಯಾಸ ಬಿಡಲಿಲ್ಲ. ಇವರ ಮೇಧಾವಿತನದ ಬಗ್ಗೆ ಅಭಿಮಾನವಿದ್ದ ಹಿರಿಯರ ಶಿಫಾರಸ್ಸಿನಿಂದ ಮದ್ರಾಸಿನಲ್ಲಿ ಕೆಲಸ ದೊರೆತರೂ ಹೆಚ್ಚು ದಿನ ಸಾಗಲಿಲ್ಲ. ಪ್ರೊ.ಪಿ.ವಿ.ಶೇಷು ಅಯ್ಯರ್ ಅವರು ಕೇಂಬ್ರಿಡ್ಜ್ ಗಣಿತ ಉಪನ್ಯಾಸಕರಾಗಿದ್ದ ಕ್ಯಾಲೆ ಅವರಿಗೆ ರಾಮಾನುಜಂರ ಗಣಿತೀಯ ಶೋಧನೆಗಳನ್ನು ತಿಳಿಸಲು ಹೇಳಿದರು. ಇದು ಅವರ ಜೀವನದ ದಿಕ್ಕನ್ನೇ ಬದಲಿಸಿ, ಭಾರತವನ್ನು ಪ್ರಪಂಚದ ಗಣಿತೀಯ ಕ್ಷೇತ್ರದಲ್ಲಿ ಸೇರಿಸಿತು.
ಕ್ರಮೇಣ ರಾಮಾನುಜಂ ಕೇಂಬ್ರಿಡ್ಜ್‍ಗೆ ತೆರಳಿದರು.ಇಂಗ್ಲೆಂಡಿನಲ್ಲಿ ಐದು ವರ್ಷಗಳಿದ್ದು ಗಣಿತಕ್ಷೇತ್ರದಲ್ಲಿ ಅನೇಕ ಸಂಶೋಧನೆಗಳನ್ನು ಮಾಡಿದರು. ಈ ಅವಧಿಯಲ್ಲಿ ಅವರ ಇಪ್ಪತ್ತೊಂದು ಪ್ರಬಂಧಗಳು ಯುರೋಪಿನ ವಿವಿಧ ನಿಯಕಾಲಿಕಗಳಲ್ಲಿ ಪ್ರಕಟವಾದವರು. ಆ ಕಾಲದ ಶ್ರೇಷ್ಠ ವಿದ್ವಾಂಸರಾಗಿದ್ದ ಪ್ರೊ. ಹಾರ್ಡಿ, ಪ್ರೊ. ಜೆ.ಇ. ಲಿಟ್ಲ್‍ವುಡ್ ಮುಂತಾದವರು ಶ್ರೀನಿವಾಸ ರಾಮಾನುಜಂ ಅವರ ಶ್ರೇಷ್ಠತೆಯನ್ನು ಕೊಂಡಾಡಿದವರು. ರಾಮಾನುಜಂರ ಸಂಶೋಧನೆಗಳು ಅವರಿಗೆ ಪ್ರಶಂಸೆ, ಗೌರವ ಪ್ರತಿಷ್ಠೆಗಳನ್ನು ತಂದುಕೊಟ್ಟವು. ಬ್ರಿಟನ್ ಮತ್ತು ಅಂದಿನ ಬ್ರಿಟಿಷ್ ಸಾಮ್ರಾಜ್ಯದ ವಿಜ್ಞಾನ ಪ್ರಪಂಚದಲ್ಲಿ ರಾಯಲ್ ಸೊಸೈಟಿಯ ಫೆಲೋ ಆಗಿ ಫೆಬ್ರವರಿ 28, 1908ರಂದು ಚುನಾಯಿತರಾದವರು. ರಾಮಾನುಜಂರ ಸಂಶೋಧನೆ, ಸಾಧನೆಗಳು ಭಾರತೀಯ ವಿಜ್ಞಾನ ಮತ್ತು ಗಣಿತ ಕ್ಷೇತ್ರದಲ್ಲಿ ಹೊಸ ಭಾಷ್ಯವನ್ನೇ ಬರೆದವು.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
