ಬರ್ಮುಡಾ ತ್ರಿಕೋನ ಹಲವಾರು ವೈಜ್ಞಾನಿಕತೆಗಳಿಗೆ ಸವಾಲಾಗಿ ಪರಿಣಮಿಸಿದೆ. ಬಹಮಾಸ್ ಮತ್ತು ಬರ್ಮುಡಾ ದ್ವೀಪಗಳ ನಡುವೆ ಮೂಡುವ ಬರ್ಮುಡಾ ಟ್ರಯಾಂಗಲ್ ಬಗ್ಗೆ ಹಲವಾರು ಸಂಶೋಧನೆಗಳು ನಡೆಯುತ್ತಲೇ ಇದೆ. ಉತ್ತರ ಅಟ್ಲಾಂಟಿಕ್ ಸಾಗರದ ಪಶ್ಚಿಮ ಭಾಗದಲ್ಲಿ ಕಂಡುಬರುವ ಬರ್ಮುಡಾ ತ್ರಿಕೋನ ರಹಸ್ಯ ಬಯಲು ಮಾಡಲು ಸತತ ಪ್ರಯತ್ನದಲ್ಲಿರುವ ವಿಜ್ಞಾನಿಗಳು, ಸಾಗರೊಳಗೆ ಉತ್ಪತ್ತಿಯಾಗುವ ನೈಸರ್ಗಿಕ ಅನಿಲಗಳು ಇದಕ್ಕೆ ಕಾರಣವೆಂದು ಹೇಳುತ್ತಿದ್ದಾರೆ.
ವಿಜ್ಞಾನಿಗಳು ಬಾರೆಂಟ್ಸ್ ಸಮುದ್ರದಡಿಯಲ್ಲಿ ದೈತ್ಯಕಾರಾದ ಕುಳಿಯನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದರು. ಈ ಪ್ರದೇಶ ಏಕೆ ಇಷ್ಟು ಕುಖ್ಯಾತಿಗಳಿಸಿದೆ ಎನ್ನಲು ಹಲವು ಉದಾಹರಣೆಗಳನ್ನು ನೀಡಬಹುದು, ಇಲ್ಲಿ ಹಾದು ಹೋಗುವ ವಿಮಾನಗಳು, ಈ ಜಲಭಾಗದಲ್ಲಿ ಸಂಚರಿಸಿದ ಅದೆಷ್ಟೋ ಹಡಗುಗಳು ನಿಗೂಢ ಅಪಘಾತಕ್ಕೀಡಾಗಿ ಅವುಗಳ ಅವಶೇಷಗಳು ಕೂಡ ಸಿಗಲಾರದ ಹಾಗೆ ಕಣ್ಮರೆಯಾಗಿವೆ.
ಉತ್ತರ ಅಟ್ಲಾಂಟಿಕ್ ಸಾಗರದಲ್ಲಿರುವ ಬರ್ಮುಡಾ ದ್ವೀಪಗಳಿಂದ ಅಮೆರಿಕ ದೇಶದ ಮಿಯಾಮಿ, ಅಲ್ಲಿಂದ ಪ್ಯೂರ್ಟೋ ರೀಕೋ ನಂತರ ಮತ್ತೆ ಬರ್ಮುಡಾಕ್ಕೆ ಎಳೆದ ರೇಖೆಗಳ ನಡುವಣ ಪ್ರದೇಶದಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಹಡಗುಗಳು ಮತ್ತು ವಿಮಾನಗಳು ಮಾಯವಾಗಿವೆ. ಯಾವುದೇ ಕ್ಲಿಷ್ಟಕರ ಪ್ರಶ್ನೆಗಳಿಗೂ ವೈಜ್ಞಾನಿಕವಾಗಿ ಉತ್ತರ ನೀಡುವ ಅದೆಷ್ಟೊ ವಿಜ್ಞಾನಿಗಳು ಬರ್ಮುಡಾ ತ್ರಿಕೋನದ ಹಿಂದಿನ ರಹಸ್ಯವನ್ನು ಭೇಧಿಸುವಲ್ಲಿ ವಿಫಲರಾಗುತ್ತಿದ್ದಾರೆ.
ನೂತನ ಅಧ್ಯಯನ ವರದಿಯಲ್ಲಿ ತಿಳಿದು ಬಂದಿರುವ ವಿಚಾರವೆಂದರೆ ತ್ರಿಕೋನ ಆಕೃತಿಯಲ್ಲಿ ರೂಪುಗೊಳ್ಳುವ ಷಡ್ಭುಜೀಯ ಮೋಡಗಳು ಗಂಟೆಗೆ 170 ಕೀ.ಮೀ. ವೇಗದಲ್ಲಿ ಬೀಸುವ ‘ಗಾಳಿ ಬಾಂಬ್’ ಗಳನ್ನು ನಿರ್ಮಿಸುತ್ತಿದೆ. ಇದಾದ ಬೆನ್ನಲ್ಲೇ ಅತೀವ ಒತ್ತಡದಿಂದಾಗಿ ಉಂಟಾಗುವ ಅತ್ಯಂತ ಪ್ರಭಾವಶಾಲಿ ಸ್ಫೋಟದಿಂದಾಗಿ ಹಡಗುಗಳು ನೂಚ್ಚು ನೂರಾಗುತ್ತದೆ. ಅಷ್ಟೇ ಯಾಕೆ ಇದರ ದೈತ್ಯಾಕಾರದ ಅಲೆಗಳು ಮೋಡಗಳ ಅಡಿಯಲ್ಲಿ ಸಂಚರಿಸುವ ವಿಮಾನಗಳನ್ನು ತನ್ನತ್ತ ಸೆಳೆದು ಕೊಳ್ಳುತ್ತದೆ.
ಇನ್ನೊಂದು ಅಚ್ಚರಿಯ ವಿಷಯವೇನೆಂದರೆ ಇಡೀ ವಿಶ್ವಕ್ಕೇ ನಿಗೂಢ ರಹಸ್ಯವಾಗಿ ಉಳಿದಿರುವ ಈ ಬರ್ಮುಡಾ ಟ್ರಯಾಂಗಲ್ ಕುರಿತಂತೆ ಮೊದಲ ಬಾರಿಗೆ ಮಾಹಿತಿ ನೀಡಿದ್ದು ಕ್ರಿಸ್ಟೋಫರ್ ಕೊಲಂಬಸ್. ಈ ಪ್ರದೇಶದಲ್ಲಿ ಹಾದು ಹೋಗುತ್ತಿದ್ದಾಗ ತನ್ನ ಹಡಗಿನ ದಿಕ್ಸೂಚಿ ನಿಂತೇ ಬಿಟ್ಟಿತ್ತು ಹಾಗೂ ಆಕಾಶದಲ್ಲಿ ಬೆಂಕಿಯ ಉಂಡೆಯೊಂದು ಭಾರೀ ವೇಗದಲ್ಲಿ ಸಾಗುತ್ತಿತ್ತು ಎಂದು ತನ್ನ ದಿನಚರಿಯಲ್ಲಿ ಬರೆದಿದ್ದ.
ಈ ಪ್ರದೇಶ ಸುಮಾರು 4,40,000ಚದರ ಮೈಲಿಗಳಷ್ಟು ವಿಶಾಲವಾದ ಸಾಗರವನ್ನು ಒಳಗೊಂಡಿದೆ. ನಮ್ಮ ದೇಶದ ರಾಜಸ್ಥಾನ, ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರ ರಾಜ್ಯಗಳನ್ನು ಒಟ್ಟು ಗೂಡಿಸಿದರೆ ಉಂಟಾಗುವ ಪ್ರದೇಶವನ್ನು ಇದು ಒಳಗೊಂಡಿದೆ ಎಂದರೆ ಇದರ ವಿಸ್ತಾರ ಎಷ್ಟಿರಬಹುದು ಎಂದು ಊಹಿಸಿ. 100 ವರ್ಷದ ಅಂತರದಲ್ಲಿ ಈ ಪ್ರದೇಶದಲ್ಲಿ ಸುಮಾರು ಸಾವಿರಕ್ಕೂ ಅಧಿಕ ಜೀವಗಳು ಬಲಿಯಾಗಿವೆ ಎಂದು ಅಂಕಿ-ಅಂಶಗಳು ತಿಳಿಸುತ್ತವೆ. ಈ ಅಂಕಿ- ಅಂಶಗಳಂತೆ ಈ ನಿಗೂಢ ಪ್ರದೇಶದಲ್ಲಿ ವಾರ್ಷಿಕ ಸರಾಸರಿ 4 ವಿಮಾನಗಳು ಮತ್ತು 20 ಹಡಗುಗಳು ದುರಂತಕ್ಕೀಡಾಗಿದ್ದವು.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
