ಇತ್ತೀಚಿನ ದಿನಗಳಲ್ಲಿ ದಿನಬೆಳಗಾಗುವುದರೊಳಗೆ ಕೆಲವರು ಏನೇ ಸಾಧನೆ ಮಾಡದಿದ್ದರು ಹೀರೋಗಳಾಗಿ ಬಿಟ್ಟಿರುತ್ತಾರೆ. ಆದರೆ ಅದೆಷ್ಟೋ ಮಹತ್ತರವಾದ ಸಾಧನೆ ಮಾಡಿಯೂ ಮುಖ್ಯವಾಹಿನಿಗೆ ಬರದ ಅದೆಷ್ಟೋ ಹೀರೋಗಳು ನಮ್ಮ ಮಧ್ಯದಲ್ಲಿದ್ದಾರೆ. ಅಂಥಹವರಲ್ಲಿ 2014 ರ ನೊಬೆಲ್ ಶಾಂತಿ ಪ್ರಶಸ್ತಿ ಪಡೆದುಕೊಂಡ ಭಾರತದ ಹೆಮ್ಮೆಯ ಪುತ್ರ ಕೈಲಾಶ್ ಸತ್ಯಾರ್ಥಿ ಕೂಡ ಒಬ್ಬರು. ಬಹುಷಃ ಇವರಿಗೆ ನೊಬೆಲ್ ಪ್ರಶಸ್ತಿ ಸಿಗುವವರೆಗೂ ನಮ್ಮ ಸೋಷಿಯಲ್ ಮೀಡಿಯಾಗಳಿಗೂ ಕೂಡ ಇವರ ಬಗ್ಗೆ ಗೊತ್ತಿರಲಿಲ್ಲ ಎಂದರೆ ಅತಿಶಯೋಕ್ತಿ ಆಗಲಾರದು! ಮಕ್ಕಳ ಶಿಕ್ಷಣಕ್ಕಾಗಿ ಹೋರಾಡುತ್ತಿರುವ ಕೈಲಾಶ್ ಸತ್ಯಾರ್ಥಿಯ ಸಾಧನೆ ಕಡಿಮೆಯೇನು ಅಲ್ಲ. ಕೈಲಾಶ್ ಸತ್ಯಾರ್ಥಿಯ ಬಗ್ಗೆ ಅವರಿಗೆ ನೊಬೆಲ್ ಬರುವವರೆಗೂ ಗೊತ್ತಿಲ್ಲದ “ಗೂಗಲ್” ಅಂತರ್‍ಜಾಲದಲ್ಲಿ ಇವತ್ತು ಎಲ್ಲರೂ ತಿಳಿದುಕೊಳ್ಳಲು ಇಚ್ಛಿಸುತ್ತಿರುವ ಪ್ರಮುಖ ವ್ಯಕ್ತಿ ಎಂದರೆ ಕೈಲಾಶ್.
ಮೂಲತಃ ಎಲೆಕ್ಟ್ರಿಕಲ್ ಇಂಜಿನಿಯರ್ ಪದವೀಧರರಾಗಿದ್ದ ಕೈಲಾಸ್ ತಮ್ಮ ಕೆಲಸಕ್ಕೆ ತಿಲಾಂಜಲಿಯಿಟ್ಟು 1980 ರಿಂದಲೇ ಮಕ್ಕಳ ಹಕ್ಕುಗಳ ಹೋರಾಟಕ್ಕೋಸ್ಕರ ಧುಮುಕಿದವರು ಕೈಲಾಸ್, ಈ ಮಕ್ಕಳ ಹೋರಾಟಕ್ಕೆ ಧುಮುಕಿದ ಇವರಿಗೆ ಮೊದಲು ಸಿಕ್ಕಿದ್ದು ಕೊಲೆ, ಬೆದರಿಕೆ ಕರೆಗಳು. ಆದರೂ ಯಾವುದಕ್ಕೂ ಜಗ್ಗದೆ ಕಳೆದ 30 ವರ್ಷಗಳಲ್ಲಿ 80 ಸಾವಿರಕ್ಕೂ ಹೆಚ್ಚು ಮಕ್ಕಳ ಜೀವನ್‍ದಲ್ಲಿ ಬೆಳಕಾಗಿರುವುದು ಆ ಮಕ್ಕಳ ಭವಿಷ್ಯ ನಿರ್ಮಿಸುವಲ್ಲಿ ಇವರ ಸಾಧನೆ ಸಾಮಾನ್ಯದಲ್ಲ! ಬಾಲ್ಯವಂಚಿತ ಮಕ್ಕಳ ಆಶಾಕಿರಣ ಇವರು! ಈ ರೀತಿ ಮಕ್ಕಳ ಪರ ಹೋರಾಟಕ್ಕಿಳಿದ ಇವರ ಮೇಲೆ ಅನೇಕ ಬಾರಿ ದಾಳಿ ನಡೆದಿದ್ದು ಇವರು ಬದುಕುಳಿದಿರುವುದೆ ಅವರಿಗೆ ಒಲಿದ ಜೀವನದ ದೊಡ್ಡ ಪ್ರಶಸ್ತಿ ಎಂದರೆ ತಪ್ಪಾಗಲಾರದು.
1987ರಲ್ಲಿ ಪಾಕಿಸ್ತನದಲ್ಲೂ ಸಹ ಮಕ್ಕಳ ಹಕ್ಕುಗಳ ರಕ್ಶಣೆಗೆ ಮುಂದಾದಾಗ ಅಲ್ಲಿನ ಮಿಲಿಟರಿ ಪಡೆ ಇವರನ್ನು ಕೊಲ್ಲುವ ಬೆದರಿಕೆ ಹಾಕಿದ್ದರೂ ಕೂಡ, ನನ್ನನ್ನು ಕೋಲ್ಲಿ ಅದರೆ ಅದಕ್ಕೂ ಮುನ್ನ ಈ ಮಕ್ಕಳೊಂದಿಗೆ 15 ನಿಮಿಷ ಮಾತನಾಡಲು ಅವಕಾಶ ಕೊಡಿ ಎಂದೆದ್ದರು ಕೈಲಾಶ್! ಕಾಯಕವೇ ಕೈಲಾಸವೆಂದು ಅದನ್ನು ಅಕ್ಷರಶಃ ನಂಬಿದ ಕೈಲಾಶ್ ರವರ ಮೂರು ದಶಕಗಳ ಅದ್ವಿತೀಯ ಹೋರಾಟಕ್ಕೆ ಸಂದ ಗೌರವ ನೊಬೆಲ್.
ನೊಬೆಲ್ ಪ್ರಶಸ್ತಿ ಬರುವವರೆಗೂ ಇವರ ಬಗ್ಗೆ ಭಾರತೀಯರಾದ ನಮಗೆ ತಿಳಿಯದೇ ಇದ್ದದ್ದು ವಿಪರ್ಯಾಸವೇ ಸರಿ. ದಿನ ಬೆಳಗಾಗುವುದರೊಳಗೆ ಎಂತೆಂಥವರನ್ನೊ ಹೀರೋ ಮಾಡುವ ನಮ್ಮ ಸೋಷಿಯಲ್ ಮಿಡಿಯಾದವರ ಕಣ್ಣಿಗೆ ಇವರೇಕೆ ಬೀಳಲಿಲ್ಲ?.ಬಿದ್ದಿದ್ದರೂ ಇವರ ಸಾದನೆ ಮಹತ್ತರವೆಂದು ಅನ್ನಿಸಿರಲೆಲ್ಲವೇನೋ!! ಸೊಷಿಯಲ್ ಮೀಡಿಯಾಗಳ ಕಥೆ ಹಾಗಿರಲಿ ನಮ್ಮ ಭಾರತ ಸರ್ಕಾರಕ್ಕೂ ಇವರ ಬಗ್ಗೆ ಅರಿವಿದ್ದಂತೆ ಕಾಣುವುದಿಲ್ಲ ಇವರ ಸಾಧನೆಯನ್ನು ಗುರುತಿಸಿ ಅಮೇರಿಕಾ ಆರು ವಿವಿಧ ಪ್ರಶಸ್ತಿಗಳನ್ನು, ಜರ್ಮನಿ 2 ಪ್ರಶಸ್ತಿಯನ್ನು, ಅಲ್ಲದೇ ಇಟಲೆ, ಸ್ಪೈನ್ ಹಾಗು ಮಿಚಿಗನ್ ನಿಂದ ಹಲವಾರು ಪ್ರಶಸ್ತಿಗಳು ಬಂದಿದೆ. ಇವುಗಳಲ್ಲಿ ಭಾರತದಿಂದ ಕೊಡಲ್ಪಟ್ಟ ಪ್ರಶಸ್ತಿ ಎಷ್ಟು ಗೊತ್ತೆ? ಸೊನ್ನೆ!! ಎಂದರೆ ನಿಮಗೆ ಆಶ್ಚರ್ಯವಾಗಬಹುದು!
ಕಳೆದ 34 ವರ್ಷದಲ್ಲಿ ಸುಮಾರು 4 ಸಾವಿರ ಪದ್ಮ ಪ್ರಶಸ್ತಿಗಳು 20 ಕ್ಕೂ ಹೆಚ್ಚು ಭಾರತರತ್ನ ಪ್ರಶಸ್ತಿಗಳನ್ನು ನಮ್ಮ ಸರ್ಕಾರ ಕೊಡಮಾಡಿದೆ ಆದರೆ ಇವುಗಳಲ್ಲಿ ಯಾವುದೇ ಒಂದು ಪ್ರಶಸ್ತಿಗೂ ಸತ್ಯಾರ್ಥಿ ಭಾಜನರಾಗಿಲ್ಲ, ಏಕೆಂದರೆ “ಈ ಪಶಸ್ತಿ ಪಡೆಯಲು ಇರುವ ಮಾನದಂಡಗಳೇ ಬೇರೆ ಬಿಡಿ”. ಇದೇ ಅವಧಿಯಲ್ಲಿ ಡಜನ್ ಗಟ್ಟಲೇ ಪ್ರಖ್ಯಾತರನ್ನು ರಾಜ್ಯಸಭಾ ಮುಂತಾದ ಮಹತ್ವದ ಸ್ಥಾನಗಳಿಗೆ ನಾಮ ನಿರ್ದೇಶನ ಮಾಡಿದ್ದಾರೆ, ಆದರೆ ಸತ್ಯಾರ್ಥಿಗಳಿಗೆ ಇದ್ಯಾವುದಕ್ಕೂ ಅರ್ಹತೆ ಸಿಗಲಿಲ್ಲ! ಸಿನಿಮಾ ಹೀರೋಗಳ ಜೊತೆ ಕುಳಿತುಮಾತನಾಡಲು ಸಮಯವಿರುವ ನಮ್ಮ ಯಾವುದೇ ಪ್ರಧಾನಮಂತ್ರಿ ಇವರ ಜೊತೆ ಒಮ್ಮೆ ಮಕ್ಕಳ ಹಕ್ಕುಗಳ ಬಗ್ಗೆ ಮಾತನಾಡದೆ ಇರುವುದು ವಿಪರ್ಯಾಸದ ಸಂಗತಿ. ಭಾರತದಲ್ಲಿ ವ್ಯೆದ್ಯಕೀಯ ಚಿಕಿತ್ಸೆಗೆ 250 ರೂಪಾಯಿ ಇಲ್ಲದೆ ಹಲವಾರು ಮಕ್ಕಳು ಸಾಯುತ್ತಾರೆ ಎಂದು ಕಾರ್ಯಕ್ರಮದಲ್ಲಿ ಹೇಳಲು 3 ಕೋಟಿ ಹಣ ತೆಗೆದುಕೋಳ್ಳುವ ನಮ್ಮ ಅಮೀರ್ಜಿಗೂ ಸತ್ಯಮೇವ ಜಯತೆಯಲ್ಲಿ “ಸತ್ಯಾರ್ಥಿಯ” ದರ್ಶನವಾಗದೆ ಇರುವುದು ಸೋಜಿಗದ ಸಂಗತಿ!.
ಹೋಗಲಿ ಈ ನೊಬೆಲ್ ಪ್ರಶಸ್ತಿಗೆ ಇವರನ್ನು ನಾಮ ನಿರ್ದೇಶನ ಮಾಡಿದ್ದು ಯಾರೆಂದು ಊಹಿಸಬಲ್ಲಿರಾ? ಭಾರತ ಸರ್ಕಾರ? ಬಿಜೆಪಿ? ಕಾಂಗ್ರೆಸ್?ಆರ್ ಎಸ್ ಎಸ್? ವಿ ಹೆಚ್ ಪಿ? ಮಧ್ಯಪ್ರದೇಶ ಸರ್ಕಾರ(ಸತ್ಯಾರ್ಥಿಯವರ ತಾಯ್ನಡು)?ರಾಜೀವ್ ಗಾಂಧಿ ಫೌಂಡೇಶನ್ ಇವರ್ಯಾರೂ ಅಲ್ಲ!!!
ಈ ವರ್ಷದ ನೊಬೆಲ್ ಗೆ ಇವರ ನಾಮ ನಿರ್ದೇಶನವನ್ನು ಕಳಿಸಿದ್ದು “ಯುರೋಪಿಯನ್ ಸಂಸತ್ತು” ಎಂದರೆ ನಿಮಗೆ ಆಶ್ಚರ್ಯವಾಗಬಹುದು, ಸರಳವಾಗಿ ಹೇಳಬೇಕೆಂದರೆ ತಮ್ಮ ಸ್ವಯಂ ಸಾಧನೆಯಿಂದ ಯಾವುದೇ ಸರ್ಕಾರದಿಂದ, ಮಾಧ್ಯಮಗಳಿಂದ ಪ್ರಚಾರ ಪಡೆಯದೇ ಇಂಥಹ ಅತ್ಯುನ್ನತ ಗೌರವವನ್ನು ಪಡೆದಿರುವುದು ಸಾದನೆಯೇ ಸರಿ! ನೊಬೆಲ್ ಬರುವುದಕ್ಕೂ ಮುನ್ನ ಇವರ ಬಗ್ಗೆ ಗೊತ್ತೇ ಇರದ ಸಿನಿಮ ಮಂದಿ ಈಗಾಗಲೇ ಇವರ ಮನೆ ಮುಂದೆ ಇವರ ಬಗ್ಗೆ ಸಿನಿಮಾ ತೆಗೆಯಲು ಕ್ಯೂ ನಿಂತಿರಲಿಕ್ಕೂ ಸಾಕು!! ಏನೇ ಆಗಲಿ ಭಾರತದ ಹೆಮ್ಮೆಯ ಪುತ್ರನಿಗೆ ನೊಬೆಲ್ ಸಿಕ್ಕಿರುವುದು ಹೆಮ್ಮೆಯ ವಿಚಾರ ಸತ್ಯಾರ್ಥಿಯಂಥವರಿಗೆ ನೊಬೆಲ್ ಸಿಕ್ಕಿರುವುದರಿಂದ ನೊಬೆಲ್ ಪ್ರಶಸ್ತಿಯ ಘನತೆ ಹೆಚ್ಚಿದೆಯೆಂದರೆ ತಪ್ಪಾಗಲಾರದು. ಇಂದು ಪ್ರಶಸ್ತಿ ಸ್ವಿಕರಿಸುವ ಇವರಿಗೆ ಭಾರತೀಯರೆಲ್ಲರ ಪರವಾಗಿ ಅಬಿನಂದನೆಗಳು.
ಪ್ರಕಾಶ್ ಕೆ ನಾಡಿಗ್
ಶಿವಮೊಗ್ಗ
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
