fbpx
Editor's Pick

ಬೇಡನಾಗಿದ್ದ ರತ್ನಾಕರ ಶ್ರೀ ಮಹರ್ಷಿ ವಾಲ್ಮೀಕಿಯಾದ ಕಥೆ

 

ಮಹರ್ಷಿ ವಾಲ್ಮೀಕಿ ಕೇವಲ ವ್ಯಕ್ತಿಯಲ್ಲ ಅವರೊಂದು ಶಕ್ತಿ. ರಾಮಾಯಣ ಗ್ರಂಥದ ಮೂಲಕ ಜಗತ್ತಿಗೆ ಜ್ಞಾನದ ಬೆಳಕು ನೀಡಿದ ಮಹರ್ಷಿ ಜಗತ್ತಿನ ಶ್ರೇಷ್ಠ ದಾರ್ಶನಿಕ ಪುರುಷ. ಮಹರ್ಷಿ ವಾಲ್ಮೀಕಿ ರಚಿಸಿದ ರಾಮಾಯಣ ಮಹಾಕಾವ್ಯ ಮತ್ತು ಮಹಾಕಾವ್ಯದಲ್ಲಿನ ಎಲ್ಲ ಪಾತ್ರಗಳು ಆಧ್ಯಾತ್ಮಿಕ, ಸಾಮಾಜಿಕ ನ್ಯಾಯ ಮಾನವೀಯತೆಯ ಮತ್ತು ವಿಶ್ವ ಭಾತೃತ್ವದ ಸಂಕೇತಗಾಳಾಗಿವೆ. ಮಹರ್ಷಿ ವಾಲ್ಮೀಕಿ ಜಗದ ಯುಗ ಯುಗಾಂತರದ ಕವಿ.ಸಾವಿರ ಸಾವಿರ ವರುಷ ಕಳೆದರೂ ಮರೆಯಲಾಗದ ಮಹಾಕಾವ್ಯ ರಾಮಾಯಣವನ್ನು ಶ್ಲೋಕಗಳ ರೂಪದಲ್ಲಿ ರಚಿಸಿ ಕೊಟ್ಟವರು. ಜನರ ಬದುಕಿಗೆ ಸದಾ ಕಾಲ ಮಾರ್ಗದರ್ಶನ ಮಾಡಬಲ್ಲ ಸಾಮರ್ಥ್ಯ ರಾಮಾಯಣದಲ್ಲಿದೆ. ಮಾನವೀಯತೆಯೇ ಧರ್ಮ ಎಂಬುದನ್ನು ಪ್ರತಿಪಾದಿಸಿದ ಮಹಾನ್ ದಾರ್ಶನಿಕ ಮಹರ್ಷಿ ವಾಲ್ಮೀಕಿ ಅವರ ಜೀವನ ಚರಿತ್ರೆಯನ್ನು ಪ್ರತಿಯೊಬ್ಬರು ತಿಳಿದುಕೊಳ್ಳುವುದು ಅಗತ್ಯ. ವಾಲ್ಮೀಕಿ ಅವರು ಮಾನವ ಕುಲಕ್ಕೆ ತನ್ನದೇ ಆದ ಕೊಡುಗೆ ನೀಡಿದ ಮಹಾನ್ ಚೇತನ. ಇಡೀ ವಿಶ್ವಕ್ಕೆ ರಾಮಾಯಣದಂತಹ ಮಹಾನ್ ಗ್ರಂಥವನ್ನು ನೀಡಿದ ಕೊಡುಗೆ ಮಹರ್ಷಿ ವಾಲ್ಮೀಕಿಗೆ ಸಲ್ಲುತ್ತದೆ.

 

*ಒಬ್ಬ ವ್ಯಕ್ತಿ ನಮಗೆ ಮಹಾನ್ ಎಂದೆನಿಸಿದಾಗ ನಾವು ಕೇವಲ ಅವರ ಹಿಂಬಾಲಕರಾಗಿರುತ್ತೇವೆ. ಆ ಮಹಾನ್ ವ್ಯಕ್ತಿಯ ಕಾರ್ಯವನ್ನು ಅಭ್ಯಸಿಸಿ ಅಲ್ಲಿನ ಮೌಲ್ಯಗಳನ್ನು ಅರಿತುಕೊಂಡಾಗ ಪುನೀತರಾಗುತ್ತೇವೆ. ವಾಲ್ಮೀಕಿ ಮರ್ಹರ್ಷಿಗಳು ರಚಿಸಿದ ರಾಮಾಯಣವು ಆದಿಕಾವ್ಯವೆನಿಸಿದೆ. ಹಲವಾರು ರಾಮಾಯಣಗಳು ಕಾಲಾನುಕ್ರಮದಲ್ಲಿ ರಚಿತವಾಗಿದ್ದರೂ ಇವೆಲ್ಲವೂ ವಾಲ್ಮೀಕಿ ರಾಮಾಯಣವನ್ನೇ ಅನುಸರಿಸಿ ಬಂದಂತಹವು. ಯಾವುದೇ ಕವಿ ರಾಮಾಯಣವನ್ನು ಬರೆಯುವಾಗಲೂ ವಾಲ್ಮೀಕಿಯನ್ನು ಅನುಸರಿಸದೆ ಇಲ್ಲ.

 

*ವಾಲ್ಮೀಕಿ ಮಹರ್ಷಿಗಳಾಗುವುದಕ್ಕೆ ಮುಂಚಿನ ಬದುಕಿನ ಬಗ್ಗೆ ಒಂದು ಐತಿಹ್ಯವಿದೆ. ಅವರ ಮೊದಲ ಹೆಸರು ರತ್ನಾಕರ ಎಂದಿತ್ತು. ಈ ರತ್ನಾಕರ ಒಳ್ಳೆಯ ಮನೆತನದಲ್ಲಿ ಜನಿಸಿದ್ದನಾದರೂ ದರೋಡೆಕೋರರ ಸಂಸರ್ಗದಲ್ಲಿ ಇದ್ದುದರಿಂದ ದರೋಡೆ, ಕೊಲೆಗಳನ್ನು ಮಾಡತೊಡಗಿದ್ದನು. ಇದೇ ಆತನ ಜೀವನ ನಿರ್ವಾಹದ ಕಸುಬೂ ಆಗಿಹೋಗಿತ್ತು. ಒಂದು ದಿನ ರತ್ನಾಕರನ ಎದುರಿಗೆ ನಡೆದು ಬಂದವರು ದೇವಋಷಿ ನಾರದರು. ರತ್ನಾಕರ ನಾರದರಿಗೆ ಹೇಳಿದನು – “ನಿನ್ನಲ್ಲಿ ಇದ್ದುದೆಲ್ಲವನ್ನು ನನಗೆ ಕೊಟ್ಟುಬಿಡು. ಇಲ್ಲದಿದ್ದರೆ ಪ್ರಾಣವನ್ನು ಕಳೆದುಕೊಳ್ಳುತ್ತೀಯೆ!”

 

*ನಾರದರು ನುಡಿದರು – “ನನ್ನ ಬಳಿ ಈ ವೀಣೆ ಮತ್ತು ತೊಟ್ಟ ವಸ್ತ್ರಗಳ ಹೊರತಾಗಿ ಇನ್ನೇನೂ ಇಲ್ಲ. ನಿನಗೆ ಬೇಕಿದ್ದರೆ ತೆಗೆದುಕೊಳ್ಳಬಹುದು. ಆದರೆ ನೀನು ಇಂತಹ ಕ್ರೂರಕರ್ಮವನ್ನು ಮಾಡಿ ಭಯಂಕರವಾದ ಪಾಪವನ್ನು ಏಕೆ ಮಾಡುತ್ತಿರುವೆ?”. ದೇವರ್ಷಿಗಳ ಕೋಮಲವಾದ ಮಾತಿನಲ್ಲಿ ಅದೆಂತದ್ದೋ ಮೋಡಿಯಿತ್ತು. ರತ್ನಾಕರನಾದರೋ ಇಂತಹ ಸುಮನೋಹರ ಧ್ವನಿಯನ್ನು ಎಂದೂ ಕೇಳಿದ್ದೇ ಇಲ್ಲ! ಈ ಸಂವೇದನೆಯಲ್ಲಿ ಆತನ ಕಠೋರ ಹೃದಯ ಕರಗಿತು. ಅವನು ಹೇಳಿದನು – “ಸ್ವಾಮಿ! ಪಾಪ ಎಂದರೇನು? ನನಗೆ ಜೀವನಕ್ಕೆ ಇದೇ ಸಾಧನೆಯಾಗಿದೆ. ಇದರಿಂದಲೇ ನಾನು ನನ್ನ ಪರಿವಾರವನ್ನು ಸಾಕುತ್ತಿರುವುದು.”

 

*ನಾರದರು ಹೇಳಿದರು – “ನೀನು ಮೊದಲಿಗೆ ಮನೆಗೆ ಹೋಗಿ ‘ನಿನ್ನ ಪರಿವಾರದವರು ನಿನ್ನಿಂದ ಕೇವಲ ಸಾಕಲ್ಪಡಲು ಮಾತ್ರ ಅಧಿಕಾರಿಗಳಾಗಿರುವರೋ, ಅಥವಾ ನಿನ್ನ ಪಾಪದಲ್ಲಿಯೂ ಸಹಭಾಗಿಗಳಾಗಿರುವರೋ’ ಎಂದು ಕೇಳಿ ಬಾ, ನೀನು ಮರಳಿ ಬರುವವರೆಗೆ ನಾನು ಇಲ್ಲೇ ಇರುವೆನು. ಎಲ್ಲಿಗೂ ಹೋಗುವುದಿಲ್ಲ. ನಿನಗೆ ನಂಬಿಕೆ ಇಲ್ಲದಿದ್ದರೆ ನನ್ನನ್ನು ಒಂದು ಮರಕ್ಕೆ ಕಟ್ಟಿಹಾಕು.”

 

*ರತ್ನಾಕರನು ನಾರದರನ್ನು ಕಟ್ಟಿಹಾಕಿ ತನ್ನ ಮನೆಗೆ ಹೋದನು. ಅವನು ತನ್ನ ಕುಟುಂಬದವರನ್ನೆಲ್ಲಾ ಕೇಳಿದನು – “ನೀವೆಲ್ಲರೂ ನನ್ನ ಪಾಪದಲ್ಲಿ ಭಾಗಿಗಳಾಗುವಿರೋ, ಅಥವಾ ಕೇವಲ ನನ್ನ ಸಂಪತ್ತಿಗೆ ಪಾಲುದಾರರೋ?” ಅವರೆಲ್ಲರೂ ಹೇಳಿದ್ದು ಹೆಚ್ಚೂ ಕಡಿಮೆ ಒಂದೇ ರೀತಿಯಲ್ಲಿತ್ತು – “ಒಡಲ ಹೊರುವುದು ಗೊತ್ತು, ಪಾಪ ನಿಮ್ಮಯ ಸೊತ್ತು”. ನೀನು ಯಾವ ರೀತಿಯಿಂದ ಧನವನ್ನು ತರುವೆಯೋ ಅದು ನಿನಗೆ ಗೊತ್ತು. ನಾವು ನಿನ್ನ ಪಾಪದಲ್ಲಿ ಹೇಗೆ ತಾನೇ ಪಾಲುದಾರರಾದೇವು!

 

*ತನ್ನ ಕುಟುಂಬದವರ ಮಾತನ್ನು ಕೇಳಿ ರತ್ನಾಕರನ ಹೃದಯಕ್ಕೆ ಆಘಾತವಾಯಿತು. ಅವನ ಅರಿವಿನ ಕಣ್ಣು ತೆರೆಯಿತು. ಅವನು ಬೇಗನೇ ಕಾಡಿಗೆ ಹೋಗಿ ನಾರದರ ಬಂಧನವನ್ನು ಬಿಡಿಸಿ, ವಿಲಪಿಸುತ್ತಾ ಅವರ ಚರಣಗಳಲ್ಲಿ ಕುಸಿದುಬಿದ್ದನು. ಅವನ ಪ್ರಲಾಪದಲ್ಲಿ ಆಳವಾದ ಪಶ್ಚಾತ್ತಾಪ ತುಂಬಿತ್ತು. ನಾರದರು ಅವನಿಗೆ ಧೈರ್ಯಹೇಳಿ ರಾಮನಾಮದ ಉಪದೇಶ ನೀಡಿದರು. ಆದರೆ ಹಿಂದೆ ಮಾಡಿದ ಪಾಪಗಳಿಂದಾಗಿ ಅವನಿಗೆ ರಾಮನಾಮವನ್ನು ಉಚ್ಚರಿಸಲಾಗಲಿಲ್ಲ. ಆಗ ನಾರದರು ಯೋಚಿಸಿ ‘ಮರಾ-ಮರಾ’ ಎಂದು ಜಪಿಸಲು ಹೇಳಿದರು. ಮರ ಅವನಿಗೆ ಪರಿಚಿತವಾದ್ದರಿಂದ ಹಾಗೇ ಜಪಿಸತೊಡಗಿದನು. ಮರಾ-ಮರಾ ಎಂದು ನಿರಂತರ ಹೇಳುವುದರಿಂದ ರಾಮ-ನಾಮದ ಉಚ್ಚಾರವು ಸಹಜವಾಗೆಂಬಂತೆ ಆಯಿತು. ಇದನ್ನೇ ದಾಸರು “ಆ ಮರ ಈ ಮರ ಎಂದು ಧ್ಯಾನಿಸುವಾಗ, ರಾಮ ರಾಮ ಎಂಬ ನಾಮವೇಕಾಯಿತೋ” ಎಂದು ಹಾಡಿರುವುದು.

 

*ನಾರದರಿಂದ ಉಪದೇಶ ಪಡೆದು ರತ್ನಾಕರನು ನಾಮಜಪದಲ್ಲಿ ಮುಳುಗಿಹೋದನು. ಹಲವಾರು ವರ್ಷಗಳವರೆಗೆ ನಾಮಜಪದ ಪ್ರಬಲ ನಿಷ್ಠೆಯಿಂದ ಅವನ ಸಮಸ್ತ ಪಾಪಗಳೂ ತೊಳೆದುಹೋದವು. ಅವನ ಶರೀರದ ಮೇಲೆ ಹುತ್ತ ಬೆಳೆಯಿತು. ಹುತ್ತಕ್ಕೆ ವಲ್ಮೀಕವೆಂದು ಹೇಳುವರು. ದೈವ ಸಾಕ್ಷಾತ್ಕಾರದಿಂದ ವಲ್ಮೀಕದಿಂದ ಹೊರಬಂದ ಕಾರಣದಿಂದ ಅವನ ಹೆಸರು ವಾಲ್ಮೀಕಿ ಎಂದಾಯಿತು.

 

*ಮಹರ್ಷಿಗಳಾದ ವಾಲ್ಮೀಕಿಗಳು ಪ್ರಪಂಚದಲ್ಲಿ ಲೌಕಿಕ ಛಂದಸ್ಸುಗಳ ಆದಿಕವಿಗಳೇ ಆದರು. ಈ ವಾಲ್ಮೀಕಿ ಮಹರ್ಷಿಗಳು ಬ್ರಹ್ಮನ ಅನುಗ್ರಹದಿಂದ ರಾಮಾಯಣವನ್ನು ರಚಿಸಿದರು ಎಂಬುದು ಭಾರತೀಯ ನಂಬಿಕೆ. ಬ್ರಹ್ಮನ ಮಡದಿಯಾದ ವಾಗ್ದೇವಿ ತಾನಾಗಿಯೇ ವಾಲ್ಮೀಕಿಯ ನಾಲಿಗೆಯಲ್ಲಿದು ರಾಮಾಯಣವನ್ನು ಹೊರಹೊಮ್ಮಿಸಿದಳು ಎಂಬುದು ಭಕ್ತಿಪೂರ್ಣ ಭಾರತೀಯ ಭಾವವಾಗಿದೆ.

 

*ತಮ್ಮ ಬೋಧನೆಯಿಂದ ಮಹರ್ಷಿಯಾದ ಈ ವಾಲ್ಮೀಕಿ ಮಹರ್ಷಿಗಳ ಆಶ್ರಮಕ್ಕೆ ಒಮ್ಮೆ ನಾರದರು ಆಗಮಿಸಿದರು. ಬಂದ ದೇವರ್ಷಿಗಳನ್ನು ಯಥೋಚಿತವಾಗಿ ಅರ್ಘ್ಯಪಾದ್ಯಾದಿಗಳಿಂದ ಸತ್ಕರಿಸಿದರು ವಾಲ್ಮೀಕಿ. ಸತ್ಕಾರವಾದ ಮೇಲೆ ತಪೋನಿರತರಾದ ನಾರದರನ್ನು ಮುನಿಶ್ರೇಷ್ಠರಾದ ವಾಲ್ಮೀಕಿ ಮಹರ್ಷಿಗಳು ಪ್ರಶ್ನಿಸಿದರು – “ಈ ಲೋಕದಲ್ಲಿ ಈಗ ಸಕಲ ಸದ್ಗುಣ ಸಂಪನ್ನ, ಪರಾಕ್ರಮಶಾಲಿ, ಧರ್ಮಜ್ಞ, ಸತ್ಯದ ವ್ರತ ಹಿಡಿದವನು, ಮಾಡಿದ ಸಂಕಲ್ಪವನ್ನು ಬಿಡದವನು, ಪರಂಪರೆಯಾಗಿ ಬಂದ ಸದಾಚಾರ ಸಂಪನ್ನ, ಸರ್ವ ಕಾರ್ಯ ದುರಂಧರ, ಪ್ರಿಯದರ್ಶನ, ಧೈರ್ಯಶಾಲಿ, ಕಾಂತಿಮಂತ, ಕೋಪವನ್ನು ಜಯಿಸಿದವನು, ಅಹಂಕಾರ ರಹಿತ, ಅಸೂಯೆ ಇಲ್ಲದವನು, ಯುದ್ಧಕ್ಕೆ ನಿಂತರೆ ದೇವತೆಗಳನ್ನೇ ಗೆಲ್ಲಬಲ್ಲವನು ಇದ್ದಾನೆಯೇ? ಈ ಹದಿನಾರು ಗುಣಗಳಿಂದ ಕೂಡಿದಂಥವ ಈಗ ಈ ಲೋಕದಲ್ಲಿ ಇದ್ದರೆ ದಯೆಯಿಟ್ಟು ತಿಳಿಸಿ, ನನಗೆ ಬಹಳ ಕುತೂಹಲವಾಗಿದೆ. ಸ್ವಾಮಿ, ನೀವು ಇದನ್ನು ತಿಳಿಸಲು ಸಮರ್ಥರು – ಅದಕ್ಕೇ ನಾನು ಕೇಳುತ್ತಿದ್ದೇನೆ; ದಯೆಯಿಟ್ಟು ತಿಳಿಸಿ”.

 

*ಈ ಪ್ರಶ್ನೆಯನ್ನು ಕೇಳಿದ ನಾರದ ಸಂತೋಷದಿಂದ ವಾಲ್ಮೀಕಿಗೆ “ನೀವು ಕೇಳುವಂತೆ ಸಕಲ ಗುಣಗಳಿಂದ ಕೂಡಿದವನು ಇದ್ದಾನೆ. ಅವನೇ ಇಕ್ಷ್ವಾಕು ವಂಶದಲ್ಲಿ ಅವತರಿಸಿದ ಶ್ರೀರಾಮ” ಎಂದು ಸಂಕ್ಷೇಪವಾಗಿ ಶ್ರೀರಾಮಾವತಾರದಿಂದ ಪ್ರಾರಂಭಿಸಿ, ಸೀತಾಕಲ್ಯಾಣ, ಅರಣ್ಯಾಗಮನ, ಪಾದುಕಾ ಪ್ರದಾನ, ಸೀತಾಪಹರಣ, ಸುಗ್ರೀವ ಸಖ್ಯ, ಸೇತುಬಂಧ, ರಾವಾಣಾಧಿಗಳ ನಿಗ್ರಹ, ಅಯೋಧ್ಯೆಯಲ್ಲಿ ಪಟ್ಟಾಭಿಷೇಕದವರೆಗೆ ಶ್ರೀರಾಮ ಕಥೆಯನ್ನು ಹೇಳಿದರು.

 

*ರಾಮನಾಮದ ಮಹಿಮೆಯಿಂದಲೇ ಮಹರ್ಷಿಗಳಾದ ವಾಲ್ಮೀಕಿಗಳಿಗೂ ಶ್ರೀರಾಮನ ಕಥೆಯ ಅನುಭಾವವಾಗಿತ್ತು. ತಮಗೆ ತಿಳಿದಿರುವುದನ್ನು ಚೆನ್ನಾಗಿ ಮನದಟ್ಟು ಮಾಡಿಕೊಳ್ಳುವ ಸಲುವಾಗಿಯೇ ಅವರು ನಾರದರನ್ನು ಕೇಳಿದ್ದರು.

 

*ನಾರದರು ಹೊರಟು ಹೋದಮೇಲೆ ವಾಲ್ಮೀಕಿ ಮಹರ್ಷಿಗಳು ಸ್ನಾನ ಮಾಡಲು ಶಿಷ್ಯನಾದ ಭಾರದ್ವಾಜನೊಡನೆ ತಮಸಾನದೀ ತೀರಕ್ಕೆ ಬರುತ್ತಾರೆ. ನದೀ ತೀರದ ದೃಶ್ಯ ಸುಮನೋಹರವಾಗಿದೆ. ನದಿಯ ನೀರು ಸತ್ಪುರುಷರ ಮನಸ್ಸಿನಂತೆ ತಿಳಿಯಾಗಿದೆ. ಸತ್ಪುರುಷರ ಮನಸ್ಸು ಯಾವಾಗಲೂ ತಿಳಿಯಾಗಿರುತ್ತದೆ. ಅಂತೆಯೇ ಸರೋವರದ ಜಲವೂ ಸ್ಪಟಿಕದಂತೆ ಶುಭ್ರವಾಗಿ ತಿಳಿಯಾಗಿರುವುದನ್ನು ಕಂಡು ವಾಲ್ಮೀಕಿ ಸಂತೋಷ ಪಡುತ್ತಾರೆ. ಸುತ್ತಲೂ ತಿರುಗಿ ಪ್ರಕೃತಿ ಸೌಂದರ್ಯವನ್ನು ನೋಡತೊಡಗುತ್ತಾರೆ.

 

*ಆ ಸಮಯದಲ್ಲಿ ಯಾವನೋ ಒಬ್ಬ ಬೇಡ ಮರದ ಮೇಲೆ ಸಂತೋಷದಿಂದ ಕುಳಿತಿದ್ದ ಕ್ರೌಂಚ ಪಕ್ಷಿಗಳಲ್ಲಿ ಗಂಡು ಹಕ್ಕಿಯನ್ನು ತನ್ನ ಬಾಣದಿಂದ ಹೊಡೆದು ಹಾಕುತ್ತಾನೆ. ಗಂಡು ಹಕ್ಕಿ ಕೆಳಗುರುಳಿದಾಗ ಅದನ್ನು ಕಂಡು ಹೆಣ್ಣು ಹಕ್ಕಿ ವಿಲಪಿಸುತ್ತದೆ. ಈ ದೃಶ್ಯವನ್ನು ಕಂಡು ವಾಲ್ಮೀಕಿ ಮಹರ್ಷಿಗಳಿಗೆ ಸಂಕಟವಾಗಿ ಕೋಪ ಬರುತ್ತದೆ. ಕೋಪದ ಭರದಲ್ಲಿ “ಹೇ ನಿಷಾದ! ಕಾಮಮೋಹಿತವಾಗಿರುವ ಈ ಪಕ್ಷಿದ್ವಯರಲ್ಲಿ ಗಂಡು ಹಕ್ಕಿಯನ್ನು ಕೊಂದೆಯಾದ ಕಾರಣ ನೀನು ಬಹುಕಾಲ ಬದುಕುವುದು ಬೇಡ” ಎಂದು ಶಪಿಸುತ್ತಾರೆ.

 

*ಶಪಿಸಿದ ನಂತರ ಜಿತಕ್ರೋಧರಾಗಿರಬೇಕಾದ ತಮ್ಮಿಂದ ಶಾಪ ಹೊರಹೊಮ್ಮಿತಲ್ಲಾ ಎಂದು ಕಳವಳ ಪಡುತ್ತಾರೆ. ಸ್ನಾನ-ಅಹ್ನೀಕಗಳನ್ನು ಮುಗಿಸಿಕೊಂಡು ಆಶ್ರಮಕ್ಕೆ ಬಂದು ತಾವು ಹೇಳಿದ ಶ್ಲೋಕವನ್ನೇ ಮತ್ತೆ ಮತ್ತೆ ಧ್ಯಾನಿಸತೊಡಗುತ್ತಾರೆ. ಅದೇ ಸಮಯಕ್ಕೆ ಬ್ರಹ್ಮದೇವರು ವಾಲ್ಮೀಕಿಯ ಬಳಿ ಬರುತ್ತಾರೆ.

 

*ಚಿಂತಾಕ್ರಾಂತರಾಗಿರುವ ಋಷಿವರ್ಯರನ್ನು ಕಂಡು “ಚಿಂತಿಸುವ ಕಾರಣವಿಲ್ಲ. ನಿಮ್ಮ ಬಾಯಿಂದ ಸಾಕ್ಷಾತ್ ವಾಣಿಯೇ ಆ ಶ್ಲೋಕವನ್ನು ನುಡಿಸಿದ್ದಾಳೆ. ಇದು ನೀವು ರಚಿಸುವ 24,000 ಶ್ಲೋಕವುಳ್ಳ ರಾಮಾಯಣ ಕಾವ್ಯಕ್ಕೆ ನಾಂದೀ ಶ್ಲೋಕವಾಗಿ, ಮಂಗಳ ಶ್ಲೋಕವಾಗಿ ಪರಿಣಮಿಸುತ್ತದೆ” ಎಂದು ನುಡಿದರು.

 

*ವಾಲ್ಮೀಕಿ ಮಹರ್ಷಿಗಳ ಬಾಯಿಂದ ಹೊರಟ ಶ್ಲೋಕವಾದರೋ ಹೀಗಿತ್ತು.

“ಮಾ ನಿಷಾದ ಪ್ರತಿಪ್ಠಾತ್ವಂ ಆಗಮಃ ಶಾಶ್ವತೀಃ ಸಮಾಃ|

ಯತ್ಕ್ರೌಂಚ ಮಿಥುನಾದೇಕಂ ಅವಧೀಹ್ ಕಾಮಮೋಹಿತಂ||”

 

*“ಎಲೈ ನಿಷಾದನೇ, ಕಾಮಮೋಹಿತವಾಗಿರುವ ಕ್ರೌಂಚ ದಂಪತಿಗಳಲ್ಲಿ ಒಂದನ್ನು ನೀನು ಅಸಮಯದಲ್ಲಿ ಕೊಂದೆಯಾದ್ದರಿಂದ ನೀನು ಬಹಳ ಕಾಲ ಬದುಕದಂಥ ಸ್ಥಿತಿಯನ್ನು ಪಡೆ.” ಮೇಲ್ನೋಟಕ್ಕೆ ತೋರಿ ಬರುವ ಅರ್ಥ ಇದು. ಈ ಶ್ಲೋಕ ಶಾಪರೂಪವಾಗಿ ಹೊರಬಂದಿತು. ಆದರೆ ಅದು ಶಾಪವಾಗಿರದೆ ತಂತ್ರೀಲಯಗಳಿಂದ ಒಡಗೂಡಿ ಪ್ರಾಸಬದ್ಧ, ಛಂದೋಬದ್ಧವಾದ ಶ್ಲೋಕವಾಗಿ ಹೊರಹೊಮ್ಮಿದ್ದನ್ನು ಕಂಡು ವಾಲ್ಮೀಕಿಗೇ ಅಚ್ಚರಿಯಾಗುತ್ತದೆ”

 

*ಅದನ್ನೇ ಬ್ರಹ್ಮ ವಾಲ್ಮೀಕಿಗೆ ಸಮಾಧಾನ ಮಾಡುತ್ತಾ “ಇದು ಮಂಗಳ ಶ್ಲೋಕ ಎಂದು ಹೇಳಿದ್ದು. ಈ ಶ್ಲೋಕಕ್ಕೆ ಅನೇಕ ಜ್ಞಾನಿಗಳು ವ್ಯಾಖ್ಯಾನ ಮಾಡಿದ್ದಾರೆ. “ಮಾ” ಶಬ್ದ ಲಕ್ಷ್ಮಿಗೆ ಅನ್ವಯಿಸುತ್ತದೆ. ಲಕ್ಮೀಸಮೇತ ನಾರಾಯಣ ಸ್ವರೂಪ ಶ್ರೀರಾಮ, ಕಾಮಮೋಹಿತವಾಗಿದ್ದ ಕ್ರೌಂಚ ಪಕ್ಷಿಯನ್ನು ಕೊಂದೆಯಾದ್ದರಿಂದ ನೀನು “ಶಾಶ್ವತೀ ಸಮಾಃ” ಅಂದರೆ “ಶಾಶ್ವತವಾಗಿ ಬಾಳುವವನಾಗು” ಎಂದು. ಅದುವರೆಗೆ ತಾವು ಕೇಳಿದ ರಾಮಾಯಣ ಕಥಾನಾಯಕ ಶ್ರೀರಾಮನನ್ನು ಕುರಿತು, ಮಂಗಳಾಶೀರ್ವಾದ ಮಾಡುತ್ತಿರುವ ಶ್ಲೋಕವಾಗಿದೆ ಇದು.

 

*ಕ್ರೌಂಚಪಕ್ಷಿಗಳೇ ರಾವಣ ಮಂಡೋದರಿಯ ಪ್ರತೀಕ. ಆ ಬೇಡನೇ ಶ್ರೀರಾಮ. ಕಾಮ ಮೋಹಿತವಾದ ಕ್ರೌಂಚ ಪಕ್ಷಿ ಎಂದರೆ ಕಾಮಿಯಾದ ರಾವಣ ಎಂದರ್ಥ. ಅಂಥ ಕ್ರೌಂಚ ಪಕ್ಷಿಯ ಹೊಡೆದ ಬೇಡನೇ ಶ್ರೀರಾಮ. “ರಾವಣನಿಗ್ರಹ ಮಾಡಿದ ರಾಮ! ನೀನು ಶಾಶ್ವತವಾಗಿ ಬಾಳುವಂಥವನಾಗು” ಎಂದು ರಾಮನಿಗೆ ಮಂಗಳಾಶೀರ್ವಾದ ಮಾಡುವ ಶ್ಲೋಕ ಇದು.

 

*“ರಹಸ್ಯ ಚ ಪ್ರಕಾಶಂ ಚ ಯದ್ವ್ರತ್ತಂ ತಸ್ಯ ಧೀಮತಃ” ಎಂಬುದಾಗಿ ಬ್ರಹ್ಮದೇವರು ವಾಲ್ಮೀಕಿಯನ್ನು ಅನುಗ್ರಹಿಸಿದರಂತೆ

*“ನಿನಗೆ ರಾಮಾಯಣದಲ್ಲಿನ ಸೂಕ್ಷ್ಮಾತಿಸೂಕ್ಷ್ಮ ದೃಶ್ಯಗಳು – ಅವು ರಹಸ್ಯವೇ ಆದರೂ –ವೇದ್ಯವಾಗಲೀ” ಎಂದು ಬ್ರಹ್ಮರು ವಾಲ್ಮೀಕಿಯನ್ನು ಹರಸಿ ತಮ್ಮ ಸ್ವಸ್ಥಾನಕ್ಕೆ ಹಿಂದಿರುಗಿದರು. ಬ್ರಹ್ಮ ದೇವರು ಹೊರಟು ಹೋದಮೇಲೆ ಧರ್ಭೆಯ ಆಸನದಲ್ಲಿ ಕುಳಿತು ವಾಲ್ಮೀಕಿ ಧ್ಯಾನಾಸಕ್ತರಾದರು. ಬ್ರಹ್ಮದೇವನ ಅನುಗ್ರಹದಿಂದ ವಾಗ್ದೇವಿಯಿಂದ ಪ್ರೇರಿತವಾಗಿ ತಮಗೆ ತಾವೇ ಎಲ್ಲಾ ದೃಶ್ಯಗಳೂ ಒಂದಾದ ಮೇಲೊಂದು ಮನಃಪಟಲದಲ್ಲಿ ಕಂಡುಬರುತ್ತಿರುವಂತೆ ವಾಲ್ಮೀಕಿ 24,000 ಶ್ಲೋಕಗಳುಳ್ಳ ಶ್ರೀಮದ್ರಾಮಾಯಣವನ್ನು ರಚಿಸಿದರು. ಇದು ಇತಿಹಾಸ – ಅಂದರೆ ನಡೆದದ್ದನ್ನು ನಡೆದಂತೆ ಹೇಳುವ ಕಾವ್ಯ ಎನಿಸಿಕೊಂಡಿತು.

 

*ರಾಮಾಯಣದ ರಚನೆಯೇನೋ ಆಯಿತು. ಆದರೆ ಅದರ ಪ್ರಚಾರ ಹೇಗಾಗುವುದೋ ಎಂಬ ಚಿಂತೆ ವಾಲ್ಮೀಕಿ ಮಹರ್ಷಿಗಳನ್ನು ಕಾಡುತ್ತಿತ್ತು. ಆ ವೇಳೆಗೆ ಸರಿಯಾಗಿ ಚಂದ್ರ ಸೂರ್ಯರಂತೆ ಅಲ್ಲಿಗೆ ಕುಶ ಲವರು ಬಂದು ವಾಲ್ಮೀಕಿಯ ಚರಣಗಳಿಗೆ ನಮಿಸಿದರು. ರಾಮಾಯಣವನ್ನು ರಾಮನ ಕುವರರಾದ ಕುಶ ಲವರಿಗೆ ವಾಲ್ಮೀಕಿ ಉಪದೇಶಿಸಿದರು. ಅವರು ಮೊದಲು ಋಷಿಗಳ ಸಮೂಹದಲ್ಲಿ ರಾಮಾಯಣವನ್ನು ಗಾನ ಮಾಡಿದರು. ರಸಿಕರಾದ ಋಷಿಗಳೆಲ್ಲಾ ಮಧುಪಾನ ಮಾಡಿದವರಂತೆ ರಾಮಾಯಣದ ಮಧುವನ್ನು ಆಸ್ವಾದಿಸಿದರು. ತುಷ್ಟರಾದರು. ಎಲ್ಲ ಋಷಿಗಳೂ ಮುದದಿಂದ ಕುಮಾರರಿಬ್ಬರನ್ನೂ “ಚಿರಾಯುಗಳಾಗಿ” ಎಂದು ಹರಸಿದರು.

 

*ಅಷ್ಟರಲ್ಲಿ ವಾಲ್ಮೀಕಿ ಮಹರ್ಷಿಗಳಿಗೆ ಶ್ರೀರಾಮರಿಂದ ಅಶ್ವಮೇಧ ಯಾಗಕ್ಕೆ ದಯಮಾಡಿಸುವಂತೆ ಕರೆ ಬಂದಿತು. ಆಗ ಅವರು ತಮ್ಮೊಂದಿಗೆ ಕುಶ ಲವರನ್ನೂ ಕರೆದೊಯ್ದರು. ರಾಮಾಯಣದ ಗಾನರೂಪಕ ಶ್ರೀರಾಮನ ಅಶ್ವಮೇಧ ಮಹಾಮಂಟಪದಲ್ಲಿ ಕಿಕ್ಕಿರಿದ ಜನಸ್ತೋಮದ ಇದಿರು ನಡೆಯಿತು. ಇಂದ್ರ ಅಗ್ನಿಯಂತೆ ಶೋಭಿಸುತ್ತಿರುವ ಕುಶ ಲವರು ಸುಶ್ರಾವ್ಯವಾದ ಕಂಠದೊಡನೆ ಮಧುರವಾದ ವೀಣಾನಾದ ಜೊತೆಗೂಡುತ್ತಿದ್ದಂತೆ ರಾಮಾಯಣವನ್ನು ಗಾನ ಮಾಡಿದರು. ಎಲ್ಲರೂ ಕೇಳಿ ಮೆಚ್ಚಿದರು. ಸಿಂಹಾಸನದಲ್ಲಿ ಕುಳಿತಿದ್ದ ಶ್ರೀರಾಮರು ರಾಮಾಯಣದ ಮಾಧುರ್ಯಕ್ಕೆ ಮನಸೋತವರಾಗಿ ಮೆಲ್ಲ ಮೆಲ್ಲಗೆ ತೆವಳುತ್ತಾ ಕುಶ ಲವರ ಸಮೀಪದಲ್ಲಿ ಜನಗಳ ನಡುವೆಯೇ ಬಂದು ಕುಳಿತರಂತೆ. ವಸಿಷ್ಠರು “ಇದೇನು, ರಾಮ? ನಿನ್ನ ಕಥೆಯನ್ನು ಕೇಳಲು ನೀನು ಇಷ್ಟು ಉತ್ಸುಕನಾಗಿರುವೆ” ಎನಲು, ಶ್ರೀರಾಮರು “ಇದನ್ನು ನಾನು ಮೆಚ್ಚುಗೆಯಿಂದ ಕೇಳುತ್ತಿರುವುಡು ನನ್ನ ಕಥೆ ಎಂದಲ್ಲ, ಸೀತೆಯ ಕಥೆ ಎಂದು” ಎಂದು ನುಡಿದರಂತೆ.

 

*ಹೀಗೆ ವಾಲ್ಮೀಕಿ ಮಹರ್ಷಿಗಳ ರಾಮಾಯಣದ ಪ್ರಚಾರ ನಡೆಯಿತು. ಕುಶ ಲವರು ಶ್ರೀರಾಮನ ಸಮ್ಮುಖದಲ್ಲಿ ರಾಮಾಯಣವನ್ನು ಗಾನ ಮಾಡತೊಡಗಿದರು. ಮುಂದೆ ಅದು ಜನಪದದಲ್ಲಿ ಪ್ರವಹಿನಿಯಾಗಿ ಸಹಸ್ರಾರು ವರ್ಷಗಳಿಂದ ವಿವಿಧ ರೂಪಗಳಲ್ಲಿ, ವಿವಿಧ ಭಾಷೆಗಳಲ್ಲಿ ಹರಿಯುತ್ತಲೇ ಇದೆ. ಹೀಗೆ ಮಹರ್ಷಿ ವಾಲ್ಮೀಕಿ ಮತ್ತು ಅವರು ಮಾಡಿದ ಕೆಲಸ ಶ್ರೀರಾಮನ ಕೀರ್ತಿಯಷ್ಟೇ ಅಜರಾಮರವಾದದ್ದು. ಈ ವಾಲ್ಮೀಕಿ ಎಂಬ ಶ್ರೇಷ್ಠತೆಗೆ, ಮಹಾನ್ ಶಕ್ತಿಗೆ, ದಿವ್ಯ ಭಾರತೀಯ ಪರಂಪರೆಗೆ ಭಕ್ತಿಯಿಂದ ವಂದಿಸೋಣ.

ವಾಲ್ಮೀಕಿ ಎಂಬ ಋಷಿಯು ರಾಮಾಯಣ ಮಹಾಕಾವ್ಯದ ಕರ್ತೃ. ವಾಲ್ಮೀಕಿಯನ್ನು ಆದಿಕವಿ ಎಂದು ಕರೆಯಲಾಗಿದೆ.

ಹಿನ್ನೆಲೆ

ವಾಲ್ಮೀಕಿಯ ಜೀವನದ ಕುರಿತಾಗಿ ಅನೇಕ ದಂತಕಥೆಗಳಿವೆ. ಅದರಲ್ಲಿ ಒಂದು ಕಥೆಯ ಪ್ರಕಾರ, ವಾಲ್ಮೀಕಿ ಋಷಿಯಾಗುವ ಮೊದಲು ರತ್ನ ಎಂಬ ಹೆಸರಿನ ಒಬ್ಬ ಡಕಾಯಿತನಾಗಿದ್ದನು. ಕಾಡಿನ ಮಾರ್ಗದಲ್ಲಿ ಸಂಚರಿಸುವ ಪ್ರಯಾಣಿಕರನ್ನು ದೋಚಿ ಜೀವನ ನಡೆಸುತ್ತಿದ್ದನು. ಒಮ್ಮೆ ನಾರದ ಋಷಿಯು ರತ್ನನಿಗೆ ಎದುರಾದಾಗ, ಅವನು ನಾರದನನ್ನು ದರೋಡೆ ಮಾಡಲು ಯತ್ನಿಸಿದನು. ಆಗ ನಾರದನ ಉಪದೇಶದಿಂದ ರತ್ನನಿಗೆ ಜ್ಞಾನೋದಯವಾಯಿತೆಂದು ಹೇಳಲಾಗುತ್ತದೆ. ವಾಲ್ಮೀಕಿ ಮಹರ್ಷಿಗಳು ಪ್ರಚೇತಸಮುನಿಯ ಮಗ. ಹೀಗಾಗಿ ಅವರಿಗೆ ‘ಪ್ರಾಚೇತಸ’ ಎಂಬ ಹೆಸರಿದೆ. ಪರಮಾತ್ಮನನ್ನು ಕುರಿತು ಬಹಳ ವರ್ಷಗಳ ಕಾಲ ತಪಸ್ಸು ಮಾಡುತ್ತಿದ್ದಾಗ ಅವರ ಸುತ್ತ ಹುತ್ತ ಬೆಳೆದಿತ್ತು. ಹುತ್ತ(ಸಂಸ್ಕೃತದಲ್ಲಿ-ವಲ್ಮೀಕ)ವನ್ನು ಭೇದಿಸಿಕೊಂಡು ಹೊರಗೆ ಬಂದಿದ್ದರಿಂದ ‘ವಾಲ್ಮೀಕಿ’ ಎಂಬ ಹೆಸರು ಬಂತು.

 

ರಾಮಾಯಣ ರಚನೆಗೆ ಪ್ರೇರಣೆ

 

ಮಾ ನಿಷಾದ ಪ್ರತಿಷ್ಠಾಂ ತ್ವಮಗಮಃ ಶಾಶ್ವತೀಃ ಸಮಾಃ |

ಯತ್ಕ್ಕ್ರೌಂಚಮಿಥುನಾದೇಕಮವಧೀಃ ಕಾಮಮೋಹಿತಮ್ ||

ಇದು ರಾಮಾಯಣ ರಚನೆಗೆ ಪ್ರೇರಣೆಯಾದ ಘಟನೆ ಹಾಗೂ ಆ ಸಂದರ್ಭಕ್ಕೆ ಪ್ರತಿಕ್ರಿಯೆಯಾಗಿ ಶ್ಲೋಕ ರೂಪದಲ್ಲಿ ವಾಲ್ಮೀಕಿಯವರ ಮುಖದಿಂದ ಹೊರಹೊಮ್ಮಿದ ಮಾತುಗಳು.

 

ಈ ಶ್ಲೋಕದ ಅರ್ಥ ಹೀಗಿದೆ :

ಅಕಾರಣವಾಗಿ ಹಕ್ಕಿಯನ್ನು ಕೊಂದ ಹೇ ಅನ್ಯಾಯಿ |

ನಿನ್ನ ಪಾಪದ ಫಲವಾಗಿ ನೀ ಈ ಕೂಡಲೇ ಸಾಯಿ ||

ವಾಲ್ಮೀಕಿ ಮಹರ್ಷಿಗಳು ತಮಸಾ ನದೀತೀರದಲ್ಲಿ ಸಂತೋಷವಾಗಿ ಹಾರಾಡುತ್ತಿದ್ದ ಕ್ರೌಂಚಪಕ್ಷಿ ಜೋಡಿಯನ್ನು ನೋಡುತ್ತಿದ್ದಾಗ, ಬೇಡನೊಬ್ಬನು ಬಂದು ಬಾಣ ಹೂಡಿ ಗಂಡುಹಕ್ಕಿಯನ್ನು ಕೊಂದುಬಿಡುತ್ತಾನೆ. ಅದರ ಸಂಗಾತಿ ಹೆಣ್ಣುಹಕ್ಕಿಯು ಸಂಕಟದಿಂದ ಕೂಗಲಾರಂಭಿಸುತ್ತದೆ. ಈ ಹೃದಯವಿದ್ರಾವಕ ಸನ್ನಿವೇಶವನ್ನು ನೋಡಿ, ಕರುಣೆ, ದುಃಖ, ಕೋಪದಿಂದ ಮಹರ್ಷಿಗಳು ಬೇಡನನ್ನು ಶಪಿಸುವಾಗ, ಶೋಕದಿಂದ ಮೇಲ್ಕಂಡ ವಾಕ್ಯವನ್ನು ಶ್ಲೋಕ ರೂಪದಲ್ಲಿ ಉದ್ಗರಿಸುತ್ತಾರೆ. ಈ ಶ್ಲೋಕವು ಗದ್ಯರೂಪದಲ್ಲಿರದೆ, ಪ್ರಾಸಬದ್ಧವಾಗಿ,ಲಯ-ಛಂದಸ್ಸುಗಳಿಂದ ಕೂಡಿತ್ತು.

ಆ ವೇಳೆಗೆ ಬ್ರಹ್ಮದೇವ ಮಹರ್ಷಿಗಳ ಆಶ್ರಮಕ್ಕೆ ಬಂದು ಇದೇ ಶ್ಲೋಕರೂಪದಲ್ಲಿ ರಾಮಾಯಣ ಕಾವ್ಯ ರಚಿಸಲು ಹೇಳುತ್ತಾರೆ. ನಾರ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top