ಬಿತ್ತರದಾಗಸ ಹಿನ್ನೆಲೆಯಾಗಿದೆ ಪರ್ವತದೆತ್ತರ ಸಾಲಾಗೆಸೆದಿರೆ ಕಿಕ್ಕಿರಿದಡಿವಿಗಳಂಚಿನ ನಡುವೆ ಮೆರೆದಿರೆ ಜಲಸುಂದರಿ ತುಂಗೆ ರಂಜಿಸೆ ಇಕ್ಕೆಲದಲ್ಲಿ ಹೊಮ್ಮಳಲು ಸಿಬ್ಬಲುಗುಡ್ಡೆಯ ಹೊಳೆಯಲಿ ಮೀಯುತ ಕವಿಮನ ನಾಕವಿ ನೆಲೆಸಿತ್ತು ಮಧುರ ಸೌಂದರ್ಯದ ಮಧುರ ಜಗತ್ತು ಹೃದಯ ಜಿಹ್ವೆಗೆ ಜೇನಾಗಿತ್ತು ಎಂದು ರಾಷ್ಟ್ರಕವಿ ಕುವೆಂಪುರವರು ಚಿಬ್ಬಲು ಗುಡ್ಡೆಯ ವರ್ಣನೆಯನ್ನು ತಮ್ಮ “ದೇವರು ರುಜು ಮಾಡಿದನು” ಎಂಬ ಕವಿತೆಯಲ್ಲಿ ತುಂಬಾ ಸುಂದರವಾಗಿ ವರ್ಣಿಸಿದ್ದಾರೆ. ಹೌದು ಚಿಬ್ಬಲು ಗುಡ್ಡ ಸ್ಥಳವೇ ಅಂತಹುದು.ಕುವೆಂಪುರವರು ತಮ್ಮ ಕವನದಲ್ಲಿ ಚಿಬ್ಬಲು ಗುಡ್ಡೆಯ ಸೃಷ್ಟಿ ಸೌಂದರ್ಯದಲ್ಲಿ ಭಗವಂತನ ಇರುವಿಕೆಯನ್ನು ಗುರುತಿಸುತ್ತಾರೆ. ಚಿಬ್ಬಲು ಗುಡ್ಡೆ ಮಲೆನಾಡಿನ ದಟ್ಟ ಅರಣ್ಯದಲ್ಲಿರುವ ಒಂದು ಸುಂದರ ತಾಣ. ಇದು ಪುಣ್ಯಕ್ಷೇತ್ರವೂ ಹೌದು. ಇದು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಸಮೀಪದಲ್ಲಿರುವ ಮೇಳಿಗೆ ಎಂಬ ಊರಿನಿಂದ ಸ್ವಲ್ಪ ದೂರದಲ್ಲಿದೆ ಎಲೆಮರೆಯ ಕಾಯಿಯಂತೆ ಇರುವ ಪಾವನ ಕ್ಷೇತ್ರ.
ಈ ಪುಣ್ಯಕ್ಷೇತ್ರದಲ್ಲಿ ಮುನಿಗಳು ಸಿದ್ಧ ಪುರುಷರು ತಪಸ್ಸು ಮಾಡಿದ್ದರೆಂದು ಪ್ರತೀತಿ ಇದೆ. ಕಣ್ಣು ಹಾಯಿಸಿದಷ್ಟುದ್ದಕ್ಕೂ ಇರುವ ಪರ್ವತಗಳ ಸಾಲು ದಟ್ಟವಾದ ಹಸಿರಿನಿಂದ ಕೂಡಿದ ಅರಣ್ಯ, ನದಿಯ ದಡದಲ್ಲಿರುವ ಮರಳ ರಾಶಿ ಸಮುದ್ರ ತೀರದ ಅನುಭವವನ್ನು ಕೊಡುತ್ತದೆ. ಜುಳುಜುಳು ಹರಿಯುವ ತುಂಗಾನದಿ ದಡದಲ್ಲಿರುವ ಚಿಬ್ಬಲು ಗುಡ್ಡೆ ಒಂದು ಸುಂದರ ತಾಣ ನದಿಯ ದಡದಲ್ಲೇ ಭಕ್ತರ ಇಷ್ಟಾರ್ಥಗಳನ್ನು ನೆರವೇರಿಸುತ್ತಾ ಬಂಡೆಯಲ್ಲಿ ಉದ್ಭವಿಸಿರುವ ಶ್ರೀ ಸಿದ್ಧಿವಿನಾಯಕಸ್ವಾಮಿಯು ನೆಲೆಸಿದ್ದಾನೆ ಶಿಥಿಲವಾಗಿದ್ದ ದೇವಾಲಯವನ್ನು ಕೆಡವಿ, ನೂತನವಾದ ದೇವಸ್ಥಾನವನ್ನು ನಿರ್ಮಿಸಿದ್ದಾರೆ. ಚಿಬ್ಬು ಮುಂತಾದ ಚರ್ಮರೋಗಗಳಿಂದ ನರಳುತ್ತಿರುವವರು ಈ ಕ್ಷೇತ್ರಕ್ಕೆ ಬಂದು ನದಿಯಲ್ಲಿ ಮಿಂದು ಸ್ವಾಮಿಯ ಸೇವೆ ಮಾಡಿದರೆ ಚರ್ಮರೋಗ, ಚಿಬ್ಬು ದೂರವಾಗುವುದೆಂಬ ನಂಬಿಕೆಯಿದೆ. ಆದ್ದರಿಂದಲೇ ಈ ಸ್ಥಳಕ್ಕೆ ಚಿಬ್ಬಲುಗುಡ್ಡೆ ಎಂಬ ಹೆಸರು ಬಂದಿರಬಹುದೆಂದು ಪ್ರತೀತಿ.
ಇಲ್ಲೂ ಸಹ ಶೃಂಗೇರಿಯಲ್ಲಿರುವಂತೆ ನದಿಯಲ್ಲಿ ಮಾರುದ್ದದ ಮೀನುಗಳಿವೆ ನದಿಯಲ್ಲಿ ನಲಿದಾಡುತ್ತ ಬಂದವರ ಕಣ್ಣಿಗೆ ಹಬ್ಬವನ್ನುಂಟು ಮಾಡುತ್ತಾ ಓಡಾಡುವ ಮಾರುದ್ದದ ಮೀನುಗಳನ್ನು ವೀಕ್ಷಿಸುವುದೇ ಒಂದು ವಿಶಿಷ್ಟ ಅನುಭವ. ಈ ಕ್ಷೇತ್ರದ ಆರಾಧ್ಯ ದೇವರಾದ ಶ್ರೀ ವಿನಾಯಕ ಸ್ವಾಮಿಯ ಸಾನಿಧ್ಯದಲ್ಲಿರುವ ಈ ಮೀನುಗಳನ್ನು ಹಿಂಸಿಸಬಾರದೆಂಬ ನಂಬಿಕೆ ಇದೆ. ಇಲ್ಲಿಗೆ ಬರುವ ಭಕ್ತವೃಂದ ನದಿಯಲ್ಲಿರುವ ಮೀನುಗಳಿಗೆ ಮಂಡಕ್ಕಿ ಹಾಕಿ ಸಂತೋಷಪಡುತ್ತಾರೆ.
ಚಿಬ್ಬಲು ಗುಡ್ಡೆಯ ಸಮೀಪದಲ್ಲೆ ಕುವೆಂಪುರವರ ಮನೆಯಿರುವ ಕುಪ್ಪಳ್ಳಿ ತೀರ್ಥಹಳ್ಳಿಯ ಪರಶುರಾಮ ಕ್ಷೇತ್ರ ಅಲ್ಲಿರುವ ಕಮಾನು ಸೇತುವೆ, ಮಹರ್ಷಿ ಹಾಗೂ ಮೃಗವಧೆ ಎಂಬ ತೀರ್ಥಕ್ಷೇತ್ರಗಳು ಇವೆ. ಚಿಬ್ಬಲು ಗುಡ್ಡೆಯ ಪ್ರಕೃತಿ ಸೌಂದರ್ಯವನ್ನು ನೋಡುತ್ತಿದ್ದರೆ ಎಂಥವರಿಗೂ ಅಲ್ಲಿಂದ ವಾಪಸ್ಸು ಬರಲು ಮನಸ್ಸಾಗುವುದಿಲ್ಲ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
