fbpx
Travel

ಬಂಡೆ ಮೇಲೆ ಜಾರಿ ಬಿದ್ದರೂ ಸಾಹಸ ಬಿಡದ ನಿಸರ್ಗ ಪ್ರಿಯರು.. ಇದು ಸಿಂಥೇರಿ ರಾಕ್ಸ್ ಮಹಿಮೆ!

ಜೀವ ಒತ್ತೆ ಇಟ್ಟು ನಿಸರ್ಗದ ಚೆಲುವು ಸವಿಯಲು ಬರುವ ಪ್ರವಾಸಿಗರ ಸಂಖ್ಯೆ ದಿನವೂ ಸಾವಿರ ಸಾವಿರ ದಾಟುತ್ತಿದೆ. ಹೌದು. ಇದು ಸಿಂಥೇರಿ ರಾಕ್ಸ್‍ನಲ್ಲಿ ಕಂಡು ಬರುವ ದೃಶ್ಯ. ಪ್ರವಾಸಿಗರು ಟ್ಯಾಕ್ಸಿ ಮತ್ತು ಕಾರುಗಳಲ್ಲಿ ದೂರದ ಹೈದರಾಬಾದ್, ಮೈಸೂರು, ಬೆಂಗಳೂರು, ಧಾರವಾಡ, ಬೆಳಗಾವಿಯಿಂದ ದಿನವೂ ಸಿಂಥೇರಿ ರಾಕ್ಸ್ ನೋಡಲು ಆಗಮಿಸುತ್ತಿದ್ದಾರೆ. ಅಗಾಧ ಚೆಲುವಿನ ಬಂಡೆಗಲ್ಲಿನ ಕೆಳಗೆ ರಭಸದಿಂದ ಹರಿವ ಕಿರು ನದಿಯ ತೊರೆಯ ಕಾಣಲು ಜನ ಕಾತುರರಾಗಿರುವುದನ್ನು ಈ ತಾಣಕ್ಕೆ ಬಂದು ನೋಡಬೇಕು.

26tour_sinteri

ಸಾವಿರ ಸಾವಿರ ವರ್ಷಗಳ ಹಿಂದೆ ಸಂಭವಿಸಿದ ಜ್ವಾಲಾಮುಖಿಯ ಕಾರಣವಾಗಿ ಉಳಿದುಕೊಳ್ಳುವ ಬಂಡೆಗಲ್ಲುಗಳ ಮಧ್ಯೆ ಹರಿವ ತೊರೆ ಹಾಗೂ ಇಡೀ ಪ್ರಕೃತಿಯ ಚೆಲುವು ಅಕ್ಷರದಲ್ಲಿ ವರ್ಣನೆಗೆ ನಿಲುಕದ್ದು. ದಾಂಡೇಲಿ- ಪಟೋಲಿ ಆನೆ ಕಾರಿಡಾರ್ ಸಮೀಪದ ಈ ರುದ್ರ ರಮಣೀಯ ತಾಣ ದಾಂಡೇಲಿ ಮತ್ತು ಉಳವಿಗೆ ಸಮೀಪದಲ್ಲಿದೆ. ಈ ಪ್ರವಾಸಿ ತಾಣವನ್ನು ಅಕ್ಟೋಬರ್‍ನಿಂದ ಮಳೆಗಾಲ ಆರಂಭವಾಗುವ ಮೇ ಕೊನೆಯತನಕ ನೋಡುವುದು ಸೊಗಸು ಮತ್ತು ಅಪಾಯವನ್ನು ದೂರವಿಟ್ಟು ಈ ಪ್ರವಾಸಿ ತಾಣದಲ್ಲಿ ವಿಹರಿಸಬಹುದು. ಆದರೆ ಮಳೆಗಾಲದಲ್ಲಿ ಪ್ರವಾಸಿಗರು ಇಲ್ಲಿಗೆ ಬರುವುದು ಮಾತ್ರ ನಿಂತಿಲ್ಲ. ಎಷ್ಟೆಲ್ಲಾ ಅಪಾಯಗಳನ್ನು ಕಟ್ಟಿಕೊಂಡೇ ರಾಜ್ಯದ ವಿವಿಧ ಭಾಗದ ಪ್ರವಾಸಿಗರು ಇಲ್ಲಿಗೆ ಪ್ರಸಕ್ತ ವರ್ಷ ಬಂದಿದ್ದಾರೆ.

ಅಗಸ್ಟ್‍ನಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಿದೆ ಎಂಬ ಮಾಹಿತಿ ಇಲ್ಲಿ ಕರ್ತವ್ಯನಿರತ ಉದ್ಯೋಗಿಗಳ ಅಂಬೋಣ. ಕ್ಷಣ ಕ್ಷಣವೂ ಎಚ್ಚರಿಸಲು ಇಲ್ಲಿ ಅರಣ್ಯ ಇಲಾಖೆಯ ಗಾರ್ಡ್‍ಗಳಿದ್ದಾರೆ. ಜಾರುವ ಬಂಡೆಗಲ್ಲುಗಳ ಮೇಲೆ ಹೋಗಬೇಡಿ ಎಂದು ಹೇಳಿದರೂ ಪ್ರವಾಸಿಗರು ನಿರ್ಲಕ್ಷ್ಯ ಮಾಡಿ ಹತ್ತಿರದಿಂದ ಸಿಂಥೇರಿ ರಾಕ್ಸ್ ಮತ್ತು ಹರಿವ ನೀರಿನ ಚೆಲುವನ್ನು ಸವಿಯುತ್ತಿದ್ದಾರೆ. ಇನ್ನು ಉಳವಿಗೆ ಉತ್ತರ ಕರ್ನಾಟಕದದಿಂದ ಚೆನ್ನಬಸವಣ್ಣನ ಭಕ್ತರು ನಡೆದುಕೊಂಡೇ ಬರಲು ಪ್ರಾರಂಭಿಸಿದ್ದಾರೆ. ಉಳವಿಯಲ್ಲಿ ಚೆನ್ನಬಸವಣ್ಣನ ದರ್ಶನದ ನಂತರ ತೆರಳುವಾಗ ಸಿಂಥೇರಿ ರಾಕ್ಸ್ ಕಡೆಗೆ ಕೆಲವು ಭಕ್ತರು ಬಂದು ಹೋಗುತ್ತಿದ್ದಾರೆ.

%e0%b2%b8%e0%b2%bf%e0%b2%82%e0%b2%a5%e0%b3%87%e0%b2%b0%e0%b2%bf-%e0%b2%b0%e0%b2%be%e0%b2%95%e0%b3%8d%e0%b2%b8%e0%b3%8d

ಶ್ರೀಮಂತ ಪ್ರವಾಸಿಗರು ಈಗಲೇ ವಾಹನಗಳಲ್ಲಿ ಸಿಂಥೇರಿ ರಾಕ್ಸ್ ಸ್ಥಳ ತಲುಪಿ ಕಣಿವೆ ಇಳಿಜಾರು ಇಳಿದು ಪ್ರಕೃತಿ ಬಿಡಿಸಿದ ಜೀವಂತ ಚಲಿಸುವ ಚಿತ್ರವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ. ಮೈಯಲ್ಲಿ ಶಕ್ತಿ ಇದ್ದರೆ ಹಾಗೂ ಜಾರುವ ಬಂಡೆಗಳ ಮೇಲೆ ಹಿಡಿತಕ್ಕೆ ಸಿಗುವ ಪಾದರಾಕ್ಷೆ ಅಥವಾ ಶೂಗಳಿದ್ದರೆ ಮಾತ್ರ ಸಿಂಥೇರಿ ರಾಕ್ಸ್‍ಗೆ ಬರುವ ಸಾಹಸ ಮಾಡಬೇಕು. ಇಲ್ಲದಿದ್ದರೆ ದೂರದ ವೀಕ್ಷಣಾ ಗೋಪುರದಿಂದ ಸಿಂಥೇರಿ ಸುಂದರಿಯನ್ನು ಗ್ರಹಿಸಿ ಹೊರಡುವುದು ಕ್ಷೇಮಕರ ಎಂಬುದು ಹೈದರಾಬಾದ್‍ನಿಂದ ಬಂದ ಪ್ರವಾಸಿಗ ಶಂಕರ್ ನಾಯ್ಡು ಅಭಿಮತ.

ಮಹಿಳೆಯರು, ಮಕ್ಕಳು ಸಹ ಬಿದ್ದರೂ ಮತ್ತೆ ಮತ್ತೆ ಉತ್ಸಾಹದಿಂದ ಹರಿವ ನೀರಿನ ಬಳಿ ನಿಂತು ರೋಮಾಂಚನ ನೀಡುವ ಬಂಡೆಗಲ್ಲು ವೀಕ್ಷಿಸಲು ಹಾತೊರೆಯುವುದು ಕಾಣುತ್ತಿದೆ. ಸೆಲ್ಫಿ ತೆಗೆದುಕೊಳ್ಳುವವರ ದಂಡು ಒಂದೆಡೆ ಅಪಾಯವನ್ನು ಜೊತೆಯಲ್ಲಿಟ್ಟುಕೊಂಡೇ ಇಲ್ಲಿ ಸೌಂದರ್ಯ ಸವಿಯುತ್ತಿರುವುದು ಹೆಚ್ಚುತ್ತಿದೆ. ಇದಲ್ಲದೇ ಫೋಟೋಗ್ರಫಿ ಮಾಡುವವರು ಸಹ ಅಗಾಧ ಸಂಖ್ಯೆಯಲ್ಲಿದ್ದು, ಮಳೆಗಾಲದ ಸಿಂಥೇರಿ ಪ್ರವಾಸಿಗರನ್ನು ಸೆಳೆಯುತ್ತಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top