ಕರ್ನಾಟಕ ಲೋಕಸೇವಾ ಆಯೋಗದಿಂದ ‘ಶುದ್ಧ ಹಸ್ತ’ ಸುಬೋಧ್ ಯಾದವ್ ಅವರನ್ನು ವರ್ಗಾವಣೆ ಮಾಡಲಾಗಿದೆ. ಯಾದವ್ -ರವರನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತರಾಗಿ ವರ್ಗಾವಣೆ ಮಾಡಲಾಗಿದೆ. ಗಮನಿಸಬೇಕಾದ ಅಂಶವೇನೆಂದರೆ, ತಾವು ವರ್ಗಗೊಳ್ಳುವ ಸಮಯದಲ್ಲಿ, ಯಾದವ್ ರವರು ಕೆ.ಪಿ.ಎಸ.ಸಿ ಯ ಪರೀಕ್ಷೆ ನಡೆಸುತ್ತಿದ್ದರು.
ಯಾರು ಸುಬೋಧ್ ಯಾದವ್?
೪೪ ರ ಪ್ರಾಯದ ಸುಬೋಧ್ ಯಾದವ್, ೧೯೯೯ ಬ್ಯಾಚ್ ನ ಐ.ಎ.ಎಸ್ ಆಫೀಸರ್. ಪ್ರತಿಷ್ಠಿತ ಐ.ಐ.ಟಿ ರೂರ್ ಕೀ ಯ ಪದವೀಧರರಾಗಿರುವ ಸುಬೋಧ್ ಯಾದವ್ ತಮ್ಮ ೧೬ ವರ್ಷದ ಸೇವಾವಧಿಯಲ್ಲಿ ೨೦ ಬಾರಿ ವರ್ಗಾವಣೆ ಗೊಂಡಿದ್ದಾರೆ. ಭ್ರಷ್ಟಾಚಾರಿಗಳಿಗೆ ಸಿಂಹ ಸ್ವಪ್ನ ವಾಗಿರುವ ಈ ಅಧಿಕಾರಿ ಎಲ್ಲೇ ಹೋದರು ರಾಜಕೀಯ ಹಸ್ತಕ್ಷೇಪದಲ್ಲಿ ಸಿಕ್ಕಿಹಾಕಿಕೊಂಡು ವರ್ಗ ಗೊಳ್ಳುತ್ತಿದ್ದಾರೆ. ಸುಬೋಧ್ ಯಾದವ್, ಸಾರ್ವಜನಿಕ ಸೇವೆಯಲ್ಲಿ ಅತ್ಯುನ್ನತ ಸೇವೆಗಾಗಿ – ಪ್ರಧಾನ ಮಂತ್ರಿಗಳಿಂದ ಪ್ರಶಸ್ತಿಗೆ ಭಾಜನರಾಗಿರುವ ಯಾದವ್ ರವರು ‘ಜನ ಮೆಚ್ಚಿದ’ ಅಧಿಕಾರಿ.
ಒಂದು ಸ್ಥಾನದಲ್ಲಿ ಕೇವಲ ೧೭ ತಿಂಗಳು?
ತಾವು ಅಧಿಕಾರವಹಿಸಿಕೊಂಡ ಇಲಾಖೆಯಲ್ಲಿರುವ ಲೋಪದೋಷಗಳನ್ನು ಗುರುತಿಸಿ, ಸ್ವಚ್ಛ -ಭ್ರಷ್ಟಾಚಾರ ಮುಕ್ತ ಆಡಳಿತ ನೀಡುತ್ತಿರುವ ಯಾದವ್ -ರವರಿಗೆ ಸರ್ಕಾರ ೧೭ ತಿಂಗಳಿಗೊಮ್ಮೆ ಇಲಾಖೆಯನ್ನು ಬದಲಿಸುತಿದ್ದಾರೆ. ಕೆ.ಪಿ.ಎಸ್.ಸಿ ಸಾರಥ್ಯ ವಹಿಸಿಕೊಂಡು; ಇನ್ನೇನು ಪರೀಕ್ಷೆ ನಡೆಯುವ ಹೊತ್ತಿಗಾಗಲೇ ಯಾದವ್ ರವರಿಗೆ ಬೇರೆ ಇಲಾಖೆಯ ಜವಾಬ್ದಾರಿ ಕೊಟ್ಟಿರುವುದು, ಹಲವು ಅನುಮಾನಕ್ಕೆ ಕಾರಣವಾಗಿದೆ.
ಕರ್ನಾಟಕ ಲೋಕಸೇವಾ ಆಯೋಗದಲ್ಲಿ ತಾವು ಕೈಗೊಂಡ ಅನೇಕ ಸುಧಾರಣೆಗಳೇ ಅವರ ವರ್ಗಾವಣೆಗೆ ಕಾರಣವೆಂದು, ಯಾದವ್ ರ ಆಪ್ತರು ನಮ್ಮ ಪತ್ರಿಕೆಗೆ ತಿಳಿಸಿದ್ದಾರೆ. ಇನ್ನೇನು ಚುನಾವಣೆ ಬರುವ ಹೊತ್ತಿನಲ್ಲಿ, ಯಾದವ್ ರಂಥ ಅಧಿಕಾರಿಗಳು ಸರ್ಕಾರಕ್ಕೆ ‘ಕಬ್ಬಿಣದ ಕಡಲೆ’ ಯಾಗಬಹದೆಂದು ಅವರನ್ನು ವರ್ಗ ಮಾಡಿದ್ದಾರೆ.
ಈ ಹಿಂದೆ ಯಾದವ್ ರವರು ಬಿ.ಬಿ.ಎಂ.ಪಿ ಯಲ್ಲಿ ವಿಶೇಷ ಆಯುಕ್ತರಾಗಿ ಕಾರ್ಯನಿರ್ವಹಿಸಿದ್ದರು. ಅಲ್ಲಿಂದ ವರ್ಗಾವಣೆಗೊಂಡಾಗ , ಸಾರ್ವಜನಿಕರು ಪ್ರತಿಭಟನೆ ಮಾಡಿ; ಅವರನ್ನು ಪಾಲಿಕೆಯಲ್ಲೇ ಮುಂದುವರಿಸಬೇಕೆಂದು ಮನವಿ ಮಾಡಿದ್ದರು.
ಇದು ‘ಜೀ ಹುಸೂರ್’ ಸರ್ಕಾರ !
ನಮ್ಮದು ಬಡವರ ಪರ ಸರ್ಕಾರ, ಲೋಹಿಯಾವಾದಿ ಎಂದು ಬೊಬ್ಬೆ ಹೊಡೆಯುವ ನಾಡಿನ ಮುಖ್ಯ ಮಂತ್ರಿ ಸಿದ್ದರಾಮಯ್ಯ-ರವರು, ಕೆ.ಪಿ.ಎಸ್ಸಿ.ಪರೀಕ್ಷೆ ನಡೆಯುವಾಗಲೇ, ವರ್ಗ ಮಾಡುವ ಔಚಿತ್ಯವೇನಿತ್ತೆಂದು ನಾವು ಕೇಳುತ್ತೇವೆ ! ಲೋಕಸೇವಾ ಆಯೋಗದಲ್ಲಿ ಅನೇಕ ಸುಧಾರಣೆಗಳನ್ನು ತಂದು; ಭ್ರಷ್ಟಾಚಾರ ಮುಕ್ತ ಮಾಡಲು ಹೊರಟಿದ್ದ ಒಬ್ಬ ದಿಟ್ಟ, ನೇರ ನುಡಿಯ ಅಧಿಕಾರಿಯನ್ನು ವರ್ಗ ಮಾಡಿರುವುದು ನಿಮ್ಮ ಸರ್ಕಾರದ ರಾಜಕೀಯ ಹಸ್ತಕ್ಷೇಪ ಯಾವ ಮಟ್ಟಿಗೆ ಹೋಗಿದೆಯೆಂದು ಊಹಿಸಬಹುದು.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
